ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಋಣ ಮುಕ್ತ’ರಾಗುವರೇ ಜಿಲ್ಲೆಯ ರೈತರು?

ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಇಂದು: ಗರಿಗೆದರಿದ ಅನ್ನದಾತರ ನಿರೀಕ್ಷೆ
Last Updated 4 ಜುಲೈ 2018, 13:49 IST
ಅಕ್ಷರ ಗಾತ್ರ

ಬಾಗಲಕೋಟೆ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚೊಚ್ಚಲ ಬಜೆಟ್‌ ಜುಲೈ 5ರಂದು ಮಂಡನೆಯಾಗಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚುನಾವಣೆಗೂ ಮುನ್ನ ನೀಡಿದ್ದ ಸಂಪೂರ್ಣ ಸಾಲ ಮನ್ನಾದ ಭರವಸೆ ಈಡೇರಿಸುತ್ತಾರೆಯೇ, ಗುರುವಾರ ನಮ್ಮ ಪಾಲಿಗೆ ಶುಭವಾಗಲಿದೆಯೇ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತಾಪಿ ವರ್ಗ ಚಾತಕಪಕ್ಷಿಯಂತೆ ಕಾಯುತ್ತಿದೆ.

ರೈತರ ಸಾಲ ಮನ್ನಾಗೆ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಒಪ್ಪಿಗೆ ನೀಡಿದೆ. ಇದು ‘ಋಣ ಮುಕ್ತ’ರಾಗುವತ್ತ ರೈತರ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಮಧ್ಯಮಾವಧಿ, ದೀರ್ಘಾವಧಿ ಹಾಗೂ ಬೆಳೆ ಸಾಲ ಸೇರಿದಂತೆ ಜಿಲ್ಲೆಯಲ್ಲಿ 3.02 ಲಕ್ಷ ರೈತರು ಒಟ್ಟು ₹ 3,947 ಕೋಟಿ ಋಣಭಾರ ಹೊಂದಿದ್ದಾರೆ. ಬಜೆಟ್‌ನಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿದರೆ ರೈತರಿಗೆ ಬಂಪರ್ ಕೊಡುಗೆ ದೊರೆಯಲಿದೆ. ಕುಮಾರಸ್ವಾಮಿ ಬೆಳೆ ಸಾಲ ಮಾತ್ರ ಮನ್ನಾ ಮಾಡುವರೇ ಅಥವಾ ಸಂಪೂರ್ಣ ಸಾಲ ಮನ್ನಾ ಆಗುವುದೇ ಎಂಬ ಕಾತರದಲ್ಲಿ ರೈತರು ಇದ್ದಾರೆ. ಕೃಷಿ ಕ್ಷೇತ್ರದ ಯಾವ ಸಾಲ ಎಷ್ಟು ಪ್ರಮಾಣದಲ್ಲಿ ಮನ್ನಾ ಮಾಡಲಾಗುವುದು ಎಂಬ ಗುಟ್ಟನ್ನು ಸರ್ಕಾರ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಎಲ್ಲರ ಚಿತ್ತ ಬಜೆಟ್‌ ಮಂಡನೆಯ ಕ್ಷಣಗಳತ್ತ ಇದೆ.

ಹಿಂದಿನ ಮೂರು ವರ್ಷ ಕಾಲ ಸತತ ಬರ ಹಾಗೂ ಬೆಳೆಗೆ ಸೂಕ್ತ ಬೆಲೆ ಸಿಗದೇ ಅನ್ನದಾತರು ಕಂಗೆಟ್ಟಿದ್ದರು. ಹಾಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಕೂಗಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರಿ ಬ್ಯಾಂಕ್‌ಗಳಲ್ಲಿನ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದರು. ಆಗ ಬಾಗಲಕೋಟೆ ಜಿಲ್ಲೆಯ 1,71,625 ಖಾತೆಗಳಲ್ಲಿನ ₹ 800 ಕೋಟಿ ಸಾಲ ಮನ್ನಾ ಆಗಿತ್ತು. ಜಿಲ್ಲೆಯಲ್ಲಿ ಡಿ.ಸಿ.ಸಿ ಬ್ಯಾಂಕ್‌ನ 45 ಶಾಖೆಗಳು ಇವೆ. 247 ಕೃಷಿ ಪತ್ತಿನ ಸಹಕಾರ ಸಂಘಗಳು (ಪಿ.ಕೆ.ಪಿ.ಎಸ್) ಇವೆ. ಒಟ್ಟು 1,72 ಲಕ್ಷ ರೈತರು ಇಲ್ಲಿ ಸಾಲ ಪಡೆದಿದ್ದಾರೆ. ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಪ್ರತೀ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ ₹ 3 ಲಕ್ಷದವರೆಗೆ ಬೆಳೆ ಸಾಲ ನೀಡಲಾಗಿದೆ.

ಇಸ್ರೇಲ್ ಮಾದರಿ ಅನುಷ್ಠಾನವಾಗಲಿ: ‘ಬಜೆಟ್‌ನಲ್ಲಿ ಕೇವಲ ಸಾಲ ಮನ್ನಾ ಮಾತ್ರ ಪ್ರಸ್ತಾಪಿಸದೇ ಕುಮಾರಸ್ವಾಮಿ ಈ ಹಿಂದೆ ಹೇಳಿದಂತೆ ಇಸ್ರೇಲ್ ಮಾದರಿಯ ಕೃಷಿ ವ್ಯವಸ್ಥೆ ಅನುಷ್ಠಾನಕ್ಕೆ ಮುಂದಾಗಲಿ. ಎಲ್ಲಾ ಜಮೀನುಗಳಿಗೆ ಹನಿ ನೀರಾವರಿ ಅಳವಡಿಕೆಯ ಜೊತೆಗೆ ಸರ್ಕಾರಿ ನೌಕರರು, ಜನಪ್ರತಿನಿಧಿಗಳ ವೇತನ, ತುಟ್ಟಿಭತ್ಯೆಯ ಮಾದರಿಯಲ್ಲಿ ಪ್ರತಿ ವರ್ಷ ಬೆಳೆಗಳಿಗೆ ಬೆಲೆ ನಿಗದಿ ವ್ಯವಸ್ಥೆ ಜಾರಿ ಮಾಡಲಿ’ ಎಂದು ಮುಧೋಳದ ಕಬ್ಬು ಬೆಳೆಗಾರರ ಮುಖಂಡ ಸುಭಾಷ್ ಶಿರಬೂರ ಹೇಳುತ್ತಾರೆ. ‘ಮಳೆ–ಬೆಳೆ ಇಲ್ಲದೇ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ’ ಎಂದು ಬಾದಾಮಿ ತಾಲ್ಲೂಕು ಆಡಗಲ್ಲದ ಪರಸಪ್ಪ ನಾಯ್ಕರ ಆಗ್ರಹಿಸುತ್ತಾರೆ.

ಜಿಲ್ಲೆಯಲ್ಲಿ ರೈತರು ಪಡೆದ ಬೆಳೆ ಸಾಲ, ಮಧ್ಯಮಾವಧಿ ಸಾಲದ ಪ್ರಮಾಣದ ಬಗ್ಗೆ ಸರ್ಕಾರ ನಮ್ಮ ಬಳಿ ಮಾಹಿತಿ ಪಡೆದಿದೆ. ಯಾವ ಮಾದರಿ ಸಾಲ ಮನ್ನಾ ಎಂಬುದು ಬಜೆಟ್ ಮಂಡನೆ ನಂತರ ಗೊತ್ತಾಗಲಿದೆ
ಎಸ್.ಎಸ್.ಮಿರ್ಜಿ, ಡಿ.ಸಿ.ಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ

ಬರೀ ಬೆಳೆ ಸಾಲ ಮನ್ನಾ ಒಪ್ಪಿಕೊಳ್ಳುವುದಿಲ್ಲ. ಸಣ್ಣವರು, ದೊಡ್ಡವರು ಎನ್ನದೇ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ಜೊತೆಗೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು
ಸುಭಾಷ್ ಶಿರಬೂರ, ಕಬ್ಬು ಬೆಳೆಗಾರರ ಮುಖಂಡ

ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲದ ವಿವರ
ಬ್ಯಾಂಕ್‌ಗಳು ಖಾತೆಗಳ ಸಂಖ್ಯೆ ಸಾಲದ ಮೊತ್ತ (₹ ಕೋಟಿಗಳಲ್ಲಿ)
ರಾಷ್ಟ್ರೀಕೃತ 68,541 1618
ಖಾಸಗಿ 21821 680
ಗ್ರಾಮೀಣ 39059 748
ಡಿ.ಸಿ.ಸಿ 1,72,733 901
ಒಟ್ಟು 3,02,154 3947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT