ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ ನಿರೀಕ್ಷೆಯಲ್ಲಿ ಕೊಡಗಿನ ರೈತರು

ಖಾಸಗಿ ಬ್ಯಾಂಕ್‌ನಿಂದ ಬಡ್ಡಿಸಾಲ ಪಡೆದು ಹೊಸಸಾಲ ವಿತರಣೆ!
Last Updated 3 ಜುಲೈ 2018, 12:40 IST
ಅಕ್ಷರ ಗಾತ್ರ

ಮಡಿಕೇರಿ: ಸಹಕಾರಿ ಬ್ಯಾಂಕ್‌, ರಾಷ್ಟ್ರೀಕೃತ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ಕೃಷಿಕರ ಕಣ್ಣು ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್‌ ಮೇಲೆ ನೆಟ್ಟಿದೆ. ಸರ್ಕಾರದ ನಿರ್ಧಾರವನ್ನು ಕೊಡಗು ಜಿಲ್ಲೆಯ ಸಾವಿರಾರು ರೈತರು ಚಾತಕ ಪಕ್ಷಿಯಂತೆ ಕಾದು ನೋಡುತ್ತಿದ್ದಾರೆ.

ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ಅಡಿ ವಿವಿಧ ಸೂಸೈಟಿಗಳು 2017ರ ಜೂನ್‌ನಿಂದ 2018ರ ಜೂನ್‌ 20ರ ತನಕ ಜಿಲ್ಲೆಯ 34,870 ರೈತರಿಗೆ ₨ 495 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದ್ದು, ಆ ಎಲ್ಲ ರೈತರು ಸಾಲಮನ್ನಾದ ನಿರೀಕ್ಷೆಯಲ್ಲಿದ್ದಾರೆ.

ಯಾರಿಗೆ ಎಷ್ಟು ಸಾಲ: 23,286 ಸಣ್ಣ ಹಾಗೂ ಅತಿಸಣ್ಣ ರೈತರಿಗೆ ₨ 225 ಕೋಟಿ, 9,140 ಮಂದಿಗೆ ₨ 28.36 ಕೋಟಿ (₨ 50 ಸಾವಿರದ ತನಕ), 7,772 ಮಂದಿಗೆ ₨ 59.89 ಕೋಟಿ (₨ 50 ಸಾವಿರದಿಂದ ₨ 1 ಲಕ್ಷದ ತನಕ ನೀಡಿರುವ ಸಾಲ), 8,089 ಮಂದಿಗೆ ₨ 122.27 ಕೋಟಿ (₨ 1 ಲಕ್ಷದಿಂದ ₨ 2 ಲಕ್ಷದ ತನಕ), 9,370 ಮಂದಿಗೆ ₨ 263.21 ಕೋಟಿ (₨ 2 ಲಕ್ಷದಿಂದ ₨ 3 ಲಕ್ಷದವರೆಗೆ), 331 ಮಂದಿಗೆ ₨ 19.80 ಕೋಟಿ (₨ 3 ಲಕ್ಷಕ್ಕೂ ಹೆಚ್ಚು) ಸಾಲವನ್ನು ಡಿಸಿಸಿ ಬ್ಯಾಂಕ್‌ ವಿತರಿಸಿದೆ.

ಅದೇ ರೀತಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವನ್ನೂ ಜಿಲ್ಲೆಯ ರೈತರು ಪಡೆದಿದ್ದು, 4,686 ಮಂದಿಗೆ ₨ 91.58 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‌ ವಿತರಿಸಿದೆ. ಇನ್ನೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಪಡೆದ ರೈತರ ಸಂಖ್ಯೆಯೇನು ಕಡಿಮೆಯಿಲ್ಲ. ರಾಷ್ಟ್ರೀಕೃತ, ಖಾಸಗಿ ಹಾಗೂ ಗ್ರಾಮೀಣ ಬ್ಯಾಂಕ್‌ನ ಒಟ್ಟು 173 ಶಾಖೆಗಳು ಜಿಲ್ಲೆಯಲ್ಲಿವೆ. ಆ ಬ್ಯಾಂಕ್‌ಗಳು 2017ರ ಏಪ್ರಿಲ್‌ 1ರಿಂದ 2018ರ ಮಾರ್ಚ್‌ 31ರವರೆಗೆ ₨ 1,153.09 ಕೋಟಿ ಬೆಳೆ ಸಾಲವನ್ನು ವಿತರಿಸಿವೆ. ಜತೆಗೆ, ಕೃಷಿ ಸಂಬಂಧಿಸಿದ ಚಟುವಟಿಕೆಗೆ ₨ 1,510 ಕೋಟಿ ಸಾಲವನ್ನೂ ವಿತರಣೆ ಮಾಡಲಾಗಿದೆ.

ಈ ಎಲ್ಲ ರೈತರು, ಸರ್ಕಾರ ಯಾವ ಮಾನದಂಡದ ಮೇಲೆ ಸಾಲ ಮನ್ನಾ ಮಾಡಬಹುದು, ನಮಗೆ ಎಷ್ಟು ಹೊರಕಡಿಮೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿ ಹಾಗೂ ಸೊಸೈಟಿಗಳು ಮಾತ್ರ ಚಿಂತೆಯಲ್ಲಿ ಮುಳುಗಿವೆ.

‘ಸಾಲ ತಂದಿದ್ದೇವೆ’: ಕಾಂಗ್ರೆಸ್‌ ಆಡಳಿತದಲ್ಲಿ ₨ 50 ಸಾವಿರದ ತನಕ ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು. ಆಗ, ಜಿಲ್ಲೆ 32 ಸಾವಿರ ರೈತರ ₨ 148 ಕೋಟಿ ಮನ್ನಾ ಆಗಿತ್ತು. ಅದರಲ್ಲಿ ₨ 140 ಕೋಟಿಯಷ್ಟು ಹಣವನ್ನು ಬ್ಯಾಂಕ್‌ಗೆ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ನಾವೇ ಖಾಸಗಿ ಬ್ಯಾಂಕ್‌ಗಳಿಂದ ಶೇ 9ರ ಬಡ್ಡಿ ದರದಲ್ಲಿ ₨ 100 ಕೋಟಿ ಸಾಲ ಪಡೆದು, ಈ ಬಾರಿ ರೈತರಿಗೆ ವಿತರಣೆ ಮಾಡಿದ್ದೇವೆ. ರೈತರಿಗೆ ತೊಂದರೆ ಆಗಬಾರದೆಂದು ಪರ್ಯಾಯ ಮಾರ್ಗ ಕಂಡುಕೊಂಡಿದ್ದೆವು’ ಎಂದು ಡಿಸಿಸಿ ಬ್ಯಾಂಕ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯವಸ್ಥೆ ಸಡಿಲ ಆಗದಿರಲಿ’: ‘ಸಾಲಮನ್ನಾ ನಿರ್ಧಾರಕ್ಕೆ ನಮ್ಮ ಅಭ್ಯಂತರ ಇಲ್ಲ. ಇದು ರೈತರಿಗಾಗಿಯೇ ಇರೋ ಬ್ಯಾಂಕ್‌. ಕಳೆದವರ್ಷದ ಬಾಕಿಯೇ ಬಂದಿಲ್ಲ. ಸರ್ಕಾರ ಹಣ ನೀಡದಿದ್ದರೂ ರೈತರಿಗೆ ಸಾಲ ನೀಡಿದ್ದೇವೆ; ಬೇರೆಬೇರೆ ಇಲಾಖೆಗಳಂತೆ ನಮಗೆ ಆದಾಯ ಮೂಲಗಳಿಲ್ಲ. ರೈತರ ಠೇವಣಿ, ಲಾಭಾಂಶದಿಂದ ಬ್ಯಾಂಕ್‌ ನಡೆಯಬೇಕು. ಸಾಲಮನ್ನಾದ ಹಣವನ್ನು ಸಕಾಲದಲ್ಲಿ ಸರ್ಕಾರ ಬಿಡುಗಡೆ ಮಾಡಿದರೆ ಮಾತ್ರ ರೈತರ ಜೀವನಾಡಿಯಾಗಿರುವ ಈ ಬ್ಯಾಂಕ್‌ ಉಳಿಯಲು ಸಾಧ್ಯವಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬಿ.ಡಿ. ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT