ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಂಬೀಡದಲ್ಲಿ ಚಿಕೂನ್‌ಗುನ್ಯಾ ಹಾವಳಿ

ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕಿದ್ದ ರೈತರ ನರಳಾಟ; ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ
Last Updated 4 ಜುಲೈ 2018, 17:50 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಬಾಳಂಬೀಡ ಗ್ರಾಮದಲ್ಲಿ ಒಂದು ತಿಂಗಳಿನಿಂದಹಲವರಿಗೆ ಚಿಕೂನ್ ಗುನ್ಯಾ ಜ್ವರ ಬಾಧಿಸುತ್ತಿದ್ದು, ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಜ್ವರ ಬಾಧಿತ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಗ್ರಾಮದಲ್ಲಿ 900ಕ್ಕೂ ಹೆಚ್ಚು ಮನೆಗಳಿದ್ದು, ಈ ಪೈಕಿ 200ಕ್ಕೂ ಹೆಚ್ಚು ಮನೆಗಳಲ್ಲಿ ಜ್ವರ ಬಾಧಿತರನ್ನು ಕಾಣಬಹುದಾಗಿದೆ. ಕೆಲವು ಮನೆಗಳಲ್ಲಂತೂ ಎಲ್ಲ ಸದಸ್ಯರೂ ಹಾಸಿಗೆ ಹಿಡಿದಿದ್ದಾರೆ. ಮುಂಗಾರು ಆರಂಭಗೊಂಡಿದ್ದು, ಕೃಷಿ ಚಟುವಟಿಕೆ ಹೊಲ–ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕಾಗಿದ್ದ ರೈತರು ಕೈಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಮನೆಯಲ್ಲಿಯೇ ಉಪಚಾರ ಪಡೆಯುತ್ತಿದ್ದಾರೆ.

ದಿನೇ ದಿನೇ ಜ್ವರ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಹೀಗಾಗಿ ಜ್ವರ ಬಾಧಿತರು ಪಕ್ಕದ ಅಕ್ಕಿಆಲೂರ ಇಲ್ಲವೇ, ಹಾವೇರಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.

‘ಬರೋಬ್ಬರಿ 15 ದಿನಾ ಆತ್ರಿ ಜ್ವರಾ ಬಂದು. ಒಂದು ದಿನಾ ಮೈ ತಣ್ಣಗಾದ್ರ, ಮರುದಿನ ಮತ್ತ ಬೆಚ್ಚಗ ಅಕ್ಕತ್ರಿ. ಕೈಕಾಲು ಹಿಡಿಕೊಂಡಾವ್ರಿ. ಮೇಲೆದ್ದು ನಡ್ಯಾಕ ಬರಲಾರದಂಗ ಆಗೇತಿ ನೋಡ್ರಿ. ಇಷ್ಟ ತ್ರಾಸ ಇಟ್ಟಗೊಂಡ ಅಕ್ಕಿಆಲೂರಿಗೆ ದವಾಖಾನಿಗೆ ಹೋಗಿ ಹೆಂಗ ಬರಬೇಕು ನೀವ ಹೇಳ್ರಿ’ ಎಂದು ಗ್ರಾಮದ ಮಂಜು ಬಾರ್ಕಿ ಹೇಳಿದರು.

‘ಜ್ವರದಿಂದ ಕೈಕಾಲುಗಳು ಶಕ್ತಿ ಕಳೆದುಕೊಂಡಿದ್ದು, ನಡೆಯಲೂ ಸಾಧ್ಯವಾಗದಂಥ ಸ್ಥಿತಿ ಇದೆ. ಹೀಗಾಗಿ, ಬಸ್‌ ಬದಲಿಗೆ ವಾಹನ ಮಾಡಿಕೊಂಡೇ ಆಸ್ಪತ್ರೆಗಳಿಗೆ ತೆರಳುವಂತಾಗಿದೆ. ಜ್ವರವು ದಿನ ಬಿಟ್ಟು ಮರುದಿನ ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕವಾಗುತ್ತಿದೆ’ ಎಂದ ತಿಳಿಸಿದರು.

ಕೈ, ಕಾಲುಗಳಲ್ಲಿನ ಸಂದಿಗಳಲ್ಲಿ ತಡೆದುಕೊಳ್ಳಲಾಗದಂಥ ನೋವು ಕಾಣಿಸಿಕೊಳ್ಳುತ್ತಿದ್ದು, ಬೇಗ ಗುಣ ಆಗದೇ ಇರುವುದು ಸಂಕಷ್ಟಕ್ಕೀಡು ಮಾಡಿದೆ. ಜ್ವರ ಬಾಧಿತರು ಆಸ್ಪತ್ರೆಗಳಿಗೆ ಎಡತಾಕುವುದು ತಪ್ಪುತ್ತಿಲ್ಲ ಎಂದರು.

ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ

‘ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಬಾಳಂಬೀಡ ಗ್ರಾಮಕ್ಕೆ ಕಳುಹಿಸಿ, ಅಗತ್ಯ ವೈದ್ಯಕೀಯ ನೆರವು ನೀಡಲು ಸೂಚಿಸಲಾಗುವುದು. ನಾನೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಹಾನಗಲ್ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣನವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT