ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಧರಣಿ

ಎಸ್‌ಎಫ್‌ಐ ಮುಖಂಡನ ಕೊಲೆಗೆ ಖಂಡನೆ
Last Updated 4 ಜುಲೈ 2018, 15:29 IST
ಅಕ್ಷರ ಗಾತ್ರ

ಕೋಲಾರ: ಕೇರಳದಲ್ಲಿ ನಡೆದ ಎಸ್‌ಎಫ್‌ಐ ಮುಖಂಡ ಅಭಿಮನ್ಯು ಕೊಲೆ ಪ್ರಕರಣ ಖಂಡಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ನಗರದ ಕಾಲೇಜು ವೃತ್ತದಲ್ಲಿ ಬುಧವಾರ ಧರಣಿ ಮಾಡಿದರು.

‘ಅಭಿಮನ್ಯು ಕೊಲೆ ಪ್ರಕರಣದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಎಸ್‌ಡಿಪಿಐ ಸಂಘಟನೆ ಸದಸ್ಯರ ಕೈವಾಡವಿದೆ. ಕೇರಳದಲ್ಲಿ ಆರ್ಎಸ್ಎಸ್ ಮತ್ತು ಸಿಪಿಎಂ ನಡುವಿನ ರಾಜಕೀಯ ಸಂಘರ್ಷ ಹಿಂಸೆಗೆ ತಿರುಗಿದೆ. ಸಿಪಿಎಂ ಮತ್ತು ಪಿಎಫ್ಐ ಸಂಘಟನೆಗಳ ನಡುವಿನ ವೈಷಮ್ಯ ಶಿಕ್ಷಣ ಸಂಸ್ಥೆಗಳಿಗೂ ಕಾಲಿಟ್ಟಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಅಭಿಮನ್ಯು ಅವರು ಕೇರಳದ ಎರ್ನಾಕುಲಂ ಬಳಿಯ ಮಹಾರಾಜ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದರು. ಅವರು ವಿದ್ಯಾರ್ಥಿ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಇದನ್ನು ಸಹಿಸದ ಕೋಮುವಾದಿ ಸಂಘಟನೆಗಳು ಅವರನ್ನು ಹತ್ಯೆ ಮಾಡಿವೆ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವರೆಡ್ಡಿ ದೂರಿದರು.

‘ಕೇರಳದಲ್ಲಿ ಎಸ್‌ಎಫ್‌ಐ ಸಂಘಟನೆಯು ಜಾತ್ಯಾತೀತ ತತ್ವದ ಆಧಾರದಲ್ಲಿ ಪ್ರಬಲವಾಗಿದೆ. ಕೋಮುವಾದಿ ಸಂಘಟನೆಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಮುವಾದಿ ಶಕ್ತಿಗಳು ಸಂಘಟನೆಯನ್ನು ಹತ್ತಿಕ್ಕಲು ಸಂಚು ನಡೆಸಿವೆ. ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಕೋಮುವಾದಿ ಸಂಘಟನೆಗಳು ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿವೆ’ ಎಂದು ಆರೋಪಿಸಿದರು.

ಹೇಡಿಗಳಂತೆ ದಾಳಿ: ‘ಜ್ಯಾತ್ಯಾತೀತ ವಾದ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಎಸ್‌ಎಫ್‌ಐ ಸಂಘಟನೆ ಸದಸ್ಯರನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ದಾಳಿ ಮಾಡುತ್ತಿವೆ. ವೈಚಾರಿಕ ನೆಲೆಯಲ್ಲಿ ಹೋರಾಟ ನಡೆಸಲಾಗದ ಮತೀಯವಾದಿಗಳು ಅಡ್ಡದಾರಿ ಹಿಡಿದು ಹೇಡಿಗಳಂತೆ ಎಸ್‌ಎಫ್‌ಐ ಮುಖಂಡರ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಅಭಿಮನ್ಯು ಕೊಲೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣದ ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಕೇರಳ ಸರ್ಕಾರ ಎಚ್ಚರ ವಹಿಸಬೇಕು. ಎಸ್‌ಎಫ್‌ಐ ಮುಖಂಡರು ಹಾಗೂ ಸದಸ್ಯರಿಗೆ ಪೊಲೀಸ್‌ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಸದಸ್ಯರಾದ ನವೀನ್, ಸಂತೋಷ್, ರಾಕೇಶ್, ಕಿರಣ್‌ಕುಮಾರ್, ಸತೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT