ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಸರ್ಗಕ್ಕೆ ವಿರುದ್ಧದ ಮಗು ಅಲ್ಪಾಯು’

ಬಜೆಟ್‌ಗೂ ಮುನ್ನ ಆರ್ಥಿಕ ಸ್ಥಿತಿಯ ಶ್ವೇತಪತ್ರ ಹೊರಡಿಸಿ: ವಿರೋಧ ಪಕ್ಷದ ನಾಯಕ ಬಿಎಸ್‌ವೈ ಒತ್ತಾಯ
Last Updated 3 ಜುಲೈ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ನೈಸರ್ಗಿಕ ನಿಯಮದ ವಿರುದ್ಧ ಹುಟ್ಟಿದ ಶಿಶು ಎಷ್ಟು ಕಾಲ ಜೀವಂತ ಇರುತ್ತೊ ಕಾದು ನೋಡೋಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.

‘ನಾನೊಬ್ಬ ಸಾಂದರ್ಭಿಕ ಶಿಶು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ, ಈ ನೈಸರ್ಗಿಕ ನಿಯಮದ ವಿರುದ್ಧವಾಗಿ ಯಾವುದೇ ಸಿದ್ಧಾಂತ, ನೈತಿಕತೆ ಇಲ್ಲದೆ ಈ ಸರ್ಕಾರ ರಚನೆಯಾಗಿದೆ. ಈ ಸರ್ಕಾರಕ್ಕೆ ನೈಜ ತಂದೆ, ತಾಯಿ ಇರಲು ಸಾಧ್ಯವಿಲ್ಲ’ ಎಂದು ಕಿಚಾಯಿಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಯಡಿಯೂರಪ್ಪ, ‘ಅಸಹಜವಾಗಿ ಹುಟ್ಟಿದ ಜೀವಕ್ಕೆ ಸಹಜವಾಗಿ ಹುಟ್ಟಿದ ಜೀವಕ್ಕೆ ಇರುವಷ್ಟು ಆಯಸ್ಸು ಇರಲು ಸಾಧ್ಯವಿಲ್ಲ. ನಿಸರ್ಗ ನಿಯಮದ ವಿರುದ್ಧ ಹುಟ್ಟಿದ ಶಿಶು ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ’ ಎಂದೂ ಕುಟುಕಿದರು.

‘ಸರ್ಕಾರ ಬಂದು ಒಂದೂವರೆ ತಿಂಗಳು ಆಗಿದೆ. ಆದರೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಬಜೆಟ್‌ ಮಂಡನೆಗೂ ಮೊದಲು ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ಸಾಲ 2.38 ಲಕ್ಷ ಕೋಟಿ ದಾಟಿದೆ. ನೀರಾವರಿ, ಲೋಕೋಪಯೋಗಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ₹ 10 ಸಾವಿರ ಕೋಟಿ ಪಾವತಿ ಬಾಕಿ ಇದೆ. ರಾಜ್ಯಪಾಲರಿಂದ ದಿಕ್ಕುದೆಸೆ ಇಲ್ಲದ ಭಾಷಣ ಮಾಡಿಸಲಾಗಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಲು ಮುಖ್ಯಮಂತ್ರಿಗೆ ಮನಸ್ಸಿಲ್ಲ ಎಂಬುದೂ ಇದರಿಂದ ಗೊತ್ತಾಗುತ್ತದೆ’ ಎಂದು ಟೀಕಿಸಿದರು.

‘ಅಂಬೇಡ್ಕರ್ ಆಶಯಕ್ಕೆ ಅಣಕು ಮಾಡುವ ರೀತಿಯಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಲಾಗಿದೆ. ಇದು ಜನರಿಂದ ಆಯ್ಕೆಯಾದ ಸರ್ಕಾರ ಅಲ್ಲ. ಜನರ ಸರ್ಕಾರವೂ ಅಲ್ಲ. ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್‌ ಅನ್ನು ತಿರಸ್ಕರಿಸಿದ್ದಾರೆ. ಜೆಡಿಎಸ್ 40 ಸ್ಥಾನದಿಂದ 37ಕ್ಕೆ ಕುಸಿದಿದೆ. ಆದರೂ, ಕುರ್ಚಿಗಾಗಿ ಮೈತ್ರಿ ಮಾಡಿಕೊಂಡು ನಾಡಿನ ಜನರಿಗೇ ಅವಮಾನ ಮಾಡಿದ್ದೀರಿ’ ಎಂದೂ ದೂರಿದರು.

‘ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿಯಾಗಿದ್ದರೆ ಜನ ಕೊಂಚ ಸಮಾಧಾನ ಪಡುತ್ತಿದ್ದರೋ ಏನೋ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೋ, ಕುಮಾರಸ್ವಾಮಿ ಮುಖ್ಯಮಂತ್ರಿಯೋ ಎಂಬ ಗೊಂದಲದಲ್ಲಿ ಜನ ಇದ್ದಾರೆ’ ಎಂದು ಕುಟುಕಿದರು.

‘ನೀವು ಹೇಳಿದಂತೆ ₹ 53 ಸಾವಿರ ಕೋಟಿ ಮೊತ್ತದ ರೈತರ ಸಾಲ ಸಂಪೂರ್ಣ ಮಾಡುತ್ತೀರಾ ಎಂದು ಬಜೆಟ್ ಮಂಡನೆವರೆಗೆ ಕಾಯುತ್ತೇವೆ. ಜೆಡಿಎಸ್ ಸುಳ್ಳು ಭರವಸೆಗಳನ್ನು ನೀಡದೇ ಇದ್ದಲ್ಲಿ 25 ಸ್ಥಾನವನ್ನೂ ಗೆಲ್ಲುತ್ತಿರಲಿಲ್ಲ. ಪ್ರಣಾಳಿಕೆಯ ಭರವಸೆ ಈಡೇರಿಸಿದರೆ ಕುಮಾರಸ್ವಾಮಿಗೆ ಜೈ ಹೇಳುತ್ತೇವೆ. ಪ್ರಣಾಳಿಕೆ ತಕ್ಕಂತೆ ನಡೆದುಕೊಂಡಿಲ್ಲ ಎಂದಾದರೆ ಹರಾಜು ಹಾಕಲಿದ್ದೇವೆ’ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

‘ಟೇಕಾಫ್ ಆಗಿಲ್ಲ ಎಂದರೆ ನೀವ್ಯಾಕೆ ಬೇಡಿಕೆ ಇಡುತ್ತೀರಿ’

‘ಸರ್ಕಾರ ಟೇಕಾಫ್ ಆಗಿಲ್ಲ ಅಂತಿದ್ದೀರಿ. ಹಾಗಿದ್ದರೆ, ಸರ್ಕಾರದ ಮುಂದೆ ನೀವ್ಯಾಕೆ ಬೇಡಿಕೆ ಇಡುತ್ತೀರಿ’ ಎಂದು ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

‘ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನೂ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ’ ಎಂಬ ಯಡಿಯೂರಪ್ಪ ಹೇಳಿದಾಗ, ‘ಖಾಸಗಿ ವ್ಯಕ್ತಿಗಳಿಂದ ಪಡೆದ ರೈತರ ಸಾಲ ಮನ್ನಾ ಬಗ್ಗೆ ನಾನು ಹೇಳೇ ಇಲ್ಲ. ಆ ಬಗ್ಗೆ ಚಿಂತನೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ. ಆ ರೀತಿ ಹೇಳಿದ ದಾಖಲೆ ಇದ್ದರೆ ನನಗೆ ಕೊಡಿ’ ಎಂದು ಟಾಂಗ್ ನೀಡಿದರು.

‘ಖಾಸಗಿಯವರಿಂದ ರೈತರು ಪಡೆದ ಸಾಲದ ಮಾಹಿತಿ ಎಲ್ಲಿದೆ? ನಿಮ್ಮ ಬಳಿ ಆ ಮಾಹಿತಿ ಇದ್ದರೆ ಕಳುಹಿಸಿ. ಆ ಬಗ್ಗೆ ಚಿಂತನೆ ಮಾಡುತ್ತೇನೆ. ಮಾತನಾಡುವ ವೇಳೆ ನಿಮ್ಮ ಭಾಷೆ ಹದ್ದುಬಸ್ತಿನಲ್ಲಿ ಇರಲಿ’ ಎಂದು ಹೇಳಿದರು.

‘ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗಲು ನಾವು ತಯಾರಿದ್ದೇವೆ. ಆದರೆ, ನೀವು ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದೀರಿ’ ಎಂದೂ ಮುಖ್ಯಮಂತ್ರಿ ದೂರಿದರು.

****

ಈ ಸರ್ಕಾರಕ್ಕೆ ಎರಡು ರಿಮೋಟ್ ಕಂಟ್ರೋಲ್‌ಗಳು ಇವೆ. ಈ ಪೈಕಿ ಒಂದು ದಿಲ್ಲಿಯಲ್ಲಿದೆ (ರಾಹುಲ್‌ ಗಾಂಧಿ), ಇನ್ನೊಂದು ಪದ್ಮನಾಭ ನಗರದಲ್ಲಿದೆ (ಎಚ್‌.ಡಿ. ದೇವೇಗೌಡ).

-ಬಿ.ಎಸ್. ಯಡಿಯೂರಪ್ಪ ,ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT