ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾತ ವಾಸದಲ್ಲಿ ಯುವರಾಣಿ ‘ಶ್ರೀ’

Last Updated 5 ಜುಲೈ 2018, 20:29 IST
ಅಕ್ಷರ ಗಾತ್ರ

‘ಬ ದುಕು ಒಂದು ಹೋರಾಟದ ಕಥನ. ಇದರಲ್ಲಿ ಈಜಿ ದಡ ಸೇರಿದರೆ ಮಾತ್ರ ಪರಿಪೂರ್ಣತೆ ಗಳಿಸಲು ಸಾಧ್ಯ. ಬದುಕಿನ ಪಯಣದಲ್ಲಿ ಪ್ರೇಮದ ಮಾಧುರ್ಯ, ಮಮತೆ– ವಾತ್ಸಲ್ಯದಂತಹ ಭಾವನೆಗಳು ಒಂದೆಡೆಯಾದರೆ, ಕೊಲೆ, ಅತ್ಯಾಚಾರ, ಪ್ರತೀಕಾರ, ಸುಲಿಗೆಯಂತಹ ಕ್ರೌರ್ಯಗಳು ಮತ್ತೊಂದು ಮುಖ. ಈ ಘಟನಾವಳಿಗಳನ್ನೇ ಕಥೆಯ ರೂಪಕ್ಕೆ ತಂದು, ಸಿನಿಮಾ, ಧಾರಾವಾಹಿ, ನಾಟಕದಂತಹ ಮಾಧ್ಯಮಗಳ ಮುಖೇನ ಜನರನ್ನು ತಲುಪುವ ರೂಢಿಗತ ಪ್ರಯತ್ನ ಸಾಗುತ್ತಾ ಬಂದಿದೆ’ ಎಂದು ಮಾತಿಗಿಳಿದರು ಹಿರಿಯ ನಿರ್ದೇಶಕ ರಮೇಶ್ ಕೃಷ್ಣ.

ಅವರು ತಮ್ಮ ಕಿರುತೆರೆ ಪಯಣದ ಹಾದಿಯಲ್ಲಿ ನಿರ್ದೇಶನ ಮಾಡಿದ ಧಾರಾವಾಹಿಗಳ ಪಟ್ಟಿಯಲ್ಲಿ ‘ಆಸೆಗಳು ನೂರಾರು’, ‘ಅರ್ಧಸತ್ಯ’, ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಕದನ’, ‘ಲಕುಮಿ’, ‘ಚುಕ್ಕಿ’, ‘ಗೋಕುಲದಲ್ಲಿ ಸೀತೆ’, ‘ತಾಯವ್ವ’... ಹೆಸರುಗಳು ಇವೆ. ಈ ಎಲ್ಲ ಧಾರಾವಾಹಿಗಳಿಗೂ ಬದುಕಿನ ವಿವಿಧ ಮಜಲುಗಳೇ ಸ್ಫೂರ್ತಿ. ‘ಇದನ್ನು ಬಿಟ್ಟು ಮತ್ತೇನೂ ಮಾಡಲು ಸಾಧ್ಯವಿಲ್ಲ. ಧಾರಾವಾಹಿ ಎಂದರೆ ಮೂಗು ಮುರಿಯವ ಜನ ಇದನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎನ್ನುವುದೇ ಅವರಲ್ಲಿನ ಬೇಸರ.

ಈ ಸಲ ಅವರು ನಂಬಿಕೆ ಮತ್ತು ಬದುಕಿನ ತೋಳಲಾಟವನ್ನು ಹೊಸ ಪ್ರಯತ್ನ ಮತ್ತು ವಿಭಿನ್ನ ನಿರೂಪಣೆ ಮೂಲಕ ‘ಶ್ರೀ’ ಧಾರಾವಾಹಿಯಲ್ಲಿ ಕಟ್ಟಿ ಕೊಡುವ ಪ್ರಯತ್ನ ನಡೆಸಿದ್ದಾರೆ. ಅಪರೂಪದ ಕಥೆ ಹೊಂದಿರುವ ಈ ಹೊಸ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಗಂಟೆಗೆ ಪ್ರಸಾರವಾಗುತ್ತಿದೆ.

ಶ್ರೀಮಂತ ರಾಜಮನೆತನದ ಪುಟ್ಟ ಕಂದಮ್ಮ ‘ಶ್ರೀ’ ಮೂಲಾ ನಕ್ಷತ್ರದಲ್ಲಿ ಹುಟ್ಟಿದವಳೆಂಬ ‌ಕಾರಣಕ್ಕೆ ಜ್ಯೋತಿಷಿಯೊಬ್ಬರ ಕುಯುಕ್ತಿಯಿಂದಾಗಿ ಹೆತ್ತವರಿಂದ ದೂರವಾಗುವ ಸನ್ನಿವೇಶವೇ ಕಥಾ ತಿರುಳು. ಹೆತ್ತ ತಂದೆ – ತಾಯಿ ಈ ಮಗುವನ್ನು ನೋಡಿದರೆ ಅಪಶಕುನ ಎಂಬ ಕಾರಣಕ್ಕೆ ಅಗಸಗಿತ್ತಿಯೊಬ್ಬರಿಗೆ ನೀಡಲಾಗುತ್ತದೆ. ಕಣ್ಣ ಮುಂದೆಯೇ ತನ್ನ ಮಗಳಿದ್ದರೂ ಹೇಳಲಾಗದ ಸಂಕಟದಲ್ಲಿ ಸಿಲುಕುತ್ತಾರೆ ಹೆತ್ತ ತಾಯಿ.

ಅಜ್ಞಾತ ವಾಸದಲ್ಲಿ ಯುವರಾಣಿ ‘ಶ್ರೀ’ ಅಗಸರ ಮನೆಯಲ್ಲಿ ಸಾಮಾನ್ಯ ಮಗುವಿನಂತೆ ಸಾಕು ತಾಯಿಯ ಆರೈಕೆಯಲ್ಲಿ ಹೇಗೆ ಬೆಳೆಯುತ್ತಾಳೆ? ಅವಳು ತನಗೆ ಎದುರಾಗುವ ತೊಂದರೆಗಳನ್ನು ಹೇಗೆ ನಿವಾರಿಸಿಕೊಳ್ಳುತ್ತಾಳೆ? ಮುಂದೆ ಎಂದಾದರೂ ಅವಳನ್ನು ಆಕೆಯ ಹೆತ್ತವರು ಒಪ್ಪಿಕೊಳ್ಳುತ್ತಾರಾ ಅನ್ನೋದು ಕಥೆಯ ಎಳೆ.

ನಿಜ ಜೀವನದಲ್ಲಿ ಹಾಸುಹೊಕ್ಕಾಗಿರುವ ನಂಬಿಕೆ, ಆಚರಣೆ, ಸಂಪ್ರದಾಯಗಳಿಂದಾಗಿ ಉಂಟಾಗುವ ಪಲ್ಲಟಗಳು ಹಾಗೂ ಇಬ್ಬರು ತಾಯಂದಿರ ಮಮತೆಯ ಕಥೆಯೊಂದನ್ನು ಹೇಳ ಹೊರಟಿದ್ದಾರೆ ನಿರ್ದೇಶಕರು. ಮಿರಾಕಲ್ ವರ್ಕರ್ಸ್ ನಿರ್ಮಾಣದ ಈ ಧಾರಾವಾಹಿಯಲ್ಲಿ ಅನೇಕ ಹಿರಿಯ- ಕಿರಿಯ ಕಲಾವಿದರು ಇದ್ದಾರೆ.

‘ಶ್ರೀ’ ಪಾತ್ರದಲ್ಲಿ ಪುಟಾಣಿ ಗ್ರೀಷ್ಮಾ ಕಾಣಿಸಿಕೊಳ್ಳುತ್ತಿದ್ದಾಳೆ. ರಾಜಮಾತೆ ಪದ್ಮಾದೇವಿ ಪಾತ್ರದಲ್ಲಿ ಹಿರಿಯ ನಟಿ ಚಂದ್ರಕಲಾ ಮೋಹನ್ ನಟಿಸುತ್ತಿದ್ದಾರೆ. ನಟ ಸುನೀಲ್ ಪುರಾಣಿಕ್ ಅವರು ರಾಜ ಚಂದ್ರಶೇಖರ ಸಿಂಹ (ರಾಜಮಾತೆಯ ಪುತ್ರ) ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ 30 ವರ್ಷಗಳ ನಟನೆಯ ಅನುಭವದಲ್ಲಿ ಮಹಾರಾಜನಾಗಿ ಕಾಣಿಸಿಕೊಂಡ ಮೊದಲ ಪಾತ್ರ ಇದಂತೆ. ಅತ್ತೆ – ಸೊಸೆಯರ ಮಾಮೂಲಿ ಕಿತ್ತಾಟ ನೋಡಿ ರಂಜನೆ ಪಡೆಯುತ್ತಿದ್ದ ವೀಕ್ಷಕರಿಗೆ ರಾಜ ಕುಟುಂಬವೊಂದರ ಭಾವನಾತ್ಮಕ ತಾಕಲಾಟದ ಕಥೆ ಇಷ್ಟವಾಗಲಿದೆ ಎಂಬ ಭರವಸೆ ಅವರದ್ದು.

ರಾಣಿ ರೇವತಿಯಾಗಿ ನಟಿ ಜಯಶ್ರೀ ಅಭಿಯಿಸುತ್ತಿದ್ದಾರೆ. ತುಂಬಾ ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾದ ‘ಕಥೆಗಾರ’, ‘ಮಾಯಾಮೃಗ’ ಸೇರಿದಂತೆ ಇದುವರೆಗೆ 50ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಅನುಭವವುಳ್ಳವರು ಅವರು. ‘ಪ್ರೀತ್ಸೋದ್ ತಪ್ಪಾ’, ‘ವೀರ ಮದಕರಿ’, ‘ಅಣ್ಣಾ ಬಾಂಡ್’, ‘ಕನಕ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೂಡ ನಟನೆಯ ಛಾಪು ಮೂಡಿಸಿರುವ ಪ್ರತಿಭಾವಂತ ಕಲಾವಿದೆ. ಧಾರಾವಾಹಿ ನಟನೆಯಿಂದ ಕೊಂಚ ಸಮಯ ದೂರ ಉಳಿದಿದ್ದ ಇವರು ಈಗ ಮತ್ತೆ ಕಿರುತೆರೆಗಾಗಿ ಬಣ್ಣ ಹಚ್ಚಿದ್ದಾರೆ.

ಅಗಸಗಿತ್ತಿ ಪಾತ್ರದಲ್ಲಿ ಮಾನಸಾ ಜೋಷಿ, ಜ್ಯೋತಿಷಿ ಪಾತ್ರದಲ್ಲಿ ಶ್ರೀನಿವಾಸ್ ಪ್ರಭು ನಟಿಸುತ್ತಿದ್ದಾರೆ. ಮೈಸೂರಿನ ಅರಮನೆಯೊಂದರಲ್ಲಿ ಅದ್ದೂರಿಯಾಗಿ ಚಿತ್ರೀಕರಣ ನಡಯುತ್ತಿದೆ. ದೊಡ್ಡ ಬಜೆಟ್‌ನ ಧಾರಾವಾಹಿಗೆ ಅರ್ಪಣ್ ಮತ್ತು ಅಭಿಷೇಕ್ ಚವಾಣ್ ಹಣ ಹೂಡಿದ್ದಾರೆ. ಪ್ರಸನ್ನ ಅವರ ಛಾಯಾಗ್ರಹಣ ಕೈಚಳಕದಿಂದಾಗಿ ಈ ಧಾರಾವಾಹಿಯ ವೀಕ್ಷಣೆಯು ಸಿನಿಮಾ ನೋಡಿದ ಅನುಭವ ನೀಡುತ್ತದೆ. ಕಥೆ – ಚಿತ್ರಕಥೆ ಶಾಂತಿಭೂಷಣ್ ಅವರದ್ದು. ಮಹೇಶ್ ಇದಕ್ಕೆ ಸಂಭಾಷಣೆ ಬರೆಯುತ್ತಿದ್ದು, ಕೆಲ ಸಂಚಿಕೆಗಳ ನಿರ್ದೇಶನವನ್ನು ಗಣೇಶ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT