ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ನಿಮಿಷ ರಾಹುಲ್‌ ಕಾಟಾಚಾರ ಭಾಷಣ

Last Updated 12 ಫೆಬ್ರುವರಿ 2018, 9:12 IST
ಅಕ್ಷರ ಗಾತ್ರ

ಕುಷ್ಟಗಿ: ಭಾಷಣ ಕೇಳಲು ಬಂದಿದ್ದ ಸಾವಿರಾರು ಜನರು ಮತ್ತು ಪಕ್ಷದ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಕೇವಲ ಐದು ನಿಮಿಷದ ಒಳಗೇ ಮಾತನಾಡಿ ನಿರ್ಗಮಿಸಿದ್ದು ನಿರಾಸೆ ಮೂಡಿಸಿತು.

ಕುಷ್ಟಗಿ ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಬಂದ ರಾಹುಲ್‌ ಕನಕದಾಸ ವೃತ್ತದ ಬಳಿ ಬಸ್‌ನಲ್ಲಿ ನಿಂತುಕೊಂಡೆ ಜನರತ್ತ ಕೈಬೀಸುವುದು, ಹಸ್ತಲಾಘವ ನೀಡಿ ನಂತರ ಕೆಲ ಮೀಟರ್‌ಗಳವರೆಗೆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿದರು. ಭದ್ರತೆ ಲೆಕ್ಕಿಸದೆ ಬ್ಯಾರಿಕೇಡ್‌ಗಳನ್ನು ದಾಟಿ ಪಾದಚಾರಿ ರಸ್ತೆಯಲ್ಲಿದ್ದ ಜನರ ಬಳಿ ಬಂದು ಕೈಕುಲುಕುತ್ತ ನಡೆದರು.

ರಾಹುಲ್‌ ಬರುವಿಕೆಯನ್ನು ಸ್ವಾಗತಿಸಲು ಪಟ್ಟಣದಲ್ಲಿ ಭರ್ಜರಿ ತಯಾರಿ ನಡೆಸಲಾಗಿತ್ತು. ಕುಂಭಹೊತ್ತ ಮಹಿಳೆಯರು, ಸಾಂಪ್ರದಾಯಿ ಉಡುಗೆಯಲ್ಲಿದ್ದ ಲಂಬಾಣಿ ಮಹಿಳೆಯರು, ಮಹಿಳಾ ಡೊಳ್ಳು ಕಲಾವಿದರು, ಮೇಳದವರು ತಮ್ಮ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ, ರಾಹುಲ್‌ ಬಂದ ನಂತರ ನೂಕು ನುಗ್ಗಲು ಉಂಟಾಗಿದ್ದರಿಂದ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರದಾಡಬೇಕಾಯಿತು. ಹಾಗಾಗಿ ರಾಹುಲ್‌ ಮುಂದೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮತ್ತು ಮುಖಂಡರು ಮುತ್ತಿನ ಹಾರ ಹಾಕಿ ರಾಹುಲ್‌ ಅವರನ್ನು ಪಟ್ಟಣಕ್ಕೆ ಸ್ವಾಗತಿಸಿದರು. ನಂತರ ಬಸ್‌ನ ಒಳಗೇ ಕುಳಿತ ರಾಹುಲ್‌ ಅಲ್ಲಿಯೇ ಜನರತ್ತ ಕೈ ಬೀಸಿದರು.

ಮುಖ್ಯವೇದಿಕೆಗೆ ಆಗಮಿಸಿದ ರಾಹುಲ್‌ ಅವಸರದಲ್ಲಿ ಏಕಾಏಕಿ ಮಾತು ಆರಂಭಿಸಿದ್ದರು. ಭಾಷಣ ಆರಂಭಗೊಂಡಾಗ ಕುರ್ಚಿಗಳು ಖಾಲಿ ಇದ್ದವು. ಬಸ್‌ ಹಿಂಬಾಲಿಸಿದ ಕಲಾಮೇಳದವರು, ಕಾರ್ಯಕರ್ತರು, ಸಾರ್ವಜನಿಕರು, ಮಹಿಳೆಯರು, ಅಭಿಮಾನಿಗಳು ಸಭಾಂಗಣದತ್ತ ಬರುವ ಮೊದಲೇ ರಾಹುಲ್‌ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿದರು.

ರಾಹುಲ್‌ ಗಾಂಧಿ ಆಗಮನಕ್ಕಾಗಿ ಕಳೆದ ಒಂದು ತಿಂಗಳಿನಿಂದಲೂ ಕಾಂಗ್ರೆಸ್‌ ಪಕ್ಷ ಸಿದ್ಧತೆ ಮಾಡಿಕೊಂಡಿತ್ತು. ರೋಡ್‌ ಶೋ ರಂಗು ರಂಗಾಗಿರುವಂತೆ ನೋಡಿಕೊಳ್ಳುವ ಯತ್ನ ಫಲಿಸಲಿಲ್ಲ. ರಾಹುಲ್‌ ಅವರ ಭಾಷಣದ ಮೂಲಕ ಮತದಾರರ ಮೇಲೆ ಪ್ರಭಾವಬೀರಿ ‘ಜನಾಶೀರ್ವಾದ’ ಪಡೆದುಕೊಳ್ಳುವ ಕಾಂಗ್ರೆಸ್‌ ಪಕ್ಷದ ಪ್ರಮುಖರ ಕನಸು ನನಸಾಗಲಿಲ್ಲ ಎಂಬ ಮಾತುಗಳು ಕೇಳಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT