ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊನ್ನು ಶಾಪವೂ ಅಲ; ಸಾಂಕ್ರಾಮಿಕವೂ ಅಲ್ಲ’

ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಸಂಜೀವ್‌ ಕುಮಾರ್‌ ರಾಯಚೂರಕರ್‌ ಚಾಲನೆ
Last Updated 3 ಜುಲೈ 2018, 13:12 IST
ಅಕ್ಷರ ಗಾತ್ರ

ಯಾದಗಿರಿ:‘ತೊನ್ನು ರೋಗ ಶಾಪವೂ ಅಲ್ಲ; ಸಾಂಕ್ರಾಮಿಕವೂ ಅಲ್ಲ. ಅದನ್ನು ಗುಣಪಡಿಸಲು ಸಾಧ್ಯವಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಸಂಜೀವ್‌ ಕುಮಾರ್‌ ರಾಯಚೂರಕರ್‌ ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಠ ರೋಗಗಳ ತಜ್ಞರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ತೊನ್ನು ರೋಗದ ಬಗ್ಗೆ ಜನರಲ್ಲಿ ನಾನಾ ತಪ್ಪು ಕಲ್ಪನೆಗಳಿವೆ. ಮನುಷ್ಯನ ಚರ್ಮದ ಬಣ್ಣವನ್ನು ರಕ್ಷಿಸುವ ಜೀವಕೋಶಗಳ ಕೊರತೆಯಿಂದ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದನ್ನು ರೋಗ ಅಂತಲೂ ಹೇಳುವಂತಿಲ್ಲ. ಏಕೆಂದರೆ ಇದರಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವೂ ಬೀರುವುದಿಲ್ಲ. ತೊನ್ನು ಕಾಣಿಸಿಕೊಳ್ಳುವ ಎಲ್ಲ ರೋಗಿಗಳು ಆರೋಗ್ಯಯುತರಾಗಿರುತ್ತಾರೆ’ ಎಂದರು.

‘ತೊನ್ನು– ಮನುಷ್ಯನ ದೇಹದಲ್ಲಿ ಜರುಗುವ ಒಂದು ಆತ್ಮಘಾತಿ ಪ್ರಕ್ರಿಯೆ. ಇದಕ್ಕೆ ಅನುವಂಶೀಯವೂ ಕಾರಣವಲ್ಲ. ಪ್ರತಿಶತ ಶೇ 80ರಷ್ಟು ಜನರಲ್ಲಿ ಒಬ್ಬರಿಗೆ ಈ ಲಕ್ಷಣ ಇರುತ್ತದೆ. ತೊನ್ನು ನಿವಾರಣೆಗೆ ಹಲವು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಇವೆ. ಫೋಟೊಥೆರಪಿ (ನೀಲಾತೀತ ಕಿರಣಗಳು), ನ್ಯಾರೋಬ್ಯಾಂಡ್ ಯುವಿಬಿ ಚಿಕಿತ್ಸೆ, ಲೇಸರ್‌ ಮತ್ತು ಕೇಂದ್ರೀಕೃತ ಫೊಟೊಥೆರಪಿಯಂತಹ ಆಧನಿಕ ಶಸ್ತ್ರಚಿಕಿತ್ಸೆಗಳಿವೆ’ ಎಂದು ವಿವರಿಸಿದರು.

‘ಪ್ರಾಥಮಿಕ ಹಂತದಲ್ಲಿಯೇ ರೋಗ ಉಲ್ಬಣಿಸದಂತೆ ಸ್ಟಿರಾಯಿಡ್, ಟ್ರಾಕ್ರೋಲಿಮಸ್ ಮೊದಲಾದ ಔಷಧಗಳಿಂದಲೂ ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸಿ ತೊನ್ನು ನಿಯಂತ್ರಿಸಲಾಗುತ್ತದೆ’ ಎಂದರು.

ಕೀಲುಮೂಳೆತಜ್ಞ ಡಾ.ಆದರ್ಶ್‌ ಮಾತನಾಡಿ,‘ತೊನ್ನು ಗುಣಪಡಿಸಲಾಗದ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ನಿವಾರಣೆ ಮಾಡಬಹುದು. ರಂಧ್ರಗಳಿಂದ (ಪಂಚ್‌) ಕಸಿ, ಚರ್ಮದ ಸೀಳಿಕೆಗಳಿಂದ ಕಸಿ, ನೀರುಗುಳ್ಳೆ ಅಥವಾ ಚರ್ಮದ ಬಿಲ್ಲೆಗಳಿಂದ ಚರ್ಮ ಕಸಿ ಮಾಡಿ ತೊನ್ನು ನಿವಾರಣೆ ಮಾಡಬಹುದು’ ಎಂದು ಹೇಳಿದರು.

‘ತೊನ್ನು ರೋಗಿಗಳನ್ನು ಕೀಳರಿಮೆಯಿಂದ ಸಮಾಜ ನೋಡುವುದು ತಪ್ಪಬೇಕು. ತೊನ್ನು ಒಂದು ರೋಗವಲ್ಲ. ಅದೊಂದು ಲಕ್ಷಣ ಆಗಿರುವುದರಿಂದ ತೊನ್ನು ಇರುವವರನ್ನು ಮದುವೆ ಆಗಬಹುದು. ಅದರಿಂದ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ಮಕ್ಕಳಲ್ಲಿ ತೊನ್ನು ಕಾಣಿಸಿಕೊಂಡರೆ ಅದಕ್ಕೆ ಚಿಕಿತ್ಸೆ ಇದೆ. ಪಾಲಕರು ಮಕ್ಕಳಿಗೆ ಚಿಕಿತ್ಸೆ ಕೊಡಿಸಿದರೆ ಅದು ನಿವಾರಣೆ ಆಗುತ್ತದೆ’ ಎಂದರು.

ವೈದ್ಯರಾದ ಡಾ.ಆಶಾ, ಡಾ.ರವಿಕುಮಾರ್, ಡಾ.ಪ್ರೀತಿ ಪಾಟೀಲ, ಡಾ.ಪವಿತ್ರಾ, ಡಾ.ರಾಜೇಶ್ವರಿ, ಡಾ.ಗಾಯತ್ರಿ, ಡಾ.ರಾಧಿಕಾ, ಡಾ.ಶ್ವೇತಾ, ಡಾಲಕ್ಷ್ಮಣ್, ಡಾ.ಗಿರಿಜಾ, ಡಾ.ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT