ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್‌ಟಿ’ಗೆ ವರ್ಷದ ಸಂಭ್ರಮ

ಅಕ್ಷರ ಗಾತ್ರ

ಪ ರ-ವಿರೋಧದ ಬಿಸಿಬಿಸಿ ಚರ್ಚೆಗಳ ನಡುವೆ ಜಿ.ಎಸ್.ಟಿ ವರ್ಷದ ಸಂಭ್ರಮದಲ್ಲಿದೆ. ಸ್ವಾತಂತ್ರ್ಯಾ ನಂತರದ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆಯಾಗಿರುವ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ವ್ಯಾಪಾರ ಸ್ನೇಹಿಗೊಳಿಸಿ ಆಮೂಲಾಗ್ರ ಬದಲಾವಣೆ ತರುವ ದಿಸೆಯಲ್ಲಿ ಜುಲೈ 1, 2017 ರಂದು ದೇಶದಾದ್ಯಂತ ಏಕಕಾಲದಲ್ಲಿ ಜಾರಿಗೊಳಿಸಲಾಗಿತ್ತು. ಈ ಒಂದು ವರ್ಷದ ಅವಧಿಯಲ್ಲಿ ಈ ವ್ಯವಸ್ಥೆಯು ಸಣ್ಣ-ಪುಟ್ಟ ಕೆಲವು ಸವಾಲುಗಳ ನಡುವೆ ಬಹುತೇಕ ಯಶಸ್ವಿನತ್ತ ದಾಪುಗಾಲು ಹಾಕುತ್ತಿದೆ. ಹಲವು ಉದ್ದೇಶಗಳನ್ನು ಸಾಧಿಸಲು ಇದನ್ನು ಜಾರಿಗೆ ತರಲಾಗಿತ್ತು. ಅವುಗಳ ಪೈಕಿ ಬಹುತೇಕ ಈಡೇರುವ ಹಂತದಲ್ಲಿರುವುದನ್ನು ಕಾಣುತ್ತಿದ್ದೇವೆ.

ತೆರಿಗೆ ಆಡಳಿತ ಸುಧಾರಣೆ
ಜಿ.ಎಸ್.ಟಿ ಜಾರಿಗೂ ಮುನ್ನ ದೇಶದಾದ್ಯಂತ ಕೇಂದ್ರ ಅಬಕಾರಿ ಸುಂಕ, ಸೇವಾತೆರಿಗೆ, ವ್ಯಾಟ್‌ ಕಾಯ್ದೆಯನ್ನೊಳಗೊಂಡು ಸುಮಾರು 17 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಸೂಲಿ ಮಾಡುತ್ತಿದ್ದ ವಿವಿಧ ಬಗೆಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳಿದ್ದವು. ಸೇವೆಗಳಿಗೆ ತೆರಿಗೆ ವಿಧಿಸುವ ಕಾಯ್ದೆಯೂ ಒಂದು ಬೇರೆ ಇತ್ತು. ಈ ಎಲ್ಲ ಕಾಯ್ದೆಗಳಿಗೆ ಪ್ರತ್ಯೇಕವಾಗಿ ಲೆಕ್ಕಪತ್ರ ನಿರ್ವಹಣೆ, ರಿಟರ್ನ ಸಲ್ಲಿಕೆ, ತೆರಿಗೆ ಸಂದಾಯ, ಲೆಕ್ಕಪರಿಶೋಧನೆ, ಒಂದೇ ಎರಡೆ. ವರ್ತಕರು ಮತ್ತು ತೆರಿಗೆ ಅಧಿಕಾರಿಗಳಿಗೆ ಇವುಗಳ ನಿರ್ವಹಣೆ ಅತ್ಯಂತ ಕಷ್ಟಕರವಾಗಿ ಪರಿಣಮಿಸಿತ್ತು. ಪರೋಕ್ಷ ತೆರಿಗೆ ವ್ಯವಸ್ಥೆ ಬಹಳ ಸಂಕೀರ್ಣಗೊಂಡಿತ್ತು. ಈ ಎಲ್ಲ ಪರೋಕ್ಷ ತೆರಿಗೆಗಳನ್ನು ಜಿ.ಎಸ್.ಟಿಯಲ್ಲಿ ವಿಲೀನಗೊಳಿಸಿದ್ದರಿಂದ ತೆರಿಗೆ ಆಡಳಿತದ ಸರಳೀಕರಣಗೊಂಡು ಅದು ವ್ಯಾಪಾರ ಮತ್ತು ವರ್ತಕ ಸ್ನೇಹಿಯಾಗಲು ಕಾರಣವಾಯಿತು.

ಆಡಳಿತದಲ್ಲಿ ಪಾರದರ್ಶಕತೆ
ಪರೋಕ್ಷ ತೆರಿಗೆ ಆಡಳಿತವು ರಾಜ್ಯ ಮಟ್ಟದಲ್ಲಿ ಗೊಂದಲದ ಗೊಡಾಗಿತ್ತು. ನೋಂದಣಿ, ನೋಂದಣಿ ತಿದ್ದುಪಡಿ, ಮರುಪಾವತಿ, ರಿಟರ್ನ ಸಲ್ಲಿಕೆ, ತಪಾಸಣೆ, ಲೆಕ್ಕಪರಿಶೋಧನೆ,ತೆರಿಗೆ ಪಾವತಿ -ಇವೇ ಮುಂತಾದ ತೆರಿಗೆ ಆಡಳಿತದ ಮುಖ್ಯ ಕಾರ್ಯಗಳಲ್ಲಿ ಬಹಳಷ್ಟು ಅಸ್ಪಷ್ಟತೆ, ಅಪಾರದರ್ಶಕತೆ ಇತ್ತು. ಇದರಿಂದಾಗಿ ಕೆಲವು ಹಿತಾಸಕ್ತಿಗಳು ತೆರಿಗೆ ವಂಚನೆಗೆ ತೊಡಗಿದ್ದರಿಂದ ಸರ್ಕಾರದ ವರಮಾನ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಜಿಎಸ್‌ಟಿ ಜಾರಿಯಿಂದ ತೆರಿಗೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾಣಲು ಪ್ರಾರಂಭಿಸಿದೆ.

ಪರೋಕ್ಷ ತೆರಿಗೆ ನೆಲೆ ವಿಸ್ತರಣೆ
ಕೇಂದ್ರ-ರಾಜ್ಯಗಳ ನಡುವಣ ತೆರಿಗೆ ಆಡಳಿತದಲ್ಲಿದ್ದ ಸಮನ್ವಯದ ಕೊರತೆಯ ಲಾಭ ಪಡೆದ ನೋಂದಾಯಿತರಲ್ಲದ ವರ್ತಕರು ವಿಪುಲ ಸಂಖ್ಯೆಯಲ್ಲಿದ್ದರು. ಇವರಲ್ಲಿ ಬಹುತೇಕ ಜನ ಪರೋಕ್ಷ ತೆರಿಗೆ ವ್ಯಾಪ್ತಿಗೆ ಈಗ ಬಂದಿದ್ದಾರೆ. ಜಿಎಸ್‌ಟಿ ಜಾರಿಯಾಗುವವರೆಗೆ ದೇಶದಲ್ಲಿ ಒಟ್ಟು 66 ಲಕ್ಷ ಪರೋಕ್ಷ ತೆರಿಗೆ ಪಾವತಿದಾರರಿದ್ದರು. ಈಗ ಸುಮಾರು 48 ಲಕ್ಷದಷ್ಟು ಹೊಸ ವರ್ತಕರು ಜಿಎಸ್‌ಟಿ ಕಾಯ್ದೆಯಡಿಯಲ್ಲಿ ನೋಂದಣಿ ಪಡೆದಿದ್ದಾರೆ. ರಾಜ್ಯದಲ್ಲಿರುವ ವರ್ತಕರ ಸುಮಾರು 7 ಲಕ್ಷ. ಪರೋಕ್ಷ ತೆರಿಗೆ ವ್ಯವಸ್ಥೆಯ ನೆಲೆ ವಿಸ್ತರಿಸಿರುವುದು ಇದು ದೃಢಪಡಿಸುತ್ತದೆ.

ವ್ಯಾಪಾರ ನಿರ್ಬಂಧ ನಿವಾರಣೆ
ಹಿಂದಿನ ವರ್ಷದ ಜುಲೈ 1ರ ಮಧ್ಯರಾತ್ರಿಯ ವೇಳೆಗೆ ಕರ್ನಾಟಕದ ಗಡಿಭಾಗಗಳಲ್ಲಿ ಸ್ಥಾಪಿಸಲಾಗಿದ್ದ ಎಲ್ಲ ಚೆಕ್‌ಪೋಸ್ಟಗಳನ್ನು ಮುಚ್ಚಲಾಗಿತ್ತು. ಇತರ ರಾಜ್ಯಗಳ ಮಾರಾಟ ತನಿಖಾ ಠಾಣೆಗಳು ಮುಚ್ಚಲ್ಪಟ್ಟವು. ಸರಕು ಮತ್ತು ಸೇವೆಗಳು ಯಾವುದೇ ನಿರ್ಬಂಧಗಳಿಲ್ಲದೆ ದೇಶದಾದ್ಯಂತ ಮುಕ್ತವಾಗಿ ಚಲಿಸಲು ಅವಕಾಶ ಕಲ್ಪಿಸಲಾಯಿತು. ದೇಶದ ಯಾವ ಮೂಲೆಯಿಂದಲಾದರು ಸರಕುಗಳನ್ನು ಖರೀದಿಸಿ ತಂದು ಯಾವ ಮೂಲೆಯಲ್ಲಾದರೂ ಮಾರುವ ಮುಕ್ತ ಸ್ವಾತಂತ್ರ್ಯ ವರ್ತಕ ಸಮುದಾಯಕ್ಕೆ ಲಭಿಸಿದೆ. ಹೂಡುವಳಿ ತೆರಿಗೆ ಜಮೆ ಪಡೆಯುವ ಸೌಲಭ್ಯದಿಂದಾಗಿ ಅಂತರರಾಜ್ಯ ವ್ಯಾಪಾರಕ್ಕೆ ಬಹಳಷ್ಟು ಉತ್ತೇಜನ ಸಿಕ್ಕಿದೆ. ಇದು ಹೊಸ ವ್ಯವಸ್ಥೆಯ ಹೆಗ್ಗಳಿಕೆ. ಈ ಅರ್ಥದಲ್ಲಿ ‘ಒಂದು ದೇಶ ಒಂದು ಮಾರುಕಟ್ಟೆ’ ಮಾತು ನಿಜವಾಗಿದೆ.

ತೆರಿಗೆ ವಂಚನೆಗೆ ಕಡಿವಾಣ
ಸಂಘಟನಾತ್ಮಕ ಸ್ವರೂಪದಲ್ಲಿ ತೆರಿಗೆ ವಂಚನೆಯಲ್ಲಿ ತೊಡಗಿದ್ದ ಜಾಲಗಳಿಗೆ ಕಡಿವಾಣ ಬಿದ್ದಿದೆ. ಒಂದೇ ಅಂತರ್ಜಾಲ ಸೇವೆಯಲ್ಲಿ ಖರೀದಿ-ವಿಕ್ರಿ ಬೆಲೆಪಟ್ಟಿಗಳನ್ನು ಕ್ರಮವಾಗಿ ಜಿಎಸ್.ಟಿ.ಆರ್-1 ಮತ್ತು ಜಿಎಸ್.ಟಿ.ಆರ್-2 ದಲ್ಲಿ ದಾಖಲಿಸುವ ಅನಿವಾರ್ಯತೆ ಇರುವುದರಿಂದ ತೆರಿಗೆ ತಪ್ಪಿಸುವ ಪ್ರವೃತ್ತಿಗೆ ತಡೆ ಬಿದ್ದಿದೆ. ಸಾಂಸ್ಥಿಕ ರೂಪತಾಳುವಷ್ಟು ಪ್ರಬಲವಾಗಿದ್ದ ‘ಬಿಲ್ ಟ್ರೇಡಿಂಗ್‌’ ಕರಾಳದಂಧೆ ಈಗ ಕೊನೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ₹ 2,000 ಕೋಟಿಯಷ್ಟು ದೊಡ್ಡ ಪ್ರಮಾಣದ ತೆರಿಗೆ ವಂಚನೆ ಪತ್ತೆಹಚ್ಚಿ ದಂಡ ಮತ್ತು ಬಡ್ಡಿಯೊಂದಿಗೆ ವಸೂಲಿಮಾಡಿ ಕೆಲವರನ್ನು ಜೇಲಿಗೆ ಅಟ್ಟಲಾಗಿದೆ. ಕರ್ನಾಟಕದಲ್ಲಿಯೂ ಪ್ರತಿ ದಿನ ತೆರಿಗೆ ವಂಚನೆಯನ್ನು ಜಾರಿ ವಿಭಾಗ ಬಯಲಿಗೆಳೆಯುತ್ತಿದೆ. ತೆರಿಗೆ ವಂಚಕರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ.

ಇ-ವೇ ಬಿಲ್ ವ್ಯವಸ್ಥೆ
ಇ-ವೇ ಬಿಲ್ ವ್ಯವಸ್ಥೆ ಮೂಲಕ ಸರಕು ಸಾಗಣೆಯನ್ನು ವಿದ್ಯುನ್ಮಾನ ಕ್ರಮದಲ್ಲಿ ದಾಖಲಿಕರಣಗೊಳಿಸಲಾಗುತ್ತಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ತೆರಿಗೆದಾಯಕ ಸರಕುಗಳ ಸಾಗಣೆಗೆ ಈಗ ಇ-ವೇ ಬಿಲ್ ಕಡ್ಡಾಯಗೊಳಿಸಲಾಗಿದೆ. ವಿಕ್ರಿದಾರ, ಖರೀದಿದಾರ ಮತ್ತು ಸಾಗಣೆದಾರ ಈ ಮೂವರಿಗೂ ಇ-ವೇ ಬಿಲ್‌ನ ಸಮಾನ ಜವಾಬ್ದಾರಿ ವಹಿಸಿರುವುದರಿಂದ ಕೆಲವರಲ್ಲಿ ಈಗ ನಡುಕ ಶುರುವಾಗಿದೆ.

ದಾಖಲೆಗಳಿಲ್ಲದೇ ಸರಕು ಸಾಗಿಸಿ ಲಾಭ ಕೊಳ್ಳೆ ಹೊಡೆಯುತ್ತಿದ್ದ ಪ್ರವೃತ್ತಿಗೆ ಪೂರ್ಣವಿರಾಮ ಹಾಕಲಾಗಿದೆ. ಇ-ವೇ ಬಿಲ್ ದೇಶಾದ್ಯಂತ ಜಾರಿಯಾಗುತ್ತಲೇ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿರುವುದು ಇದರ ಸಕಾರಾತ್ಮಕ ಪರಿಣಾಮವನ್ನು ತೋರಿಸುತ್ತದೆ. ಪ್ರತಿದಿನ ಸರಾಸರಿ 12 ಲಕ್ಷದಂತೆ ಇಲ್ಲಿಯವರೆಗೆ 10 ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇ-ವೇ ಬಿಲ್ಲುಗಳನ್ನು ಸೃಷ್ಟಿಸಲಾಗಿದೆ.ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

‘ಇನ್ಸಪೆಕ್ಟರ್ ರಾಜ್’ ಅಂತ್ಯ
1992 ರಲ್ಲಿ ಡಾ. ಮನಮೋಹನಸಿಂಗ್‌ ರ ಮಾರ್ಗದರ್ಶನದಲ್ಲಿ ‘ಲೈಸನ್ಸ್‌ ರಾಜ್’ ಪ್ರವೃತ್ತಿಗೆ ಮಂಗಳ ಹಾಡಲಾಗಿತ್ತು. ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಜಾರಿಯಾಗಿರುವ ಜಿಎಸ್‌ಟಿಯಲ್ಲಿ ಈಗ ‘ಇನ್ಸಪೆಕ್ಟರ್ ರಾಜ್’ ವ್ಯವಸ್ಥೆಗೆ ಬಹುತೇಕ ತೆರೆಬಿದ್ದಿದೆ. ನೋಂದಣಿ, ನೋಂದಣಿ ತಿದ್ದುಪಡಿ, ನೋಂದಣಿ ರದ್ದತಿ ಕಾರ್ಯಗಳನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ. ಗಣಕಯಂತ್ರದಲ್ಲಿ ಅರ್ಜಿ ಸಲ್ಲಿಸಿದ 3 ಕೆಲಸದ ದಿನಗಳಲ್ಲಿ ನೋಂದಣಿ ನೀಡಲಾಗುತ್ತಿದೆ. ನೋಂದಣಿ ತಿದ್ದುಪಡಿಗಳಲ್ಲಿ ಕೆಲವಂಶಗಳ ತಿದ್ದುಪಡಿಯನ್ನು ವರ್ತಕರೆ ಸ್ವತಃ ತಿದ್ದುಪಡಿ ಮಾಡಿಕೊಳ್ಳಬಹುದು. ಸಣ್ಣ-ಪುಟ್ಟ ಕೆಲಸಗಳಿಗೂ ವರ್ತಕರು ಸ್ಥಳೀಯ ಕಚೇರಿ ಸುತ್ತುವ ತೊಂದರೆ ಈಗ ಇಲ್ಲ. ಹೀಗಾಗಿ ಹಿಂದಿನ ವ್ಯವಸ್ಥೆಗಿಂತಲೂ ಈಗಿನ ವ್ಯವಸ್ಥೆ ಹೆಚ್ಚಿನ ಪಾರದರ್ಶಕತೆಯೊಂದಿಗೆ ಕೂಡಿದೆ.

ಲಾಭಕೋರತನಕ್ಕೆ ಕಡಿವಾಣ
ತೆರಿಗೆ ದರ ಕಡಿತ, ತೆರಿಗೆ ವಿನಾಯ್ತಿಯಂತಹ ಕ್ರಮಗಳ ಮೂಲಕ ಇದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿಯೂ ಸರ್ಕಾರ ಮುಂದಾಗಿದೆ . ‘ಲಾಭಕೋರತನ ತಡೆ ಸಮಿತಿ’ ರಚಿಸಿ ಈಗ ಹದ್ದಿನ ಕಣ್ಣಿಡಲಾಗಿದೆ. ಸರಕುಗಳ ಮೇಲೆ ಗರಿಷ್ಠ ಮಾರಾಟ ದರ ಅಂಟಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ದರವನ್ನು ಆಕರಿಸಿದ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಗುರುತಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ರಾಜಿತೆರಿಗೆ ಯೋಜನೆಯ ಜನಪ್ರಿಯತೆ
ಸಣ್ಣ ವರ್ತಕರಿಗೆ ಅನುಕೂಲವಾಗಲೆಂದು ಕಲ್ಪಿಸಲಾಗಿರುವ ರಾಜಿ ತೆರಿಗೆ ಯೋಜನೆಗೆ ಸೂಕ್ತಸ್ಪಂದನ ಸಿಕ್ಕಿದ್ದು ಇಲ್ಲಿಯವರೆಗೆ ಒಟ್ಟು 17.61 ಲಕ್ಷದಷ್ಟು ವರ್ತಕರು ಇದರಡಿ ನೋಂದಣಿ ಪಡೆದಿದ್ದಾರೆ. ರಿಟರ್ನ ಸಲ್ಲಿಕೆ, ಬೆಲೆಪಟ್ಟಿ ನೀಡಿಕೆ, ಕಡಿಮೆ ತೆರಿಗೆ ದರಗಳು ಮುಂತಾದವುಗಳಿಂದಾಗಿ ಆಕರ್ಷಕವಾಗಿದೆ. ವರ್ಷಕ್ಕೆ ₹ 1 ಕೋಟಿಗಿಂತ ಕಡಿಮೆ ವಹಿವಾಟಿನ ವರ್ತಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಎಲ್ಲ ಗೊಂದಲಗಳು ಬಹುತೇಕ ನಿವಾರಣೆಯಾಗಿವೆ. ಈ ವಹಿವಾಟು ಮಿತಿಯನ್ನು ಇನ್ನೂ ಹೆಚ್ಚಿಸಿದರೆ ಈ ರಾಜಿ ಯೋಜನೆ ಮತ್ತಷ್ಟು ಜನಪ್ರಿಯವಾಗಲಿದೆ.

ತಾಂತ್ರಿಕ ಸಮಸ್ಯೆ
ಕಂಪನಿ ಕಾಯ್ದೆ,1956 ರ ಅಡಿಯಲ್ಲಿ GSTN (Goods & Service Tax Network) ಸಂಸ್ಥೆಯನ್ನು ಪ್ರೈವೇಟ್‌ ಕಂಪನಿಯಾಗಿ ಸ್ಥಾಪಿಸಲಾಗಿದೆ. ಇದು ಅಂತರ್ಜಾಲ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ದೇಶದ ಎಲ್ಲ ವರ್ತಕರು ಈ ಅಂತರ್ಜಾಲದಲ್ಲಿಯೇ ಸ್ಥಿತ್ಯಂತರ, ನೋಂದಣಿ, ರಿಟರ್ನ ಸಲ್ಲಿಕೆ ತೆರಿಗೆ ಪಾವತಿ ಇವೇ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೊಡ್ಡ ಪ್ರಮಾಣದ ಬಳಕೆದಾರರಿಂದ ಅಂತರ್ಜಾಲ ಸೇವೆಯಲ್ಲಿ ಮತ್ತೆ ಮತ್ತೆ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದೊಂದು ಸಂಪೂರ್ಣ ತಂತ್ರಜ್ಞಾನ ಆಧಾರಿತ ದೊಡ್ಡ ವ್ಯವಸ್ಥೆಯಾದ್ದರಿಂದ ಇವೆಲ್ಲ ಸ್ವಾಭಾವಿಕ. ತುಸು ತರಾತುರಿಯಲ್ಲಿ ಜಾರಿಗೆ ತಂದಿದ್ದರಿಂದ ಆರಂಭದ ಕೆಲವು ತಿಂಗಳು ಬಹಳಷ್ಟು ಗೊಂದಲಗಳಿಗೆ ಕಾರಣವಾಯಿತು. ಇಲ್ಲವಾದರೆ ಈಗಾಗಲೇ ಸ್ಪಷ್ಟ ಫಲಿತಾಂಶಗಳು ಕಾಣುತ್ತಿದ್ದವು. ತಾಂತ್ರಿಕ ಸಮಸ್ಯೆಗಳು ಉದ್ಭವಿಸಿ ಕೆಲಮಟ್ಟಿನ ಹಿನ್ನಡೆಗೆ ಕಾರಣವಾಯಿತು.

ಮರುಪಾವತಿ ವಿಳಂಬ
ತಾಂತ್ರಿಕ ಸಮಸ್ಯೆಗಳಿಂದಾಗಿ ಆರಂಭದಲ್ಲಿ ಭರವಸೆ ನೀಡಿದಂತೆ ರಪ್ತುದಾರರಿಗೆ ಶೀಘ್ರ ಮರುಪಾವತಿ ನೀಡುವುದು ಸಾಧ್ಯವಾಗಲಿಲ್ಲ. 97(ಎ) ಹೊಸ ನಿಯಮವನ್ನು ಸೇರಿಸುವ ಮೂಲಕ ಈಗ ಮರುಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ. ಮರುಪಾವತಿ ಅರ್ಜಿಗಳನ್ನು ವಿಲೇಮಾಡಲು ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ರಿಟರ್ನ ಸಲ್ಲಿಕೆ ಗೊಂದಲ
ತಾಂತ್ರಿಕ ಸಮಸ್ಯೆಗಳಿಂದಾಗಿಯೇ ರಿಟರ್ನ ಸಲ್ಲಿಕೆಯಲ್ಲಿ ಗೊಂದಲಗಳು ಕಾಣಿಸಿಕೊಂಡವು. ಕಲಂ 38 ಮತ್ತು 39ರ ಪ್ರಕಾರ ಸಲ್ಲಿಸಬೇಕಾದ ಜಿಎಸ್‌ಟಿಆರ್-2 ಮತ್ತು ಜಿಎಸ್‌ಟಿಆರ್-3 ರಿಟರ್ನಗಳನ್ನು ಮುಂದೂಡಲಾಯಿತು. ಜಿಎಸ್‌ಟಿಆರ್-3 ಬದಲಾಗಿ ಜಿಎಸ್‌ಟಿಆರ್-3ಬಿ ರಿಟರ್ನ್‌ ಅನ್ನು ಹೊಸದಾಗಿ ಪರಿಚಯಿಸಿ ತೆರಿಗೆ ಸಂಗ್ರಹಣೆಯಲ್ಲಿ ಅಡಚಣೆಯಾಗದಂತೆ ಜಾಗರೂಕತೆವಹಿಸಲಾಗಿದೆ. ಈ ನಾಲ್ಕು ರಿಟರ್ನಗಳನ್ನು ಒಂದುಗೂಡಿಸಿ ಬೇರೊಂದು ಹೊಸ ರಿಟರ್ನ ಅನ್ನು ಪರಿಚಯಿಸುವ ಯೋಜನೆ ಇದೆ. ಹೀಗಾಗಿ ಜಿಎಸ್‌ಟಿಆರ್-3ಬಿಯನ್ನು ಈ ವರ್ಷದ ಡಿಸೆಂಬರ್‌ವರೆಗೆ ಮುಂದುವರೆಸಲಾಗಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಕೊರತೆ
ಜಿಎಸ್‌ಟಿ ಕಾಯ್ದೆಗಳು, ನಿಯಮಗಳು, ಸುತ್ತೋಲೆ, ಅಧಿಸೂಚನೆ, ಮುಂಗಡ ನಿರ್ಣಯ, ಸೂಚನಾಪತ್ರ, ಆದೇಶಗಳು, ಮೇಲಿಂದ ಮೇಲೆ ಕೇಳಿದ ಪ್ರಶ್ನೆಗಳು ಬಹುತೇಕ ಇಂಗ್ಲಿಷ್‌ನಲ್ಲಿ ಇದ್ದುದರಿಂದ ಸಾಮಾನ್ಯ ವರ್ತಕರು ಇವುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಲಭವಾಗಿ ಅರ್ಥವಾಗುವ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲದಿರುವುದರಿಂದ ಅಸ್ಪಷ್ಟತೆ, ಗೊಂದಲಗಳಿಗೆ ಕಾರಣವಾಗಿದೆ. ತೆರಿಗೆ ಅಧಿಕಾರಿ ಸಿಬ್ಬಂದಿಗಳಲ್ಲೂ ತೆರಿಗೆ ಜ್ಞಾನದ ಕೊರತೆಗೂ ಇಂಗ್ಲಿಷ್ ಅಡ್ಡಿಯಾಗುವ ಅಪಾಯವಿದೆ. ಈ ವ್ಯವಸ್ಥೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಳವಡಿಸುವ ಅನಿವಾರ್ಯತೆ ಇದೆ. ಅಧಿಕಾರಿ-ಸಿಬ್ಬಂದಿ ತರಬೇತಿಯಲ್ಲಿ ಮತ್ತು ಕೆಲಸದ ಪ್ರತಿಯೊಂದು ಹಂತದಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವುದರಿಂದ ಇದನ್ನು ಪರಿಣಾಮಕಾರಿ ಮತ್ತು ಜನ ಸ್ನೇಹಿಗೊಳಿಸಬಹುದು.

ಸಾರ್ವಜನಿಕರ ಸಲಹೆ
ರಿಟರ್ನ್‌ ಒಳಗೊಂಡು ಜಿಎಸ್‌ಟಿಯಲ್ಲಿ ಮಾಡಲಾಗುತ್ತಿರುವ ಹೊಸಬದಲಾವಣೆ ವಿಷಯದಲ್ಲಿ ವರ್ತಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಅವರ ಸಲಹೆಯನ್ನು ಪರಿಗಣಿಸುತ್ತಿಲ್ಲವೆಂಬ ಅಸಮಾಧಾನ ವರ್ತಕರ ಸಂಘಗಳಲ್ಲಿದೆ. ಪ್ರಚಾರ ಕಾರ್ಯಕ್ರಮಗಳು ಟ್ವಿಟರ್, ಯುಟ್ಯೂಬ್‌, ಪತ್ರಿಕಾ ಜಾಹೀರಾತುಗಳಿಗೆ ಸೀಮಿತವಾಗಿದೆ. ಓದಿ ಅರ್ಥೈಸಿಕೊಳ್ಳದ ಜನರನ್ನು ತಲುಪಲು ಸಾಧ್ಯವಾಗಿಲ್ಲವೆಂಬ ದೂರಿದೆ. ಜನರೊಂದಿಗೆ ಸಂವಾದ ಹಮ್ಮಿಕೂಳ್ಳುವ ಮೂಲಕ ಮಾಹಿತಿಯನ್ನು ಸಾಮಾನ್ಯ ವರ್ತಕರಿಗೆ, ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬಹುದಾಗಿದೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಣಿಸಿಕೊಂಡ ಕೆಲವು ಗೊಂದಲಗಳು, ತೆರಿಗೆ ಆಡಳಿತದಲ್ಲಿ ಇಂಗ್ಲಿಷ್‌ ಬಳಕೆಯಿಂದಾಗಿ ಉಧ್ಬವಿಸುವ ಅಸ್ಪಷ್ಟತೆ ಮಾಹಿತಿ ಕೊರತೆ ಹೊರತು ಪಡಿಸಿದರೆ ತರಿಗೆ ವಂಚನೆಗೆ ತಡೆ, ತೆರಿಗೆ ಸಂಗ್ರಹದಲ್ಲಿ ಸ್ಥಿರತೆ, ಅಂತರರಾಜ್ಯ ವ್ಯಾಪಾರ ನಿರ್ಬಂಧ ನಿವಾರಣೆ, ಪಾರದರ್ಶಕ ಆಡಳಿತ, ಸುಲಭ ಸೇವೆಗಳಿಂದಾಗಿ ಈ ವ್ಯವಸ್ಥೆ ಬಹುತೇಕ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಇದರ ಭವಿಷ್ಯವೂ ಉಜ್ವಲವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

***

ಉದ್ದೇಶಗಳು

1. ತೆರಿಗೆ ಆಡಳಿತದಲ್ಲಿ ಸರಳೀಕರಣ

2. ಆಡಳಿತದಲ್ಲಿ ಪಾರದರ್ಶಕತೆ

3. ಪರೋಕ್ಷ ತೆರಿಗೆ ವ್ಯವಸ್ಥೆಯ ನೆಲೆ ವಿಸ್ತರಣೆ

4. ಅಂತರರಾಜ್ಯ ವ್ಯಾಪಾರದ ಮೇಲಿನ ನಿರ್ಬಂಧ ನಿವಾರಣೆ

5. ತೆರಿಗೆ ವಂಚನೆಗೆ ತಡೆಹಾಕುವುದು.

6. ಶೀಘ್ರ ಮರುಪಾವತಿ

7.ತೆರಿಗೆ ಹೊರೆಯನ್ನು ತೆಗೆದು ಹಾಕುವುದು

8. ಜಿಡಿಪಿ ಹೆಚ್ಚಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT