ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ವಿಕಾಸಕ್ಕೆ ಅಧ್ಯಯನ ಪ್ರವಾಸ ಪೂರಕ

ತೆಲಂಗಾಣ ರಾಜ್ಯದಲ್ಲಿ ಕೃಷಿ ಪ್ರವಾಸ ಕೈಗೊಂಡ ಮಳ್ಳೂರು ಭಾರತಾಂಬೆ ರೈತಕೂಟದ ಮಹಿಳೆಯರ ಅನಿಸಿಕೆ
Last Updated 5 ಜುಲೈ 2018, 9:09 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಸಮಗ್ರ ಕೃಷಿ ಪದ್ಧತಿ ಬೆಳೆಗಳು, ಮಳೆ ಆಶ್ರಯದಲ್ಲಿ ಲಾಭದಾಯಕವಾಗಿ ಕಡಲೆಕಾಯಿ ಬೆಳೆಯುವ ಬಗ್ಗೆ ರೈತರ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ಬಂದಿದ್ದೇವೆ’ ಎಂದು ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ತಿಳಿಸಿದರು.

ತೆಲಂಗಾಣ ರಾಜ್ಯದ ಕಡಪ ಜಿಲ್ಲೆಯ ಅಲ್ಲಿನಾಗರಂನ ವಿವಿಧ ರೈತರ ತೋಟಗಳಿಗೆ ಭೇಟಿ ನೀಡಿ ನಾಲ್ಕು ದಿನಗಳ ಕೃಷಿ ಅಧ್ಯಯನ ಪ್ರವಾಸ ಮುಗಿಸಿ ಬಂದ ಅವರು ತಮ್ಮ ಅನುಭವ ಹಂಚಿಕೊಂಡರು. ಅಲ್ಲಿಯ ರೈತರು ಮಳೆ ಆಶ್ರಯದಲ್ಲಿ ಟಿಎಂಯು 300 ಎಂಬ ತಳಿಯ ಕಡಲೆಕಾಯಿ ಬೆಳೆದಿದ್ದಾರೆ. ಹೈದರಾಬಾದ್‌ನ ಇಕ್ರಿಸ್ಯಾಟ್‌ ಸಂಸ್ಥೆಯಿಂದ ತಂದ ಬೀಜವನ್ನು 45 ದಿನಗಳ ಹಿಂದೆ ಬಿತ್ತನೆ ಮಾಡಿದ್ದಾರೆ. ನಿರೀಕ್ಷೆಗಿಂತ ಶೇಕಡಾ 50ರಷ್ಟು ಹೆಚ್ಚು ಇಳುವರಿ ಮತ್ತು ಧಾರಣೆಯಲ್ಲೂ ಹೆಚ್ಚು ಬೆಲೆ ಪಡೆದಿದ್ದಾರೆ. ಒಳ್ಳೆಯ ಲಾಭದಾಯಕ ಮತ್ತು ಕಡಿಮೆ ನೀರಿಗೆ ಬೆಳೆಯುವ ತಳಿ ಇದಾಗಿದೆ ಎಂದು ವಿವರಿಸಿದರು.

ಸಮಗ್ರ ಕೃಷಿ ಪದ್ಧತಿ ನೋಡಿದರೆ ರೈತರು ಹೇಗೆ ಆರ್ಥಿಕವಾಗಿ ಸಬಲರಾಗಬಹುದು. ನಷ್ಟದ ಹೊರೆ ತಪ್ಪಿಸಿಕೊಳ್ಳುವ ಬಗೆ ಹೇಗೆ ಎಂಬುದು ಕುತೂಲಹಕರ. ಬಾಳೆ ಗಿಡಗಳ ನಡುವೆ ಪಪ್ಪಾಯಿ, ಶುಂಠಿ, ಸುತ್ತ ಹೆಬ್ಬೇವು ಮರ ಬೆಳೆದಿದ್ದಾರೆ. ಇದರಿಂದ ಮೇಕೆ, ಕುರಿ ಸಾಕಲು ಅನುಕೂಲವಾಗುತ್ತ. ಅದೇ ತತ್ವವನ್ನು ಇಲ್ಲಿಯೂ ಅಳವಡಿಸಿಕೊಂಡರೆ ಅವರಿಗಿಂತ ಹೆಚ್ಚು ಸದೃಢರಾಗಲು ಅವಕಾಶ ಇದೆ ಎಂಬುದನ್ನು ಪ್ರವಾಸ ತಿಳಿಸಿಕೊಟ್ಟಿತು.

ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಎಚ್‌.ಜಿ.ಗೋಪಾಲಗೌಡ ಮಾತನಾಡಿ, ‘ಸಿರಿ ರೈತರ ಕೂಟ, ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟ ಮತ್ತು ಯುವ ರೈತ ಸಮಾಜದ ಒಟ್ಟು 49 ಮಂದಿ ಕೃಷಿ ಪ್ರವಾಸ ಕೈಗೊಂಡಿದ್ದೆವು. ನಬಾರ್ಡ್‌ ಬ್ಯಾಂಕ್‌ ಮತ್ತು ಪ್ರಗತಿ ಕೃಷ್ಣ ಬ್ಯಾಂಕ್‌ ಅಧ್ಯಯನ ಪ್ರವಾಸಕ್ಕೆ ನೆರವಾಗಿದ್ದವು’ ಎಂದರು.

‘ಆಂಧ್ರದ ಕೃಷಿಕರೊಬ್ಬರು ಸ್ವಲ್ಪ ನೀರಿನಲ್ಲಿ ಕಡಿಮೆ ಕಾರ್ಮಿಕರ ಸಹಾಯದಿಂದ ಐಸ್‌ ಫ್ಯಾಕ್ಟರಿ ಮಾಡಿ ಲಾಭ ಗಳಿಸುತ್ತಿದ್ದಾರೆ. ಉಳಿದ ನೀರಿನಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ತಮಗೆ ಅನುಕೂಲವಾಗುವ ರೀತಿಯ ಆವಿಷ್ಕಾರ ಮಾಡಿಕೊಂಡು ಕೃಷಿಯಲ್ಲಿ ಪ್ರಗತಿ ಕಂಡವರನ್ನು ಭೇಟಿ ಮಾಡಿದಾಗ ವಿಭಿನ್ನ ಜ್ಞಾನದೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ’ ಎಂದು ವಿವರಿಸಿದರು.

ಕೋಲಾಟದ ಗುರು, ರೈತ ಗೋಪಾಲಸ್ವಾಮಿ ಬಿಡುವಿನ ವೇಳೆ ಗ್ರಾಮೀಣ ಕ್ರೀಡೆಗಳು, ಕೋಲಾಟ ಹೇಳಿಕೊಟ್ಟು ಗಮನ ಸೆಳೆದರು. ಮಹಿಳೆಯರು ಜನಪದ ಹಾಡು ಹಾಡಿದರು. ವಿವಿಧ ರೀತಿಯ ಚೆಕ್‌ ಡ್ಯಾಂ ವೀಕ್ಷಿಸಲಾಯಿತು. ಮಂತ್ರಾಲಯ, ಶ್ರೀಶೈಲ ಮತ್ತು ಮಹಾನಂದಿ ದೇವಸ್ಥಾನಗಳಿಗೂ ಭೇಟಿ ನೀಡಲಾಯಿತು.

ಸಿರಿ ರೈತಕೂಟದ ಎಸ್‌.ಎಂ. ನಾರಾಯಣಸ್ವಾಮಿ, ಗೊರಮಡುಗು ದ್ಯಾವೀರಪ್ಪ, ಡಿಶ್‌ ಮಂಜು, ಕೆಂಪರೆಡ್ಡಿ, ವೀರಣ್ಣ, ಜಗದೀಶ್‌, ಶ್ರೀನಿವಾಸ್‌, ಗುಡಿಹಳ್ಳಿ ಕ್ಯಾತಪ್ಪ, ರಾಜರಾಜು, ರಾಜಗೋಪಾಲ್‌, ಜಯರಾಮ್‌, ಭಾರತಾಂಬೆ ರೈತಕೂಟದ ಕಾರ್ಯದರ್ಶಿ ಮಳ್ಳೂರು ವನಿತಾ, ಸರೋಜಮ್ಮ, ಶೈಲಜಾ, ತೊಳಿಸಮ್ಮ, ಸುರೇಖಾ, ಶಾಂತಮ್ಮ, ಸಂಪಂಗಮ್ಮ, ರಾಜ್ಯ ಯುವಕ ರೈತ ಸಮಾಜದ ಕಾರ್ಯದರ್ಶಿ ರವೀಂದ್ರನಾಥಗೌಡ, ವೇಣು, ನಂಜಮರಿಯಪ್ಪ, ಮುನಿಕೃಷ್ಣಪ್ಪ, ನಾಗರಾಜು, ಹರೀಶ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT