ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿಯುದ್ದಕೂ ಮಧುರ ಯುಗಳಗೀತೆ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಿಲ್ಲಾಂಗ್ ಹಿಮಗಿರಿಯ ಕಿರಿಮಗಳಂತೆ ನಿತ್ಯಸುಕೋಮಲೆ. ಎತ್ತರೆತ್ತರ ಗಿರಿಶಿಖರ, ಮೊನಚಾಗಿ ಬೆಳೆದ ದೇವದಾರು ಮರಗಳು, ಮೋಡಗಳ ಒಳಗೆ ನುಗ್ಗುವ ರಸ್ತೆಗಳು, ಥಟ್ಟನೆ ಸುತ್ತಸುತ್ತಲೆಲ್ಲಾ ಸುತ್ತುವರಿವ ಜಲಪಾತಗಳು, ಎತ್ತ ನೋಡಿದರತ್ತೆಲ್ಲಾ ಹಸಿರು ವನರಾಶಿ... ಬೆಟ್ಟದ ಮೇಲೆಯೇ ನಡೆವ ವ್ಯವಸಾಯ,  ಊರೊಳಗಂತೂ ಸರ್ಪ ಸುತ್ತಿನ ಸಾವಿರ ಹಾದಿ, ಪುಟ್ಟ ಪುಟ್ಟ ಮನೆಗಳು, ಕಿರಿದಾದ ರಸ್ತೆಗಳು, ಯಾವುದೊ ಹೊಸ ನಾಡಿಗೆ ಬಂದಂತೆ ಹೊಚ್ಚ ಹೊಸ ಅನುಭವ. ಬೆಚ್ಚಗಿನ ಜೋಡಿಗಳಾದರೆ ಹಾದಿಯುದ್ದಕೂ ಯುಗಳ ಗೀತೆ.

‘ಶಿಲ್ಲಾಂಗ್’ ಮೇಘಾಲಯ ರಾಜ್ಯದ ರಾಜಧಾನಿ. ಈಶಾನ್ಯ ಭಾರತಕ್ಕೆ ಹೆಬ್ಬಾಗಿಲು. ಅಸ್ಸಾಮಿನ ರಾಜಧಾನಿ ಗುವಾಹತಿಯಿಂದ ಕೇವಲ 100 ಕಿ.ಮೀ ದೂರದಲ್ಲಿದೆ. ಅಧುನೀಕರಣಗೊಂಡ ರಾಷ್ಟೀಯ ಹೆದ್ದಾರಿ ಸುಗಮವಾಗಿ ನಮ್ಮನ್ನು ಶಿಲ್ಲಾಂಗ್ ಗಿರಿನಗರವನ್ನು ತಲುಪಿಸುತ್ತದೆ. ಕಿರಿದಾದ ರಸ್ತೆಯ ತುಂಬಾ ಕಪ್ಪು ಅರಿಶಿನ ಬಣ್ಣದ ಟ್ಯಾಕ್ಸಿಗಳು ಸರಸರನೇ ಸದ್ದು ಮಾಡದೇ ಸರದಿ ಸಾಲಿನಲ್ಲಿ ಇರುವೆಗಳಂತೆ ಓಡಾಡುತ್ತಿರುತ್ತವೆ. ನಡುವೆ ಬುಯ್ಯನೆ ಬುಲೆಟ್, ಡ್ಯೂಕ್ ಬೈಕ್ ಗಳು ಚಿಟ್ಟೆಯಂತೆ ಹಾರುತ್ತವೆ. ಆದರೆ ಹಾರ್ನ್ ಶಬ್ದ ಮಾಲಿನ್ಯ ಇನಿತೂ ಇಲ್ಲ. ಹಸಿರಿನಷ್ಟೇ ತಣ್ಣನೆಯ ಪ್ರಶಾಂತ ವಾತಾವರಣ ಶಿಲ್ಲಾಂಗ್‌ನ  ಹಿರಿಮೆಗಳಲ್ಲೊಂದು. ಚಳಿಗಾಲದಲ್ಲಿ ಮೊದಲಲ್ಲಿ ಹೋದರಂತೂ ಬ್ಲಾಸಂ ಹೂವುಗಳು ಅರಳಿ ಇಡೀ ಹಾದಿಯೇ ಮದುವೆ ಮಂಟಪದಂತೆ ಕಂಗೊಳಿಸುತ್ತಿರುತ್ತದೆ.  

ಶಿಲ್ಲಾಂಗ್‌ನ ನಗರ ಸುತ್ತಾಟದಲ್ಲಿ ಮೊದಲು ನೋಡಬೇಕಿರುವುದು ‘ಡಾನ್ ಬಾಸ್ಕೋ  ಮ್ಯೂಸಿಯಂ’. ಜೋಡಿಗಳಿಬ್ಬರೂ ಕೈಹಿಡಿದುಕೊಂಡು ಬಂದು ಹೊರಗಿನಿಂದ ನೋಡಿದರೆ ಚೂಪು ಮೊನೆಯ ಎಲೆಯಾಕಾರದ ಪುಟ್ಟದೊಂದು ಕಟ್ಟಡದಂತೆ ಕಾಣುವ ಈ ಮ್ಯೂಸಿಯಂ ಏಳು ಅಂತಸ್ತುಗಳನ್ನು ಹೊಂದಿದೆ ಎಂದು ನಂಬುವುದು ಬಹಳ ಕಷ್ಟ! ನೋಡುತ್ತಾ ಸಾಗಿದರೆ ವಾಪಸು ಬರಲು ಮನಸ್ಸು ಬಾರದು, ಅಷ್ಟು ಚೆಂದದ ಮ್ಯೂಸಿಯಂ ಇದು. ಈಶಾನ್ಯ ಭಾರತದ ದಿಕ್ಕು ದಿಕ್ಕುಗಳಲ್ಲಿರುವ ಬೇರೆ ಬೇರೆ ಬುಡಕಟ್ಟು ಜನರು ಅವರ ಉಡುಪು- ಬೇಟೆ- ಮನೆ- ಆಯುಧ– ಬದುಕು ಎಲ್ಲವನ್ನೂ ಪ್ರತಿನಿಧಿಸುವ ವಸ್ತುಗಳ ಅಗಾಧ ಸಂಗ್ರಹ, ಅವುಗಳ ವಿವರಣೆ. ಕಾಲಾನುಕ್ರಮದಲ್ಲಿ ಸರಿಯಾದ ಜೋಡಣೆ.

ಬೇರೆ ಬೇರೆ ಬುಡಕಟ್ಟು ಜನರ ಜೀವವೈವಿಧ್ಯದ ಲಕ್ಷಣಗಳು, ಮುಖಚರ್ಯೆಗಳು, ಅವರ ಧಾರ್ಮಿಕ ನಂಬಿಕೆಗಳು, ಅವನ್ನು ಸೂಚಿಸುವ, ಬೇರೆ ಬೇರೆ ಆಚರಣೆಗಳ ಸಾಮಗ್ರಿಗಳು - ವಿಧಿವಿಧಾನಗಳ ಪ್ರತಿರೂಪಗಳು.  ಬೇರೆ ಬೇರೆ ಲೋಹದ ಸಾಮಗ್ರಿಗಳು ಮತ್ತು ಮಣ್ಣಿನ ಮಡಕೆಗಳು ಅವುಗಳ ಮೇಲಿನ ಚಿತ್ತಾರ, ನೇಯ್ಗೆ ಅದಕ್ಕೆ ಬಳಸುವ ಹತ್ತಿ, ಉಣ್ಣೆ ಇತ್ಯಾದಿ, ಪ್ರತಿ ಬುಡಕಟ್ಟು ಕೂಡ ಈ ನೇಯ್ಗೆ ಬಟ್ಟೆಯಲ್ಲಿ ಹೆಣೆಯುವ ಅವರದೇ ಆದ ಕಲೆ, ಬಣ್ಣದ ಚಿತ್ತಾರಗಳನ್ನು ಹೊಂದಿವೆ. ಈ ಭಾಗದ ಜನರು ಹೆಚ್ಚು ಆಧರಿಸಿದ್ದು ಬಿದಿರನ್ನು. ಬಿದಿರಿನಿಂದ ಇಲ್ಲಿನ ಬುಡಕಟ್ಟು ಮಾಡುತ್ತಿದ್ದ ನೂರಾರು ಸಾಧನಗಳು ಇಲ್ಲಿ ನೋಡಲು ಲಭ್ಯ. ಮೀನು ಹಿಡಿಯುವ ಕುಣಿಕೆಗಳೇ ಅದೆಷ್ಟೋ ವಿನ್ಯಾಸ, ಗಾತ್ರಗಳಲ್ಲಿ ಇವೆ. 19ನೇ ಶತಮಾನದ ಕೊನೆಯ ಭಾಗದವರೆಗೂ ಈಶಾನ್ಯ ಭಾರತದ ಜನ ಹೇಗೆ ಬದುಕಿರಬಹುದು ಎನ್ನುವ ಸಂಕ್ಷಿಪ್ತ ನೋಟ ಈ ಇಡೀ ಮ್ಯೂಸಿಯಂ ನೋಡುವುದರಿಂದ ನಮಗೆ ಸಿಗುವುದಂತೂ ಖಂಡಿತ.

ಶಿಲ್ಲಾಂಗ್‌ನಲ್ಲಿ ಉಮಿಯಂ ಲೇಕ್ ಮತ್ತು ವಾರ್ಡ್ಸ್ ಲೇಕ್  ಎಂಬ ಎರಡು ಪ್ರಸಿದ್ಧ ಕೆರೆಗಳಿವೆ. ಎರಡರ ಬದಿಯಲ್ಲೂ  ಒಳ್ಳೆಯ ಉದ್ಯಾನಗಳನ್ನು ನಿರ್ಮಿಸಿದ್ದಾರೆ. ತರಹೇವಾರಿ ಹೂವಿನಗಿಡಗಳು, ಬ್ಲಾಸಂ ಮರಗಳಿಂದ ಆವೃತವಾಗಿವೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಇದೆ. ಸಂಜೆ ಮತ್ತು ಬೆಳಿಗ್ಗೆ ವಿಹಾರಕ್ಕೆ, ಪ್ರೇಮ ಸಲ್ಲಾಪಕ್ಕೆ ಸೂಕ್ತ. ಶಿಲ್ಲಾಂಗ್ ನಗರ ಪ್ರವೇಶಕ್ಕೂ ಮುನ್ನ ಮುಖ್ಯರಸ್ತೆಯಲ್ಲಿಯೇ ‘ಉಮಿಯಂ ಲೇಕ್’ ಕಾಣಸಿಗುತ್ತದೆ. ಇಲ್ಲಿ ಬೋಟಿಂಗ್ ಮಾಡುತ್ತಾ ಪ್ರೇಮಗೀತೆ ಹಾಡಲು ಅಡ್ಡಿಯಿಲ್ಲ.

ಹಾಗೆಯೇ ಶಿಲ್ಲಾಂಗ್‌ನಿಂದ 12 ಕಿ.ಮೀ ದೂರದಲ್ಲಿ ಎಲಿಫಂಟ್‌ ಫಾಲ್ಸ್ ಸಿಗುತ್ತದೆ. ಈ ಜಲಪಾತವು ಆನೆಯ ರೂಪದಲ್ಲಿರುವ ಬಂಡೆಯ ಮೇಲಿನಿಂದ ಬೀಳುವುದರಿಂದ ಇದಕ್ಕೆ ‘ಎಲಿಫಂಟ್‌ ಫಾಲ್ಸ್’ ಎಂಬ ಹೆಸರು ಬಂದಿದೆ. ಇಳಿಯಲು ಮಜಬೂತಾದ ಮೆಟ್ಟಿಲುಗಳು, ಅಲ್ಲಲ್ಲಿ ಕೂತು ಮಾತನಾಡಲು ಬೆಂಚುಗಳು, ಕುಟೀರಗಳನ್ನು ನಿರ್ಮಿಸಿದ್ದಾರೆ. ಹಸಿರು ಕಾನನದ ನಡುವೆ ಹಾಲಿನ ನೊರೆಯ ಅಂದದಿ ಬೀಳುವ ಜಲಪಾತ, ಹರಿವ ನೀರು ನೋಡುತ್ತಾ ಆನಂದಿಸಲು ಆಹ್ಲಾದಕರವಾಗಿದೆ.

ಇದಿಷ್ಟೂ ನೋಡುವುದರೊಳಗೆ ಸಂಜೆಯಾಗಿರುತ್ತದೆ. ಸಂಜೆಯಾದ ಮೇಲೆ ಶಿಲ್ಲಾಂಗ್ ವಿದ್ಯುದ್ದೀಪ ಹೊತ್ತಿಸಿಕೊಂಡು ರಂಗಾಗಿ ಕಾಣಿಸುತ್ತಿರುತ್ತದೆ. ಪೊಲೀಸ್ ಬಜಾರ್ ಸುತ್ತ ಸುತ್ತು ಹಾಕಿ, ಮಾರ್ಕೆಟ್‌ನಲ್ಲಿ ಅಡ್ಡಾಡಿ, ಇಲ್ಲಿನ ವಿಶೇಷ ತಿಂಡಿ ತಿನಿಸು ಸವಿದು ಈಶಾನ್ಯ ಭಾರತದ ಒಂದಷ್ಟು ವಿಶೇಷ ಸಾಮಗ್ರಿ ಕೊಳ್ಳಬಹುದು. ಶಿಲ್ಲಾಂಗ್‌ನಲ್ಲಿ ಸಂಜೆ ಐದಕ್ಕೆಲ್ಲಾ ಸೂರ್ಯ ಮನೆ ಸೇರಿ ಕತ್ತಲು ಕವಿಯತ್ತೆ. ಬೆಳಿಗ್ಗೆ ನಾಲ್ಕಕ್ಕೆ ಬೆಳಕಾಗಿರುತ್ತದೆ. ಇಲ್ಲಿಯ ಸಮಯವು ನಮಗಿಂತ ಮುಂದಿದೆ.    

ಶಿಲ್ಲಾಂಗ್ ನಗರದಾಚೆಗೆ ಜೋವೈ, ಡಾವ್ ಕಿ, ಚಿರಾಪುಂಜಿಗಳಂತಹ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು. ಶಿಲ್ಲಾಂಗ್ ನಿಂದ ಡಾವ್ ಕಿಗೆ 60 ಕಿ.ಮೀ ದೂರ. ಅದು ಭಾರತ ಮತ್ತು ಬಾಂಗ್ಲಾ ದೇಶದ ಗಡಿ ಭಾಗ, ಸ್ಫಟಿಕದಷ್ಟು ಶುಭ್ರವಾದ ನೀರು, ಮಲೆಗಳ ಹತ್ತಿಳಿವ ದಾರಿಯುದ್ದಕೂ ಸಿಗುವ ಅಸಂಖ್ಯ ಜಲಪಾತಗಳು, ನದಿಯಲ್ಲಿ ನೆರೆದ ಮೀನುಗಾರರು, ನೀರೊಳಗೆ ಇಳಿದು ಮೈ ಒದ್ದೆಯಾಗುವವರೆಗೂ ನಮ್ಮ ಮನಸು ತಣಿಯುವುದಿಲ್ಲ.

ಚಿರಾಪುಂಜಿಯಂತೂ ಮಳೆಗೆ ಮತ್ತು ನೋವಾಲಿಕಲ್ ಜಲಪಾತಕ್ಕೆ ವಿಶ್ವಪ್ರಸಿದ್ಧ. ಶಿಲ್ಲಾಂಗ್‌ನಿಂದ 55 ಕಿ.ಮೀ ದೂರದಲ್ಲಿದೆ. ಹಸಿರು ಹುಲ್ಲುಗಾವಲು, ಇಲ್ಲಿ ನಿಂತು ಪ್ರೇಮಿಗಳು ಒಂದಾದರೂ ಸೆಲ್ಫಿ ತೆಗೆದುಕೊಳ್ಳದೇ ಇದ್ರೆ ಹೇಗೆ?

ಒಟ್ಟಾರೆ ಶಿಲ್ಲಾಂಗ್ ಪ್ರವಾಸ ಪ್ರೇಮಿಗಳಿಗೆ ಹಸಿರು ಗಿರಿಸ್ವರ್ಗ. 

ತಲುಪುವುದು ಹೇಗೆ
ಬೆಂಗಳೂರಿಂದ ಗುವಾಹಟಿಗೆ ನೇರ ರೈಲು ಮತ್ತು ವಿಮಾನ ಸೌಲಭ್ಯವಿದೆ. ಅಲ್ಲಿಂದ ಶಿಲ್ಲಾಂಗ್‌ಗೆ ಬಸ್ಸು ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.

ವಸತಿ ವ್ಯವಸ್ಥೆ: ಯೂತ್ ಹಾಸ್ಟೆಲ್‌ನಿಂದ ಸ್ಟಾರ್ ಹೋಟೆಲ್‌ವರೆಗೂ ವಸತಿ ವ್ಯವಸ್ಥೆಗಳು ಲಭ್ಯ. ನಮ್ಮ ಸೌಕರ್ಯಕ್ಕೆ ತಕ್ಕ ವಸತಿಯನ್ನು ಆನ್‌ಲೈನ್‌ನಲ್ಲೇ ಕಾಯ್ದಿರಿಸಿಕೊಳ್ಳಬಹುದು. 

ಊಟೋಪಚಾರ: ಈಶಾನ್ಯ ಭಾರತದಲ್ಲಿ ಹಂದಿ ಮತ್ತು ಕೋಳಿ ಮಾಂಸಾಹಾರ ಹೆಚ್ಚಾಗಿ ಸಿಗುತ್ತದೆ. ಇಡ್ಲಿ, ಮಸಾಲೆ ದೋಸೆ ಸಿಗುವ ಕೆಲವು ದಕ್ಷಿಣ ಭಾರತೀಯ ಹೋಟೆಲ್‌ಗಳು ಸಹ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT