ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಿನಿ ಜಲಾಶಯದಿಂದ ನಾಲೆಗೆ ನೀರು

ಅಂತರ್ಜಲ ವೃದ್ಧಿಗೆ ಯಳಂದೂರು ತಾಲ್ಲೂಕಿನ ಕೆರೆಗಳಿಗೆ ನೀರು
Last Updated 11 ಫೆಬ್ರುವರಿ 2018, 9:40 IST
ಅಕ್ಷರ ಗಾತ್ರ

ಯಳಂದೂರು: ಕೆರೆಕಟ್ಟೆಗಳಿಗೆ ನೀರು ಹರಿಸುವುದು, ಅಂತರ್ಜಲ ಸಂರಕ್ಷಣೆ, ಮೀನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವು ಒದಗಿಸಲು ಕಬಿನಿ ಬಲದಂಡೆ ನಾಲೆಗಳಲ್ಲಿ ತತ್ಕಾಲ್‌ ಯೋಜನೆ ಮೂಲಕ ಗುರುವಾರ ನೀರು ಬಿಟ್ಟಿರುವುದು ಕೊಳ್ಳೇಗಾಲ ಮತ್ತು ಯಳಂದೂರು ಭಾಗದ ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನಲ್ಲಿ ರೈತರು ಮುಸುಕಿನ ಜೋಳ, ರಾಗಿ, ದ್ವಿದಳ ಧಾನ್ಯ ಹಾಗೂ ಕಬ್ಬು ಬೆಳೆದಿದ್ದಾರೆ. ಈಗ ನಾಲೆಯಲ್ಲಿ ನೀರು ಹಾಯಿಸುವ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಲು ನೆರವಾಗಿದೆ. ಈಗಾಗಲೇ ಕೆರೆ ಸಂಜೀವಿನಿ ಯೋಜನೆಯಡಿ ₹ 6 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, 7 ಕೆರೆಗಳಿಗೆ ಶಾಶ್ವತ ನೀರು ತುಂಬಿಸಲು ಚಿಂತನೆ ನಡೆಸಲಾಗಿದೆ. ಅಂಬಳೆ ಕೆರೆಗೆ ಮಾತ್ರ ನೀರು ಹರಿಸಲು ಅನುಮೋದನೆ ದೊರೆತಿರುವುದು ಈ ಭಾಗದ ಅನ್ನದಾತರಲ್ಲಿ ಸಂತಸ ಹೆಚ್ಚಿಸಿದೆ.

ಕಬಿನಿ ಬಲದಂಡೆ ನಾಲೆಯೂ ಯಳಂದೂರು ಮುಖಾಂತರ ಕೊಳ್ಳೇಗಾಲ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತದೆ. ಮುಖ್ಯ ನಾಲೆಯ ಸರಪಳಿ 114.36 ಕಿ.ಮೀ. ವಿತರಣಾ ನಾಲೆ 1865 ಕಿಲೋಮೀಟರ್ ಉದ್ದಕ್ಕೆ ಹರಿಯುತ್ತದೆ. ಇಲ್ಲಿಂದ ಹೊನ್ನೂರು ಮತ್ತು ಸಂತೇಮರಹಳ್ಳಿ ಬಳಿ ಎಡ ಮತ್ತು ಬಲಭಾಗದ ವಿತರಣಾ ನಾಲಾ ಬ್ರಾಂಚ್‌ಗಳನ್ನು ನಿರ್ಮಿಸಲಾಗಿದೆ. 2016–17ನೇ ಸಾಲಿನಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 6 ಕೆರೆಗಳಿಂದ 1333.2 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ನಾಲ್ಕುವರೆ ವರ್ಷಗಳಲ್ಲಿ ₹ 2008.75 ಲಕ್ಷ ಅನುದಾನ ಬಂದಿದ್ದು, 148 ಕಾಮಗಾರಿಗಳಿಗೆ ₹1083.75 ಲಕ್ಷ ವೆಚ್ಚ ಮಾಡಲಾಗಿದೆ. ಹೊಸಕೆರೆ, ಆಧುನೀಕರಣ, ದುರಸ್ತಿ ಮುಖಾಂತರ ನೀರಿನ ಸಾಮರ್ಥ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಸ್‌. ಜಯಣ್ಣ ಮಾಹಿತಿ ನೀಡಿದರು.

ವರ್ಷಪೂರ್ತಿ ಕೆರೆಗಳಲ್ಲಿ ನೀರು ನಿಲ್ಲುವಂತೆ ಕೆರೆ ಸುತ್ತಲ ಪರಿಸರವನ್ನು ಕಾಪಿಡಬೇಕು. ಮಳೆಗಾಲದ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೀರನ್ನು 30ದಿನಗಳ ಕಾಲ ಹರಿಸುವ ಮೂಲಕ ಮುಂಗಾರು ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಿ ಎನ್ನುತ್ತಾರೆ ಹೊನ್ನೂರು ರೈತರಾದ ಸೋಮಣ್ಣ ಮತ್ತು ಮಹದೇವಸ್ವಾಮಿ.

ಚಾಮರಾಜನಗರ ತಾಲ್ಲೂಕು ಹೊಮ್ಮದ ಬಳಿ ನಾಲೆಯಿಂದ ಸುವರ್ಣಾವತಿ ನದಿಗೂ ನೀರು ಬಿಡಲಾಗಿದೆ. ಇದರಿಂದ ನದಿಪಾತ್ರದ ಸುತ್ತಮುತ್ತಲ ಬಾವಿಗಳ ಅಂತರ್ಜಲ ಹೆಚ್ಚಳದಿಂದ ಅಂಚಿನ ಕೃಷಿಕರಿಗೆ ಸಂತಸವಾಗಿದೆ ಎನ್ನುವ ಮಾತು ಗೂಳಿಪುರ ಮಣಿಕಂಠ ಅವರದು.

ಸದ್ಯ 5 ದಿನ ಮಾತ್ರ ನಾಲೆಯಲ್ಲಿ ನೀರು ಹರಿಸಲಾಗುತ್ತದೆ. ಕೆರೆ–ಕಟ್ಟೆಗಳ ಧಾರಣ ಸಾಮರ್ಥ್ಯ,
ಜಲ ಮೂಲಗಳ ಸುಸ್ಥಿತಿ ಹಾಗೂ ಬೇಸಾಯಗಾರರ ಬೇಡಿಕೆ ಮನಗಂಡು ನೀರಿನ ಅಗತ್ಯತೆ ಬಗ್ಗೆ ನಿರ್ಧರಿಸಲಾಗುವುದು. ಈಗ ನೀರಾವರಿ ಇಲಾಖಾ ವ್ಯಾಪ್ತಿಯ ಕರೆ, ಜಮೀನುಗಳಿಗೆ ಬಳಸಬಹುದು. ನಂತರ 10 ದಿನಗಳಿಗೆ ನೀರು ಹರಿಸಲು ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ನಿರ್ಧರಿಸುತ್ತದೆ ಎಂದು ಕಾವೇರಿ ನೀರಾವರಿ ನಿಗಮ ಸಂತೆಮರಹಳ್ಳಿ ವಿಭಾಗದ ಎಂಜಿನಿಯರ್‌ ರಂಗಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
**
4812
ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ
1126.42
ಲಕ್ಷ ತಗುಲಿದ ವೆಚ್ಚ
27
ತಾಲ್ಲೂಕಿನ ಕೆರೆಗಳ ಸಂಖ್ಯೆ
1
ಕೆರೆ ಸಂಜೀವಿನಿ ಯೋಜನೆಗೆ ಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT