ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್ವಯಿಕ ಸಾಮರ್ಥ್ಯ ವೃದ್ಧಿಗೆ ಪೂರಕ

ಪರೀಕ್ಷೆ ಇಲ್ಲದ ಕಲಿಕೆಗಳಿವೆ. ಆದರೆ ಮೌಲ್ಯಮಾಪನಕ್ಕೊಳಗಾಗದ ಯಾವ ಕಲಿಕೆಯೂ ಇಲ್ಲ. ಈ ಪರಿಕಲ್ಪನೆಯ ಆಧಾರದಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ಅರ್ಥ ಮಾಡಿಕೊಳ್ಳಬೇಕು
Last Updated 1 ಜುಲೈ 2018, 20:02 IST
ಅಕ್ಷರ ಗಾತ್ರ

ಪತ್ರಕರ್ತನೊಬ್ಬ ಏನಾದರೂ ಬರೆಯುವ ಸಂದರ್ಭದಲ್ಲಿ ಪುಸ್ತಕಗಳನ್ನು ಪರಿಶೀಲಿಸಿ ಬರೆಯುತ್ತಾನೋ? ಪದವಿ ಪರೀಕ್ಷೆಯ ಪ್ರಶ್ನೆಗಳಿಗೆ ಬರೆದ ಉತ್ತರಗಳನ್ನೇ ಪತ್ರಿಕೆಯಲ್ಲಿ ಬರೆಯುತ್ತಾನೋ? ಸಾಮಾನ್ಯವಾಗಿ ಆತ ಪುಸ್ತಕಗಳನ್ನು ಪರಿಶೀಲಿಸಿ ಬರೆಯುತ್ತಾನೆ‌.

ಜೀವನಕ್ಕೆ ಉಪಯೋಗವಾಗುವುದು ಪರಿಶೀಲಿಸಿ ಬರೆಯುವ ಸಾಮರ್ಥ್ಯವೇ ಹೊರತು ಪ್ರಶ್ನೆಗೆ ಉತ್ತರಗಳನ್ನು ಯಥಾರೀತಿ ಬರೆಯುವುದಲ್ಲ. ಯಾವ ವೃತ್ತಿಯಲ್ಲಿರುವವರೂ ಶಾಲೆಯಲ್ಲಿ ಕಲಿತಿದ್ದನ್ನು ಯಥಾರೀತಿಯಲ್ಲಿ ಜೀವನದಲ್ಲಿ ಬಳಸುವುದಿಲ್ಲ. ಕಲಿತಿದ್ದನ್ನು ಅನ್ವಯಿಸಿ ಬಳಸಿಕೊಳ್ಳುತ್ತಾರೆ. ಕಲಿಕೆಯ ಆನ್ವಯಿಕ ಸಾಮರ್ಥ್ಯಕ್ಕೆ ಆಲೋಚನಾ ಕ್ರಮ ಮುಖ್ಯವೇ ಹೊರತು ಕಲಿಕೆಯ ಯಥಾರೀತಿಯ ಮರುನಿರೂಪಣೆ ಅಲ್ಲ. ಹೀಗಿರುವಾಗ, ಪಠ್ಯಪುಸ್ತಕವನ್ನು ಕೊಟ್ಟೇ ಪರೀಕ್ಷೆ ಬರೆಸುವ ‘ತೆರೆದ ಪುಸ್ತಕದ ಪರೀಕ್ಷೆ’ ಏಕೆ ಬೇಡ?

ತೆರೆದ ಪುಸ್ತಕದ ಪರೀಕ್ಷೆ ಪರಿಕಲ್ಪನೆಯು ಪರೀಕ್ಷೆಗಿಂತಲೂ ಹೆಚ್ಚಾಗಿ ಮೌಲ್ಯಮಾಪನಕ್ಕೆ ಆದ್ಯತೆ ನೀಡುತ್ತದೆ. ಪರೀಕ್ಷೆ ಎಂದರೆ ತೀರ್ಪು. ಮೌಲ್ಯಮಾಪನ ಎಂಬುದು ಪ್ರಕ್ರಿಯೆ. ಮೌಲ್ಯಮಾಪನಕ್ಕೊಳಗಾಗುವ ಮೂಲಕ ತನ್ನ ದೋಷ ಅರಿತು ಸುಧಾರಣೆ ತಂದುಕೊಳ್ಳಲು ಅವಕಾಶವಿರುತ್ತದೆ. ಪರೀಕ್ಷೆ ಇಲ್ಲದ ಕಲಿಕೆಗಳು ಬೇಕಾದಷ್ಟಿವೆ. ಆದರೆ ಮೌಲ್ಯಮಾಪನಕ್ಕೊಳಗಾಗದ ಯಾವ ಕಲಿಕೆಯೂ ಇಲ್ಲ. ಈ ಪರಿಕಲ್ಪನೆಯ ಆಧಾರದಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ಅರ್ಥ ಮಾಡಿಕೊಳ್ಳಬೇಕು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಈಚೆಗೆ ಪ್ರಸ್ತಾಪಿಸಿದರು. ಒಳ್ಳೆಯ ಚಿಂತನೆ ಇದು. ಪರೀಕ್ಷೆಯ ಅಂಕಪಟ್ಟಿ ಆಧಾರದಲ್ಲಿ ಇಂದು ನೇಮಕಾತಿಗಳು ನಡೆಯುವುದಿಲ್ಲ. ಪ್ರತ್ಯೇಕವಾದ ಪರೀಕ್ಷೆಗಳು ಅಥವಾ ಸಂದರ್ಶನಗಳ ಮೂಲಕವೇ ನೇಮಕಾತಿಗಳು ನಡೆಯುತ್ತವೆ.

ಪರೀಕ್ಷಾ ಅಂಕಪಟ್ಟಿಗಳು ಕೋರ್ಸ್ ಪೂರ್ಣಗೊಂಡಿದೆ ಎಂಬುದನ್ನು ಹೇಳುವುದಕ್ಕಿಂತ ಹೆಚ್ಚಿನ ಅನುಕೂಲವನ್ನು ವಿದ್ಯಾರ್ಥಿಗೆ ಕಲ್ಪಿಸುವುದಿಲ್ಲ. ತೆರೆದ ಪುಸ್ತಕದ ಪರೀಕ್ಷೆ ಜಾರಿಗೆ ಬಂದರೆ ವಿದ್ಯಾರ್ಥಿಗೆ ಕೆಲವು ಅನುಕೂಲಗಳು ಆಗುತ್ತವೆ. ಅವು ಏನೆಂದು ಅರ್ಥವಾಗಬೇಕಾದರೆ ಪರೀಕ್ಷೆಯಲ್ಲಿ ಆಗುವುದು ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನೆನಪಿನಲ್ಲಿ ಇಟ್ಟುಕೊಂಡ ಉತ್ತರಗಳನ್ನು ಬರೆಯುವ ಕೆಲಸ ಪರೀಕ್ಷೆಯಲ್ಲಿ ಆಗುತ್ತದೆ, ಅಷ್ಟೆ. ತಾನು ನೆನಪಿಟ್ಟುಕೊಂಡ ಉತ್ತರ ಪಠ್ಯಪುಸ್ತಕದ ಯಾವ ಪಾಠದಲ್ಲಿ, ಯಾವ ಪುಟದಲ್ಲಿ ಬರುತ್ತದೆ ಎಂಬುದೂ ವಿದ್ಯಾರ್ಥಿಗೆ ಗೊತ್ತಿರಬೇಕಾಗಿಲ್ಲ.

ತೆರೆದ ಪುಸ್ತಕದ ಪರೀಕ್ಷೆ ಜಾರಿಗೆ ಬಂದರೆ ಯಾವ ಉತ್ತರ ಯಾವ ಪುಟದಲ್ಲಿದೆ ಎಂಬುದನ್ನು ಹುಡುಕಬೇಕು, ಅದು ಕೂಡ ನಿರ್ದಿಷ್ಟ ಸಮಯದೊಳಗೆ. ಅಂದರೆ ಪುಸ್ತಕ ರೆಫರ್‌ ಮಾಡುವ ಸಾಮರ್ಥ್ಯ ಇರಲೇಬೇಕು. ಪ್ರಶ್ನೆಪತ್ರಿಕೆಯ ಎಲ್ಲ ಪ್ರಶ್ನೆಗಳೂ ಏಕರೂಪಿಯಾಗಿ ಇರುವುದಿಲ್ಲ. ಉದಾಹರಣೆಗೆ ‘ಅಲ್ಲಾ ಉದ್ ದೀನ್ ಖಿಲ್ಜಿಯ ಮಾರುಕಟ್ಟೆ ನೀತಿ ಏನು?’ ಎಂದು ಕೇಳಿದಾಗ ಪಠ್ಯಪುಸ್ತಕದಲ್ಲಿ ಆ ಉತ್ತರದ ಭಾಗವನ್ನು ನೋಡಿ ಬರೆದರೆ ಆಯಿತು. ಆದರೆ ‘ಆತನ ಮಾರುಕಟ್ಟೆ ನೀತಿಯ ಪ್ರಸ್ತುತತೆ ಏನು?’ ಎಂದು ಕೇಳಿದಾಗ ಪಠ್ಯಪುಸ್ತಕದಲ್ಲಿ ಇದ್ದುದನ್ನೇ ಬರೆಯಲು ಆಗುವುದಿಲ್ಲ. ಅಲ್ಲಿಯ ನೀತಿಯನ್ನು ಇಂದಿನ ಕಾಲಘಟ್ಟದಲ್ಲಿ ನಿಂತು ಸ್ವತಂತ್ರವಾಗಿ ಯೋಚಿಸಿ ಉತ್ತರ ಬರೆಯಬೇಕಾಗುತ್ತದೆ.

ಅಂದರೆ ವಿದ್ಯಾರ್ಥಿಗಳಲ್ಲಿ ಆಲೋಚನಾ ಸಾಮರ್ಥ್ಯ ಬೇಕಾಗುತ್ತದೆ. ಹಾಗೆ ಆಗಬೇಕಾದರೆ ಅಧ್ಯಾಪಕರು ಆಲೋಚನಾ ಕ್ರಮ ಕಲಿಸಬೇಕು. ಅಧ್ಯಾಪಕರು ಆಲೋಚನಾ ಕ್ರಮವನ್ನು ಕಲಿಸಬೇಕಾದರೆ ಅವರಲ್ಲಿ ಆಲೋಚನಾ ಕ್ರಮ ಬೆಳೆದಿರಬೇಕು. ಅಂತಿಮವಾಗಿ ತರಗತಿಗಳು ಸಂವಾದ ಪದ್ಧತಿಯ ತರಗತಿಗಳಾಗಿ, ಜಿಜ್ಞಾಸೆಯ ಕೇಂದ್ರಗಳಾದಾಗ ಮಾತ್ರ ಆಲೋಚನಾ ಕ್ರಮ ಬೆಳೆಯುತ್ತದೆ. ಇಂದಿನ ಪರೀಕ್ಷಾ ಒತ್ತಡದ ಅತಿರೇಕದ ಜಿದ್ದಾಜಿದ್ದು ಬರುವ ಮೊದಲು ನಮ್ಮ ಆಧುನಿಕ ಶಿಕ್ಷಣದಲ್ಲೂ ಜಿಜ್ಞಾಸೆಗಳು ಇದ್ದವು‌. ನಾನು ಒಬ್ಬ ದೊಡ್ಡ ಹುಡುಗನನ್ನು ಸೂರ್ಯನಾಗಿ ನಿಲ್ಲಿಸಿ ವಿವಿಧ ಅಂತರದಲ್ಲಿ ಇತರರನ್ನು ಬೇರೆ ಬೇರೆ ಗ್ರಹಗಳಾಗಿ ನಿಲ್ಲಿಸಿ ಅವರಿಗೆ ಉಪಗ್ರಹಗಳನ್ನಾಗಿ ಮತ್ತೆ ಕೆಲವರನ್ನು ನಿಲ್ಲಿಸಿ ಸ್ವತಃ ತಾವೂ ಸುತ್ತು ಬರುತ್ತಾ ಸೂರ್ಯನಿಗೆ ದೀರ್ಘ ಅಂಡಾಕಾರದಲ್ಲಿ ಸುತ್ತುಬರುವುದನ್ನು ಮಾಡಿಸಿಯೇ ಸೌರವ್ಯೂಹವನ್ನು ಪರಿಚಯಿಸುತ್ತೇನೆ.

ಇದು ಮಕ್ಕಳಿಗೆ ಸರಿಯಾಗಿ ಅರ್ಥ ಆಗುತ್ತದೆ. ಆದರೆ ಪರೀಕ್ಷಾ ಫಲಿತಾಂಶದ ಒತ್ತಡಗಳು ತಾರಕಕ್ಕೇರಿ ಜಿಲ್ಲೆ ಜಿಲ್ಲೆಗಳು ಶತ್ರು ರಾಷ್ಟ್ರಗಳ ರೀತಿಯಲ್ಲಿ ಪರಿಗಣಿಸಲ್ಪಟ್ಟ ನಂತರ, ಶಿಕ್ಷಕರು ಮಕ್ಕಳೊಂದಿಗೆ ಸಂವಾದಕ್ಕೆ ತೊಡಗುವ ಸಮಯ ಪರೀಕ್ಷಾ ದೃಷ್ಟಿಯಿಂದ ನಿರುಪಯುಕ್ತ ಎಂಬಂತೆ ಕಾಣುವಂತಾಗಿದೆ. ಒತ್ತಡದ ಶಿಕ್ಷಣ ಕ್ರಮ ಇರುವಾಗ ಚಿಂತನೆ ಮತ್ತು ಚಿಂತನಾಕ್ರಮ ಮಕ್ಕಳಲ್ಲಿ ರೂಪುಗೊಳ್ಳಲು ಅವಕಾಶವಿಲ್ಲ. ಚಿಂತನಾ ಕ್ರಮ ಇಲ್ಲದಿದ್ದರೆ ಕಲಿತಿದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವ ಸಾಮರ್ಥ್ಯ ಬರುವುದಿಲ್ಲ.

ತರಗತಿಗಳು ಸಂವಾದಕ್ಕೆ ಸನ್ನದ್ಧವಾದಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳುವುದು ಜಾಸ್ತಿಯಾಗುತ್ತದೆ. ಸನ್ನಿವೇಶವನ್ನು ಗ್ರಹಿಸುವ ಶಕ್ತಿ ಹೆಚ್ಚಾಗುತ್ತದೆ. ಪ್ರತಿಕ್ರಿಯಿಸುವ ವಿಧಾನ ಪಕ್ವವಾಗುತ್ತದೆ. ವಿಚಾರವನ್ನು ಭಾಷೆಯ ರೂಪದಲ್ಲಿ ಅಭಿವ್ಯಕ್ತಿಪಡಿಸಿ ಮಂಡಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ.

ತೆರೆದ ಪುಸ್ತಕದ ಪರೀಕ್ಷೆಗೆ ಎರಡು ಮಿತಿಗಳು ಇವೆ. ಮೊದಲನೆಯದು ಭಾಷಾ ಮಾಧ್ಯಮ. ಸ್ವಂತ ಆಲೋಚನೆಯನ್ನು ಉತ್ತರ ಪತ್ರಿಕೆಯಲ್ಲಿ ಬರೆಯಬೇಕಾದರೆ ಭಾಷಾ ಸಾಮರ್ಥ್ಯವಿರಬೇಕು. ಸಾಕಷ್ಟು ಮಂದಿ ಇಂಗ್ಲಿಷ್ ಮಾಧ್ಯಮವನ್ನು ಬಯಸುತ್ತಾರೆ. ಆದರೆ ಸಾಕಷ್ಟು ವಿದ್ಯಾರ್ಥಿಗಳೂ ಅಧ್ಯಾಪಕರೂ ಇಂಗ್ಲಿಷ್‌ನಲ್ಲೇ ಸ್ವಂತ ಆಲೋಚನೆ ಮಂಡಿಸಲು ಹಿಂದೆ ಬೀಳುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ತೆರೆದ ಪುಸ್ತಕದ ಪರೀಕ್ಷೆ ಎಂದಾಗ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲೇಬೇಕು. ಅದು ಆಗದಿದ್ದರೆ ಕನ್ನಡ ಮಾಧ್ಯಮದ ಕಡೆ ಚಲಿಸಬೇಕಾಗುತ್ತದೆ.

ಎರಡನೆಯದಾಗಿ, ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಗಬೇಕಾದರೆ ತರಗತಿಯಲ್ಲಿ ಕಲಿಕಾ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕು. ಪರೀಕ್ಷಾ ಒತ್ತಡ ಕಡಿಮೆಯಾದರೂ ಕಲಿಸಲೇಬೇಕಾದ ಒತ್ತಡ ಹೆಚ್ಚುತ್ತದೆ. ಏಕೆಂದರೆ ಎಲ್ಲ ವಿದ್ಯಾರ್ಥಿಗಳಿಗೂ ಇಂತಹ ಪುಟದಲ್ಲಿ ಇಂತಹ ವಿಷಯವಿದೆ, ಹೇಗೆ ಪ್ರಶ್ನೆ ಕೇಳಿದರೆ ಹೇಗೆ ಉತ್ತರ ಬರೆಯಬೇಕು ಎಂಬುದು ಗೊತ್ತಾಗಬೇಕಲ್ಲ.

ವಿದ್ಯಾರ್ಥಿಗಳು ಪಠ್ಯಪುಸ್ತಕದ ಮೇಲೆ ಪ್ರಭುತ್ವ ಪಡೆಯುವಂತೆ ಮಾಡಬೇಕಾಗುತ್ತದೆ. ‘ಗೈಡ್’ ಪುಸ್ತಕಗಳಿಗೆ ಈ ಪದ್ಧತಿಯಲ್ಲಿ ಮಹತ್ವ ಇಲ್ಲ. ಒಂದಿಷ್ಟು ಪ್ರಶ್ನೋತ್ತರ ಕೊಟ್ಟು ಅಂಕಗಳನ್ನು ತರಿಸುತ್ತೇನೆಂದು ಅಧ್ಯಾಪಕರು ಆಲೋಚಿಸಲಾಗದು. ಕಲಿಕೆ ಬೇಕೇಬೇಕು. ಶಾಲೆಗಳಲ್ಲಿ ಆಡಳಿತಾತ್ಮಕ ವಿಭಾಗವನ್ನೂ, ಅಕಡೆಮಿಕ್ ವಿಭಾಗವನ್ನೂ ಪ್ರತ್ಯೇಕಿಸಿ ಅಧ್ಯಾಪಕರನ್ನು ಆಡಳಿತಾತ್ಮಕ ಹೊಣೆಗಾರಿಕೆಗಳಿಂದ ಬಿಡುಗಡೆಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT