ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಲಿಂಗಪ್ಪ ಹಳ್ಳಿಗೆ ಗೌರವ ಡಾಕ್ಟರೇಟ್‌

ಧಾರವಾಡ ಕೃಷಿ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವ ಜುಲೈ 7ರಂದು
Last Updated 5 ಜುಲೈ 2018, 12:15 IST
ಅಕ್ಷರ ಗಾತ್ರ

ಧಾರವಾಡ: ‘ಕೃಷಿ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವದಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದ ಸಮುದಾಯ ಆರೋಗ್ಯ ವಿಜ್ಞಾನ ಇಲಾಖೆಯ ಪ್ರಾಧ್ಯಾಪಕ ಡಾ. ಶಿವಲಿಂಗಪ್ಪ ಎಸ್‌. ಹಳ್ಳಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು’ ಎಂದು ಪ್ರಭಾರ ಕುಲಪತಿ ಡಾ. ವಿ.ಐ.ಬೆಣಗಿ ಹೇಳಿದರು.

‘ಅನಿವಾರ್ಯ ಕಾರಣಗಳಿಂದ ಡಾ. ಶಿವಲಿಂಗಪ್ಪ ಅವರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಮುಂದೆ ಅವರು ಬಂದಾಗ ರಾಜ್ಯಭವನದಲ್ಲಿ ರಾಜ್ಯಪಾಲರ ಮೂಲಕವೇ ಕೊಡಿಸಲಾಗುವುದು’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಈ ಬಾರಿ ಗೌರವ ಡಾಕ್ಟರೇಟ್‌ಗೆ ಅಣ್ಣಾ ಹಜಾರೆ, ಎ.ಐ. ನಡಕಟ್ಟಿನ, ಮುತ್ತಣ್ಣ ಪೂಜಾರ, ಡಾ. ಕೆ.ವಿ.ರಮಣ ಹಾಗೂ ಡಾ. ಶಿವಲಿಂಗಪ್ಪ ಎಸ್‌. ಹಳ್ಳಿ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ರಾಜ್ಯಪಾಲರು ನೇಮಿಸಿದ್ದ ಶೋಧನಾ ಸಮಿತಿಯು ಡಾ. ಹಳ್ಳಿ ಅವರ ಹೆಸರನ್ನು ಅಂತಿಮಗೊಳಿಸಿದೆ’ ಎಂದರು.

‘ಈ ಬಾರಿ ಘಟಕೋತ್ಸವದಲ್ಲಿ ಒಟ್ಟು 938 ಅಭ್ಯರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ 726 ವಿದ್ಯಾರ್ಥಿಗಳು ಹಾಜರಾಗಿ ಹಾಗೂ 212 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಕೃಷಿಯಲ್ಲಿ 384, ಅರಣ್ಯ ವಿಭಾಗದಲ್ಲಿ 59, ಕೃಷಿ ಮಾರುಕಟ್ಟೆಯಲ್ಲಿ 78, ಗ್ರಾಮೀಣ ಗೃಹ ವಿಜ್ಞಾನದಲ್ಲಿ 69, ಬಿ.ಟೆಕ್‌. ಆಹಾರ ತಾಂತ್ರಿಕತೆಯಲ್ಲಿ 17 ಸೇರಿದಂತೆ ಒಟ್ಟು 607 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ’ ಎಂದು ತಿಳಿಸಿದರು.

‘ಸ್ನಾತಕೋತ್ತರ ಪದವಿಯಲ್ಲಿ ಕೃಷಿ ವಿಭಾಗದಲ್ಲಿ 211, ಕೃಷಿ ವ್ಯವಹಾರ ನಿರ್ವಹಣೆಯಲ್ಲಿ 9, ಅರಣ್ಯದಲ್ಲಿ 11, ಗ್ರಾಮೀಣ ಗೃಹ ವಿಜ್ಞಾನದಲ್ಲಿ 42 ಸೇರಿದಂತೆ ಒಟ್ಟು 273 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಪಿಎಚ್‌.ಡಿ. ಪಡೆದ 58 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ’ ಎಂದು ಡಾ. ಬೆಣಗಿ ತಿಳಿಸಿದರು.

‘ಕೃಷಿ ಪದವಿಯಲ್ಲಿ 9.18 ಸಿಜಿಪಿಎ ಜತೆ ಎರಡು ಚಿನ್ನದ ಪದಕಗಳನ್ನು ಪಡೆದ ವೈದೇಹಿ ವಿ. ಪೈ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳಿಗಿಂಥ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ಜತೆಗೆ ಕೃಷಿ ವಿವಿಗೆ ಸೇರುವವರ ಸಂಖ್ಯೆಯಲ್ಲೂ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿದ್ದಾರೆ’ ಎಂದರು.

‘ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಅನಿವಾರ್ಯ ಕಾರಣಗಳಿಂದ ಘಟಿಕೋತ್ಸವಕ್ಕೆ ಬರುತ್ತಿಲ್ಲ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎಸ್‌.ಕೆ.ಪಟ್ನಾಯಕ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಹ ಕುಲಾಧಿಪತಿಯೂ ಆಗಿರುವ ಕೃಷಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯ ದೇಶದ ವಿವಿ ರ‍್ಯಾಂಕಿಂಗ್‌ನಲ್ಲಿ ರಾಷ್ಟ್ರದ 5ನೇ ಅತ್ಯುತ್ತಮ ವಿವಿ ಎಂಬ ಕೀರ್ತಿಗೆ ಭಾಜನವಾಗಿದೆ. ಕಳೆದ ಸಾಲಿನಿಂದ ಡಿಎಸ್‌ಟಿ, ಡಿಬಿಟಿ ಹಾಗೂ ಇಕ್ರಿಸ್ಯಾಟ್‌ ಎಂಬ ಪೋಸ್ಟ್ ಡಾಕ್ಟರಲ್‌ ಶಿಷ್ಯವೇತನ ಆರಂಭಿಸಲಾಗಿದೆ. ವಿದೇಶ ಅಧ್ಯಯನ ಕಾರ್ಯಕ್ರಮದಲ್ಲಿ 21 ವಿದ್ಯಾರ್ಥಿಗಳು ಕೆನೆಡಾದ ಮ್ಯಾನಿಟೋಬಾ ವಿವಿಗೆ ಭೇಟಿ ನೀಡಿದ್ದಾರೆ. ಇವರಲ್ಲಿ 10 ಪ್ರತಿಭಾವಂತ ವಿದ್ಯಾರ್ಥಿಗಳ ಖರ್ಚನ್ನು ವಿವಿ ಭರಿಸಿದೆ’ ಎಂದು ಡಾ. ಬೆಣಗಿ ವಿವರಿಸಿದರು.

‘2016–17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 572 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಮೊದಲ ಕಾಲೇಜು ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕಾಗಿ ವಿವಿ ₹2.28ಕೋಟಿ ವ್ಯಯಿಸಿದೆ. ಪ್ರಸಕ್ತ ವರ್ಷ ಒಂಭತ್ತು ಕ್ಷೇತ್ರ ಬೆಳೆಗಳ ಅಭಿವೃದ್ಧಿಗೆ ತಾಂತ್ರಿಕತೆಗಳನ್ನು ಬಿಡುಗಡೆಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಗೋಧಿ, ಗೋವಿನ ಜೋಳ, ಹೆಸರು, ಸೋಯಾ ಅವರೆ, ಕಬ್ಬು, ಬದನೆ ಮತ್ತು ಬೆಳ್ಳುಳ್ಳಿ ಬೆಳೆಗಳು ಸೇರಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT