ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಗೆ ಬರಲಿದೆ ಪ್ರವಾಸೋದ್ಯಮ ವಿ.ವಿ.

ಬಜೆಟ್‌ನಲ್ಲಿ ₨3 ಕೋಟಿ ಅನುದಾನ ಮೀಸಲಿರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
Last Updated 5 ಜುಲೈ 2018, 14:36 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ವಿಶ್ವವಿಖ್ಯಾತ ಹಂಪಿಗೆ ಮತ್ತೊಂದು ಗರಿ ಮೂಡಲಿದೆ. ರಾಜ್ಯ ಸರ್ಕಾರವು ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ನಿರ್ಮಿಸಲು ತೀರ್ಮಾನಿಸಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇದನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ. ಜತೆಗೆ ವಿಶ್ವವಿದ್ಯಾಲಯವನ್ನು ಕಟ್ಟಲು ಮೊದಲ ಹಂತದಲ್ಲಿ ₨3 ಕೋಟಿ ಅನುದಾನ ಮೀಸಲು ಇಟ್ಟಿದ್ದಾರೆ.

ಹಂಪಿ ವಿಶ್ವ ಪಾರಂಪರಿಕ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇಲ್ಲಿಗೆ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಪ್ರವಾಸಿಗರು ಬಂದು ಹೋಗುತ್ತಾರೆ. ಹಂಪಿ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಐಷಾರಾಮಿ ಹೋಟೆಲ್‌, ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಹೆಚ್ಚೆಚ್ಚೂ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇಂಥಹ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆಂದೇ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಕೆಲವರು ಸ್ವಾಗತಿಸಿದರೆ, ಮತ್ತೆ ಕೆಲವರು ಇನ್ನೊಂದು ‘ಬಿಳಿ ಆನೆ’ ಸಾಕುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ರಾಜ್ಯ ಸರ್ಕಾರದ ಈ ಆಲೋಚನೆ ಅತ್ಯಂತ ಸ್ವಾಗತಾರ್ಹವಾಗಿದೆ. ಹಂಪಿಯಲ್ಲಿ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಜತೆಗೆ ತುಂಗಭದ್ರಾ ನದಿ, ಗದ್ದೆಗಳಿಂದ ಕೂಡಿರುವ ಸಮೃದ್ಧ ಪ್ರದೇಶವಾಗಿದೆ. ಪ್ರಸ್ತುತ ಪರಿಸರ ಪ್ರವಾಸೋದ್ಯಮಕ್ಕೆ ಬಹಳ ಬೇಡಿಕೆ ಇದೆ. ಅದಕ್ಕೆ ಹೇಳಿ ಮಾಡಿಸಿದ ಸ್ಥಳ ಹಂಪಿ. ಇಂಥಹ ಸ್ಥಳದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಪ್ರವಾಸೋದ್ಯಮವನ್ನು ಒಂದು ವ್ಯವಸ್ಥಿತವಾದ ಉದ್ಯಮವಾಗಿ ಬೆಳೆಸಬಹುದು ಎನ್ನುತ್ತಾರೆ’ ಜನಸಂಗ್ರಾಮ ಪರಿಷತ್ತಿನ ಶಿವಕುಮಾರ ಮಾಳಗಿ.

‘ಕಮಲಾಪುರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 228 ಎಕರೆ ಜಮೀನು ಇದೆ. ಅದಕ್ಕೆ ಪ್ರತ್ಯೇಕವಾಗಿ ಭೂಸ್ವಾಧೀನದ ಅವಶ್ಯಕತೆ ಇಲ್ಲ. ಸಮೀಪದಲ್ಲೇ ಕನ್ನಡ ವಿ.ವಿ. ಇರುವುದರಿಂದ ಅದರ ಜತೆ ಅನುಸಂಧಾನ ಮಾಡಿಕೊಂಡು ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬಹುದು’ ಎಂದರು.

‘ಹಂಪಿ ಸುತ್ತಮುತ್ತಲಿನ ಸ್ಥಳದಲ್ಲಿ ಪ್ರವಾಸಿಗರು ಬಂದು ಹೋಗುವ ಅನೇಕ ಸ್ಥಳಗಳಿವೆ. ದರೋಜಿ ಕರಡಿಧಾಮ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ನೀರು ನಾಯಿ ಸಂರಕ್ಷಿತ ಪ್ರದೇಶ ಪ್ರಮುಖವಾದವುಗಳು. ಇದನ್ನೆಲ್ಲ ನೋಡಿದರೆ ರಾಜ್ಯ ಸರ್ಕಾರ ಬಹಳ ಯೋಚಿಸಿದ ನಂತರವೇ ಈ ತೀರ್ಮಾನಕ್ಕೆ ಬಂದಿರಬಹುದು’ ಎಂದು ಹೇಳಿದರು.

‘ಇಡೀ ಜಗತ್ತಿನಲ್ಲಿ ಎಲ್ಲೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರತ್ಯೇಕ ವಿ.ವಿ. ಇಲ್ಲ. ನಮ್ಮ ರಾಜ್ಯದಲ್ಲೂ ಅಗತ್ಯವಿರಲಿಲ್ಲ. ಈಗಾಗಲೇ ಪ್ರತಿ ಜಿಲ್ಲೆಗೊಂದರಂತೆ ನಾಯಿಕೊಡೆಗಳಂತೆ ವಿ.ವಿ.ಗಳಾಗಿವೆ. ಇರುವ ವಿ.ವಿ.ಗಳನ್ನೇ ಸರಿಯಾಗಿ ನಡೆಸಲು ಆಗುತ್ತಿಲ್ಲ. ಅನೇಕ ಕಡೆ ಉಪನ್ಯಾಸಕರೇ ಇಲ್ಲ. ಮೂಲಸೌಕರ್ಯ ಇಲ್ಲ. ಮತ್ತೊಂದು ‘ಬಿಳಿ ಆನೆ’ ಸಾಕುವ ಅಗತ್ಯ ಇರಲಿಲ್ಲ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸರ್ಕಾರಿ ಪಿಯು ಕಾಲೇಜಿನ ಪ್ರಾಧ್ಯಾಪಕರು.

‘ಹಂಪಿ ಸಮೀಪ ಕನ್ನಡ ವಿಶ್ವವಿದ್ಯಾಲಯ ಇದೆ. ಅಲ್ಲೇ ಒಂದು ಹೊಸ ವಿಭಾಗ ತೆಗೆದರೆ ಆಗಿ ಬಿಡುತ್ತಿತ್ತು. ವಿ.ವಿ.ಗಾಗಿ ಭೂಸ್ವಾಧೀನ, ಹೆಚ್ಚಿನ ಹಣ, ಹೊಸ ಸಿಬ್ಬಂದಿ ನೇಮಕ ಪ್ರತಿಕ್ರಿಯೆಯ ಅಗತ್ಯ ಬೀಳುತ್ತಿರಲಿಲ್ಲ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಎರಡು ವಿ.ವಿ.ಗಳಿವೆ. ಒಂದೊಂದು ವಿಷಯಕ್ಕೆ ಒಂದೊಂದು ವಿ.ವಿ. ಮಾಡಿದರೆ ಅವುಗಳ ನಿರ್ವಹಣೆ ಬಹಳ ಕಷ್ಟವಾಗುತ್ತದೆ. ಇಂಥಹ ನಿರ್ಧಾರಗಳಿಂದ ಅಂತಿಮವಾಗಿ ಜನಸಾಮಾನ್ಯರ ಜೇಬಿಗೆ ಹೊರೆ ಬೀಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT