ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಹೊಸ್ತಿಲಲ್ಲೇ ಬೆವರಿಳಿಸಿದ ಸೆಕೆ

Last Updated 12 ಫೆಬ್ರುವರಿ 2018, 8:59 IST
ಅಕ್ಷರ ಗಾತ್ರ

ಕಾರವಾರ: ಬೇಸಿಗೆಯ ಹೊಸ್ತಿಲಲ್ಲೇ ಜಿಲ್ಲೆಯಲ್ಲಿ ಅತಿಯಾದ ಸೆಕೆ ಆರಂಭವಾಗಿದ್ದು, ಕರಾವಳಿ ಭಾಗದ ಜನರು ಹೈರಾಣಾಗಿದ್ದಾರೆ. ತೇವಾಂಶ ಹೆಚ್ಚಿರುವ ಕಾರಣ ಸೆಕೆಯ ಅನುಭವ ಮತ್ತಷ್ಟು ಹೆಚ್ಚಿದೆ. ಜಿಲ್ಲೆಯಲ್ಲಿ ಒಂದು ವಾರದ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

ಬಾಯಾರಿಕೆ ತಣಿಸಿಕೊಳ್ಳಲು ಜನ ಎಳನೀರು, ಲಿಂಬುಸೋಡ ಸೇರಿದಂತೆ ವಿವಿಧ ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನಗರದ ವಿವಿಧ ರಸ್ತೆಗಳಲ್ಲಿ ಎಳನೀರು ಮಾರಾಟ ಜೋರಾಗಿದ್ದು, ಬೆಲೆಯೂ ದುಬಾರಿಯಾಗಿದೆ. ಒಂದು ಎಳನೀರು ₹ 30ರಂತೆ ಮಾರಾಟವಾಗುತ್ತಿದೆ. ಬೆಲೆಯನ್ನು ಲೆಕ್ಕಿಸದ ಗ್ರಾಹಕರು, ಸೆಕೆಯ ಅಬ್ಬರಕ್ಕೆ ಅನಿವಾರ್ಯವಾಗಿ ಖರೀದಿಸಿ ಕುಡಿಯುತ್ತಿದ್ದಾರೆ.

‘ಸೆಕೆ ಹೆಚ್ಚಿರುವುದರಿಂದ ಕಲ್ಲಂಗಡಿ ಹಣ್ಣಿನ ವ್ಯಾಪಾರ ತುಸು ಜಾಸ್ತಿ ಇದೆ. ದಿನಕ್ಕೆ 200ಕ್ಕೂ ಅಧಿಕ ಹಣ್ಣುಗಳು ಮಾರಾಟವಾಗುತ್ತಿವೆ. ಗಾತ್ರಕ್ಕೆ ತಕ್ಕಂತೆ ದರವನ್ನು ವಿಧಿಸಿ, ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಗರದ ಬೀದಿ ಬದಿಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ನಡೆಸುತ್ತಿರುವ ಇಸ್ಮಾಯಿಲ್.

ಬಿಕೋ ಎನ್ನುವ ರಸ್ತೆಗಳು:  ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲ ಝಳ ಹೆಚ್ಚಾಗುತ್ತಿದೆ. ಇದರಿಂದಾಗಿ ಜನರು ಮನೆಯಿಂದ ಹೊರಗೆ ಬರು­ವುದನ್ನು ಕಡಿಮೆ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ರಸ್ತೆಗಳು ಬಿಕೋ ಎನ್ನುತ್ತಿವೆ. ಬೀದಿ ಬದಿಯ ವ್ಯಾಪಾರಿಗಳು ಸಹ ಬಿಸಿಲಿನ ಹೊಡೆತಕ್ಕೆ ಕಂಗಾಲಾ­ಗಿದ್ದು, ಮರದ ನೆರಳಿನ ಆಶ್ರಯ ಪಡೆದು ಹಣ್ಣು, ತರಕಾರಿ ವ್ಯಾಪಾರ ಮಾಡು­ತ್ತಿದ್ದಾರೆ.

‘ನಗರದ ಮುಖ್ಯ ರಸ್ತೆಗಳಲ್ಲಿ ಮರಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಮಧ್ಯಾಹ್ನ ನೆರಳಿನ ಆಶ್ರಯವಿಲ್ಲದೇ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಆಶಾ ನಾಯಕ.

ಪ್ರವಾಸಿಗರ ಸಂಖ್ಯೆ ಇಳಿಕೆ?: ಕಳೆದ ಬಾರಿ ಬಿಸಿಲಿನ ಬೇಗೆಗೆ ಹೈರಾ­ಣಾಗಿದ್ದ ಪ್ರವಾಸಿಗರು ಜಿಲ್ಲೆಯಿಂದ ಬೇರೆಡೆ ಪ್ರಯಾಣ ಬೆಳೆಸಿದ್ದರು. ಕರಾವಳಿಯ ಮುರ್ಡೇಶ್ವರ, ಗೋಕರ್ಣ, ಕುಡ್ಲೆ, ಓಂ ಕಡಲತೀರಗಳಲ್ಲಿ ಬೀಡುಬಿಟ್ಟಿದ್ದ ಕೆಲ ವಿದೇಶಿ­ಗರು ತಮ್ಮ ದೇಶಗಳಿಗೆ ವಾಪಸ್ಸಾಗಿದ್ದರು.

ಅಕ್ಟೋಬರ್‌ ತಿಂಗಳಲ್ಲಿ ಇಲ್ಲಿನ ಕಡಲತೀರಕ್ಕೆ ಬರುವ ಅವರು, ಮೇ ತಿಂಗಳವರೆಗೆ ಇಲ್ಲಿಯೇ ಉಳಿಯು­ತ್ತಿದ್ದರು. ಆದರೆ, ಸೆಕೆ ಹೆಚ್ಚಾಗಿರುವುದರಿಂದ ಕಳೆದ ಬಾರಿ ಮಾರ್ಚ್‌ ತಿಂಗಳ ಪ್ರಾರಂಭದಿಂದಲೇ ಇಲ್ಲಿಂದ ಖಾಲಿ ಮಾಡಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತ ಬಿಸಿಲು ಹೆಚ್ಚಿರುವುದರಿಂದ ಫೆಬ್ರುವರಿಯ ಅಂತ್ಯದ ಒಳಗೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುವ ಲಕ್ಷಣ ಕಂಡುಬರುತ್ತಿದೆ.

ಸಂಜೆ ಹೊತ್ತು ಜನ ಹೆಚ್ಚು:  ಕಡಲತೀರದಲ್ಲಿ ಸಂಜೆ ಹೊತ್ತು ತಂಗಾಳಿ ಬೀಸುತ್ತಿರುವುದರಿಂದ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ನಿತ್ಯ ನೂರಾರು ಜನರು ಸೇರುತ್ತಿದ್ದಾರೆ. ಸಂಜೆ 5ರಿಂದ ಗುಂಪು ಗುಂಪಾಗಿ ಬರುವ ಜನರು, ತಡರಾತ್ರಿಯವರೆಗೆ ಸಮಯ ಕಳೆಯುತ್ತಿದ್ದಾರೆ. ಮಕ್ಕಳು ನೀರಿಗಿಳಿದು ಕುಣಿದು ಕುಪ್ಪಳಿಸಿ ಹಿತಾನುಭವ ಪಡೆಯುತ್ತಿದ್ದಾರೆ.

* * 

ಕಳೆದ ವರ್ಷಕ್ಕಿಂತ ಈ ಬಾರಿ ಸೆಕೆ ಹೆಚ್ಚಾದಂತಿದೆ. ನೀರು ಕೂಡ ದಣಿವಾರಿಸುತ್ತಿಲ್ಲ. ಈ ಸೆಕೆಯಲ್ಲಿಯೂ ಹೆಸ್ಕಾಂ ವಿದ್ಯುತ್ ಕಡಿತಗೊಳಿಸುತ್ತಿರುವುದು ಸರಿಯಲ್ಲ
ಆಶಾ ನಾಯಕ,  ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT