ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಪಿ, ಆಯುಕ್ತರ ನೇಮಕ: ಲೋಕಸೇವಾ ಆಯೋಗದ ಶಿಫಾರಸು ಕಡ್ಡಾಯ!

ಪೊಲೀಸ್‌ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮಹತ್ವದ ನಿರ್ದೇಶನ
Last Updated 3 ಜುಲೈ 2018, 20:18 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನು ಮುಂದೆ ಸ್ವತಂತ್ರವಾಗಿ ಪೊಲೀಸ್‌ ಮಹಾ ನಿರ್ದೇಶಕರು(ಡಿಜಿಪಿ) ಮತ್ತು ಪೊಲೀಸ್‌ ಆಯುಕ್ತರನ್ನು ನೇಮಕ ಮಾಡುವಂತಿಲ್ಲ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶಿಫಾರಸು ಮಾಡುವ ಅಧಿಕಾರಿಗಳನ್ನು ಮಾತ್ರ ಈ ಹುದ್ದೆಗಳಿಗೆ ಪರಿಗಣಿಸಬೇಕಾಗುತ್ತದೆ.

ಡಿಜಿಪಿ, ಪೊಲೀಸ್‌ ಆಯುಕ್ತರಂತಹ ಉನ್ನತ ಪೊಲೀಸ್‌ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಅರ್ಹ ಸಂಭಾವ್ಯ ಹಿರಿಯ ಪೊಲೀಸ್‌ ಅಧಿಕಾರಿಗಳ ಪಟ್ಟಿಯನ್ನು ಯುಪಿಎಸ್‌ಸಿಗೆ ಕಳಿಸಬೇಕಾಗುತ್ತದೆ.

ಜೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ಆಯೋಗ ಮೂವರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಆಯೋಗ ಶಿಫಾರಸು ಮಾಡಿದ ಮೂವರು ಅಧಿಕಾರಿಗಳ ಪೈಕಿ ಯಾರಾದರೂ ಒಬ್ಬರನ್ನು ನೇಮಕ ಮಾಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ಪೀಠ ಮಂಗಳವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.

ಡಿಜಿಪಿ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿ ಸಾಕಷ್ಟು ಸೇವಾವಧಿ ಬಾಕಿ ಇರುವ ಅಭ್ಯರ್ಥಿಯನ್ನು ಪರಿಗಣಿಸುವಂತೆ ಸಲಹೆ ಮಾಡಿದೆ.

ಪೊಲೀಸ್‌ ನೇಮಕಾತಿಗೆ ರಾಜ್ಯಮಟ್ಟದಲ್ಲಿ ಸ್ವಂತ ಕಾನೂನು ಮತ್ತು ನಿಯಮಾವಳಿ ರೂಪಿಸಿಕೊಂಡಿರುವ ರಾಜ್ಯಗಳು ಈ ಆದೇಶದಲ್ಲಿ ಮಾರ್ಪಾಡು ಮಾಡಿಕೊಳ್ಳಲು ಬಯಸಿದರೆ ಸ್ವಾತಂತ್ರ್ಯನೀಡಲಾಗಿದೆ.

ಆದರೆ, ಮಾರ್ಪಾಡು ಮಾಡುವ ಮುನ್ನ ಅದನ್ನು ಕಡ್ಡಾಯವಾಗಿ ಕೋರ್ಟ್‌ ಗಮನಕ್ಕೆ ತರುವಂತೆ ಷರತ್ತು ವಿಧಿಸಲಾಗಿದೆ.

ಪೊಲೀಸ್‌ ಆಡಳಿತ ಸುಧಾರಣೆ ಸಂಬಂಧ ಮಾಜಿ ಡಿಜಿ‍ಪಿಗಳಾದ ಪ್ರಕಾಶ್‌ ಸಿಂಗ್‌ ಮತ್ತು ಎನ್‌.ಕೆ.ಸಿಂಗ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2006ರಲ್ಲಿ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಮಾರ್ಪಾಡು ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT