ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನದೇ ಮಕ್ಕಳನ್ನು ನಿರ್ಲಕ್ಷಿಸಿದ ಅಮೆರಿಕ

ಬಡ ಮಕ್ಕಳಿಗೆ ತೊಂದರೆಯಾಗುವ ರೀತಿಯಲ್ಲಿ ಟ್ರಂಪ್‌ ಕೆಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸುತ್ತಿದ್ದಾರೆ
ಅಕ್ಷರ ಗಾತ್ರ

ಅಮೆರಿಕದಲ್ಲಿ ತೊಂದರೆಗೆ ಒಳಗಾಗುತ್ತಿರುವುದು ಗಡಿ ಪ್ರದೇಶದಲ್ಲಿ ನಿಂತಿರುವ ಮಕ್ಕಳಷ್ಟೇ ಅಲ್ಲ! ಅಮೆರಿಕ ದೇಶವು ಲಕ್ಷಾಂತರ ಮಕ್ಕಳಿಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ– ಇದರಲ್ಲಿ ಅಮೆರಿಕದ ಮಕ್ಕಳೂ ಸೇರಿದ್ದಾರೆ. ಇದರ ಒಟ್ಟಾರೆ ಪರಿಣಾಮ ಎಂದರೆ ಅಮೆರಿಕದ ಮಕ್ಕಳು ಬಡತನದ ಬೇಗೆ ಅನುಭವಿಸುವ, ಶಾಲೆಯನ್ನು ಮಧ್ಯದಲ್ಲೇ ತೊರೆಯುವ ಹಾಗೂ ಚಿಕ್ಕ ವಯಸ್ಸಿನಲ್ಲೇ ಸಾಯುವ ಸಾಧ್ಯತೆಗಳು ಇತರ ಮುಂದುವರಿದ ದೇಶಗಳಿಗಿಂತ ಹೆಚ್ಚಿರುತ್ತವೆ.

ಅಮೆರಿಕನ್ನರಾದ ನಾವು, ಸಾಮೂಹಿಕ ಜೈಲುಶಿಕ್ಷೆ ಮೂಲಕ, ಕಾನೂನಿನ ಜೊತೆ ಸಂಘರ್ಷದಲ್ಲಿ ಸಿಲುಕಿದ ಮಕ್ಕಳನ್ನು ಅತಿ ಎಂಬಷ್ಟರ ಮಟ್ಟಿಗೆ ವಶದಲ್ಲಿ ಇರಿಸಿ
ಕೊಳ್ಳುವ ಮೂಲಕ ಹಾಗೂ ಬಾಡಿಗೆ ಪೋಷಕರ ಸೇವೆಯನ್ನು ಅತಿಯಾಗಿ ಬಳಸಿಕೊಳ್ಳುವ ಮೂಲಕ ನಮ್ಮದೇ ದೇಶದ ಕುಟುಂಬಗಳನ್ನೂ ಹರಿದು ಹಂಚುತ್ತಿದ್ದೇವೆ. ಕಪ್ಪು ವರ್ಣೀಯ ಮಕ್ಕಳ ಪೈಕಿ ಪ್ರತಿ 10ರಲ್ಲಿ ಒಂದು ಮಗು ಬಾಡಿಗೆ ಪಾಲಕರ ಬಳಿ ಕಾಲ ಕಳೆಯುತ್ತದೆ– 2000ನೆಯ ಇಸವಿಯ ನಂತರ ಬಾಡಿಗೆ ಪೋಷಕರ ಬಳಿ ಇದ್ದ ಒಟ್ಟು 61 ಸಾವಿರ ಮಕ್ಕಳು ಕಾಣೆಯಾಗಿದ್ದಾರೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಲಸೆ ಸಮಸ್ಯೆಯ ರೀತಿಯಲ್ಲೇ, ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳದಿರುವ ಹಳೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಾ ಇದ್ದಾರೆ. ಸಂಪನ್ಮೂಲಗಳ ಹಂಚಿಕೆಯಲ್ಲಿ ಕೊರತೆ ಎದುರಾದರೆ ಅಥವಾ ಯಾವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ವಿಚಾರದಲ್ಲಿ ಗೊಂದಲ ಏರ್ಪಟ್ಟಾಗ ಅಮೆರಿಕದಲ್ಲಿ ಆಗುವುದು ‘ಮಕ್ಕಳನ್ನು ತೊಂದರೆಗೆ ಸಿಲುಕಿಸುವ’ ಕೆಲಸ.

‘ಅಮೆರಿಕದಲ್ಲಿ ಬಡತನದ ಬಿಸಿಗೆ ಸಿಲುಕಿರುವ ಮಕ್ಕಳ ಸಂಖ್ಯೆ ಆಘಾತಕಾರಿ ಎನ್ನುವಷ್ಟು ಹೆಚ್ಚಾಗಿದೆ’ ಎಂದು ತೀವ್ರ ಬಡತನ ಹಾಗೂ ಮಾನವ ಹಕ್ಕುಗಳ ಕುರಿತು ವರದಿ ಸಿದ್ಧಪಡಿಸಲು ವಿಶ್ವಸಂಸ್ಥೆ ನೇಮಿಸಿದ್ದ ಪ್ರತಿನಿಧಿ ಫಿಲಿಪ್‌ ಆಲ್‌ಸ್ಟನ್‌ ತಮ್ಮ ವರದಿಯಲ್ಲಿ ಹೇಳಿದ್ದಾರೆ. ಅಮೆರಿಕದ ಸರಿಸುಮಾರು ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬಡತನದ ಸುಳಿಯಲ್ಲಿ ಸಿಲುಕಿದೆ ಎಂದು ಆಲ್‌ಸ್ಟನ್‌ ಹೇಳಿದ್ದಾರೆ. ಹೀಗೆ ಬಡತನದಲ್ಲಿ ಇರುವ ಮಕ್ಕಳ ಸಂಖ್ಯೆಯು ಸೂರಿಲ್ಲದವರ ಪೈಕಿ ಐದನೆಯ ಒಂದರಷ್ಟು ಆಗುತ್ತದೆ. ‘ವಲಸೆ ಬರುವ ಮಕ್ಕಳನ್ನು ಗಡಿಯಲ್ಲಿ ಕೆಟ್ಟದಾಗಿ ಕಾಣುವುದಕ್ಕೂ, ದೇಶದಾದ್ಯಂತ ಇರುವ ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳಿರುವುದಕ್ಕೂ ನೇರ ಸಂಬಂಧ ಇದೆ’ ಎಂದು ಆಲ್‌ಸ್ಟನ್‌ ನನ್ನ ಬಳಿ ಹೇಳಿದರು. ಸಹಾನುಭೂತಿ ಇಲ್ಲದಿರುವುದು ಅವರ ಪ್ರಕಾರ ಇದಕ್ಕೆ ಮೂಲ ಕಾರಣ.

‘ಅಮೆರಿಕದಲ್ಲಿನ ಬಡತನವನ್ನು ವಿಶ್ವಸಂಸ್ಥೆಯು ಪರಿಶೀಲನೆಗೆ ಒಳಪಡಿಸುವುದು ಹಾಸ್ಯಾಸ್ಪದ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಅವರು ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಯಭಾರಿ ಹ್ಯಾಲೆ ಅವರೇ, ನೀವು ಹೇಳಿರುವುದು ನಿಜವೇ?

ಬಡತನದ ಕುರಿತು ಅಧ್ಯಯನ ನಡೆಸಲು ನಿಯುಕ್ತರಾದ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಬಗ್ಗೆ ಪರಿಶೀಲನೆ ನಡೆಸುವುದು, ಅಲ್ಲಿನ ಮಕ್ಕಳು ತೊಂದರೆಯಲ್ಲಿ ಇದ್ದಾರೆ ಎಂಬುದನ್ನು ಕಂಡುಕೊಳ್ಳುವುದು ನಿಜಕ್ಕೂ ವಿಚಿತ್ರ ಎಂಬುದು ನಿಜ. ಆದರೆ, ವಿಶ್ವಸಂಸ್ಥೆಯು ಕಾಂಗೊ ದೇಶದಲ್ಲಿನ ಬಡ ಮಕ್ಕಳ ಬಗ್ಗೆ ಮಾತ್ರವೇ ಅಲ್ಲದೆ, ದಕ್ಷಿಣ ಕೆರೊಲಿನಾದಂತಹ
ಪ್ರದೇಶಗಳಲ್ಲಿನ ಮಕ್ಕಳ ಬಗ್ಗೆಯೂ ಮಾತನಾಡುತ್ತಿರುವುದು ನನಗೆ ಖುಷಿ ಕೊಡುತ್ತಿದೆ (ದಕ್ಷಿಣ ಕೆರೊಲಿನಾದಲ್ಲಿ ಕಪ್ಪುವರ್ಣೀಯ ಶಿಶುವಿನ ಸರಾಸರಿ ಜೀವತಾವಧಿಯು ಚೀನಾದಲ್ಲಿನ ಶಿಶುವಿಗಿಂತ ಕಡಿಮೆ).

‘ಅಮೆರಿಕದ ಅಂದಾಜು ಮೂವತ್ತು ಲಕ್ಷ ಮಕ್ಕಳು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಇಂತಹ ಮಕ್ಕಳಿಗೆ ದಿನವೊಂದಕ್ಕೆ ಖರ್ಚು ಮಾಡಲು ಎರಡು ಡಾಲರ್‌ (ಅಂದಾಜು ₹ 137) ಕೂಡ ಇರುವುದಿಲ್ಲ’ ಎಂದು ಸಂಶೋಧಕರಾದ ಕ್ಯಾಥರಿನ್ ಎಡಿನ್ ಮತ್ತು ಲ್ಯೂಕ್ ಶೆಫರ್‌ ಕಂಡುಕೊಂಡಿದ್ದಾರೆ. ಪ್ರತಿದಿನ ವ್ಯಕ್ತಿಯೊಬ್ಬನಿಗೆ
ಕನಿಷ್ಠ ಎರಡು ಡಾಲರ್‌ ಬೇಕು ಎಂಬುದು ಜಾಗತಿಕ ಮಟ್ಟದಲ್ಲಿ ಕಡು ಬಡತನ ಗುರುತಿಸುವ ಮಾನದಂಡ.

ಇದರ ಅರ್ಥ ಅಮೆರಿಕದಲ್ಲಿನ ಬಡತನವು ಇತರ ಬಡ ರಾಷ್ಟ್ರಗಳಲ್ಲಿನ ಬಡತನಕ್ಕೆ ಹೋಲಿಸಬಹುದಾಗಿದ್ದು ಎಂಬುದಲ್ಲ. ಅಮೆರಿಕದ ಮಕ್ಕಳು ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗಬಹುದು. ಆದರೆ ಭಾರತದಲ್ಲಿ ಅಪೌಷ್ಟಿಕತೆಯ ಕಾರಣದಿಂದಾಗಿ ಶೇಕಡ 38ರಷ್ಟು ಮಕ್ಕಳ ಬೆಳವಣಿಗೆಯೇ ಕುಂಠಿತವಾಗಿದೆ. ಅಮೆರಿಕದಲ್ಲಿ ಈ ರೀತಿಯ ಸ್ಥಿತಿ ಇಲ್ಲ. ಇಲ್ಲಿ ಉಲ್ಲೇಖಿಸಬೇಕಿರುವ ವಿಷಯವೆಂದರೆ, ಮಕ್ಕಳ ಪಾಲಿಗೆ ಅಮೆರಿಕ ಎಂಬುದು ಹಿಂದಿನಿಂದಲೂ ಬಹಳ ಸುರಕ್ಷಿತ ದೇಶವಾಗಿದೆ. ಸಾಮೂಹಿಕ ಶಿಕ್ಷಣ ವಿಚಾರದಲ್ಲಿ ಅಮೆರಿಕವು ಜಗತ್ತಿಗೆ ನಾಯಕತ್ವ ನೀಡಿದೆ. 1960ರ ಸುಮಾರಿಗೆ ಅಮೆರಿಕದಲ್ಲಿ ಮಕ್ಕಳ ಮರಣ ಪ್ರಮಾಣವು ಇತರ ಅನೇಕ ಮುಂದುವರಿದ ದೇಶಗಳಿಗಿಂತ ಕಡಿಮೆ ಇತ್ತು.

ಆದರೆ, 1970ರ ಸುಮಾರಿನ ನಂತರ ಬೇರೆ ದೇಶಗಳು ತಮ್ಮೆಲ್ಲ ಪ್ರಜೆಗಳಿಗೆ ಆರೋಗ್ಯ ಸೇವೆಗಳನ್ನು ಮತ್ತು ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಜಾರಿಗೆ ತಂದ ನಂತರ ಅಮೆರಿಕದಲ್ಲಿ ಮಕ್ಕಳು ಮರಣವನ್ನಪ್ಪುವ ಪ್ರಮಾಣ ಜಾಸ್ತಿಯಾಯಿತು. ‘ಹೆಲ್ತ್‌ ಅಫೇರ್ಸ್‌’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಅಮೆರಿಕದಲ್ಲಿ ಮಗುವೊಂದು 19 ವರ್ಷ ವಯಸ್ಸು ತುಂಬುವುದಕ್ಕೆ ಮೊದಲೇ ಸಾವನ್ನಪ್ಪುವ ಪ್ರಮಾಣವು ಇತರ ಮುಂದುವರಿದ ದೇಶಗಳ ಮಕ್ಕಳಿಗೆ ಹೋಲಿಸಿದರೆ ಶೇಕಡ 57ರಷ್ಟು ಹೆಚ್ಚಿದೆ.

ಅಮೆರಿಕದಲ್ಲಿ ಇಂದಿಗೂ ಪ್ರತಿವರ್ಷ ಐದು ಲಕ್ಷ ಮಕ್ಕಳ ದೇಹಕ್ಕೆ ವಿಷಕಾರಿ ಸೀಸ ಸೇರುತ್ತಿದೆ. ‘ಬಡತನದಲ್ಲಿರುವ ಅಮೆರಿಕದ ಲಕ್ಷಾಂತರ ಮಕ್ಕಳು ಕೆಲವು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಇದೆ’ ಎಂದು ಎಚ್ಚರಿಸುತ್ತಾರೆ ಬಾಯ್ಲರ್ಸ್‌ ವೈದ್ಯಕೀಯ ಕಾಲೇಜಿನ ತಜ್ಞವೈದ್ಯ ಡಾ. ಪೀಟರ್‌ ಹೊಟೆಜ್. ನಾವು ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯ ಸೌಲಭ್ಯ ನೀಡುತ್ತೇವೆ (ಇದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ). ಆದರೆ ಮಕ್ಕಳಿಗೆ ಇಂಥದ್ದೊಂದು ಸೌಲಭ್ಯವನ್ನು ಏಕೆ ನೀಡುವುದಿಲ್ಲ? (ಮಕ್ಕಳಿಗೆ ಇದನ್ನು ಕಲ್ಪಿಸಲು ಕಡಿಮೆ ಹಣ ಸಾಕು) ಇದಕ್ಕೆ ಉತ್ತರ ಸರಳವಾಗಿದೆ: ಮಕ್ಕಳಿಗೆ ಮತದಾನದ ಹಕ್ಕು ಇಲ್ಲ. ಮಕ್ಕಳು ನಮ್ಮನ್ನೇ ನೆಚ್ಚಿಕೊಂಡಿದ್ದಾರೆ. ಹಾಗೆಯೇ, ನಾವು ಪ್ರತಿಬಾರಿಯೂ ಅವರ ನಂಬಿಕೆಗೆ ಚ್ಯುತಿ ತರುತ್ತಿದ್ದೇವೆ.

ಅಮೆರಿಕದ ಮಕ್ಕಳ ಸ್ಥಿತಿ ಕುರಿತು ಈಗ ಇರುವ ಆಕ್ರೋಶಕ್ಕೆ ಇನ್ನಷ್ಟು ವಿಸ್ತೃತವಾದ ನೆಲೆಯನ್ನು ಕಲ್ಪಿಸಿದರೆ ನಾವು ಜನರ ಬದುಕನ್ನು ಬದಲಿಸಬಹುದು.
ಅರ್ಕನ್ಸಾನ್‌ನ 13 ವರ್ಷ ವಯಸ್ಸಿನ ಒಬ್ಬ ಹುಡುಗನ ಮನೆಗೆ ನಾನು ಒಮ್ಮೆ ಹೋಗಿದ್ದೆ. ಅದು ಮಾದಕ ವಸ್ತುಗಳನ್ನು ಬಳಕೆ ಮಾಡುವವರಿಗೆ ಬಾಡಿಗೆಗೆ ನೀಡುತ್ತಿದ್ದ ಒಂದು ಕೊಳಕು ಮನೆ. ಆ ಮನೆಯಲ್ಲಿ ಪುಸ್ತಕಗಳೂ ಇರಲಿಲ್ಲ, ಆಹಾರವೂ ಇರಲಿಲ್ಲ. ಆ ಮನೆಗೆ ನೀಡಿದ್ದ ವಿದ್ಯುತ್‌ ಸಂಪರ್ಕವನ್ನು, ಬಿಲ್‌ ಪಾವತಿ ಮಾಡದಿದ್ದರೂ ಕಡಿತ ಮಾಡದೆ ಇದ್ದುದಕ್ಕೆ ಒಂದೇ ಒಂದು ಕಾರಣ ಇತ್ತು. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನು ಹೆದರಿಸಲು ಅಲ್ಲಿ ಒಂದು ದೊಡ್ಡ ನಾಯಿ ಇತ್ತು!

ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟದ ಕೆಲಸ. ಆದರೆ, ನಾವು ಭರವಸೆ ಕಳೆದುಕೊಳ್ಳಬೇಕಾಗಿಲ್ಲ.
ಯಾವ ಕೆಲಸ ಮಾಡಿದರೆ ಸೂಕ್ತ ಎಂಬುದು ನಮಗೆ ಗೊತ್ತಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ದೊಡ್ಡ ಮಟ್ಟದ ಬದಲಾವಣೆ ತರಲು ಸಾಧ್ಯ. ಪಾಲಕರಿಗೆ ತರಬೇತಿ ನೀಡುವುದು, ಮಕ್ಕಳು ನರ್ಸರಿ ಶಾಲೆಗೆ ಹೋಗುವ ಮೊದಲಿನ ದಿನಗಳಲ್ಲಿ ಅವರಿಗೆ ಉತ್ತಮ ತರಬೇತಿ ನೀಡುವುದು, ಮಕ್ಕಳು ಇರುವ ಮನೆಗಳಿಗೆ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡುವುದು, ಮಕ್ಕಳ ಮೇಲೆ ನಿಗಾ ಇಡುವುದು... ಇಂಥವೆಲ್ಲ ಕೆಲಸಗಳು ಆಗಬೇಕು.

ಒಂದು ಅಧ್ಯಯನ ವರದಿ ಉಲ್ಲೇಖಿಸಿ ಮಾತನಾಡಿರುವ ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌, ‘ಮಕ್ಕಳು ತೀರಾ ಚಿಕ್ಕವರಿದ್ದಾಗಲೇ ಅವರಿಗಾಗಿ ಕೆಲಸ ಕಾರ್ಯಕ್ರಮಗಳನ್ನು ರೂಪಿಸಲು ಅಮೆರಿಕ ಹಣ ವಿನಿಯೋಗಿಸಿದರೆ, ಅಮೆರಿಕದಲ್ಲಿನ ಅಸಮಾನತೆಯು ಕೆನಡಾ ದೇಶದಲ್ಲಿನ ಅಸಮಾನತೆಯ ಮಟ್ಟಕ್ಕೆ ಇಳಿಯುತ್ತದೆ’ ಎಂದು ಹೇಳಿದ್ದಾರೆ.

ನಮಗೆ ಅನುಕರಿಸಲು ಒಂದು ಮಾದರಿ ಈಗಾಗಲೇ ಇದೆ. ಟೋನಿ ಬ್ಲೇರ್ ಅವರು ಬ್ರಿಟನ್ನಿನ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಕ್ಕಳಲ್ಲಿನ ಬಡತನದ ವಿರುದ್ಧ ಪ್ರಮುಖ ಅಭಿಯಾನವೊಂದನ್ನು ಕೈಗೊಂಡರು. ಬಡತನವನ್ನು ಅಂದಾಜು ಅರ್ಧದಷ್ಟು ಕಡಿಮೆ ಮಾಡಿದರು.

ದುರದೃಷ್ಟದ ಸಂಗತಿಯೆಂದರೆ, ಟ್ರಂಪ್‌ ಅವರು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಬಡ ಮಕ್ಕಳಿಗೆ ಹೆಚ್ಚು ತೊಂದರೆಯಾಗುವ ರೀತಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸುತ್ತಿದ್ದಾರೆ. ಟ್ರಂಪ್‌ ಅವರು ತರುತ್ತಿರುವ ತೆರಿಗೆ ಇಳಿಕೆ ಕ್ರಮಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತಿವೆ. ಅಂದರೆ, ನಾವು ಮೋಜು ಮಾಡಿ, ಅದರ ಬಿಲ್‌ ಮೊತ್ತವನ್ನು ಪಾವತಿಸುವಂತೆ ಮಕ್ಕಳಿಗೆ ಹೇಳುತ್ತಿದ್ದೇವೆ!

ರಾಜಕೀಯ ಭೇದಗಳನ್ನು ಮೀರಿದ, ರಾಷ್ಟ್ರವ್ಯಾಪಿ ಆಗ್ರಹದ ಕಾರಣದಿಂದಾಗಿ ಟ್ರಂಪ್‌ ಅವರು, ‘ಗಡಿ ಪ್ರದೇಶ
ದಲ್ಲಿನ ವಲಸಿಗರನ್ನು ಅವರ ಮಕ್ಕಳಿಂದ ಬೇರೆ ಮಾಡುವ ಆದೇಶ’ದಿಂದ ಹಿಂದೆ ಸರಿಯುವಂತೆ ಆಯಿತು. ಆಗ ವ್ಯಕ್ತ
ವಾಗಿದ್ದು ನಮ್ಮ ಸಹಾನುಭೂತಿಯ ಒಕ್ಕೂರಲ ಆಗ್ರಹವಾಗಿತ್ತು. ಆ ಸಹಾನುಭೂತಿ ನಮ್ಮ ದೇಶವನ್ನು ಪ್ರತಿನಿಧಿಸುವಂತಿತ್ತು. ನಮಗೆ ಈಗ ಬೇಕಿರುವುದು ಅಮೆರಿಕದ ಮಕ್ಕಳ ಪರವಾಗಿ ವ್ಯಕ್ತವಾಗುವ ಇಂಥದ್ದೊಂದು ಸಹಾನುಭೂತಿಯ ಆಗ್ರಹ.

-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT