ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬೇಡಿಕೆಗೂ ಅಸ್ತು; ಶಾಲೆ–ಸಂಘಕ್ಕೂ ಶ್ರೀರಸ್ತು..!

Last Updated 12 ಫೆಬ್ರುವರಿ 2018, 7:17 IST
ಅಕ್ಷರ ಗಾತ್ರ

ವಿಜಯಪುರ: ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ ಮಂಜೂರು ಮಾಡುವಂತೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜನರ ಬೇಡಿಕೆಗೆ ಮನ್ನಣೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮುಕ್ಕಾಲು ಪಾಲು ಅನುದಾನವನ್ನು ಇದಕ್ಕೆ ಮೀಸಲಿಟ್ಟಿದ್ದಾರೆ.

ಉಳಿದ ಕಾಲು ಭಾಗದಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸುವ ಯೋಜನೆಗೂ ಅನುದಾನ ಒದಗಿಸಿದ್ದು, ವಿಶೇಷವಾಗಿ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸುಧಾರಣೆಗೆ ಒತ್ತು ನೀಡಿದ್ದಾರೆ. ಯುವಕ ಸಂಘ ಸೇರಿದಂತೆ ಸ್ತ್ರೀಶಕ್ತಿ ಸಂಘಗಳ ಬಲವರ್ಧನೆಗೂ ಅನುದಾನ ಹಂಚಿಕೆ ಮಾಡಿರುವುದು ವಿಶೇಷ.

‘ಅರಕೇರಿ, ಟಕ್ಕಳಕಿ, ಹೆಬ್ಬಾಳಟ್ಟಿ, ನಾಗರಾಳ, ಬಬಲೇಶ್ವರ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಇನ್ನುಳಿದ ಐದು ಗ್ರಾಮಗಳಲ್ಲಿ ಒಟ್ಟು 10 ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ತಲಾ ₹ 5 ಲಕ್ಷ ಅನುದಾನ ನೀಡಿದ್ದಾರೆ. ಈಗಾಗಲೇ ಈ ಭವನಗಳು ನಿರ್ಮಾಣಗೊಂಡು ಸ್ತ್ರೀಶಕ್ತಿ ಸಂಘಗಳ ಕಾರ್ಯಚಟುವಟಿಕೆಯ ತಾಣವಾಗಿವೆ.

ಇವುಗಳ ನಿರ್ಮಾಣಕ್ಕೂ ಮುನ್ನ ಸ್ತ್ರೀಶಕ್ತಿ ಸಂಘಗಳ ಸಭೆಗಳು ಕೆಲ ಸದಸ್ಯರ ಮನೆ, ದೇಗುಲದ ಆವರಣದಲ್ಲಿ ನಡೆಯುತ್ತಿದ್ದವು. ಶಾಸಕರ ಅನುದಾನದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಗೊಂಡ ಬಳಿಕ ಇಲ್ಲಿಯೇ ನಡೆಯುತ್ತಿವೆ. ಈ ವಿದ್ಯಮಾನ ಸಂಘದ ಬಲವರ್ಧನೆ, ಬೆಳವಣಿಗೆಗೆ ಪೂರಕವಾಗಿವೆ.

ತಿಕೋಟಾ, ಬಿಜ್ಜರಗಿ, ಕನಮಡಿ, ಬಾಬಾನಗರ, ಕಾಖಂಡಕಿ, ತೊನಶ್ಯಾಳ ಸೇರಿದಂತೆ ಇನ್ನುಳಿದ ನಾಲ್ಕು ಗ್ರಾಮಗಳಲ್ಲಿ ಒಟ್ಟು 10 ಯುವಕ ಭವನ ನಿರ್ಮಿಸಲಾಗಿದೆ. ಈ ಭವನದಲ್ಲಿ ಗ್ರಂಥಾಲಯ, ವಾಚನಾಲಯ, ಯುವ ಚಟುವಟಿಕೆ ಹಮ್ಮಿಕೊಳ್ಳಲು ಪೂರಕವಾದ ಅವಶ್ಯಕತೆ ಒದಗಿಸಲಾಗಿದೆ. ಪ್ರತಿ ಭವನವನ್ನು ತಲಾ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದು ಸಚಿವರ ಕಚೇರಿ ಸಿಬ್ಬಂದಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಬಳಕೆಯ ಮಾಹಿತಿ ನೀಡಿದರು.

‘ಶಾಲೆಗಳ ಸುಧಾರಣೆಗೂ ಶಾಸಕರ ನಿಧಿಯಲ್ಲಿ ಸಚಿವ ಎಂ.ಬಿ.ಪಾಟೀಲ ಅನುದಾನ ಒದಗಿಸಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 100 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಡಿಜಿಟಲ್‌ ಎಜುಕೇಷನ್‌ ಒದಗಿಸಲು ಇ–ಶಾಲೆ ಆರಂಭಿಸುವಂತೆ ₹ 50 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.

ಪ್ರತಿ ಶಾಲೆಗೂ ₹ 2 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಇ ಶಾಲೆ ನಡೆಸಲು ಅಗತ್ಯ ಪರಿಕರ, ಪಾಠೋಪಕರಣಗಳನ್ನು ನಿಧಿಯ ಹಣದಲ್ಲಿ ಖರೀದಿಸಲಾಗಿದ್ದು, ಅನುದಾನ ಸದ್ಬಳಕೆಯಾಗಿದೆ. ಇದರ ಜತೆಗೆ 35 ಶಾಲೆಗಳಿಗೆ ₹ 50 ಲಕ್ಷ ವೆಚ್ಚದಲ್ಲಿ ಟಾಕಿಂಗ್‌ ಟ್ರೀ ವಿತರಿ
ಸಲಾಗಿದೆ. ಇದು ರೋಬೋಟ್‌ ತರಹ ಕಾರ್ಯ ನಿರ್ವಹಿಸಲಿದ್ದು, ಮಕ್ಕಳ ಮನ ತಟ್ಟುವಂತೆ ಬೋಧನೆ ಮಾಡುತ್ತಿದೆ’ ಎಂದು ಹೆಸರು ಬಹಿರಂಗ
ಪಡಿಸಲಿಚ್ಚಿಸದ ಸಿಬ್ಬಂದಿ ತಿಳಿಸಿದರು.

ಭವನಕ್ಕೆ ಮುಕ್ಕಾಲು ಪಾಲು: 2013–14ನೇ ಸಾಲಿನಲ್ಲಿ ₹ 1.51 ಕೋಟಿ, 14–15ರಲ್ಲಿ ₹ 1.48 ಕೋಟಿ, 15–16ರಲ್ಲಿ ₹ 1.46 ಕೋಟಿ, 16–17ರಲ್ಲಿ ₹ 1.57 ಕೋಟಿ ಸೇರಿದಂತೆ ನಾಲ್ಕು ವರ್ಷದ ಅವಧಿಯಲ್ಲಿ ಒಟ್ಟು ₹ 6.02 ಕೋಟಿ ಮೊತ್ತವನ್ನು ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರೀಕರಿಸುವ ಮೂಲಕ ತಮ್ಮ ಅನುದಾನದ ಮುಕ್ಕಾಲು ಪಾಲು ಮೊತ್ತವನ್ನು ವಿನಿಯೋಗಿಸಿದ್ದಾರೆ.

2013–14ರಲ್ಲಿ ₹ 1.96 ಕೋಟಿ ಅನುದಾನ ಬಿಡುಗಡೆಯಾಗಿದ್ದು, 112 ಕಾಮಗಾರಿ ಕೈಗೊಳ್ಳಲು ಪೂರ್ಣ ಮೊತ್ತಕ್ಕೆ ಶಾಸಕ ಎಂ.ಬಿ.ಪಾಟೀಲ ಮಂಜೂರಾತಿ ಪತ್ರ ನೀಡಿದ್ದಾರೆ. ಇದರಲ್ಲಿ ₹ 1.94 ಕೋಟಿ ಮೊತ್ತ ಉಳಿದಿದ್ದು, ₹ 2 ಲಕ್ಷ ಖರ್ಚಾಗಬೇಕಿದೆ.

2014–15ರಲ್ಲಿ ಬಿಡುಗಡೆಯಾದ ₹ 2 ಕೋಟಿ ಅನುದಾನಕ್ಕೂ 85 ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪತ್ರವನ್ನು ನೀಡಿದ್ದಾರೆ. ಇದರಲ್ಲಿ ₹ 1.95 ಕೋಟಿ ಖರ್ಚಾಗಿದೆ. ₹ 5 ಲಕ್ಷವಷ್ಟೇ ಇನ್ನೂ ವೆಚ್ಚವಾಗಿಲ್ಲ.

2015–16ರಲ್ಲೂ ₹ 2 ಕೋಟಿ ಮಂಜೂರಾಗಿದ್ದು, 63 ಕಾಮಗಾರಿ ನಡೆಸಲು ₹ 1.76 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ ₹ 1.65 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ₹ 11 ಲಕ್ಷವಷ್ಟೇ ಉಳಿದಿದೆ. ₹ 24 ಲಕ್ಷ ಮೊತ್ತಕ್ಕೆ ಕಾಮಗಾರಿಯನ್ನೇ ಸೂಚಿಸಿಲ್ಲ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, 72 ಕಾಮಗಾರಿ ಕೈಗೊಳ್ಳಲು ₹ 1.97 ಕೋಟಿ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ₹ 1.41 ಕೋಟಿ ವೆಚ್ಚವಾಗಿದೆ. ₹ 3 ಲಕ್ಷ ಮೊತ್ತವನ್ನು ಮಂಜೂರೀಕರಿಸದಿದ್ದರೆ, ಮಂಜೂರಾದ ಮೊತ್ತದಲ್ಲೂ ಇನ್ನೂ ₹ 57 ಲಕ್ಷ ಖರ್ಚಾಗಬೇಕಿದೆ. ವರ್ಷ ಗತಿಸಿದರೂ ಹಲ ಕಾಮಗಾರಿಗಳು ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿಲ್ಲ.

2017–18ನೇ ಸಾಲಿನಲ್ಲಿ ಬಿಡುಗಡೆಯಾದ ₹ 1.50 ಕೋಟಿ ಮೊತ್ತದಲ್ಲಿ, 17 ಕಾಮಗಾರಿ ಕೈಗೊಳ್ಳಲು ₹ 19 ಲಕ್ಷ ಮೊತ್ತಕ್ಕೆ ಮಾತ್ರ ಅನುದಾನ ಮಂಜೂರು ಮಾಡಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶಾಲೆ ಸುಧಾರಣೆಗೆ ಆದ್ಯತೆ

‘ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ನೀಡಿರುವೆ. ಇದರ ನಡುವೆಯೂ ಶಾಲೆಗಳ ಸುಧಾರಣೆಗೆ ಆದ್ಯತೆ ಕೊಟ್ಟಿದ್ದೇನೆ’ ಎಂದು ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.

‘ಎಲ್ಲ ಹಳ್ಳಿ, ತಾಂಡಾಗಳಿಗೂ ಅನುದಾನ ಹಂಚಿಕೆ ಮಾಡುವ ಯತ್ನ ನಡೆಸಿರುವೆ. ವೋಟ್‌ ಬ್ಯಾಂಕ್‌ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಅನುದಾನ ವಿತರಿಸಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಸದುದ್ದೇಶದಿಂದ ಶಾಲೆಗಳಿಗೂ ಹೆಚ್ಚಿನ ಅನುದಾನ ನೀಡಿರುವೆ’ ಎಂದು ಹೇಳಿದರು.

* * 

ಎಲ್ಲ ಸಮುದಾಯದವರಿಗೂ ಪ್ರತ್ಯೇಕವಾಗಿ ಭವನ ನಿರ್ಮಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಕುಡಿಯುವ ನೀರಿಗೂ ಸೌಲಭ್ಯ ಒದಗಿಸಿದ್ದಾರೆ
ಎಸ್‌.ಎಂ.ಶಿರಹಟ್ಟಿ, ಇಟ್ಟಂಗಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT