ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗ ಪಡೆಯದ ಬಿತ್ತನೆ: ಕೃಷಿ ಚಟುವಟಿಕೆ ಮಂಕು

ಮಳೆಯಾಗದ ಮುಂಗಾರು ಮೋಡಗಳು..
Last Updated 3 ಜುಲೈ 2018, 16:03 IST
ಅಕ್ಷರ ಗಾತ್ರ

ಬಳ್ಳಾರಿ: ವಾತಾವರಣ ತಂಪಾಗಿದೆ. ಎಲ್ಲೆಲ್ಲೂ ಮೋಡಗಳು ಕಾಣುತ್ತವೆ. ಆದರೆ ಜೋರು ಗಾಳಿ ಬಂದು ಅವುಗಳನ್ನು ಹಾರಿಸಿಕೊಂಡು ಹೋಗುತ್ತಿದೆ.... ಇದು ಜಿಲ್ಲೆಯಲ್ಲಿ ಮುಂಗಾರು ಕಾಲಿಡುವ ಹೊತ್ತಿನ ಸನ್ನಿವೇಶ.

ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕಿನಲ್ಲಿ ನೀರಾವರಿ ಪದ್ಧತಿಯನ್ನೇ ಆಶ್ರಯಿಸಿದ ರೈತರು ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಭತ್ತ ಮತ್ತು ಹತ್ತಿ ಬೆಳೆಯುವವರು ಹೆಚ್ಚಿದ್ದಾರೆ. ಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿಯ ಮಳೆಯಾಶ್ರಿತ ರೈತರು ಉಳುಮೆ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಈ ಪ್ರದೇಶಗಳಲ್ಲಿ ಬಿತ್ತನೆ ಆಶಾದಾಯಕವಾಗಿದೆ. ಆದರೆ, ಮುಂಗಾರು ಹಂಗಾಮು ಕಾಲ ಆರಂಭವಾದರೂ ಕೃಷಿ ಚಟುವಟಿಕೆಗಳು ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಗರಿಗೆದರಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಪ್ರಮಾಣ ಹೆಚ್ಚಾಗಿದೆ.

‘ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಅಲ್ಲಲ್ಲಿ ಹತ್ತಿ, ಸೂರ್ಯಕಾಂತಿ ಬಿತ್ತನೆ ಆರಂಭವಾಗಿದೆ. ಮಳೆ ಆಶ್ರಿತ ತಾಲ್ಲೂಕುಗಳಾದ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಸಂಡೂರಿನಲ್ಲೂ ಈ ಬಾರಿ ಜೋಳ, ಸಜ್ಜೆ, ಮುಸುಕಿನ ಜೋಳ, ಹೆಸರುಕಾಳು ಬೆಳೆ ಬಿತ್ತನೆ ನಡೆದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್. ದಿವಾಕರ ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು. ‘ಎಣ್ಣೆಕಾಳುಗಳ ಪೈಕಿ ಶೇಂಗಾವನ್ನು ಜುಲೈ ಎರಡನೇ ವಾರದಿಂದ ಬಿತ್ತನೆ ಮಾಡಬಹುದು. ಅದಕ್ಕೆ ಜುಲೈ ಮೊದಲ ವಾರದಲ್ಲಿ ಮಳೆಯಾಗಬೇಕು. ಆದರೆ ಮೋಡಗಳು ಮಳೆಯಾಗಿ ಪರಿವರ್ತನೆಯಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿನ ವರ್ಷ ಜೂನ್‌ ಅಂತ್ಯಕ್ಕೆ ಶೇ 7.02ರಷ್ಟು ಮಾತ್ರ ಬಿತ್ತನೆಯಾಗಿತ್ತು. ಈ ಬಾರಿ ಶೇ 26ರಷ್ಟು ಬಿತ್ತನೆಯಾಗಿರುವುದು ಕೊಂಚ ಸಮಾಧಾನ ತರುವ ಸಂಗತಿ’ ಎಂದು ಹೇಳಿದರು.

ಜಲಾಶಯದ ನೀರು ಬೇಗ ಬರಲಿ....

ಬಳ್ಳಾರಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಸಾಧ್ಯವಾದಷ್ಟೂ ಬೇಗ ಕಾಲುವೆಗಳಿಗೆ ನೀರು ಹರಿಸಬೇಕು ಎಂಬ ಆಗ್ರಹವೂ ನಿರ್ಮಾಣವಾಗಿದೆ. ‘ಹಿಂದಿನ ವರ್ಷವೂ ಕಾಲುವೆಗೆ ನೀರು ತಡವಾಗಿ ಬಂತು. ಈ ವರ್ಷ ಜಲಾಶಯದಲ್ಲಿ ನೀರು ಹೆಚ್ಚು ಸಂಗ್ರಹವಾಗಿದೆ ಎಂದು ಹೇಳುತ್ತಿದ್ದಾರೆ. ಬೇಗ ಹರಿಸಿದರೆ ನಮ್ಮ ಬೆಳೆಗಳಿಗೆ ಅನುಕೂಲವಾಗುತ್ತದೆ’ ಎಂದು ಸಂಗನಕಲ್ಲು ಗ್ರಾಮದ ರೈತ ಮಹಿಳೆ ಯಶೋದಮ್ಮ ಅಭಿಪ್ರಾಯಪಟ್ಟರು.‘ಸಾಧ್ಯವಾದಷ್ಟೂ ಬೇಗ ಕಾಲುವೆಗಳ ದುರಸ್ತಿ ಕಾರ್ಯ ಮುಗಿಸಿ ನೀರು ಹರಿಸಬೇಕು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್‌.ಗುರುಲಿಂಗನಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT