ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಕುಸಿತಕ್ಕೆ ತೀವ್ರ ಆತಂಕ

ಹಾಕಿದ ಬಂಡವಾಳ ಕೈಗೆ ಬಾರದೆ ಬೇಸರ– ಟೊಮೆಟೊ ಬೆಲೆ ಕೆಜಿಗೆ ₹ 4–5 ಸಿಕ್ಕುತ್ತಿಲ್ಲ
Last Updated 11 ಫೆಬ್ರುವರಿ 2018, 8:47 IST
ಅಕ್ಷರ ಗಾತ್ರ

ಆನೇಕಲ್‌: ತರಕಾರಿಗಳ ಬೆಲೆಗಳು ತೀವ್ರ ಕುಸಿತವಾಗಿರುವ ಕಾರಣ ಕಷ್ಟಪಟ್ಟು ದುಡಿದ ರೈತರು ದುಡಿಮೆಗೆ ತಕ್ಕ ಫಲ ದೊರೆಯದೇ ಆತಂಕಗೊಂಡಿದ್ದಾರೆ.

ಆನೇಕಲ್ ತಾಲ್ಲೂಕಿನ ಬಿದರಗೆರೆಯ ರೈತ ರಾಜಪ್ಪ ಟೊಮೆಟೊ ಬೆಳೆ ಬೆಳೆದು ಉತ್ತಮ ಫಸಲು ಬಂದಿದೆ. ಆದರೆ ಬೆಳೆಗಾಗಿ ಮಾಡಿದ ಬಂಡವಾಳವೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ತೋಡಿಕೊಂಡರು. ಒಂದು ಎಕರೆ ಪ್ರದೇಶದಲ್ಲಿ ರುಷಿಕಾ ಟೊಮೆಟೊ ಬೆಳೆದಿದ್ದು ಒಂದು ಎಕರೆಗೆ ₹ 1 ಲಕ್ಷಕ್ಕೂ ಹೆಚ್ಚಿನ ಖರ್ಚು ಮಾಡಿದ್ದಾರೆ. ಆದರೆ ಹಾಕಿದ ಬಂಡವಾಳದಷ್ಟೂ ಕೈಗೆ ಬಂದಿಲ್ಲ ಎನ್ನುತ್ತಾರೆ.

‘ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಂಡರೆ ಕೃಷಿ, ತೋಟಗಾರಿಕೆ ಮಾಡಲು ಉತ್ಸಾಹ ಬರುತ್ತದೆ. ಇಲ್ಲವಾದಲ್ಲಿ ಮಾಡುವುದೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಹಲವಾರು ಮಂದಿ ವ್ಯವಸಾಯದಿಂದ ದೂರವಾಗಿದ್ದಾರೆ. ಹಾಗಾಗಿ ಸರ್ಕಾರ ಉತ್ತಮ ಬೆಲೆ ದೊರೆಯುವಂತೆ ಮಾಡಬೇಕು ’ ಎಂದು ರಾಜಪ್ಪ ಹೇಳುತ್ತಾರೆ.

ಒಂದು ಎಕರೆ ಬಯಲಿನಲ್ಲಿ ಒಂದು ಕೊಯ್ಲಿಗೆ 100 ರಿಂದ 120 ಬಾಕ್ಸ್ ಟೊಮೊಟೊ ಕೊಯ್ಲು ಬರುತ್ತದೆ. ಪ್ರತಿ ಬಾಕ್ಸ್‌ ನಲ್ಲಿ 22 ಕೆಜಿ ಟೊಮೊಟೊ ತುಂಬಲಾಗುತ್ತದೆ. ಬೆಲೆಯು ಕೆಜಿಗೆ ₹4–5 ದೊರೆಯುತ್ತಿಲ್ಲ. ಕೂಲಿ ಆಳುಗಳಿಗೆ ಊಟ ಹಾಕಿ ₹ 200–250 ಕೂಲಿ ನೀಡಬೇಕು. ಆದರೆ ಮಾರಾಟ ಮಾಡಿದರೆ ಮಾಡಿದ ಖರ್ಚು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಟೊಮೆಟೊ, ಹುರಳಿಕಾಯಿ, ಬಟಾಣಿ ಕ್ಯಾರೆಟ್ ಬೆಲೆಗಳು ಕುಸಿದಿವೆ ಎಂದು ರಾಜಪ್ಪ ತಿಳಿಸಿದರು.

ಟೊಮೆಟೊ ಬೀಜ, ಗೊಬ್ಬರ, ಔಷಧಿಗಳು ಮತ್ತು ಕೂಲಿ ಆಳುಗಳ ವೆಚ್ಚವನ್ನು ಲೆಕ್ಕ ಮಾಡಿದರೆ ಇಂದಿನ ಬೆಲೆಯಲ್ಲಿ ನಷ್ಟವಾಗುತ್ತದೆ. ಸರ್ಕಾರ ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲು ಕ್ರಮ ಕೈಗೊಳ್ಳಬೇಕು ಎಂಬುದು ಬಿದರಗೆರೆ ಗ್ರಾಮದ ರೈತರ ಅಭಿಪ್ರಾಯವಾಗಿದೆ.

ರೈತ ಧನಂಜಯ ಅವರು ಮುತ್ತಗಟ್ಟಿ ಬಳಿ ಒಂದು ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆದಿದ್ದಾರೆ. ಸಬ್ಬಕ್ಕಿ, ಹರವೆ, ದಂಟು ಮತ್ತಿತರ ಸೊಪ್ಪಿನ ಬೆಳೆ ಬೆಳೆದಿದ್ದಾರೆ. ಬೆಲೆ ಕುಸಿದಿದ್ದು, ಸೊಪ್ಪನ್ನು ಕೊಯ್ಲು ಮಾಡಿಲ್ಲ ಎಂದು ಹೇಳಿದರು.

ಎರಡು ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿದ್ದು ರೈತರು ಪರದಾಡುತ್ತಿದ್ದಾರೆ. ಉತ್ತಮ ಬೆಳೆಯಾಗಿದ್ದರೂ  ಬೆಲೆಯಿಲ್ಲದೇ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಹೇಳುತ್ತಾರೆ.
****

ಬಿದರಗೆರೆ ಗ್ರಾಮದ ಮಹಿಳೆ ಭಾಗ್ಯಮ್ಮ ತಮ್ಮ ತೋಟದಲ್ಲಿ ಬೆಳೆದಿದ್ದ ಹುರುಳಿಕಾಯಿ ಬೆಳೆ ಬೆಳೆದಿದ್ದಾರೆ. ‘ಆನೇಕಲ್‌ಗೆ ಮಾರಾಟಕ್ಕೆ ತಂದಾಗ ಅತಿ ಕಡಿಮೆ ಬೆಲೆಗೆ ಕೇಳಿದ್ದರಿಂದ ಉಚಿತವಾಗಿ ಸ್ನೇಹಿತರ ಕುಟುಂಬಗಳಿಗೆ ವಿತರಿಸಿ ಬಂದೆ. ಯಾವ ಸಂಪತ್ತಿಗೆ ತರಕಾರಿ ಬೆಳೆ ಬೆಳೆಯಬೇಕು’ ಎಂದು ದುಃಖ ತೋಡಿಕೊಂಡರು.

ಸರ್ಕಾರದಿಂದ ರೈತರಿಗೆ ಯಾವ ಸೌಲಭ್ಯಗಳೂ ದೊರೆಯುವುದಿಲ್ಲ. ಎಲ್ಲ ಸೌಲಭ್ಯಗಳು ಬಡವರಿಗೆ ದೊರೆಯದೇ ಶ್ರೀಮಂತರಿಗೆ ದೊರೆಯುತ್ತವೆ. ಬಡ ರೈತರು ಬದುಕುವುದೇ ಕಷ್ಟವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT