ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಸುವಾಗ ಮೂವರೇ ಇದ್ದೆವು!

ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ ದಿನಗಳ ನೆನಪು ಹಂಚಿಕೊಂಡ ಮಾಜಿ ಸಚಿವ ಆರ್.ಎನ್.ನಾಯ್ಕ್
Last Updated 11 ಫೆಬ್ರುವರಿ 2018, 11:29 IST
ಅಕ್ಷರ ಗಾತ್ರ

ಕಾರವಾರ: ‘1983ರಲ್ಲಿ ನಾಮಪತ್ರ ಸಲ್ಲಿಸುವಾಗ ಇದ್ದಿದ್ದು ಕೇವಲ ಮೂವರೇ.. ನಾನು, ಗೆಳೆಯ ಹಳದೀಪುರದ ಎಂ.ಎಸ್.ನಾಯ್ಕ್ ಹಾಗೂ ಪರಮೇಶ್ವರ ನಾಯ್ಕ್ ಮಂಕಿ. ಹೌದು, ನಾವು ಮೂವರೇ.. ಕುಮಟಾ ಉಪ ವಿಭಾಗಾಧಿಕಾರಿ ಕಚೇರಿಗೆ ಹೋಗಿ ಉಮೇದುವಾರಿಕೆ ಸಲ್ಲಿಸಿ ಬಂದಿದ್ದೆ. ಸ್ವ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಪಕ್ಷ ಮತ್ತು ಬಂಗಾರಪ್ಪ ಅವರ ಪ್ರಭಾವದಿಂದ 35ನೇ ವರ್ಷಕ್ಕೇ ನಾನು ಶಾಸಕನಾಗಿದ್ದೆ!’.

ಹೀಗೆ ನೆನಪಿನಂಗಳಕ್ಕೆ ಜಾರಿದವರು ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಆರ್.ಎನ್.ನಾಯ್ಕ್.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕನಸಿಲ್ಲೂ ಆಕಾಂಕ್ಷೆ ಹೊಂದಿರಲಿಲ್ಲ. ಬಂಗಾರಪ್ಪ ಮುಖ್ಯಮಂತ್ರಿಯಾಗಬೇಕು ಎಂಬುದಷ್ಟೇ ನನ್ನ ಹೆಬ್ಬಯಕೆಯಾಗಿತ್ತು. ನಾನು ಅವರ ಶಿಷ್ಯನಾಗಿದ್ದೆ. ಕ್ರಾಂತಿರಂಗ ಪಕ್ಷದಿಂದ ನಾಮಧಾರಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶವಿತ್ತು. ಹಾಗಾಗಿ ನನಗೆ ಟಿಕೆಟ್ ಸಿಕ್ಕಿತ್ತು’ ಎಂದು ನೆನಪಿಸಿಕೊಂಡರು.

‘ಸ್ಥಳೀಯವಾಗಿ ನಾನು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದೂ ಕಡಿಮೆ. ಟಿಕೆಟ್ ಕೋರಿ ಸುಮ್ಮನೇ ಅರ್ಜಿ ಸಲ್ಲಿಸಿದ್ದೆ. ಆದರೆ, ಟಿಕೆಟ್ ನೀಡುತ್ತಾರೆ ಎಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಬಂಗಾರಪ್ಪ ಅವರ ಸಂಬಂಧಿ, ಸಿದ್ದಾಪುರದ ಬಿ.ಬಿ.ನಾಯ್ಕ್ ನನಗೆ ಟಿಕೆಟ್ ತಂದುಕೊಟ್ಟು ನಾಮಪತ್ರ ಸಲ್ಲಿಸಲು ತಿಳಿಸಿದ್ದರು. ನನಗೆ ಬೇಡ ಎಂದಾಗ ಅವರು ಅಣ್ಣ ಹೇಳಿದ್ದಾರೆ, ನೀನು ಸ್ಪರ್ಧಿಸಬೇಕಂತೆ ಎಂದು ಗದರಿದ್ದರು’ ಎಂದು ನಕ್ಕರು.

‘ನನಗೆ ಚುನಾವಣೆ ಬಗ್ಗೆ ಭಯವಿತ್ತು. ಆರಂಭದ ನಾಲ್ಕೈದು ದಿನ ಪ್ರಚಾರಕ್ಕೆ ಜನರೇ ಇರಲಿಲ್ಲ. ಮತದಾನಕ್ಕೆ 21 ದಿನಗಳು ಇರುವಾಗ ಬಂಗಾರಪ್ಪ ಭಟ್ಕಳಕ್ಕೆ ಬಂದರು. ಆಗ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆದಂತಾಯ್ತು. ನನ್ನ ‍ಪ್ರತಿಸ್ಪರ್ಧಿ ಇಂದಿರಾ ಕಾಂಗ್ರೆಸ್‌ನ ಎಸ್.ಎಂ.ಯಾಹ್ಯಾ ಅವರನ್ನು ಸುಮಾರು 2,500 ಮತಗಳ ಅಂತರದಿಂದ ಸೋಲಿಸಿದ್ದೆ. ಆಗ ಶಾಸಕರಾಗಲು ಅವರು ಹೆಚ್ಚು ಅರ್ಹರಾಗಿದ್ದರು. ಆದರೆ, ಬಂಗಾರ‌ಪ್ಪ ಅವರ ಪ್ರಭಾವಳಿಯಲ್ಲಿ ನಾನು ಮೇಲುಗೈ ಸಾಧಿಸಿದೆ’ ಎಂದು ನೆನಪಿಸಿಕೊಂಡರು.

‘ಆಗ ಎಸ್.ಜೆ.ನಾಯ್ಕ್ ಅವರು ಕುಮಟಾದಿಂದ ಕಣಕ್ಕೆ ಇಳಿದಿದ್ದರು. ನಾನು ಅವರಿಗೆ ಭಟ್ಕಳದಲ್ಲಿ ಸ್ಪರ್ಧಿಸಲು ಮನವಿ ಮಾಡಿಕೊಂಡಿದ್ದೆ. ಆದರೆ, ಅವರಿಗೆ ಅಲ್ಲೇ ಸ್ಪರ್ಧಿಸುವಂತೆ ಬಂಗಾರಪ್ಪ ಸೂಚಿಸಿದ್ದರು. ಹಾಗಾಗಿ ಅವರು ನನ್ನ ಬೇಡಿಕೆಯನ್ನು ನಿರಾಕರಿಸಿದರು’ ಎಂದರು.

‘ಚುನಾವಣೆ ಪ್ರಚಾರಕ್ಕೆ ಹೋಗಲು ನನ್ನ ಬಳಿ ಹಣ ಇರಲಿಲ್ಲ. ಆಗ ಈಗಿನಂತೆ ಹಣ, ಜಾತಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತ್ತಿರಲಿಲ್ಲ. ಬಂಗಾರಪ್ಪ ಬಂದುಹೋದ ಮೇಲೆ ನನ್ನ ಪರ ಪ್ರಚಾರಕ್ಕೆ ಒಂದಿಷ್ಟು ಬೆಂಬಲಿಗರು ಬಂದರು. ಅವರೇ ನನ್ನನ್ನು ಮುನ್ನಡೆಸಿದರು. ಆಗ ಮತದಾರರು ಒಂದು ಪೈಸೆಯನ್ನೂ ಕೇಳುತ್ತಿರಲಿಲ್ಲ. ಚಹಾ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದರೆ ಸಾಕಿತ್ತು. ನಾನು ಅಧಿಕಾರ ಪಡೆಯಲು ಹಣ ಮತ್ತು ಹೆಂಡ ಹಂಚಿಲ್ಲ ಎಂಬ ಹೆಮ್ಮೆ ನನಗಿದೆ’ ಎಂದರು.

‘1985ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರವನ್ನು ವಿಸರ್ಜನೆ ಮಾಡಿದರು. ಆಗ ಕ್ರಾಂತಿರಂಗ ಪಕ್ಷದಲ್ಲಿದ್ದ ಇದ್ದ ಆರೂ ಶಾಸಕರನ್ನು ಇಂದಿರಾಗಾಂಧಿ ಕಾಂಗ್ರೆಸ್‌ಗೆ ಸೇರಿಸಿಕೊಂಡರು. ಆಗ ನನಗೂ ಟಿಕೆಟ್ ದೊರೆಯಿತು. ಮುಂದೆ ಎರಡು ಬಾರಿ ಶಾಸಕನಾದೆ. 1989ರಲ್ಲಿ ಸಚಿವನಾಗಿದ್ದಾಗಲೇ ಕೆಲವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿತು. ನಂತರ ಕಾಂಗ್ರೆಸ್ ನನಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲಿಲ್ಲ. ಬದಲಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತು‌’ ಎಂದು ಹೇಳಿದರು.

‘ಮುಂದೆ ವಿಧಾನಸಭೆಗೆ ಪಕ್ಷೇತರನಾಗಿ ಸ್ಪರ್ಧಿಸಬಹುದಿತ್ತು. ಆದರೆ, ಅದಕ್ಕೆ ನನ್ನ ಬಳಿ ದುಡ್ಡಿರಲಿಲ್ಲ. ಈಗ ವಕೀಲ ವೃತ್ತಿ ಮಾಡಿಕೊಂಡು ಜತೆಗೇ ಕೃಷಿಯನ್ನು ಮಾಡಿಕೊಂಡು ನೆಮ್ಮದಿಯಾಗಿದ್ದೇನೆ’ ಎಂದು ಮುಗುಳ್ನಕ್ಕರು.
***
‘ಈಗ ಅಭಿಮಾನಕ್ಕೆ ಮತವಿಲ್ಲ’

‘ಈಗ ಯಾವುದೇ ಪಕ್ಷವನ್ನು ಆಯ್ಕೆ ಮಾಡಿಕೊಂಡರೂ ಒಂದೇ ಸ್ಥಿತಿಯಿದೆ. ಒಂದೋ ಟಿಕೆಟ್‌ ಪಡೆಯಲು ಹಣ ನೀಡಬೇಕು ಅಥವಾ ಗೆಲ್ಲಲು ಹಣ ಚೆಲ್ಲಬೇಕು. ಇವೆರಡೂ ಸರಿಯಲ್ಲ. ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಸೇರಿದ ಸಾವಿರಾರು ಜನರನ್ನು ನೋಡಿ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವಂತಿಲ್ಲ. ಈಗ ಪ್ರೀತಿ, ಅಭಿಮಾನಕ್ಕೆ ಮತ ಸಿಗುತ್ತಿಲ್ಲ. ಬದಲಿಗೆ ದ್ವೇಷಕ್ಕೆ ಮತ ನೀಡುತ್ತಿದ್ದಾರೆ’ ಎಂದು ಆರ್.ಎನ್.ನಾಯ್ಕ್ ವಿಷಾದ ವ್ಯಕ್ತಪಡಿಸಿದರು.
***
ಈ ಬಾರಿಯ ಚುನಾವಣೆ ಜಾತ್ಯತೀತ ಮತ್ತು ಜಾತ್ಯತೀತವಲ್ಲದ ಎಂಬ ಎರಡು ಗುಂಪುಗಳ ನಡುವೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವಿನಾಶದ ಹತ್ತಿರ ಬಂದಾಗ ಅಪ್ಪಟ ಪ್ರಜಾಪ್ರಭುತ್ವವಾದಿಯೊಬ್ಬ ಜನಿಸುತ್ತಾನೆ.
ಆರ್.ಎನ್.ನಾಯ್ಕ್, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT