ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಮುಕ್ತ ನಗರವೇ ಬಿಜೆಪಿ ಗುರಿ

Last Updated 12 ಫೆಬ್ರುವರಿ 2018, 10:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರು ದಶಕ ದೇಶವಾಳಿದ ಕಾಂಗ್ರೆಸ್, ಕೊಳೆಗೇರಿ ನಿವಾಸಿಗಳನ್ನು ಮತ ಬ್ಯಾಂಕ್ ಮಾಡಿಕೊಂಡಿದೆಯೇ ಹೊರತು, ಅವರ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿಸಿದರು.

ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಶಾಲೆಯ ಹಿಂಭಾಗದ ಎಸ್ಸಿ ಕಾಲೊನಿಯಲ್ಲಿ (ಅಂಬೇಡ್ಕರ್ ಬಡಾವಣೆ) ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ್ಲಲಿ ‘ಸ್ಲಂ ದುರ್ಭಾಗ್ಯ’ ರಾಜ್ಯ ಸ್ಲಂಗಳ ಸಮೀಕ್ಷಾ ವರದಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ, ಚರಂಡಿ, ಬೀದಿ ದೀಪ, ಆರೋಗ್ಯ, ಶಿಕ್ಷಣ ನೀಡಲಿಲ್ಲ. ಆ ನಿವಾಸಿಗಳು ಶಿಕ್ಷಣವಂತರಾದರೆ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಕೈತಪ್ಪುವ ಸಾಧ್ಯತೆಯೂ ಇದೆ ಎಂದು ದೂರಿದರು.

ರಾಜ್ಯದ ಕೊಳೆಗೇರಿಗಳ ಸ್ಥಿತಿ ಗತಿ ಅಧ್ಯಯನ ಮಾಡಿ, ಬಿಡುಗಡೆ ಮಾಡಿರುವ ಈ ಕೃತಿಯಲ್ಲಿ , ಕೊಳೆಗೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆ ಯಾಗಿರುವುದನ್ನು ತೆರೆದಿಡಲಾಗಿದೆ. ಈ ಪ್ರಕಾರ, ಎಲ್ಲ ಕೊಳೆಗೇರಿಗಳೂ ಮೂಲ ಸೌಲಭ್ಯದಿಂದ ಬಳಲುತ್ತಿವೆ ಎಂದರು.

‘ಕೊಳೆಗೇರಿ ಮುಕ್ತ ನಗರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಕೊಳೆಗೇರಿ ಅಭಿವೃದ್ದಿಯನ್ನು ಆದ್ಯತಾ ಕೆಲಸವನ್ನಾಗಿ ಪರಿಗಣಿಸಿ, ಸ್ಲಂ ನಿರ್ಮೂಲನಗೆ ಒತ್ತು ನೀಡುತ್ತೇವೆ. ಸ್ಲಂ ನಿವಾಸಿಗಳ್ಯಾರೂ ಧೃತಿಗೆಡಬೇಕಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಕ್ಕು ಪತ್ರಗಳನ್ನು ನೀಡಿ, ಇಲ್ಲೇ ಕಟ್ಟಡ ನಿರ್ಮಿಸಿಕೊಡಲಾಗುತ್ತದೆ. ಇಲ್ಲಿನ ಮಕ್ಕಳಿಗೆ ಸರ್ಕಾರಿ ಶಾಲೆ, ನಿವಾಸಿಗಳಿಗಾಗಿ ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ’ ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ಅವರು 2022ರೊಳಗೆ ಸರ್ವರಿಗೂ ಸೂರು ನೀಡುವ ಗುರಿ ಹೊಂದಿದ್ದಾರೆ. ಗುಡಿಸಲು ಮುಕ್ತ ಭಾರತದ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ. ಮನೆ ರಹಿತರಿಗೆ ಮನೆ ನೀಡುವ ಕಾರ್ಯ ಆರಂಭಿಸಿದೆ ಎಂದರು.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 5 ಸಾವಿರ ಮನೆಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣೆ ನಂತರ ಮನೆಗಳು ಮಂಜೂರಾಗಲಿವೆ. ಆಗ ಎಲ್ಲರಿಗೂ ವಸತಿ ಸೌಲಭ್ಯ ನೀಡಲಾಗುತ್ತದೆ ಎಂದರು.

ನಿವಾಸಿಗಳ ಮನವಿ: ಈ ಕೊಳೆಗೇರಿಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ರಸ್ತೆ, ಬೀದಿ ದೀಪ, ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆ, ಆಸ್ಪತ್ರೆ ತೆರೆಯಬೇಕು. ಒಂದೊಂದು ಮನೆಯಲ್ಲಿ 2–3 ಕುಟುಂಬಗಳು ವಾಸಿಸುತ್ತಿದ್ದು ಎಲ್ಲರಿಗೂ ನಿವೇಶನ ನೀಡಿ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ಕೊಳೆಗೇರಿ ನಿವಾಸಿಗಳ ಮುಖಂಡರು ಶಾಸಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಟಿ.ಗುರುಮೂರ್ತಿ, ಬಿಜೆಪಿ ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಭೀಮರಾಜ್, ಸ್ಲಂ ಮೋರ್ಚಾ ಜಿಲ್ಲಾ ಉಸ್ತುವಾರಿ ಶಿವಣ್ಣಾಚಾರ್, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್ ಯಾದವ್, ನಗರಘಟಕದ ಅಧ್ಯಕ್ಷ ಲೀಲಾಧರ್ ಠಾಕೂರ್, ಬಿಜೆಪಿ ಮುಖಂಡರಾದ ಮಲ್ಲಪ್ಪನಹಳ್ಳಿ ಮೂಡಲಗಿರಿಯಪ್ಪ ಇದ್ದರು.

ಸ್ಲಂ ವಾಸ್ತವ್ಯ: ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್ ಯಾದವ್, ನಗರಸಭಾ ಸದಸ್ಯ ಭೀಮರಾಜ್, ಕೆ. ಶಿವಣ್ಣಾಚಾರ್ ಸೇರಿದಂತೆ ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಹಿಂಭಾಗದ ಎಸ್ಸಿ ಕಾಲೊನಿಯ ಮಂಜುಳಮ್ಮ ಮನೆಯಲ್ಲಿ ಶನಿವಾರ ವಾಸ್ತವ್ಯ ಮಾಡಿದರು. ಭಾನುವಾರ ಬೆಳಿಗ್ಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ವಾಸ್ತವ್ಯ ಹೂಡಿದ್ದ ಬಿಜೆಪಿ ಮುಖಂಡರು ಮಂಜುಳಮ್ಮ ಅವರ ಮನೆಯಲ್ಲಿ ಮಂಡಕ್ಕಿ ಒಗ್ಗರಣೆ ಮತ್ತು ಮೆಣಸಿನ ಕಾಯಿ ಸೇವಿಸಿದರು.

ರ್ನಾಟಕದ ಜನಸಂಖ್ಯೆ 6,10,95,292

ನಗರ ವಾಸಿಗಳು 2,36,25,967

ಕೊಳೆಗೇರಿವಾಸಿಗಳು 32,91,434

ಸಮೀಕ್ಷೆಗೊಳಪಟ್ಟವರು 4,15,942

ಸರಾಸರಿ 100 ಕ್ಕೆ 14 ಮಂದಿ ಕೊಳೆಗೇರಿ ವಾಸಿಗಳು

(ಸ್ಲಮ್ ದುರ್ಭಾಗ್ಯ – ವರದಿಯಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT