ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಕೋರ್ಟ್ ನಿರ್ದೇಶನ ಪಾಲಿಸಿ

Last Updated 4 ಜುಲೈ 2018, 19:37 IST
ಅಕ್ಷರ ಗಾತ್ರ

ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮತ್ತೆ ಚಾಟಿ ಬೀಸಿದೆ. ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ನೇಮಕ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆತಾನು 2006ರಲ್ಲಿ ನೀಡಿರುವ ತೀರ್ಪನ್ನು ಪಾಲಿಸುತ್ತಿಲ್ಲ ಎಂದು ಕೋರ್ಟ್‌ ಅಸಹನೆ ವ್ಯಕ್ತಪಡಿಸಿದೆ. ಎರಡು ವರ್ಷಗಳ ಹಿಂದೆಯೂ ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌, ‘ನಮ್ಮ ಆದೇಶಗಳನ್ನು ಯಾರೂ ಆಲಿಸುತ್ತಿಲ್ಲ’ ಎಂದಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಪೊಲೀಸ್‌ ಇಲಾಖೆ ಸುಧಾರಣೆಗೆ ಸಂಬಂಧಿಸಿದಂತೆ 12 ವರ್ಷಗಳ ಹಿಂದೆ ನೀಡಿರುವ ಮಹತ್ವದ ನಿರ್ದೇಶನಗಳನ್ನುಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಈಗ ತಾಕೀತು ಮಾಡಿದೆ. ಇನ್ನು ಮುಂದೆ ಪ್ರಭಾರ ಪೊಲೀಸ್‌ ಮಹಾನಿರ್ದೇಶಕರನ್ನು ಬೇಕಾಬಿಟ್ಟಿ ನೇಮಿಸಬಾರದು. ಕೇಂದ್ರ ಲೋಕಸೇವಾ ಆಯೋಗ ಸಿದ್ಧಪಡಿಸಿದ ಪಟ್ಟಿಯಲ್ಲಿರುವ ಒಬ್ಬರನ್ನು, ಎರಡು ವರ್ಷಗಳ ಅವಧಿಗೆ ನೇಮಕ ಮಾಡಬೇಕು ಎಂದೂ ಸೂಚಿಸಿದೆ. ಇನ್ನಾದರೂ ರಾಜ್ಯಗಳು ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸದೆ ಚಾಚೂ ತಪ್ಪದೆ ಜಾರಿಗೊಳಿಸುವ ಅಗತ್ಯವಿದೆ. ಏಕೆಂದರೆ, ಪೊಲೀಸ್‌ ಇಲಾಖೆ ಸುಧಾರಣೆ ಯತ್ನಗಳು ಆರಂಭವಾಗಿ ನಾಲ್ಕು ದಶಕಗಳೇ ಕಳೆದಿವೆ. 1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷದ ಸರ್ಕಾರವು ಪೊಲೀಸ್‌ ಇಲಾಖೆ ಸುಧಾರಣೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಪೊಲೀಸ್‌ ಆಯೋಗ ಸ್ಥಾಪಿಸಿತ್ತು. ಆನಂತರ ಉತ್ತರ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಪ್ರಕಾಶಸಿಂಗ್‌ 1996ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇ
ರಿದ್ದರು.ಡಿಜಿಪಿ ಸೇರಿದಂತೆ ಮಹತ್ವದ ಹುದ್ದೆಗಳಲ್ಲಿರುವ ಪೊಲೀಸ್‌ ಅಧಿಕಾರಿಗಳಿಗೆ ನಿರ್ದಿಷ್ಟ ಅವಧಿ ಇರಬೇಕೆಂದು ಅವರು ಪ್ರತಿಪಾದಿಸಿದ್ದರು. 10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಈ ವಿಚಾರವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು.

ಕೋರ್ಟ್‌ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರಲು ಮೂರು ವರ್ಷದ ಹಿಂದೆ ಪೊಲೀಸ್‌ ಪ್ರತಿಷ್ಠಾನವೂ ಅಸ್ತಿತ್ವಕ್ಕೆ ಬಂದಿದೆ. ಆದರೂ ಪ್ರಯೋಜನವಾಗಿಲ್ಲ. ಕರ್ನಾಟಕ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಮಾತ್ರ ಕೋರ್ಟ್‌ ನಿರ್ದೇಶನಗಳನ್ನು ಭಾಗಶಃ ಪಾಲಿಸಿವೆ. ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಪೊಲೀಸರಲ್ಲಿ ವೃತ್ತಿಪರತೆ ಬೆಳೆದಾಗ ಮಾತ್ರ ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ, ಪ್ರತಿ ಸಲ ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ, ಆಯಕಟ್ಟಿನ ಸ್ಥಳಗಳಲ್ಲಿ ಇರುವವರನ್ನು ಎತ್ತಂಗಡಿ ಮಾಡಿ ತಮಗೆ ನಿಷ್ಠರಾದವರನ್ನು ನೇಮಕ ಮಾಡುವ ಪರಿಪಾಟ ಮುಂದುವರಿದಿದೆ. ಇದರಿಂದ ಪೊಲೀಸರು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಇಲ್ಲವಾಗಿದೆ. ವೃತ್ತಿಗೆ ನಿಷ್ಠರಾಗಿರಬೇಕಾದ ಅಧಿಕಾರಿಗಳು, ರಾಜಕೀಯ ನಾಯಕರಿಗೆ ನಿಷ್ಠೆ ತೋರುತ್ತಿರುವುದರಿಂದ ಖಾಕಿ ವರ್ಚಸ್ಸು ಕುಂದುತ್ತಿದೆ. ಕಾನೂನು– ವ್ಯವಸ್ಥೆ ಪಾಲಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ‍ಇಲಾಖೆಯಲ್ಲಿ ಜಾತಿ ರಾಜಕೀಯ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಗೆ ಅವಕಾಶ ಇರಬಾರದು. ಪೊಲೀಸ್ ವ್ಯವಸ್ಥೆಯಲ್ಲಿ ವೃತ್ತಿಪರತೆ ರೂಢಿಸುವುದಕ್ಕಾಗಿ ಅವೈಜ್ಞಾನಿಕ ವರ್ಗಾವಣೆ ನಿಲ್ಲಬೇಕು. ಆಡಳಿತ ಸುಧಾರಣೆಗೆ ಒತ್ತು ಕೊಡುವ ಮೂಲಕ ದಕ್ಷತೆ ಹೆಚ್ಚಿಸುವ ಕಡೆ ಗಮನ ಹರಿಸಬೇಕು. ಹೀಗಾದರೆ ಮಾತ್ರ ಪೊಲೀಸರ ಮೇಲೆ ಜನರಿಗೆ ವಿಶ್ವಾಸವೂ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT