ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ

ಹೊಳೆನರಸೀಪುರದಲ್ಲಿ ಆರಂಭಿಸಲು ಅಧಿಕಾರಿಗಳ ಸಲಹೆ
Last Updated 5 ಜುಲೈ 2018, 15:57 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಸರ್ಕಾರದ ಸೂಚನೆಯಂತೆ ಕೂಡಲೇ ಕನಿಷ್ಟ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಅಗತ್ಯವಿರುವ ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

ಭತ್ತ ಖರೀದಿ ಕೇಂದ್ರ ತೆರೆಯುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ಬಾರಿ ಹೆಚ್ಚಾಗಿ ಹಿಂಗಾರು ಋತುವಿನಲ್ಲಿ (ಬೇಸಿಗೆ ಬೆಳೆ) ಭತ್ತ ಬೆಳೆದಿದ್ದು, ಪ್ರಾರಂಭದಲ್ಲಿ ಅಲ್ಲಿ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ತೆರೆಯಲು ನಿರ್ದೇಶನ ನೀಡಿದರು.

ಮೈಸೂರು,ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಬೇಸಿಗೆ ಬೆಳೆಯಾಗಿ ಭತ್ತ ಬೆಳೆಯಲಾಗಿದೆ. ಆದರೆ ಮಾರುಕಟ್ಟೆ ದರ ಕ್ವಿಂಟಲ್‍ಗೆ ₹ 1200 ಕ್ಕೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಕುಸಿತ ತಪ್ಪಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರತಿ ಕ್ವಿಂಟಲ್‌ ಗೆ ₹ 1550 ದರದಲ್ಲಿ ಭತ್ತ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರ ತೆರೆಯುವಂತೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಬೆಳೆದ ಭತ್ತದ ಪ್ರಮಾಣ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು, ಈ ವರ್ಷ ಬೇಸಿಗೆ ಋತುವಿನಲ್ಲಿ ಹೊಳೆನರಸೀಪುರ ತಾಲ್ಲೂಕಿನಲ್ಲಿ 600 ಹೆಕ್ಟೇರ್ ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ 10 ಹೆಕ್ಟೇರ್ ಸೇರಿದಂತೆ ಒಟ್ಟಾರೆ 610 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿದೆ. ಹಾಗಾಗಿ ಹೊಳೆನರಸೀಪುರದಲ್ಲಿ ಮಾತ್ರ ಖರೀದಿ ಕೇಂದ್ರ ತೆರೆದರೆ ಸಾಕಾಗಬಹುದು ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಸೂಚನೆಯಂತೆ ನಿಯಮಾನುಸಾರ ಗ್ರೇಡಿಂಗ್ ಮಾಡಿ ಗುಣಮಟ್ಟ ದೃಢೀಕರಿಸಿ ಭತ್ತ ಖರೀದಿಸಲು ಕೃಷಿ ಇಲಾಖೆ ಅಧಿಕಾರಿಗಳು ನೆರವು ನೀಡಬೇಕು, ಬೇಡಿಕೆ ಪರಿಶೀಲಿಸಿ ಅಗತ್ಯವಿದ್ದರೆ ಖರೀದಿ ಕೇಂದ್ರ ಹೆಚ್ಚಿಸಿ ಎಂದು ಡಿ.ಸಿ ಹೇಳಿದರು.
ಸಭೆಯಲ್ಲಿ ವಿವಿಧ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT