ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರತ್ ಸ್ಮಾರಕ ಲೋಕಾರ್ಪಣೆ ನಾಳೆ

ಶರತ್ ಮಡಿವಾಳ ಹತ್ಯೆಗೆ ವರ್ಷ ಪೂರೈಕೆ, ಎಲ್ಲೆಡೆ ಪೊಲೀಸ್
Last Updated 5 ಜುಲೈ 2018, 10:57 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಕಳೆದ 45 ವರ್ಷಗಳಿಂದ ಉದಯ ಲಾಂಡ್ರಿ ನಡೆಸುತ್ತಿರುವ ಪ್ರಗತಿಪರ ಕೃಷಿಕ ತನಿಯಪ್ಪ ಮಡಿವಾಳ ಇವರ ಪುತ್ರ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿ ಇದೇ 7ರಂದು ಒಂದು ವರ್ಷ ಪೂರ್ತಿಗೊಳ್ಳುತ್ತಿದೆ. ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.ಶರತ್ ಮಡಿವಾಳ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ಥಳೀಯ ಸಜಿಪಮುನ್ನೂರು ಶರತ್ ಅಭಿಮಾನಿಗಳು ಮತ್ತು ಆರ್‌ಎಸ್ಎಸ್ ಕಾರ್ಯಕರ್ತರ ತಂಡವೊಂದು ಕಳೆದ ಒಂದು ತಿಂಗಳಿನಿಂದ ಶ್ರಮವಹಿಸಿ ಆಕರ್ಷಕ ಸ್ಮಾರಕ ನಿರ್ಮಿಸುತ್ತಿದ್ದಾರೆ.

ಹತ್ಯೆಗೆ ಕಾರಣ ಗೊತ್ತಾಗಿಲ್ಲ: ‘ಎಲ್ಲರ ಪ್ರೀತಿಯ ಒತ್ತಾಯಕ್ಕೆ ಮಣಿದು ಸ್ಮಾರಕ ನಿರ್ಮಾಣಕ್ಕೆ ನಾನು ಸಹಮತ ವ್ಯಕ್ತಪಡಿಸಿದ್ದೇನೆ. ಒಬ್ಬನೇ ಮಗನನ್ನು ಕಳೆದುಕೊಂಡು ಒಂದು ವರ್ಷ ಕಳೆದರೂ ಎಲ್ಲರೊಂದಿಗೂ ಜಾತಿ-ಧರ್ಮಗಳ ಬೇಧವಿಲ್ಲದೆ ಬೆರೆಯುತ್ತಿದ್ದ ಅವನ ನೆನಪು ಕಾಡುತ್ತಿದೆ. ಆದರೆ ಹತ್ಯೆಗೆ ನೈಜ ಕಾರಣ ಏನು...? ಎಂಬುದನ್ನು ತಿಳಿಯುವಲ್ಲಿ ಮಾತ್ರ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಂತೂ ಸತ್ಯ’ ಎಂದು ಮೃತರ ತಂದೆ ತನಿಯಪ್ಪ ಮಡಿವಾಳ ಖೇದ ವ್ಯಕ್ತಪಡಿಸಿದ್ದಾರೆ.

ಈ ಸ್ಮಾರಕದ ಸುತ್ತಲೂ ಗ್ರಾನೈಟ್ ಮೂಲಕ ಆವರಣಗೋಡೆ ನಿರ್ಮಿಸಲಾಗುತ್ತಿದ್ದು, ಆಕರ್ಷಕ ಚಾವಣಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ಭಾರತ ಮಾತೆ ಮತ್ತು ಶರತ್ ಮಡಿವಾಳ ಅವರ ಯೋಗ ಭಂಗಿಯಲ್ಲಿರುವ ಛಾಯಾಚಿತ್ರ ಅಳವಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಯೋಗಪಟು: ಸ್ವತಃ ಯೋಗಪಟುವಾಗಿದ್ದ ಶರತ್ ಮಡಿವಾಳ ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ಥಳೀಯ ನಂದಾವರ ದೇವಸ್ಥಾನ ವಠಾರದಲ್ಲಿ ಸುಮಾರು 150ಕ್ಕೂ ಮಿಕ್ಕಿ ಮಂದಿ ಯುವಕರು ಮತ್ತು ಮಕ್ಕಳಿಗೆ ಯೋಗ ಶಿಕ್ಷಣ ನೀಡಿದ ಬಳಿಕ ಆರೂವರೆ ಗಂಟೆಗೆ ಮನೆಗೆ ಬಂದು ಹಟ್ಟಿಯಲ್ಲಿ ಹಾಲು ಕರೆದು ಮತ್ತೆ ಡೈರಿಗೆ ಹಾಲು ಪೂರೈಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ತಂದೆ ತನಿಯಪ್ಪ ಮಡಿವಾಳ ಅವರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡ ಕಾರಣ ಶರತ್ ದಿನವಿಡೀ ಬಿ.ಸಿ.ರೊಡಿನ ಉದಯ ಲಾಂಡ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ ವರ್ಷ ಜೂನ್ ತಿಂಗಳು ಕಲ್ಲಡ್ಕ ಮತ್ತು ಮೆಲ್ಕಾರ್ನಲ್ಲಿ ನಡೆದ ಚಾಕು ಇರಿತ ಸೇರಿದಂತೆ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಮತ್ತು ಅಮ್ಮುಂಜೆ ಎಸ್‌ಡಿಪಿಐ ವಲಯಾಧ್ಯಕ್ಷ ಆಶ್ರಫ್ ಕಲಾಯಿ ಹತ್ಯೆ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಘೋಷಿಸಲಾಗಿತ್ತು. ಜುಲೈ 4ರಂದು ರಾತ್ರಿ ಸುಮಾರು 9.20 ಗಂಟೆಗೆ ಬಿ.ಸಿ.ರೋಡಿನಲ್ಲಿ ಲಾಂಡ್ರಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದ ಶರತ್‌ನನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿತ್ತು. ಗಂಭೀರ ಗಾಯಗೊಂಡು ಲಾಂಡ್ರಿಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‌ನನ್ನು ಸ್ಥಳೀಯ ಹಣ್ಣು ವ್ಯಾಪಾರಿ ರವೂಫ್ ಸೇರಿದಂತೆ ಇಲ್ಲಿನ ಅಜ್ಜಿಬೆಟ್ಟು ಯುವಕರು ಒಟ್ಟು ಸೇರಿ ಅವರ ರಿಕ್ಷಾದಲ್ಲೇ ತುಂಬೆ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ಸಾಗಿಸಿದ ಬಳಿಕ ಆಂಬುಲೆನ್ಸ್‌ನಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಜುಲೈ6ರಂದು ರಾತ್ರಿ 8.30ಕ್ಕೆ ಅವರು ಮೃತಪಟ್ಟ ಬಗ್ಗೆ ಎಂದು ಘೋಷಿಸಲಾಗಿತ್ತು. ಜುಲೈ 7ರಂದು ಮಧ್ಯಾಹ್ನ ಬೃಹತ್ ಮೆರವಣಿಗೆಯಲ್ಲಿ ಬಿ.ಸಿ.ರೋಡಿಗೆ ಮೃತ ದೇಹ ಬರುತ್ತಿದ್ದಂತೆಯೇ ಮತ್ತೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದು ಗೊಂದಲ ವಾತಾವರಣ ಉಂಟಾಗಿದ್ದು, ಅಂದು ಸಂಜೆ ಮನೆ ಸಮೀಪದ ಜಾಗದಲ್ಲಿ ಮೃತರ ಅಂತ್ಯಕ್ರಿಯೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT