ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನಿಯರ ಹಾಡನ್ನು ಕೇಳುವುದಲ್ಲ, ನೋಡಬೇಕು!

ದಧಿಗಿಣತೋ
Last Updated 9 ಜುಲೈ 2018, 9:58 IST
ಅಕ್ಷರ ಗಾತ್ರ

1985-98ರ ಕಾಲಘಟ್ಟ. ಯಕ್ಷಗಾನ ಭಾಗವತ ದಾಸರಬೈಲು ಚನಿಯ ನಾಯ್ಕರಿಗೆ ಉಚ್ಛ್ರಾಯದ ತಾರಾಮೌಲ್ಯ. ಅತ್ತ ಸುಳ್ಯದಿಂದ ಮಡಿಕೇರಿ; ಇತ್ತ ಪುತ್ತೂರು, ಕಾಸರಗೋಡು ಪ್ರದೇಶಗಳ ಬಯಲಾಟಗಳಲ್ಲಿ ನಾಯ್ಕರದ್ದೇ ಭಾಗವತಿಕೆ. ಇವರ ಉಪಸ್ಥಿತಿಯೇ ಕಾರ್ಯಕ್ರಮಕ್ಕೊಂದು ಕಳೆ. ಭಾಗವತಿಕೆಯಲ್ಲಿ ಅವರಷ್ಟು ಎತ್ತರಕ್ಕೆ ಏರಿದವರು ಕಡಿಮೆ ಎನ್ನುವುದಕ್ಕಿಂತ, ಗಳಿಸಿದ ತಾರಾಮೌಲ್ಯವನ್ನು ಉಳಿಸಿದ ಸಜ್ಜನ. ಹಾಗಾಗಿ ಅವರು ದೂರವಾಗಿ ಕಾಲು ಶತಮಾನದ ಹತ್ತಿರವಾದರೂ ಒಡನಾಡಿಗಳ ಮನದಲ್ಲಿ ನೆನಪುಗಳ ತೇವ ಆರಿಲ್ಲ. ನಾಯ್ಕರನ್ನು ನೆನಪು ಮಾಡಿಕೊಳ್ಳುವುದು ನೆನಪುಗಳಿಗೆ ಖುಷಿ!

ಆರ್ಥಿಕವಾಗಿ ಶ್ರೀಮಂತರಲ್ಲ. ವ್ಯಾಪಕ ಅವಕಾಶಗಳ ಅಲಭ್ಯತೆಗೆ ಇದೂ ಕಾರಣ. ಗುಂಪುಗಾರಿಕೆಗಳು, ವ್ಯಕ್ತಿಕೇಂದ್ರಿತ ಸಂಘಟನೆಗಳು, ಆಪ್ತವಲಯದೊಳಗಿನ ತಂಡ ನಿರ್ಮಾಣಗಳು ಈಗಿನಷ್ಟು ಎದ್ದು ಕಾಣಿಸಿಕೊಳ್ಳುವ, ಸದ್ದು ಮಾಡುವ ಕಾಲ ಅದಾಗಿರಲಿಲ್ಲ. ಈ ಜಾಲದೊಲಗೆ ಸಿಕ್ಕಿ ಹಾಕಿಕೊಳ್ಳದ ಚನಿಯರ ಕಾರ್ಯಕ್ಷೇತ್ರ ಕಿರಿದು. ಆದರೆ ರಂಗದಲ್ಲಿ ಊರಿದ ಹೆಜ್ಜೆ ದೊಡ್ಡದು. ಪಡೆದ ಪ್ರಾಮಾಣಿಕ ಅಭಿಮಾನಿಗಳ ಸಂಖ್ಯೆ ಅಗಣಿತ. ಹೊಗಳಿಕೆಗೆ ನಿರ್ಲಿಪ್ತ. ಸಹಜ ಮಾತುಕತೆಗಳಿಗೆ ತೆರೆದುಕೊಳ್ಳುವ ಅಪರೂಪದ ಗುಣ. ಹಗಾಗಿ ಸು-ಮನಸರಿಗೆ ಅವರು ಹತ್ತಿರ.

ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರೊಂದಿಗೆ ಅಲ್ಪ ಕಾಲದ ಮೇಳ ತಿರುಗಾಟ, ಮುಂದೆ ಬಪ್ಪನಾಡು, ಉಪ್ಪಳ, ಚೌಡೇಶ್ವರಿ.. ಹೀಗೆ ಅನ್ಯಾನ್ಯ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಮುಖ್ಯವಾಗಿ ಹವ್ಯಾಸಿ ರಂಗಕ್ಕೆ ಮಾನವನ್ನು ತಂದ ಭಾಗವತರು. ಮಾನ, ಅಪಮಾನಗಳನ್ನು ಸಹಿಸುತ್ತಾ; ನೇಪಥ್ಯದಲ್ಲಿ ಮೆರೆಯುವ ಅಕರಾಳ ವಿಕರಾಳ ವರ್ತನೆಗಳನ್ನು ಮರೆಯುತ್ತಾ ವ್ಯವಸಾಯ ಮಾಡಿದ್ದರು. ಆರ್ಥಿಕವಾಗಿ ಸಬಲರಲ್ಲದ ಚನಿಯರು ಎಂದೂ ಆರ್ಥಿಕತೆಯನ್ನು ಕೂಟ, ಆಟಗಳಿಗೆ ಥಳಕು ಹಾಕಿದವರಲ್ಲ. ಸಂಘಟಕರಿಗೆ ಕಿರುಕುಳ ನೀಡಿದವರಲ್ಲ. ವೈಯಕ್ತಿಕ ಸಮಸ್ಯೆಯನ್ನು ತೆರೆದಿಟ್ಟವರಲ್ಲ. ಅದು ಅವರ ಕಲಾ ಬದ್ಧತೆಯಾಗಿತ್ತು.

ಆಕರ್ಷಕ ಕಂಠಸಿರಿಯ ಹರವನ್ನು ‘ಪ್ರತ್ಯೇಕ ಶೈಲಿ’ ಎನ್ನುವುದಕ್ಕಿಂತ ‘ಮಟ್ಟು’ ಎಂದರೆ ಅಧಿಕವಾಗಲಾರದೇನೋ. ಆ ಹಾಡಿನಲ್ಲಿ ಯಕ್ಷಗಾನವಿತ್ತು. ಸಾಹಿತ್ಯದಲ್ಲಿ ಸ್ಪಷ್ಟತೆಯಿತ್ತು. ಅದನ್ನು ವಿರೂಪಗೊಳಿಸದ ಎಚ್ಚರವಿತ್ತು. ಪ್ರಸಂಗ ಓಟದಲ್ಲಿ ಸ್ವಾನುಭವಗಳ ಥಳುಕಿತ್ತು. ರಂಗ ಕಾಲಗಳ ಪರಿಜ್ಞಾನಗಳು, ಅದಕ್ಕೆ ಸರಿಯಾಗಿ ಸಾಗುವ ಪ್ರಸಂಗದ ವೇಗ, ಕಲಾವಿದನಿಗೆ ಅರಿಯದಂತೆ ಪಾತ್ರಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಜಾಣ್ಮೆಗಳು. ವರ್ತಮಾನದಲ್ಲಿ ನಾವೆಲ್ಲಾ ‘ಅಕಾಡೆಮಿಕ್’ ಪದವನ್ನು ಬಳಸುತ್ತೇವಲ್ಲಾ, ಅಂತಹ ಜ್ಞಾನವು ಅಂದೇ ಮಿಳಿತವಾಗಿತ್ತು. ಕವಿಯ ಸಾಹಿತ್ಯ ಭಾವಕ್ಕೆ ಹೊಂದಿಸುವ ರಾಗಗಳು ಉಂಟುಮಾಡುವ ಪರಿಣಾಮಗಳ ಅರಿವಿತ್ತು. ಹಾಡಿನ ಭಾವಗಳು, ರಸ, ಲಯಗಳು ಕಣ್ಣೆದುರು ನಿಂತಂತೆ ಭಾಸವಾಗುತ್ತಿತ್ತು. ಆ ಮೋಹಕತೆಗೆ ರಸಗಳೂ ಬೆರಗಾಗುತ್ತಿದ್ದುವು! ಅದು ಕೇಳುಗನೊಳಗೆ ಉಂಟು ಮಾಡುವ ಭಾವ-ಉದ್ದೀಪನಗಳಿಗೆ ಸಾಕ್ಷಿಯಾದವರು ಅದಷ್ಟೋ.

ಸುಮಾರು 1998ರ ಆಜೂಬಾಜು. ಚನಿಯರಿಗೆ ಸ್ವರದ ಸಮಸ್ಯೆ ಆರಂಭವಾಯಿತು. ಹಾಡಲು ಕಷ್ಟಪಡುತ್ತಿದ್ದರು. ಒದ್ದಾಡುತ್ತಿದ್ದರು. ತನ್ನ ನಿಲುವಿಗೆ ಹಾಡು ನಿಲುಕದೇ ಇದ್ದಾಗ ವಿಷಣ್ಣರಾಗುತ್ತಿದ್ದರು. ಆಪ್ತರಲ್ಲಿ ನೋವನ್ನು ಹಂಚಿಕೊಳ್ಳುತ್ತಿದ್ದರು. ಗಂಟಲು ಕೈಕೊಡುತ್ತಾ ಹೋದಂತೆ ನಾದ ಸೌಂದರ್ಯಗಳ ಅಂದ ಮಸುಕಾಗುತ್ತಾ ಬಂದುವು. ಅವರಿಗೇ ಸ್ವತಃ ಅನುಭವವಾಗುತ್ತಾ ಬಂದಂತೆ ಮಾನಸಿವಾಗಿ ಕುಗ್ಗಿದ್ದರು. ಪೆರಾಜೆ ಸುತ್ತಮುತ್ತ ಆಟಗಳಿದ್ದರೆ ನಮ್ಮ ಮನೆಯಲ್ಲೇ ವಸತಿ. ನಮ್ಮ ಮನೆ ಹೇಗೆ ಆಪ್ತವೋ, ಅಡೂರು ಶ್ರೀಧರ ರಾವ್ (ದಿ.) ಅವರೂ ಆಪ್ತರು. ವೈಯಕ್ತಿಕವಾದ ಸುಖ-ದುಃಖವನ್ನು ಹಂಚುವ ತಾಣಗಳಿವು.

ಧ್ವನಿಸುರುಳಿಗಳ ಲೋಕ ತುಂಬಾ ಜನಖ್ಯಾತಿ ಪಡೆದಿತ್ತು. ಯಕ್ಷಗಾನದ ಧ್ವನಿಸುರುಳಿಗಳಾದರಂತೂ ಸಮಾರಂಭಗಳಲ್ಲಿ ಸುಗ್ಗಿ! ಆಕಾಶವಾಣಿಯೂ ಸಶಕ್ತ ಮಾಧ್ಯಮ. ಚನಿಯರ ಹಾಡಿನ ದಾಖಲಾತಿಗಾಗಿಯೇ ಆಕಾಶವಾಣಿ ತಂಡವನ್ನು ರೂಪಿಸಲಾಗಿತ್ತು. ಮೂರು ಕಾರ್ಯಕ್ರಮಗಳಾಗಿರಬಹುದು. ಸಿಕ್ಕಿದ ಸಂಭಾವನೆಯಲ್ಲಿ ವಾಹನ ಖರ್ಚು, ಊಟದ ವೆಚ್ಚ ಹೊರತುಪಡಿಸಿ ಮಿಕ್ಕಿದ್ದು ಚನಿಯರಿಗೆ ನೀಡುತ್ತಿದ್ದೆವು. ಇದು ಅವರಿಗೆ ಇಷ್ಟವಾಗದೆ ಮುಜುಗರ ಪಟ್ಟಿದ್ದರು. ಒಮ್ಮೆ ಹೆಚ್ಚುವರಿ ಸಂಭಾವನೆಯ ನೆಪವೊಡ್ಡಿದ ಓರ್ವ ಕಲಾವಿದರ ಗೊಣಗಾಟವು ಚನಿಯರ ಕಿವಿಗೂ ಬಿದ್ದು ನೊಂದಿದ್ದರು. “ನನಗಾಗಿ ನೀವೆಲ್ಲಾ ಅಪವಾದಗಳನ್ನು ಹೊರುವುದು ಯಾಕೆ? ತಂಡವನ್ನು ನಿಲ್ಲಿಸಿಬಿಡೋಣ” ಅಂದಿದ್ದರು. ಚನಿಯರು ‘ಬೇಡ, ಬೇಕು’ ಅಂದರೆ ಅದೇ ಅಂತಿಮ. ಇನ್ನೇನು ಮಾಡೋಣ? ಧ್ವನಿಸುರುಳಿ ತಯಾರಿಸಿದರೆ ಹೇಗೆ? ಸ್ವತಃ ನನಗೆ ಬೇಕಾದ ಅಡಿಗಟ್ಟನ್ನು ರೂಪಿಸುವಷ್ಟು ಸಶಕ್ತನಲ್ಲ. ‘ಇರುವೆಗೆ ಬೆಟ್ಟದ ಕೆಲಸ ಯಾಕೆ?’ ಎಂದು ಮನಸ್ಸು ಚುಚ್ಚುತ್ತಿತ್ತು.

ಮರ್ಕಂಜದಲ್ಲಿ ನಾಯ್ಕರ ಆಪ್ತರಾದ ಕವಿ-ಸಾಹಿತಿ ಕೃ.ಶಾ.ಮರ್ಕಂಜ, ಅರ್ಥದಾರಿ ಮನಮೋಹನ ರೈ ಮತ್ತು ಚನಿಯರ ಶಿಷ್ಯರಲ್ಲೊಬ್ಬರಾದ ದಾಮೋದರ ಮರ್ಕಂಜರಲ್ಲಿ ವಿಷಯ ಪ್ರಸ್ತಾಪಿಸಿದಾಗ ಸಂತೋಷದಿಂದ ಒಪ್ಪಿಕೊಂಡರು. ಹಣದ ಹೊಂದಾಣಿಕೆಯನ್ನು ಮಾಡಿಕೊಳ್ಳುವತ್ತ ಯೋಜನೆ ಹಾಕಿಕೊಂಡರು. ಚನಿಯರ ಆಪ್ತರ ಸಹಕಾರ, ಬೆಂಬಲ ದೊರಕಿತು. ಇಷ್ಟೆಲ್ಲಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪದ್ಯಾಣ ಜಯರಾಮ ಭಟ್, ಪೆರುವಾಯಿ ನಾರಾಯಣ ಭಟ್, ಕುಮಾರ ಸುಬ್ರಹ್ಮಣ್ಯ ವಳಕುಂಜರು ‘ಪ್ರತಿಫಲವಿಲ್ಲದೆ’ ಹಿಮ್ಮೇಳ ಸಾಥ್ ಆಗಲು ಒಪ್ಪಿದರು. ಧ್ವನಿಸುರುಳಿ ತಯಾರಿಯ ಅಂತಿಮ ಸಿದ್ಧತೆಗಳಾಗುತ್ತಿದ್ದುವು.

ಆ ಹೊತ್ತಿಗೆ ಕಾಸರಗೋಡು ಜಿಲ್ಲೆಯ ಮಲ್ಲದ ಸನಿಹದ ಚೇಕೋಡು ಕೃಷ್ಣ ಭಟ್ಟರು ಭಕ್ತಿಗೀತೆ, ಯಕ್ಷಗಾನದ ಧ್ವನಿಸುರುಳಿಗಳ ನಿರ್ಮಾಣ ಕಾಯಕದಲ್ಲಿದ್ದರು. ನಾಯ್ಕರ ಅಭಿಮಾನಿಯೂ ಕೂಡಾ. ಧ್ವನಿಮುದ್ರಣ ಕಾರ್ಯವನ್ನು ಉಚಿತವಾಗಿ ಮಾಡಿಕೊಡಲು ಒಪ್ಪಿದರು. ಹೆಚ್ಚು ಆರ್ಥಿಕ ಹೊರೆ ಬೀಳುವ ಈ ವ್ಯವಸ್ಥೆಯನ್ನು ಕೃಷ್ಣ ಭಟ್ಟರು ವಹಿಸಿಕೊಂಡರು. ಇತ್ತ ಚನಿಯರು ತಾನು ಹಾಡುವ ಪದ್ಯಗಳನ್ನು ಆಯ್ಕೆ ಮಾಡುವತ್ತ ಸಜ್ಜಾದರು. ಕೃ.ಶಾ.ಮರ್ಕಂಜರು ನಿರೂಪಣೆಯ ಹೊಣೆ ಹೊತ್ತರು. ಸುಳ್ಯದ ಬಾಲಣ್ಣ ಕಡಿಮೆ ಬಾಡಿಗೆಗೆ ಕಾರನ್ನೂ ಒದಗಿಸಿದರು. ಶುಭ ಮುಹೂರ್ತದಂದು ಮಂಗಳೂರಿನಲ್ಲಿ ಧ್ವನಿಮುದ್ರಣವಾಯಿತು. ಅಷ್ಟರಲ್ಲೇ ಗಂಟಲಿನ ನೋವು ಅವರ ಮೋಹಕ ಸ್ವರವನ್ನು ಆಪೋಶನ ಮಾಡಿತ್ತು. ಕಷ್ಟಪಟ್ಟು, ಇಷ್ಟಪಟ್ಟು ಹಾಡಿದ್ದರು. ‘ಯಕ್ಷಕೋಗಿಲೆ’ ಎನ್ನುವ ಶೀರ್ಷಿಕೆಯಲ್ಲಿ ಸಕಾಲಕ್ಕೆ ಕ್ಯಾಸೆಟ್‍ಗಳನ್ನು ಚೇಕೋಡು ಭಟ್ಟರು ಒದಗಿಸಿದರು.

ಬಹುಶಃ ಅಂದು ಕೃಷ್ಣ ಭಟ್ಟರ ಕೊಡುಗೆ ಸಿಗದೇ ಇರುತ್ತಿದ್ದರೆ ಚನಿಯ ನಾಯ್ಕರೊಂದಿಗೇ ಅವರ ಧ್ವನಿಯೂ ಕಳೆದುಹೋಗುತ್ತಿತ್ತು. ಚೇಕೋಡು ಸ್ವತಃ ಕಲಾವಿದ ಮತ್ತು ಚನಿಯರ ಅಭಿಮಾನಿಯೂ ಆಗಿದ್ದರಿಂದ ಧ್ವನಿಮುದ್ರಣ ಕೆಲಸಗಳಿಗೆ ಹೆಗಲು ನೀಡಿದ್ದರು. ಹೆಚ್ಚು ಬೀಳಬಹುದಾದ ಆರ್ಥಿಕ ಹೊರೆಯನ್ನು ಹಗುರ ಮಾಡಿದ್ದರು. ತನ್ನ ಇತರ ಧ್ವನಿಮುದ್ರಣ ಕಾರ್ಯದೊಂದಿಗೆ ಇದನ್ನೂ ಜೋಡಿಸಿಕೊಂಡು ಅವರಿಗೂ ಹೊರೆಯಾಗದಂತೆ ನೋಡಿಕೊಂಡರು. ಬಹಳ ಜಾಣ್ಮೆಯಿಂದ ನಿಭಾಯಿಸಿದ ಅವರ ನಿಲುವಿಗೆ ಎಷ್ಟು ಋಣಿಯಾದರೂ ಕಡಿಮೆ.

ಸರಿ, ಕಾಕತಾಳಿಯವೋ ಎಂಬಂತೆ ಧ್ವನಿಸುರುಳಿ ತಯಾರಿ ಹಂತದಲ್ಲಿರುವಾಗಲೇ ಚನಿಯರ ಶಿಷ್ಯ ಮರ್ಕಂಜ ದಾಮೋದರ ಪಾಟಾಳಿಯವರಿಗೆ ಕಟೀಲು ಮೇಳದ ಸೇವೆಯಾಟದ ಭಾಗ್ಯ ಒಲಿದಿತ್ತು. ಅಂದು ಧ್ವನಿಸುರುಳಿಯನ್ನು ಹಿರಿಯರಾದ ಬಲಿಪ ನಾರಾಯಣ ಭಾಗವತರು ಬಿಡುಗಡೆಗೊಳಿಸುವ ಆಮಂತ್ರಣ ಅಚ್ಚು ಮಾಡಿದರು. ಊರಿನ ಸಜ್ಜನರು ತನ್ನೂರಿನ ಕಲಾವಿದನಿಗೆ ಗೌರವ ನೀಡಿದ ಪರಿ ಅನ್ಯಾದೃಶ. ಕಿಕ್ಕಿರಿದ ಪ್ರೇಕ್ಷಕ ಸಂದೋಹದ ಮಧ್ಯೆ ‘ಯಕ್ಷಕೋಗಿಲೆ’ ಅನಾವರಣಗೊಂಡಿತು. ಆ ಧ್ವನಿಯನ್ನು ಧ್ವನಿವರ್ಧಕದ ಮೂಲಕ ಮೊಳಗಿಸಿದಾಗ ಕಲಾಭಿಮಾನಿಗಳು ಹರ್ಷೋದ್ಘಾರ ಮಾಡಿದ ಆ ಕ್ಷಣ ಇದೆಯಲ್ಲಾ. ಅವರ್ಣನೀಯ. ನಾಯ್ಕರ ಕಣ್ಣಲ್ಲಿ ಆನಂದ ಭಾಷ್ಟ. ಆ ಕಣ್ಣೀರ ಬಿಂದುವಿನೊಳಗೆ ಆನಂದ ಹರ್ಷ ಪಡುತ್ತಿತ್ತು. ಜತೆಗೆ ವಿಷಾದವು ಮಿಂದೇಳುತ್ತಿತ್ತು!

ಚನಿಯ ನಾಯ್ಕರಿಗೆ ಅಂದು ಸಂಮಾನವೂ ನಡೆದಿತ್ತು. ಅದೇ ಸಂದರ್ಭದಲ್ಲಿ ಒಂದು ಅಚಾನಕ್ಕಾದ ವಿದ್ಯಮಾನ ಘಟಿಸಿತು. ಚನಿಯರಿಗೆ ಹಿರಿಯರಿಂದಲೇ ಹರಿದುಬಂದು ತಾನು ಬಳಸುತ್ತಿದ್ದ ಜಾಗಟೆ ಕೋಲನ್ನು ಬಲಿಪರಿಗೆ ಪ್ರದಾನಿಸಿ ಆಶೀರ್ವಾದ ಬೇಡಿದ್ದರು! ಒಂದು ಕ್ಷಣ ಬಲಿಪರೂ ಗೊಂದಲಕ್ಕೊಳಗಾದರು. ವೇದಿಕೆಯಿಂದ ನಾಯ್ಕರು ನೇಪಥ್ಯಕ್ಕೆ ಮರಳುವಾಗ ಕಣ್ಣೀರು ತೊಟ್ಟಿಕ್ಕುತ್ತಿತ್ತು. ತಾನಿನ್ನು ವೇದಿಕೆಯಲ್ಲಿ ಕಾಣಿಸಿಕೊಳ್ಳಲಾರೆ, ಹಾಡಲಾರೆ ಎಂಬ ನಿರ್ಧಾರವು ಕಣ್ಣೀರಿನ ರೂಪದಲ್ಲಿ ಕಪೋಲವನ್ನು ತೋಯಿಸಿತ್ತು. ಹತ್ತಿರದಿಂದ ಬಲ್ಲವರೆಲ್ಲಾ ಕಣ್ಣೊರೆಸಿಕೊಂಡಿದ್ದರು. ನಂತರದ ದಿವಸಗಳಲ್ಲಿ ಚನಿಯ ನಾಯ್ಕರು ಮೌನದತ್ತ ಜಾರಿದ್ದರು. ಏನಿದ್ದರೂ ಕಣ್ಣೋಟದಲ್ಲೇ ಮಾತುಕತೆ.
ಯಕ್ಷಕೋಗಿಲೆ ಧ್ವನಿಸುರುಳಿ ಬಿಡುಗಡೆ ಬಳಿಕ ಸ್ವಲ್ಪಕಾಲ ಬದುಕಿದ್ದರು. 1999 ಆಗಸ್ಟ್ 7ರಂದು ದಾಸರಬೈಲು ಚನಿಯ ನಾಯ್ಕರು ದೂರವಾದರು. ಯಕ್ಷಬಾಂದಳದ ಮೋಹದ ಧ್ವನಿಯೊಂದು ನಿಸರ್ಗದಲ್ಲಿ ಲೀನವಾಯಿತು. ಹಾಡೊಂದು ಕೇಳುಗನನ್ನಲ್ಲದೆ ನೋಡುಗನನ್ನೂ ಸೃಷ್ಟಿ ಮಾಡಿತ್ತು. ಮರೆವಿನ ಲೋಕವು ನಾಯ್ಕರನ್ನು ಮರೆತುಬಿಟ್ಟಿತು! ಅವರ ನೆನಪಿಗೆ ಈಗ ಉಳಿದಿರುವುದು ಆ ಧ್ವನಿಸುರುಳಿ ಮತ್ತು ‘ಯಕ್ಷಕೋಗಿಲೆ’ ಎನ್ನುವ ನೆನಪಿನ ಹೊತ್ತಗೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT