ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರವಿರದ ಮತ್ತಿನ ಕಥೆ

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

ಹರೆಯದ ಮತ್ತು ಮನಸಿಗೆ ಏರಿದರೆ ಜಗವೆಲ್ಲ ಸುಂದರವಾಗಿ ಕಾಣುವುದು. ಹೊಂಡಗಳುಳ್ಳ ರಸ್ತೆಯೂ ಸಮತಟ್ಟಾಗಿ ಕಾಣುವುದು. ತಪ್ಪುಗಳೂ ಸರಿಯಾಗಿ ಕಾಣುವುದು. ಆದರೆ ಈ ಹರೆಯದ ಅಮಲು ಬಹುಬೇಗ ಇಳಿದುಹೋಗುವುದು. ಅಮಲು ಇಳಿದ ನಂತರ ಜಗತ್ತು ಇವರನ್ನು ಹೇಗೆ ನೋಡುತ್ತದೆ? ಇಂಥ ಎಳೆಯನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ ‘ನಡುವೆ ಅಂತರವಿರಲಿ’.

ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರವೀನ್, ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೆ.ಪಿ. ಶ್ರೀಕಾಂತ್ ಹಣ ಹೂಡಿದ್ದಾರೆ.

‘ನಡುವೆ ಅಂತರವಿರಲಿ’ ಚಿತ್ರದ ವಿಡಿಯೊ ಹಾಡುಗಳನ್ನು ಇತ್ತೀಚೆಗೆ ಬೆಂಗಳೂರಿನ ಜಿ.ಟಿ. ಮಾಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು. ಹರೆಯದ ಹುಡುಗರ ಪ್ರೇಮದ ಕನವರಿಕೆಗಳು, ಕಾಮದ ಹಸಿ ಸೆಳೆತಗಳು ಎರಡನ್ನು ಹದವಾಗಿ ಬೆರೆಸಿದ ಹಾಡುಗಳು ಮನಸೆಳೆಯುವಂತಿದೆ.

ನಾಯಕನಟನಾಗುವ ಪುಲಕದಲ್ಲಿರುವ ಪ್ರಖ್ಯಾತ್‌ ಅದೇ ಜೋಷ್‌ನಲ್ಲಿಯೇ ಮಾತನಾಡಿದರು. ‘ಈ ಚಿತ್ರದಲ್ಲಿ ನಟಿಸುವ ಅವಕಾಶ ನನಗೆ ಬಂದಿರುವುದು ರಾತ್ರೋ ರಾತ್ರಿ ಐಶ್ವರ್ಯ ಸಿಕ್ಕಂತಾಗಿದೆ’ ಎಂದಾಗ ಸಭೆಯಲ್ಲಿ ನಗುವಿನ ಬುಗ್ಗೆ ಎದ್ದಿತು. ವಿಖ್ಯಾತ್ ಸ್ನೇಹಿತನೊಬ್ಬನ ಜನ್ಮದಿನದ ಪಾರ್ಟಿಯಲ್ಲಿ ಕೂತಿದ್ದಾಗ ನೋಡಿದ ಮಂಜು ಮಾಂಡವ್ಯ ಈ ಚಿತ್ರಕ್ಕೆ ಶಿಫಾರಸ್ಸು ಮಾಡಿದರಂತೆ. ಅದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು ವಿಖ್ಯಾತ್.

‘ಈ ಚಿತ್ರದ ಹಾಡುಗಳಲ್ಲಿನ ಕೆಲವು ದೃಶ್ಯಗಳು ಮುಜುಗರ ಹುಟ್ಟಿಸಿರಬಹುದು. ಆದರೆ ನಾನು ಕಲಾವಿದ. ನನ್ನ ಕೈಯಲ್ಲಿ ಏನೂ ಇಲ್ಲ. ನಿರ್ದೇಶಕರೇ ಸೂತ್ರಧಾರರು. ಅವರು ಹೇಳಿದಂತೆ ನಟಿಸಿದ್ದೇನೆ’ ಎಂದರು. ಮರುಕ್ಷಣವೇ ‘ಇದು ನನ್ನ ವಯಸ್ಸಿಗೆ ಹೊಂದುವಂಥದ್ದೇ ಪಾತ್ರ. ಹಾಗಾಗಿ ನಾನು ದಿನನಿತ್ಯ ಕಾಲೇಜಿನಲ್ಲಿ ಮನೆಯಲ್ಲಿ ಹೇಗಿರುತ್ತೇನೋ ಹಾಗೆಯೇ ಇಲ್ಲಿಯೂ ಕಾಣಿಸಿಕೊಂಡಿದ್ದೇನೆ’ ಎಂದೂ ಹೇಳಿದರು.

‘ಇದು ನನ್ನ ಮನಸ್ಸಿಗೆ ಕನೆಕ್ಟ್‌ ಆದ ಕಥೆ. ಎಲ್ಲರ ಮನಸಲ್ಲಿಯೂ ಉಳಿದುಕೊಳ್ಳುವಂಥ ಕಥೆ. ಆದ್ದರಿಂದಲೇ ಅವಕಾಶ ಮಿಸ್‌ ಆಗಬಾರದು ಎಂಬ ಉದ್ದೇಶದಿಂದ ಸಿನಿಮಾ ಒಪ್ಪಿಕೊಂಡಿದ್ದೇನೆ’ ಎಂದರು ನಾಯಕಿ ಐಶಾನಿ ಶೆಟ್ಟಿ.

ಮಣಿಕಾಂತ್ ಕದ್ರಿ ಚಿತ್ರದಲ್ಲಿನ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಾಗೇಂದ್ರ ಪ್ರಸಾದ್, ಗೌಸ್‌ಪೀರ್, ಯೋಗರಾಜ ಭಟ್ ಹಾಡು ಬರೆದಿದ್ದಾರೆ.

‘ಇದು ನನ್ನ ಹಲವು ವರ್ಷಗಳ ಕನಸು’ ಎಂದು ತುಸು ಭಾವುಕರಾಗಿಯೇ ಮಾತನಾಡಿದರು ನಿರ್ದೇಶಕ ರವೀನ್. ‘ವಾಸ್ತುಪ್ರಕಾರ’ ಚಿತ್ರದಲ್ಲಿ ಐಶಾನಿ ಅವರ ನಟನೆಯನ್ನು ನೋಡಿ ಆಗಲೇ ತಮ್ಮ ಮೊದಲ ಚಿತ್ರಕ್ಕೆ ಇವಳೇ ನಾಯಕಿ ಎಂದು ನಿರ್ಧರಿಸಿದ್ದರಂತೆ ಅವರು. ‘ಇದು ಅಪ್ರಬುದ್ಧ ಪ್ರೇಮಿಗಳ ಕಥೆ. ಸಾಕಷ್ಟು ಭಾವನಾತ್ಮಕ ಸಂಗತಿಗಳು ಇವೆ. ಕ್ಲ್ಯಮ್ಯಾಕ್ಸ್‌ನಲ್ಲಿ ಎಲ್ಲರ ಕಣ್ಣಿನಲ್ಲೂ ನೀರು ಬರುತ್ತದೆ. ಇಂದಿನ ಪೀಳಿಗೆಗಾಗಿ ಈ ಚಿತ್ರ ಮಾಡಿದ್ದೇವೆ’ ಎಂದರು ನಿರ್ದೇಶಕರು.ಚಿಕ್ಕಣ್ಣ, ರಕ್ಷಿತ್ ಕುಮಾರ್, ತುಳಸಿ ಶಿವಮಣಿ, ಅರೂಣಾ ಬಾಲರಾಜ್, ಶ್ರೀನಿವಾಸ ಪ್ರಭು, ಮಂಜು ಮಾಂಡವ್ಯ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT