ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಾ ಆಗುತ್ತಾ ₹ 2,028 ಕೋಟಿ ಕೃಷಿ ಸಾಲ?

ಬಜೆಟ್‌ನತ್ತ ರೈತರ ಚಿತ್ತ; ಮುಖ್ಯಮಂತ್ರಿ ನಿರ್ಧಾರ ಕಾಯುತ್ತಿರುವ ಜನರು
Last Updated 2 ಜುಲೈ 2018, 16:14 IST
ಅಕ್ಷರ ಗಾತ್ರ

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ (ಜುಲೈ 5) ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಎಲ್ಲರ ಚಿತ್ತ ಹರಿದಿದೆ. ಸಾಲಮನ್ನಾ ನಿರ್ಧಾರದ ಬಗ್ಗೆ ಸರ್ಕಾರದ ನಿಲುವಿನ ಕುರಿತು ರೈತ ಸಮುದಾಯವು ಕುತೂಹಲದಿಂದ ಕಾಯುತ್ತಿದೆ.

ಲೀಡ್ ಬ್ಯಾಂಕ್ ಅಧಿಕಾರಿಗಳು ನೀಡುವ ಮಾಹಿತಿಯಂತೆ, ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಜಿಲ್ಲೆಯ ರೈತರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಬರೋಬ್ಬರಿ ₹2,028 ಕೋಟಿ ಕೃಷಿ ಸಾಲ ಉಳಿಸಿಕೊಂಡಿದ್ದಾರೆ. ಬೆಳೆ ಸಾಲದ ಜೊತೆಯಲ್ಲಿ ಕೃಷಿ ಪರಿಕರಗಳ ಖರೀದಿ ಹಾಗೂ ಇತರ ಕೃಷಿ ಚಟುವಟಿಕೆಗಳಿಗಾಗಿ ಪಡೆದ ಸಾಲವೂ ಇದರಲ್ಲಿ ಸೇರಿದೆ.

ಕಳೆದ ವರ್ಷ ಭೀಕರ ಬರಗಾಲದ ಹಿನ್ನೆಲೆಯಲ್ಲಿ, ರೈತರು ಸಹಕಾರ ಸಂಘಗಳಲ್ಲಿ ಪಡೆದಿದ್ದ ₹50 ಸಾವಿರದವರೆಗಿನ ಕೃಷಿ ಸಾಲವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಾ ಮಾಡಿದ್ದರು. ಇದರಿಂದಾಗಿ ಜಿಲ್ಲೆಯ ರೈತರ ಸುಮಾರು ₹200 ಕೋಟಿಯಷ್ಟು ಬೆಳೆ ಸಾಲವು ಮನ್ನಾ ಆಗಿತ್ತು. ಇದೀಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುತ್ತಾರಾ ಅಥವಾ ಬೆಳೆ ಸಾಲ ಮನ್ನಾಕ್ಕೆ ಸೀಮಿತಗೊಳ್ಳುತ್ತಾರಾ ಎನ್ನುವ ಕುತೂಹಲ ರೈತರದ್ದು.

ವಾಣಿಜ್ಯ ಬ್ಯಾಂಕುಗಳಲ್ಲಿಯೇ ಹೆಚ್ಚು:

2018ರ ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ರೈತರು ಬರೋಬ್ಬರಿ ₹1,430 ಕೋಟಿ ಬೆಳೆ ಸಾಲ ಮಾಡಿದ್ದಾರೆ. ಇದರಲ್ಲಿ ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವೇ ದೊಡ್ಡ ಪ್ರಮಾಣದಲ್ಲಿದೆ. ಗ್ರಾಮೀಣಾಭಿವೃದ್ಧಿ, ಜಿಲ್ಲಾ ಸಹಕಾರ ಬ್ಯಾಂಕ್‌ ಹಾಗೂ ಪಿಎಲ್‌ಡಿ ಬ್ಯಾಂಕುಗಳಿಂದಲೂ ಕೃಷಿಕರು ಸಾಲ ಪಡೆದುಕೊಂಡಿದ್ದಾರೆ.

ಹಿಂದಿನ ಸರ್ಕಾರಗಳು ಸಾಮಾನ್ಯವಾಗಿ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುತ್ತಾ ಬಂದಿವೆ. ಆದರೆ ಕೃಷಿ ಪರಿಕರಗಳ ಖರೀದಿ, ಹೈನುಗಾರಿಕೆ ಮೊದಲಾದ ಕೃಷಿ ಪೂರಕ ಚಟುವಟಿಕೆಗಳಿಗೆ ಪಡೆದ ಸಾಲ ಮಾತ್ರ ಮನ್ನಾ ಆಗಿಲ್ಲ. ರೈತರನ್ನು ಇಂತಹ ಎಲ್ಲ ಬಗೆಯ ಸಾಲಗಳಿಂದ ಸಂಪೂರ್ಣ ಋಣಮುಕ್ತರನ್ನಾಗಿಸಬೇಕು ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ಪೂರಕ ಘೋಷಣೆ ಅಗತ್ಯ: ‘ಕೇವಲ ಬೆಳೆ ಸಾಲ ಮನ್ನಾಕ್ಕೆ ಕುಮಾರಸ್ವಾಮಿ ಅವರ ಕೃಷಿ ಕ್ಷೇತ್ರ ಸುಧಾರಣೆ ಕಾರ್ಯಕ್ರಮ ಸೀಮಿತವಾಗಬಾರದು. ರೈತರ ಪೂರ್ಣ ಸಾಲ ಮನ್ನಾದ ಜೊತೆಗೆ ಅವರನ್ನು ಆರ್ಥಿಕವಾಗಿ ಶಕ್ತರನ್ನಾಗಿಸುವ ನೀತಿ ರೂಪಿಸಬೇಕು. ಪ್ರತಿ ಬೆಳೆಯ ಉತ್ಪಾದನಾ ವೆಚ್ಚ ಹಾಗೂ ಖರೀದಿ ದರವನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಅರ್ಥನೀತಿ ರೂಪುಗೊಳ್ಳಬೇಕು. ಅದಕ್ಕೆ ಶಾಸನಬದ್ಧ ಸ್ಥಾನಮಾನ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರಾದ ಸಿ. ಪುಟ್ಟಸ್ವಾಮಿ.

ದೀರ್ಘಾವಧಿ, ಮಧ್ಯಮ ಹಾಗೂ ಅಲ್ಪಾವಧಿ ಸೇರಿದಂತೆ ರೈತರ ಎಲ್ಲ ಬಗೆಯ ಸಾಲವನ್ನೂ ಮನ್ನಾ ಮಾಡಬೇಕು. ಬಜೆಟ್‌ನಲ್ಲಿ ಆ ಬಗ್ಗೆ ಘೋಷಣೆ ಮಾಡಬೇಕು
ಸಿ. ಪುಟ್ಟಸ್ವಾಮಿ,ಹಿರಿಯ ರೈತ ಮುಖಂಡ

ಕೃಷಿ ಸಾಲ ಎಂದರೆ ಬೆಳೆ ಸಾಲದ ಜೊತೆಗೆ ಕೃಷಿ ಚಟುವಟಿಕೆಗೆ ಪೂರಕವಾದ ಇತರ ಎಲ್ಲ ಸಾಲವೂ ಸೇರುತ್ತದೆ. ಇಂತಹ ಸಾಲವನ್ನೂ ಸರ್ಕಾರ ಮನ್ನಾ ಮಾಡಬೇಕು
ಕೆ.ಎಸ್.ಲಕ್ಷ್ಮಣ ಸ್ವಾಮಿ,ಜಿಲ್ಲಾ ಅಧ್ಯಕ್ಷ, ರೈತ ಸಂಘ

ಜಿಲ್ಲೆಯ ಬ್ಯಾಂಕುಗಳಲ್ಲಿನ ಕೃಷಿ ಸಾಲ (₹ಕೋಟಿಗಳಲ್ಲಿ)
ಬ್ಯಾಂಕ್ ಬೆಳೆ ಸಾಲ
ವಾಣಿಜ್ಯ 1149.84 395.48 1545.32
ಗ್ರಾಮೀಣ 63.41 194.44 257.85
ಡಿಸಿಸಿ/ಪಿಎಲ್‌ಡಿ 217.63 7.90 225.53
ಒಟ್ಟು 430.88 597.82 2028.70

(2018ರ ಮಾರ್ಚ್ ಅಂತ್ಯಕ್ಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT