ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದೂ ಇಲ್ಲದಂತಿರುವ ಉದ್ಯಾನ

Last Updated 4 ಜುಲೈ 2018, 10:52 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಊರಿಗೊಂದು ಶಾಲೆ, ಶಾಲೆಗೊಂದು ಉದ್ಯಾನ ಎಂಬಂತೆ ಸಮೀಪದ ಹನುಮನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಿದ್ದ ಮಕ್ಕಳ ಉದ್ಯಾನ ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ.

350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶಾಲವಾದ ಆವರಣ ಹೊಂದಿದೆ. ಸುತ್ತು ಗೋಡೆಯನ್ನು ಸಹ ನಿರ್ಮಿಸಲಾಗಿದೆ. ಶಾಲಾ ಮಕ್ಕಳು ಆಟವಾಡಲು ಎಂ.ಎಸ್‌.ಪಿ.ಎಲ್‌. ಸಂಸ್ಥೆ ಒಂಬತ್ತು ವರ್ಷಗಳ ಹಿಂದೆ ₨4 ವೆಚ್ಚದಲ್ಲಿ ಉತ್ತಮವಾದ ಉದ್ಯಾನವನ್ನು ನಿರ್ಮಿಸಿಕೊಟ್ಟಿದ್ದರು.

ಜತೆಗೆ ಮಕ್ಕಳಿಗಾಗಿ ಜಾರು ಬಂಡೆ ಸೇರಿದಂತೆ ಇತರೆ ಆಟಗಳಿಗೆ ವ್ಯವಸ್ಥೆ ಮಾಡಿದ್ದರು. ಶಾಲೆಯವರು ಸೂಕ್ತ ನಿರ್ವಹಣೆ ಮಾಡದ ಕಾರಣ ಆವರಣ ಹಾಗೂ ಆಟದ ಜಾಗದಲ್ಲಿ ಮುಳ್ಳುಕಂಟಿ ಬೆಳೆದು ನಿಂತಿದೆ. ಇದರಿಂದಾಗಿ ಮಕ್ಕಳಿಗೆ ಆಟವಾಡಲು ಸಾಧ್ಯವಾಗುತ್ತಿಲ್ಲ. ಹುಳು ಹುಪ್ಪಡಿಗಳು ಓಡಾಡುವಂತಾಗಿದೆ.

ಉದ್ಯಾನದ ಆವರಣದಲ್ಲಿ ಡಣಾಪುರ ಗ್ರಾಮ ಪಂಚಾಯಿತಿ ವತಿಯಿಂದ 1997–98ರಲ್ಲಿ ಜವಾಹರ್‌ ರೋಜಗಾರ್‌ ಯೋಜನೆಯ ಅಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಿಸಲಾಗಿತ್ತು. ಆದರೆ, ಕಿಡಿಗೇಡಿಗಳಿಂದ ಪ್ರತಿಮೆ ಭಗ್ನಗೊಂಡಿದೆ. ಪ್ರತಿಮೆಯ ಸುತ್ತ ಇರುವ ಕಬ್ಬಿಣದ ಜಾಲರಿಗಳು, ಬಾಗಿಲುಗಳು ಕಿತ್ತು ಹೋಗಿವೆ.

‘ಶಾಲೆಯಲ್ಲಿ ಎಲ್ಲ ಇದೆ. ಆದರೆ, ನಿರ್ವಹಣೆ ಸಮಸ್ಯೆಯಿಂದ ಮಕ್ಕಳು ಆಟವಾಡಲು ಆಗುತ್ತಿಲ್ಲ. ಪಂಚಾಯಿತಿಯವರು ಗಮನ ಹರಿಸಿ ಸಂಬಂಧಪಟ್ಟವರಿಗೆ ಸೂಚನೆ ಕೊಟ್ಟು ಸರಿಪಡಿಸಬೇಕು’ ಎನ್ನುತ್ತಾರೆ ಸಿಂಧೂ ಸೃಷ್ಟಿ ಸೇವಾ ಟ್ರಸ್ಟ್‌ ಅಧ್ಯಕ್ಷೆ ಶಾಂತಾ. ‘ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲು ಬರುವ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಡಣಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ರಾಣಿ ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ 50 ವಿಸ್ತರಣೆ ಮಾಡುತ್ತಿರುವುದರಿಂದ ಉದ್ಯಾನದ ಸ್ವಲ್ಪ ಭಾಗ ಹೋಗುತ್ತದೆ. ರಸ್ತೆ ವಿಸ್ತರಣೆ ಕೆಲಸ ಮುಗಿದ ಬಳಿಕ ಉದ್ಯಾನವನ್ನು ಮೊದಲಿನಂತೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹನುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌.ಡಿ.ಎಂ.ಸಿ.) ಅಧ್ಯಕ್ಷ ಅಡವಿ ಬುಳ್ಳಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT