ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಆಟಗಾರ್ತಿಗೆ ಮಣಿದ ಬೊಷಾರ್ಡ್‌!

ವಿಂಬಲ್ಡನ್: ಥಾಮಸ್ ಫ್ಯಾಬಿಯಾನೊ, ಆ್ಯಶ್ಲಿ ಬಾರ್ಟಿಗೆ ಗೆಲುವು; ವಾವ್ರಿಂಕಾಗೆ ನಿರಾಸೆ
Last Updated 5 ಜುಲೈ 2018, 20:25 IST
ಅಕ್ಷರ ಗಾತ್ರ

ಲಂಡನ್‌: ಕ್ರಿಕೆಟ್ ತೊರೆದು ಟೆನಿಸ್‌ ಕ್ಷೇತ್ರಕ್ಕೆ ಮರಳಿರುವ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅವರ ಅಮೋಘ ಆಟಕ್ಕೆ ಬೆದರಿದ ಕೆನಡಾದ ಯೂಜ್ನಿ ಬೌಷಾರ್ಡ್‌ ವಿಂಬಲ್ಡನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು.

ಗುರುವಾರ ಆಲ್‌ ಇಂಗ್ಲೆಂಡ್‌ ಅಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಆ್ಯಶ್ಲಿ ಬಾರ್ಟಿ 6–4, 7–5ರಿಂದ ಗೆದ್ದರು. 2014ರಲ್ಲಿ ಜೀವನಶ್ರೇಷ್ಠ ಐದನೇ ಕ್ರಮಾಂಕಕ್ಕೆ ಏರಿದ್ದ ಬೌಷಾರ್ಡ್‌ ನಂತರ ನಿರಂತರ ಕಳಪೆ ಆಟ ಆಡಿದ್ದರು. ಹೀಗಾಗಿ 188ನೇ ಕ್ರಮಾಂಕಕ್ಕೆ ಕುಸಿದಿದ್ದರು.

17ನೇ ಶ್ರೇಯಾಂಕದ ಆಟಗಾರ್ತಿಯ ಎದುರು ಗುರುವಾರ ಆರಂಭದಲ್ಲಿ ಉತ್ತಮ ಆಟವಾಡಿದ ಬೌಷಾರ್ಡ್‌ 5–2ರಿಂದ ಮುನ್ನಡೆದಿದ್ದರು. ಆದರೆ ನಂತರ ಸುಧಾರಿಸಿಕೊಂಡ ಆ್ಯಶ್ಲಿ ತಿರುಗೇಟು ನೀಡಿ ಗೆಲುವು ತಮ್ಮದಾಗಿಸಿಕೊಂಡರು.

2014ರಲ್ಲಿ ಟೆನಿಸ್‌ನಿಂದ ದೂರ ಉಳಿದು ವೃತ್ತಿಪರ ಕ್ರಿಕೆಟ್‌ ಆಡಲು ತೆರಳಿದ್ದ ಆ್ಯಶ್ಲಿ ಕಳೆದ ವರ್ಷ ಟೆನಿಸ್‌ಗೆ ಮರಳಿದ್ದರು.

ಥಾಮಸ್‌ ಪ್ಯಾಬಿಯಾನೊಗೆ ಮಣಿದ ವಾವ್ರಿಂಕಾ
ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾನ್ ವಾವ್ರಿಂಕಾ ಅವರು ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಥಾಮಸ್‌ ಫ್ಯಾಬಿಯಾನೊ ಅವರಿಗೆ 7–6(7), 6–3, 7–6 (6)ರಿಂದ ಮಣಿದರು.

ಹವಾಮಾನ ವೈಪರೀತ್ಯದಿಂದಾಗಿ ಬುಧವಾರ ರಾತ್ರಿ ಪಂದ್ಯವನ್ನು ಸ್ಥಗಿತಗೊಳಿಸಿ ಗುರುವಾರ ಮುಂದುವರಿಸಲಾಯಿತು. ಬುಧವಾರ ಎರಡು ಸೆಟ್‌ಗಳಿಂದ ಮುನ್ನಡೆ ಅನುಭವಿಸಿದ್ದ ಮೂರು ಗ್ರ್ಯಾನ್‌ಸ್ಲಾಂ ಟೂರ್ನಿಗಳ ವಿಜೇತ ವಾವ್ರಿಂಕಾ ಗುರುವಾರ ಅಮೋಘ ಆಟವಾಡಿ 6–5ರಿಂದ ಮುನ್ನಡೆದು ಎದುರಾಳಿಯಲ್ಲಿ ಆತಂಕ ಮೂಡಿಸಿದರು. ಆದರೆ ಟೈ ಬ್ರೇಕರ್‌ನಲ್ಲಿ ಲಭಿಸಿದ ಎರಡು ಸೆಟ್‌ ಪಾಯಿಂಟ್‌ಗಳನ್ನು ಗೆಲ್ಲಲಾಗದೆ ಮಣಿದರು.

ಮರಿನ್ ಸಿಲಿಕ್‌ಗೆ ಸೋಲು
ಅರ್ಜೆಂಟೀನಾದ ಗಿಡೊ ಪೆಲ್ಲಾ ಎದುರು 3–6, 1–6, 6–4, 7–6 (7/3), 7–5ರಿಂದ ಸೋತ ಮರಿನ್ ಸಿಲಿಕ್‌ ಟೂರ್ನಿಯಿಂದ ಹೊರಬಿದ್ದರು. ಈ ಪಂದ್ಯವನ್ನು ಕೂಡ ಬುಧವಾರ ರಾತ್ರಿ ಮುಂದೂಡಲಾಗಿತ್ತು.

ರೋಚಕ ಹೋರಾಟದಲ್ಲಿ ಬೆಲ್ಜಿಯಂನ ರೂಬೆನ್‌ ಬೆಮೆಲ್‌ಮನ್‌ ಅವರನ್ನು ಮಣಿಸಿದ ಜಾನ್ ಇಸ್ನೇರ್‌ ಮೂರನೇ ಸುತ್ತು ಪ್ರವೇಶಿಸಿದರು. ಗುರುವಾರಕ್ಕೆ ಮುಂದೂಡಲಾಗಿದ್ದ ಪಂದ್ಯದಲ್ಲಿ ಅಮೆರಿಕದ ಇಸ್ನೆರ್‌ 6–1, 6–4, 6–7 (3)ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT