ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರಿಗೆ ಕುತ್ತು ತರುತ್ತಿರುವ ಕತ್ತೆಗಳು

ನಗರದ ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳಲ್ಲಿ ಬೇಕಾಬಿಟ್ಟಿ ಅಲೆದಾಟ, ವಿದ್ಯಾರ್ಥಿಗಳು, ಪಾದಚಾರಿಗಳ ಪರದಾಟ, ಕಡಿವಾಣಕ್ಕೆ ಆಗ್ರಹ
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಓಡಾಡುವ ಬಿಡಾಡಿ ಕತ್ತೆಗಳಿಂದ ಪಾದಚಾರಿಗಳು ಮತ್ತು ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಬಿ.ಬಿ ರಸ್ತೆ, ಎಂ.ಜಿ.ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ, ಶಿಡ್ಲಘಟ್ಟ ವೃತ್ತ, ಗಂಗಮ್ಮನ ಗುಡಿ ರಸ್ತೆ, ಭುವನೇಶ್ವರಿ ವೃತ್ತ, ಬಜಾರ್‌ ರಸ್ತೆ, ಎಪಿಎಂಸಿ ಮಾರುಕಟ್ಟೆ ಪ್ರದೇಶಗಳ ಜತೆಗೆ ವಿವಿಧ ಶಾಲಾ–ಕಾಲೇಜು ಮೈದಾನಗಳಲ್ಲಿ ತಿರುಗಾಡುವ ಕತ್ತೆಗಳು, ಅಲ್ಲಲ್ಲಿ ಗುಂಪು ಗುಂಪಾಗಿ ಠಿಕಾಣಿ ಹೂಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುತ್ತಿವೆ ಎಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಆಹಾರ ಅರಸುತ್ತ ಕತ್ತೆಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಅಲೆದಾಡುತ್ತ, ಸಂದಿಗೊಂದಿಗಳಲ್ಲಿ ಸುತ್ತಾಡಿ ಮಾರುಕಟ್ಟೆ ಪ್ರದೇಶಗಳಲ್ಲಿ ಕಂಡುಬರುವ ಅಳಿದುಳಿದ ಕಾಯಿಪಲ್ಲೆ, ಬಾಳೆ ಹಣ್ಣು, ಬಿದ್ದಿರುವ ಆಹಾರ ತಿನ್ನುತ್ತಾ ಪ್ರಮುಖ ರಸ್ತೆ, ಬಸ್ ನಿಲ್ದಾಣದ ಬಳಿ ಸುಳಿದಾಡುತ್ತ ಸವಾರರಿಗೆ ಕಂಟಕವಾಗುತ್ತಿರುವುದು ಆಂತಕ ಮೂಡಿಸಿದೆ. ಜತೆಗೆ ಶಾಲಾ–ಕಾಲೇಜು ಆವರಣಗಳಲ್ಲಿ ಆಗಾಗ ಕೇಳಿಬರುವ ಕತ್ತೆಗಳ ಕಿರುಚಾಟದಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇರುಸು ಮುರುಸು ಉಂಟು ಮಾಡಿದ ಉದಾಹರಣೆಗಳಿವೆ.

ಇತ್ತೀಚೆಗಷ್ಟೇ ನಗರದ ಬಿಬಿ ರಸ್ತೆಯಲ್ಲಿರುವ ಶನೈಶ್ವರ ದೇವಾಲದಯದ ಎದುರು ಕತ್ತೆಯೊಂದು ದಿಢೀರ್ ರಸ್ತೆಗೆ ಅಡ್ಡ ಬಂದ ಪರಿಣಾಮ ಬೈಕ್‌ ಸವಾರನೊಬ್ಬ ಆಯತಪ್ಪಿ ಬೈಕ್‌ನಿಂದ ಬಿದ್ದು ಗಾಯಗೊಂಡ. ಕತ್ತೆಗಳಿಂದ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಆದರೆ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾತ್ರ ಈವರೆಗೆ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

‘ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುವಾಗ ಕತ್ತೆಗಳನ್ನು ನೋಡಿ ಅಂಜುತ್ತಾರೆ. ಕತ್ತೆಗಳಿಂದಾಗಿ ವಯಸ್ಸಾದವರು ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದೇ ದುಸ್ತರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕತ್ತೆಗಳ ಓಡಾಟದ ಸ್ಥಳಗಳಲ್ಲಿ ಸಂಚರಿಸಲು ಬೈಕ್ ಸವಾರರು ಹೆದರುತ್ತಾರೆ.

ಕತ್ತೆಗಳು ರಸ್ತೆ ಬದಿಗಳಲ್ಲಿ ಹಾಕಿರುವ ಕಸವನ್ನೆಲ್ಲಾ ಆಹಾರಕ್ಕಾಗಿ ಕೆದಕಿ ರಸ್ತೆ ತುಂಬೆಲ್ಲಾ ಹರಡುತ್ತವೆ. ನಗರಸಭೆಯವರು ಇನ್ನಾದರೂ ಕತ್ತೆಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಬೇಕು’ ಎಂದು ಕಂದವಾರ ರಸ್ತೆಯ ನಿವಾಸಿ ಶಶಿಕುಮಾರ್‌ ಆಗ್ರಹಿಸಿದರು.

‘ನಗರದ ಬಹುತೇಕ ಮುಖ್ಯರಸ್ತೆಗಳಲ್ಲಿ ಕತ್ತೆಗಳು ಎಲ್ಲೆಂದರಲ್ಲಿ ಮಲಗಿಕೊಳ್ಳುವ ಜತೆಗೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುತ್ತವೆ. ಇದರಿಂದ ಅನೇಕ ಬಾರಿ ಸಂಚಾರ ದಟ್ಟಣೆ ಸಹ ಉಂಟಾಗುತ್ತದೆ. ಇದೊಂದು ಗಂಭೀರ ವಿಚಾರ ಎಂದು ಯಾರಿಗೂ ಅನಿಸುತ್ತಿಲ್ಲ. ನಾಳೆ ಸವಾರನೊಬ್ಬನ ಪ್ರಾಣ ಹೋದರೆ ಅದಕ್ಕೆ ಯಾರು ಹೊಣೆ? ನಗರಸಭೆಯವರು ಕತ್ತೆಗಳ ಮಾಲೀಕರಿಗೆ ಮನೆಯಲ್ಲಿ ಕಟ್ಟಿ ಹಾಕಿ ಆಹಾರ ನೀಡುವಂತೆ ಕಟ್ಟುನಿಟ್ಟಾಗಿ ಹೇಳಬೇಕು’ ಎಂದು ಬಿ.ಬಿ ರಸ್ತೆಯ ಹಣ್ಣಿನ ವ್ಯಾಪಾರಿ ರವಿಕುಮಾರ್‌ ಹೇಳಿದರು.

‘ಮೊದಲಿನಿಂದಲೂ ನಗರದ ಗಲ್ಲಿ ಗಲ್ಲಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಅವುಗಳ ಜತೆಗೆ ಕತ್ತೆಗಳು ಸೇರುತ್ತಿವೆ. ನಾಗರಿಕರು ಮಾತ್ರ ನಗರದಲ್ಲಿ ನೆಮ್ಮದಿಯಿಂದ ಬದುಕುವಂತಿಲ್ಲ. ಕತ್ತೆ ಹಾಲಿಗೆ ಬೇಡಿಕೆ ಇದೆ ಎಂದು ನಗರಗಳಲ್ಲಿ ಕತ್ತೆಗಳನ್ನು ಸಾಕುವವರು ಹೆಚ್ಚಾಗುತ್ತಿದ್ದಾರೆ. ಹಾಲು ಮಾರಿ ಲಾಭ ಪಡೆಯುವವರು ಅವುಗಳ ಪಾಲನೆಗೆ ಕೂಡ ಗಮನ ಹರಿಸಬೇಕಲ್ಲವೆ’ ಎಂದು ಕೆಳಗಿನ ತೋಟದ ನಿವಾಸಿ ಮಲ್ಲೇಶ್್ ಪ್ರಶ್ನಿಸಿದರು.

‘ನಗರಸಭೆ ಅಧಿಕಾರಿಗಳು ಕೇವಲ ನಗರಸಭೆಯಲ್ಲಿ ಕುಳಿತು ಸಂಬಳ ಎಣಿಸಿಕೊಳ್ಳುವ ಕೆಲಸಕ್ಕೆ ಸೀಮಿತರಾಗಿದ್ದಾರೆ. ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT