ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,291 ಎಕರೆ ಕಂದಾಯ ಭೂಮಿ ತೆರವಿಗೆ ಬಾಕಿ

ಕಂದಾಯ ಇಲಾಖೆ ಕಠಿಣ ನಿಲುವು ತಾಳಿದರೆ ಜಿಲ್ಲೆಯ ಸಾವಿರಾರು ರೈತರಿಗೆ ಸಂಕಷ್ಟ
Last Updated 5 ಜುಲೈ 2018, 10:20 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರು ಸಕ್ರಮ ಮಾಡಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಒಟ್ಟು 1,156 ಎಕರೆ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಜಮೀನು ಸರ್ಕಾರದ ನಿರ್ಧಾರದತ್ತ ದೃಷ್ಟಿ ನೆಟ್ಟಿದ್ದಾರೆ. ಒಂದುವೇಳೆ, ಕಂದಾಯ ಇಲಾಖೆ ಕಠಿಣ ನಿಲುವು ತಾಳಿದರೆಸಾವಿರಾರುರೈತರಿಗೆ ಸಂಕಷ್ಟವಾಗಲಿದೆ.

ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡಿದ್ದನ್ನು ಸಕ್ರಮ ಮಾಡಿಕೊಳ್ಳಲು ಈ ಹಿಂದಿನ ಸರ್ಕಾರ ಅವಕಾಶ ನೀಡಿತ್ತು. ಆದರೆ, ಅದರ ಅವಧಿ ಈಗಾಗಲೇ ಮುಗಿದ ಕಾರಣ ಜಮೀನು ತೆರವು ಮಾಡುವಂತೆ ಸ್ಪಷ್ಟವಾಗಿ ಸೂಚಿಸಿತ್ತು. ಆನಂತರವೂ ಒತ್ತುವರಿ ತೆರವು ಮಾಡದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನೇ ತೆರೆಯಲಾಗಿತ್ತು.

ಈ ನಡುವೆ ಸಕ್ರಮ ಮಾಡಿಕೊಳ್ಳಲು ಮತ್ತಷ್ಟು ಅವಧಿ ನೀಡಬೇಕು ಎಂದು ಕೆಲವು ಒತ್ತುವರಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,902 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದೆ ಎಂದು ಇಲಾಖೆಯ ವರದಿಗಳು ಹೇಳುತ್ತವೆ. 2,291 ಎಕರೆ ತೆರವು ಮಾಡಲು ಬಾಕಿಯಿದೆ.

ಈ ವರ್ಷ ಮೇ ತಿಂಗಳ ಅಂತ್ಯದವರೆಗೆ ಒಟ್ಟು 646 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. 2013ರಲ್ಲಿ 487 ಎಕರೆ ವಶಪಡಿಸಿಕೊಳ್ಳಲಾಗಿತ್ತು. ಹೀಗೆ ಒಟ್ಟು 1,134 ಎಕರೆ ಜಮೀನು ಇಲಾಖೆಯ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. 1,536 ಎಕರೆಯನ್ನು ಸಕ್ರಮಗೊಳಿಸಿ ಅತಿಕ್ರಮಣದಾರರಿಗೆ ಮಂಜೂರು ಮಾಡಲಾಗಿದೆ. 74 ಎಕರೆಯ ಮಾಲೀಕತ್ವ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಭಟ್ಕಳ, ಸಿದ್ದಾಪುರ, ಶಿರಸಿ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಕಂದಾಯ ಭೂಮಿ ಒತ್ತುವರಿಯಾಗಿದೆ. ಆದರೆ, ಒಂದು ಪ್ರಕರಣದಲ್ಲೂನ್ಯಾಯಾಲಯದಲ್ಲಿ ದೂರು ದಾಖಲಾಗಿಲ್ಲ. ಭಟ್ಕಳ 11, ಶಿರಸಿಯಲ್ಲಿ 329, ಸಿದ್ದಾಪುರದಲ್ಲಿ 30, ಯಲ್ಲಾಪುರ 20 ಎಕರೆಗಳಷ್ಟು ಒತ್ತುವರಿ ಭೂಮಿಯನ್ನು ತೆರವು ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಯಾವುದೇ ಆಕ್ಷೇಪಣೆಗಳು ವ್ಯಕ್ತವಾಗಿಲ್ಲ.

ಮನೆಗಾಗಿ ಒತ್ತುವರಿ; ಸಕ್ರಮಕ್ಕೆ ಅವಕಾಶ:ಕಂದಾಯ ಜಮೀನುಗಳಲ್ಲಿ ಮನೆ ನಿರ್ಮಾಣದ ಉದ್ದೇಶದಿಂದ ಒತ್ತುವರಿ ಮಾಡಿಕೊಂಡವರು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಈ ವರ್ಷ ಸೆಪ್ಟೆಂಬರ್‌ವರೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ಸೂಚಿಸಿದ್ದು, ಇದಕ್ಕೆ ಇನ್ನೂ ಎರಡು ತಿಂಗಳ ಅವಕಾಶವಿದೆ. ಇದಕ್ಕೆ ಜಿಲ್ಲೆಯಲ್ಲಿ ಈವರೆಗೆ ಸಲ್ಲಿಕೆಯಾದ 14,431 ಅರ್ಜಿಗಳಪೈಕಿ 7,730 ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ.

ಎಲ್ಲಿ, ಎಷ್ಟು ತೆರವು ಬಾಕಿ?
ತಾಲ್ಲೂಕು ಎಕರೆ
ಶಿರಸಿ 755
ಹಳಿಯಾಳ 594
ಮುಂಡಗೋಡ 396
ಜೊಯಿಡಾ 174
ಹೊನ್ನಾವರ; 108
ಅಂಕೋಲಾ 75
ಕಾರವಾರ 74
ಸಿದ್ದಾಪುರ 64
ಯಲ್ಲಾಪುರ 32
ಕುಮಟಾ 27
ಭಟ್ಕಳ 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT