ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನುವಳ್ಳಿ, ಕೊಡೂರು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

Last Updated 12 ಫೆಬ್ರುವರಿ 2018, 10:11 IST
ಅಕ್ಷರ ಗಾತ್ರ

ಶೃಂಗೇರಿ: ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೂರು ಹಾಗೂ ಕಾನುವಳ್ಳಿ ಗ್ರಾಮದ ನಡುವಿನ 2 ಕಿ.ಮೀ ರಸ್ತೆ  ಹದಗೆಟ್ಟಿದ್ದು, ಇದನ್ನು ದುರಸ್ತಿ ಮಾಡದೇ ಇರುವುದಕ್ಕೆ ಗ್ರಾಮಸ್ಥರು 2018ರ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಕೃಷಿಕ ಚಿನ್ನಪ್ಪಗೌಡ ಈ ವಿಷಯ ತಿಳಿಸಿದ್ದು, ‘ 25 ವರ್ಷದ ಹಿಂದೆ ಡಾಂಬರು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಚುನಾಯಿತ ಪ್ರತಿನಿಧಿಗಳು ರಸ್ತೆಯ ದುರಸ್ತಿಯ ಬಗ್ಗೆ ಆದ್ಯತೆ ನೀಡಿಲ್ಲ’ ಎಂದು ಆರೋಪಿಸಿದರು.

ಇಲ್ಲಿನ ರಸ್ತೆಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ವಾಹನ ಸಂಚರಿಸುವುದೇ ದುಸ್ತರವಾಗಿದೆ. ಇಲ್ಲಿರುವ 200 ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದ್ದಾಗಿದ್ದು, ಪ್ರತಿದಿನ ಶಾಲಾ ಮಕ್ಕಳು ಶಾಲೆಗೆ ಹಾಗೂ ಗ್ರಾಮಸ್ಥರು ಪೇಟೆಗೆ ಬರಲು ಹರಸಾಹಸ ಮಾಡಬೇಕಿದೆ. ಇಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ ಹಲವು ದೇವಸ್ಥಾನಗಳಿದ್ದು, 60ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಇದ್ದಾರೆ.  ಎಂದು ಹೇಳಿದರು.

‘ತುರ್ತಾಗಿ ಅಸ್ಪತ್ರೆಗೆ ಹೋಗಬೇಕಾದರೆ ಯಾವುದೇ ವಾಹನ ಚಾಲಕರು ಇಲ್ಲಿಗೆ ಬರುವುದಿಲ್ಲ. ಬಂದರೂ ಕೂಡಾ ದುಪ್ಪಟ್ಟು ಬಾಡಿಗೆ ಕೇಳುತ್ತಾರೆ. ಹಲವು ವರ್ಷಗಳಿಂದ ರಸ್ತೆಯ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊಡೂರು ಹಾಗೂ ಕಾನುವಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿಲ್ಲ. ಆದ್ದರಿಂದ ಗ್ರಾಮಸ್ಥರು ಒಗ್ಗೂಡಿ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ’ ಎಂದರು.

20 ವರ್ಷದಿಂದ ಅಭಿವೃದ್ಧಿ ಕಾರಣದ ಊರಿನ ಜನರಾದ ನಾವು ಯಾಕೆ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಶ್ನಿಸಿದ ನಾವೆಲ್ಲಾ ಸಾಮೂಹಿಕವಾಗಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.

ಪ್ರತಿಭಟನೆಯಲ್ಲಿ ಮಂಜಪ್ಪಗೌಡ, ಕೇಶವ, ಶಿವಶಂಕರ್ ಕಾನುವಳ್ಳಿ, ರಾಜು ಕೊಡೂರು, ನಂದ ಕಾನೋಳ್ಳಿ, ಮಂಜುನಾಥ ಕಾನುವಳ್ಳಿ, ಹರೀಶ್, ಮಂಜಪ್ಪಗೌಡ, ಭೋಜ ಕೊಡೂರು, ಸಿದ್ಧಾರ್ಥ, ಪ್ರಣೀತ್ ಅವರು ಭಾಗವಹಿಸಿದ್ದರು.

* * 

ರಸ್ತೆ ದುರಸ್ತಿಗಾಗಿ ಸ್ಥಳೀಯ ಆಡಳಿತದಿಂದ ಹಿಡಿದು ಸಂಸದರವರೆಗೆ ಹಲವು ಮನವಿ ಸಲ್ಲಿಸಿದರೂ ಯಾರೂ ಇತ್ತ ತಿರುಗಿ ನೋಡುತ್ತಿಲ್ಲ. ಕೊನೆಯ ಅಸ್ತ್ರವಾಗಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ
ಚಿನ್ನಪ್ಪಗೌಡ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT