ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ ಹಿಂದಿನ ಹೋರಾಟ

Last Updated 6 ಜುಲೈ 2018, 6:41 IST
ಅಕ್ಷರ ಗಾತ್ರ

ಧಾರವಾಡ: ‘ಹುಟ್ಟು ಮತ್ತು ಸಾವಿನ ನಡುವೆ ಮನುಷ್ಯ ತಾನೊಬ್ಬನೇ ಬದುಕದೆ, ಬೇರೆಯವರ ಬದುಕಿನ ಕುರಿತೂ ಒಂದಷ್ಟು ಕೆಲಸ ಮಾಡಿದರೆ ಅದು ಸಾರ್ಥಕ ಬದುಕಾಗಲಿದೆ’ ಹೀಗೆನ್ನುತ್ತಲೇ ಹಿರಿಯ ವಕೀಲ ಬಿ.ಡಿ.ಹಿರೇಮಠ ಅವರು ಹೈಕೋರ್ಟ್ ಧಾರವಾಡ ಪೀಠದ ಹೋರಾಟದ ಡೈರಿಯನ್ನು ತೆರೆದಿಟ್ಟರು.

ಅದು ನಿಜಕ್ಕೂ ಸುಧೀರ್ಘ ಹೋರಾಟ. ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ನ್ಯಾಯ ಪಡೆಯಲು ನೂರಾರು ಮೈಲಿ ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಆ ನ್ಯಾಯದಾನ ವ್ಯವಸ್ಥೆಯನ್ನೇ ತಮ್ಮತ್ತ ತರುವ ಅಛಲ ನಿರ್ಧಾರದಿಂದ ರೂಪಗೊಂಡ ಹೋರಾಟ ಸುದೀರ್ಘ ಹನ್ನೆರಡು ವರ್ಷಗಳ ಕಾಲ ನಡೆದು, ವಿವಿಧ ಸ್ವರೂಪಗಳನ್ನು ಪಡೆದು, ಅಂತಿಮವಾಗಿ ಹೋರಾಟ ಯಶಸ್ಸು ಕಂಡ ಆ ಸಾರ್ಥಕತೆಯ ಫುಳಕ ಇಂದಿಗೂ ಹಿರೇಮಠ ಅವರ ಕಣ್ಣುಗಳಲ್ಲಿದೆ.

ಹೈಕೋರ್ಟ್ ಪೀಠಕ್ಕಾಗಿ ದಿನಗಟ್ಟಲೆ ಉಪವಾಸ ನಡೆಸಿ, ತಿಂಗಳುಗಟ್ಟಲೆ ಮನೆ ಬಿಟ್ಟು, ಜೈಲು ವಾಸ ಅನುಭವಿಸಿದರೂ ಹೋರಾಟದ ಹಾದಿ ಬಿಡದ ತಾನು ಹಾಗೂ ತನ್ನೊಂದಿಗಿದ್ದ ಅನೇಕರನ್ನು ಇಂದಿಗೂ ನೆನಪಿಸುವ ಹಿರೇಮಠ ಅವರ ಹೋರಾಟ ಆರಂಭಗೊಂಡಿದ್ದೇ ಒಂದು ರೋಚಕ ಕಥೆ.

‘ಹೈಕೋರ್ಟ್ ಪೀಠ ನಾನು ಆರಂಭಿಸಿದ್ದಲ್ಲ. ನನಗಿಂತಲೂ ಎಷ್ಟೋ ಮೊದಲು ಆರಂಭಗೊಂಡ ಈ ಹೋರಾಟ ಮೃದು ಧೋರಣೆಯಿಂದಲೇ ಸಾಗಿತ್ತು. ಮನವಿಪತ್ರ ಕೊಟ್ಟು ಅದಕ್ಕೆ ಉತ್ತರಕ್ಕಾಗಿ ಕಾಯುತ್ತಾ ದಶಕಗಳೇ ಉರುಳಿಹೋಗಿದ್ದವು. ಆದರೆ ನ್ಯಾಯಕ್ಕಾಗಿ ಈ ಭಾಗದ ಜನ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರದ ಬೆಂಗಳೂರಿಗೆ ಹೋಗುವುದು ತಪ್ಪಿರಲಿಲ್ಲ. ಬಡವರ ಪಾಲಿಗಂತೂ ಅದು ಯಾತನಾಮಯ ಬದುಕಾಗಿತ್ತು. ಇದು ವಕೀಲರಿಗಾಗಿ ನಡೆದ ಹೋರಾಟವಾಗಿರಲಿಲ್ಲ. ಬದಲಿಗೆ ಇಡೀ ಉತ್ತರ ಕರ್ನಾಟಕದ ಜನರ ಹೋರಾಟವಾಗಿತ್ತು’ ಎಂದು ಅಂದಿನ ದಿನದ ಮೆಲುಕುಹಾಕಲಾರಂಭಿಸಿದರು ಬಿ.ಡಿ.ಹಿರೇಮಠ.

1962ರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಾದ ಸಂದರ್ಭದಲ್ಲೇ ಹೈಕೋರ್ಟ್‌ಪೀಠ ಸ್ಥಾಪನೆಗೆ ಬೀಜಾಂಕುರವಾಗಿತ್ತು. ಆಗಿನ ವಕೀಲರ ಸಂಘವು ಸಂಚಾರಿ ಪೀಠಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು. ಆದರೆ ಮುಂದೆ 1979ರಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ಡಿ.ಎಂ.ಚಂದ್ರಶೇಖರ್ ಅವರು ಹೈಕೋರ್ಟ್ ಪೀಠ ಸ್ಥಾಪನೆಗೆ ಅಸ್ತು ಎಂದಿದ್ದರೂ, ಅದು ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ. ನ್ಯಾಯಮೂರ್ತಿಗಳಿಗೆ ವಸತಿ ಸೌಲಭ್ಯ ಹಾಗೂ ಮೂಲಸೌಕರ್ಯದ ಬೇಡಿಕೆ ಈಡೇರಿಸಲು ಅಂದಿನ ಸರ್ಕಾರ ಅಷ್ಟೊಂದು ಉತ್ಸುಕತೆ ತೋರದ ಕಾರಣ ಅದು ನೆನೆಗುದಿಗೆ ಬಿದ್ದಿತ್ತು.

ಆ ಹೊತ್ತಿಗೆ ಅತ್ತಿಕೊಳ್ಳದಲ್ಲಿದ್ದ ಇಂಡಿಯನ್ ಪ್ಲೇವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೇ ಕಾನೂನು ಪದವಿ ಓದುತ್ತಿದ್ದ ನಾನು ಈ ಹೋರಾಟವನ್ನು ಕುತೂಹಲದಿಂದಲೇ ನೋಡುತ್ತಿದ್ದೆ. ಬಡ ಕಕ್ಷೀದಾರ, ಕಾರ್ಮಿಕರು ಇತರರಿಗೆ ಕಾನೂನು ಮನೆಬಾಗಿಲಿಗೆ ಬರುವಂತಾಗಬೇಕು ಎಂಬ ಆಲೋಚನೆ ನನ್ನಲ್ಲಿತ್ತು. 1983ರಲ್ಲಿ ವಕೀಲಿ ವೃತ್ತಿ ಆರಂಭಿಸಿದೆ. ಆ ಹೊತ್ತಿಗಾಗಲೇ ಇಡೀ ದೇಶದಲ್ಲೇ ಕರ್ನಾಟಕದಂತ ಹಲವು ರಾಜ್ಯಗಳು ಪೀಠಕ್ಕೆ ಬೇಡಿಕೆ ಸಲ್ಲಿಸಿದ್ದವು. ಆ ಹೊತ್ತಿಗೆ ನ್ಯಾಯಮೂರ್ತಿ ಜಸ್ವಂತ ಸಿಂಗ್ ಅವರ ನೇತೃತ್ವದ ಸಮಿತಿ ಎಲ್ಲಾ ರಾಜ್ಯಗಳಿಗೂ ಭೇಟಿ ಕೊಟ್ಟಿತ್ತು.

ಹಾಗೆಯೇ ಈ ಸಮಿತಿ ಕರ್ನಾಟಕಕ್ಕೂ ಬಂದು ರಾಮಕೃಷ್ಣ ಹೆಗಡೆ, ಡಿ.ಕೆ.ನಾಯ್ಕರ್‌ ಅವರ ಹೇಳಿಕೆಯನ್ನೂ ದಾಖಲಿಸಿತ್ತು. ಆದರೆ ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಿತು. ಹೀಗಾಗಿ ಕರ್ನಾಟಕವನ್ನು ಹೊರತುಪಡಿಸಿ ಈ ಸಮಿತಿ ತನ್ನ ವರದಿ ಸಲ್ಲಿಸಿತು. ಆದರೆ ವರದಿಯಲ್ಲಿ ಉಲ್ಲೇಖಿಸಿದ 21 ಅಂಶಗಳು ಮುಂದೆ ನಮ್ಮ ಹೋರಾಟಕ್ಕೆ ನೆರವಾದವು.

ಹೀಗಾಗಿ 1991ರಿಂದ ಹೋರಾಟ ನಿರಂತರವಾಗಿ ಆರಂಭಗೊಂಡಿತು. ಹೈಕೋರ್ಟ್‌ ಆರಂಭದವರೆಗೂ ಹೋರಾಟ ಮುನ್ನೆಡೆಸುವ ಸಂಕಲ್ಪವನ್ನು ಎಲ್ಲರೂ ಮಾಡಿದ್ದರು. ಎಂ.ಜಿ.ಅಗಡಿ, ಜಿ.ಎಂ.ಪಾಟೀಲ, ಲಕ್ಷ್ಮೇಶ್ವರ, ರಾಯಚೂರು, ಎಸ್.ಎ.ಪಾಟೀಲ, ಸಿ.ಬಿ.ಪಾಟೀಲ, ಐ.ಜಿ.ಹಿರೇಗೌಡರ ಹಾಗೂ ಇತರರು ಹೋರಾಟ ಉಲ್ಭಣಿಸಲು ತೀರ್ಮಾನಿಸಿದೆವು. ಆದರೆ ಹಿರಿಯ ವಕೀಲರು ಕೋರ್ಟ್ ಕಲಾಪ ಬಹಿಷ್ಕಾರ ಬೇಡ ಎಂದು ಸಲಹೆ ನೀಡಿದರು. ಮತ್ತೊಂದೆಡೆ ಯುವಪಡೆ ಎಲ್ಲದಕ್ಕೂ ಸಿದ್ಧವಾಗಿತ್ತು.

ಈ ಹೋರಾಟ ನಡೆಯುತ್ತಿರುವುದೂ ಬಡ ಕಕ್ಷಿದಾರರ ಅನುಕೂಲಕ್ಕಾಗಿಯೇ ಎಂಬುದು ನಮ್ಮ ವಾದವಾಗಿತ್ತು. ಈ ತಿಕ್ಕಾಟದ ನಡುವೆಯೇ ಹೋರಾಟ ಆರಂಭಗೊಂಡಿತು. 1996ರಲ್ಲಿ ಬಾರ್‌ ಕೌನ್ಸಿಲ್ ಅಧ್ಯಕ್ಷನಾದ ನಂತರ ಹೋರಾಟದ ಅಖಾಡಕ್ಕೆ ಇಳಿದೆ. ಬೆಂಗಳೂರು, ದೆಹಲಿವರೆಗೂ ಹೋರಾಟದ ಕಿಚ್ಚು ಹಬ್ಬಿತು. ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದೆವು. ಮುಖ್ಯ ನ್ಯಾಯಮೂರ್ತಿ ಒಪ್ಪದ ಹೊರತೂ, ಸರ್ಕಾರ ಏನೂ ಮಾಡಲಾಗದು. ನ್ಯಾಯಾಂಗ ಅನುಮತಿ ನೀಡದ ಹೊರತು ಇದೊಂದು ದೊಡ್ಡ ಶೂನ್ಯ’ ಎಂದು ಕೈಯಲ್ಲಿ ಸೊನ್ನೆ ಬರೆದು ತೋರಿಸಿದ್ದು ಇಂದಿಗೂ ನೆನಪಿದೆ ಎಂದೆನ್ನುತ್ತಾರೆ ಹಿರೇಮಠ.

ಮೂರು ಬಾರಿ ಉಪವಾಸ, ಜೈಲುವಾಸ

ಹೈಕೋರ್ಟ್‌ಗಾಗಿ ಉಗ್ರ ಹೋರಾಟ ನಡೆಸುವುದನ್ನು ನಿರ್ಧರಿಸಿದ ಮೇಲೆ 1999ರ ಮಾರ್ಚ್ 27ರಂದು ಆಮರಣ ಉಪವಾಸ ಆರಂಭಿಸಿದೆವು. ಪ್ರಕಾಶ ಉಡಿಕೇರಿ, ಪಿ.ಎಚ್.ನೀರಲಕೇರಿ, ಮೀನಾಕ್ಷಿ ಕುಲಕರ್ಣಿ ಹಾಗೂ ಶಾಂತೇಶ ಓಲೇಕಾರ ಅವರೊಂದಿಗೆ ಮೊದಲ ಬಾರಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದೆವು. ಅದು ಸುದೀರ್ಘ 19 ದಿನಗಳ ಕಾಲ ನಡೆಯಿತು. ಜತೆಗೆ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಲಾಯಿತು. ಹೋರಾಟಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ನೀಡಿದರು, ರಾಜಕಾರಣಿಗಳು ಪಕ್ಷಭೇದ ಮರೆತು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಇದರ ಫಲವಾಗಿ ನ್ಯಾ. ಬಾನ್‌ ಅವರ ನೇತೃತ್ವದಲ್ಲಿ ಐವರು ನ್ಯಾಯಮೂರ್ತಿಗಳ ಸಮಿತಿ ರಚನೆಗೊಂಡಿತು. ಆದರೆ ಫಲ ಅಷ್ಟು ಸುಲಭವಾಗಿ ಧಕ್ಕುವುದಲ್ಲ. ಉತ್ತರ ಕರ್ನಾಟಕದಲ್ಲಿ ಪೀಠದ ಅಗತ್ಯವಿಲ್ಲ ಎಂದು ಸಮಿತಿ ವರದಿ ನೀಡಿತು. ಇದು ಎಲ್ಲರನ್ನೂ ಕೆರಳಿಸಿತ್ತು. ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲೇ ಬೆಂಗಳೂರಿನಲ್ಲಿರುವ ಹೈಕೋರ್ಟ್‌ ಎದುರು 300 ಜನರು ಧರಣಿ ನಡೆಸಿದೆವು.

ಇತ್ತ ಇಡೀ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ನ್ಯಾಯಾಲಯದ ಕಲಾಪಗಳನ್ನು ವಕೀಲರು ಬಹಿಷ್ಕರಿಸಿದರು. ತಾವೂ ಒಳಗೆ ಹೋಗದೆ, ಯಾರನ್ನೂ ಒಳಗೆ ಬಿಡದೆ ಉಗ್ರಹೋರಾಟ ಆರಂಭಗೊಂಡಿತು. ಈ ಹೋರಾಟ ಪ್ರತ್ಯೇಕ ರಾಜ್ಯದ ಕೂಗಾಗಿ ಪರಿವರ್ತನೆಗೊಂಡಿತು. ಪ್ರತ್ಯೇಕ ಧ್ವಜ ಇಲ್ಲಿನ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹಾರಿತು. ಹರಿಹರದ ಕುಮಾರಪಟ್ಟಣದಲ್ಲಿ ರಾಜ್ಯದ ಗಡಿಯನ್ನೂ ಗುರುತಿಸಿ ಅಲ್ಲಿಯೂ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವ ಮೂಲಕ ಹೋರಾಟದ ತೀವ್ರತೆಯನ್ನು ರಾಜ್ಯ ಸರ್ಕಾರಕ್ಕೆ ಮುಟ್ಟಿಸಲಾಯಿತು.

ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪಾಲಿಕೆ ಯಾವುದರ ಸಭೆಯೂ ನಡೆಯಲು ಹೋರಾಟಗಾರರು ಅವಕಾಶ ನೀಡಲಿಲ್ಲ. ಯಾರೂ ಇಲ್ಲಿಗೆ ಬರುವಂತಿರಲಿಲ್ಲ. ಕರನಿರಾಕರಣೆ ಮಾಡಲಾಯಿತು. ನ್ಯಾಯಾಧೀಶರನ್ನು ಹೋರಾಟಗಾರರು ಕೋರ್ಟ್ ಆವರಣದಲ್ಲಿ ತಡೆದು ನಿಲ್ಲಿಸಿ ಕಲಾಪ ನಡೆಸದಂತೆ ಮನವಿ ಮಾಡಿಕೊಂಡರು. ಇದರಿಂದಾಗಿ ಪೊಲೀಸ್‌ ಠಾಣೆಯೊಂದಿಗೆ ಕೋರ್ಟ್ ಆವರಣದಲ್ಲೇ ಸ್ಥಾಪನೆಯಾಯಿತು.

ಮೊದಲ ಬಾರಿಗೆ 63 ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಹೀಗೆ ಬಂಧಿಸುವಾಗ ಪೊಲೀಸರು ನಮ್ಮನ್ನು ಎತ್ತಿ ಬಸ್ಸಿಗೆ ಎಸೆಯುತ್ತಿದ್ದರು. ಆಗ ತಲೆಗೆ ಪೆಟ್ಟಾಗಿತ್ತು. ಆ ಗಾಯದ ಗುರುತು ಇಂದಿಗೂ ಇದೆ. ಬಹುಷಃ ಹೋರಾಟದ ‘ನೆನಪಿನ ಕಾಣಿಕೆ’ಯೂ ಆಗಿರಬಹುದು ಎಂದು ಹಿರೇಮಠ ಅವರು ನಗೆಚೆಲ್ಲಿದರು.

ಹೋರಾಟ ತೀವ್ರಗತಿ ಪಡೆಯುತ್ತಿದ್ದಂತೆ ಅದನ್ನು ಹತ್ತಿಕ್ಕಲು ರಾಮಚಂದ್ರ ಅವಲಕ್ಕಿ, ನಾನು ಮತ್ತು ಕಲ್ಮೇಶ್ ಎಂಬುವವರ ಮೇಲೆ ಒಂದು ಸಂಜೆ ಗಂಭೀರಸ್ವರೂಪದ ಹಲ್ಲೆ ನಡೆಯಿತು. ನಾಲ್ಕು ದಿನ ಆಸ್ಪತ್ರೆಗೆ ದಾಖಲಾದೆವು.

ಈ ಎಲ್ಲಾ ಹೋರಾಟದ ಫಲವಾಗಿ ನ್ಯಾ. ಎನ್.ಕೆ.ಜೈನ್‌ ಅಧ್ಯಕ್ಷತೆಯಲ್ಲಿ ಏಳು ನ್ಯಾಯಮೂರ್ತಿಗಳ ಸಮಿತಿ ರಚನೆಗೊಂಡಿತು. ಇಲ್ಲೂ ಐವರು ಪರವಾಗಿ ಹಾಗೂ ಇಬ್ಬರು ವಿರುದ್ಧ ನಿಲುವು ವ್ಯಕ್ತಪಡಿಸಿದರು. ಹೀಗಾಗಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ನಮ್ಮ ಬೇಡಿಕೆಯನ್ನು ಮತ್ತೆ ತಿರಸ್ಕರಿಸಿದರು. ಆಗ 7 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದೆ. ಧರ್ಮಸಿಂಗ್‌ ಬಂದು ಹೋರಾಟ ಕೈಬಿಡುವಂತೆ ಮನವಿ ಮಾಡಿಕೊಂಡರು. ಇಡೀ ಸಂಪುಟವೇ ಹೋರಾಟಕ್ಕೆ ಸ್ಥಳಕ್ಕೆ ಬಂದು ಮನವಿ ಮಾಡಿಕೊಂಡರು. ಆದರೆ ಪೀಠ ಸ್ಥಾಪನೆ ನಿಲುವು ಅಚಲವಾಗಿತ್ತು.

ಎಲ್ಲಿ ಸ್ಥಾಪನೆಯಾಗಬೇಕು ಎಂಬ ಗೊಂದಲ ಇದ್ದದ್ದರಿಂದ ಅದನ್ನು ಪರಿಹರಿಸಿಕೊಳ್ಳುವಂತೆ ಮುಖ್ಯನ್ಯಾಯಮೂರ್ತಿ ಸಲಹೆ ನೀಡಿದರು. ಅಂದಿನ ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಹಾಗೂ ಕೆ.ಬಿ.ಕೋಳಿವಾಡ ಅವರು ಸ್ಥಳ ನಿಯುಕ್ತಿಗೆ ಸಭೆ ಕರೆದರು. ಉತ್ತರ ಕರ್ನಾಟಕದ ಎಲ್ಲಾ ವಕೀಲರ ಸಂಘದ ಅಧ್ಯಕ್ಷರೂ ಅದರಲ್ಲಿ ಪಾಲ್ಗೊಂಡಿದ್ದರು. ಇದರ ನಿರ್ಧಾರವನ್ನು ಮುಖ್ಯನ್ಯಾಯಮೂರ್ತಿಗೆ ಬಿಡಲು ನಿರ್ಧರಿಸಲಾಯಿತು. ಹೀಗಾಗಿ ಉತ್ತರ ಕರ್ನಾಟಕದ ಪೀಠ ಧಾರವಾಡದಲ್ಲಿ ಹೈದರಾಬಾದ್ ಕರ್ನಾಟಕದ ಪೀಠಕ್ಕೆ ಕಲಬುರ್ಗಿಯನ್ನು ಆಯ್ಕೆ ಮಾಡಲಾಗಿತ್ತು.

2005ರಲ್ಲಿ ಹೈಕೋರ್ಟ್‌ಗೆ ಅಡಿಗಲ್ಲು ಸಮಾರಂಭ ನಡೆದರೂ ಕಾಮಗಾರಿ ವಿಳಂಬವಾಗಿದ್ದರಿಂದ ಮೂರನೇ ಬಾರಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಹನ್ನೊಂದು ದಿನಗಳ ಹೋರಾಟ ನಡೆಯಿತು. ಪ್ರಫುಲ್ಲ ನಾಯಕ್ ಇತರರು ಅದರಲ್ಲಿ ನನ್ನೊಂದಿಗೆ ಪಾಲ್ಗೊಂಡಿದ್ದರು. ಇದೆಲ್ಲದರ ಫಲವಾಗಿ 2008ರ ಜುಲೈ 4ರಂದು ಹೈಕೋರ್ಟ್ ಪೀಠ ಸ್ಥಾಪನೆಯಾಯಿತು.

ಅರ್ಧ ಕ್ವಿಂಟಲ್ ಪೇಡೆ ಹಂಚಿಕೆ

ಹೈಕೋರ್ಟ್ ಸ್ಥಾಪನೆ ನಂತರ 22 ಸಾವಿರ ಪ್ರಕರಣಗಳು ಈ ಪೀಠಕ್ಕೆ ವರ್ಗಾವಣೆಗೊಂಡವು. ವಾಲ್ಮಿ ಕಟ್ಟಡದಲ್ಲಿ ತಾತ್ಕಾಲಿಕ ಪೀಠ ಆರಂಭಗೊಂಡಿತು. ಆದರೆ ಬೆಂಗಳೂರಿನಿಂದ ಸಿಬ್ಬಂದಿ ಇಲ್ಲಿಗೆ ಬರಲು ನಿರಾಕರಿಸಿದರು. ಅವರ ಮನವೊಲಿಸಲು ಅರ್ಧ ಕ್ವಿಂಟಲ್ ಪೇಡೆ ಹೊತ್ತುಕೊಂಡು ಖುದ್ದು ಅವರನ್ನು ಭೇಟಿ ಧಾರವಾಡಕ್ಕೆ ಬರಲು ಮನವೊಲಿಸುವ ಪ್ರಯತ್ನ ಮಾಡಿದೆವು. ಇಲ್ಲಿಗೆ ಅವರು ಬಂದಾಗಲೂ ಕೆಂಪುಹಾಸಿನ ಸ್ವಾಗತ, ಅವರ ಮಕ್ಕಳ ಶಿಕ್ಷಣಕ್ಕಾಗಿ ಸೀಟು ನೀಡಲು ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿಕೊಂಡೆವು. ಕೋರ್ಟ್ ಆವರಣದಲ್ಲೇ ಕಿರಾಣಿ ಹಾಗೂ ತರಕಾರಿ ಸಿಗುವಂತೆ ವ್ಯವಸ್ಥೆ ಮಾಡಲಾಯಿತು. ಹೀಗೆ ಒಂದು ಸುದೀರ್ಘ ಹೋರಾಟ ಫಲಕಂಡಿತು. ಈ ಭಾಗದ ಜನರ ಬೇಡಿಕೆ ಈಡೇರಿದ ಸಾರ್ತಕತೆ ನನಗೆ ಹಾಗೂ ಹೋರಾಟದಲ್ಲಿ ಪಾಲ್ಗೊಂಡ ನನ್ನಂತೆ ಹಲವರ ಪಾಲಾಯಿತು. ಇದೇ ವಿಷಯವಾಗಿ 4 ಪಿಎಚ್.ಡಿ. ಪ್ರಬಂಧಗಳು ಮಂಡಣೆಯಾಗಿವೆ.

ಹೋರಾಟ ಎಲ್ಲವೂ ಮುಗಿದ ನಂತರ ಒಂದು ದಿನ ವಿಧಾನಸೌಧಕ್ಕೆ ಭೇಟಿ ನೀಡಿದ್ದೆ. ಕಾವೇರಿ ನದಿ ನೀರು ಹಂಚಿಕೆ ಹೋರಾಟದ ಮುಂಚೂಣಿಯಲ್ಲಿರುವ ಜಿ.ಮಾದೇಗೌಡ ಅವರು ಸಿಕ್ಕರು. ‘ನೀನು ಬಾರೀ ಪುಣ್ಯವಂತನಪ್ಪಾ. ಹೋರಾಟ ಆರಂಭಿಸಿ ಜೀವಿತಾವಧಿಯಲ್ಲೇ ಅದರ ಫಲವನ್ನು ಕಂಡೆ. ಆದರೆ ಅಂಥ ಭಾಗ್ಯ ನನಗೆಲ್ಲಿ’ ಎಂದಿದ್ದು ಇಂದಿಗೂ ನೆನಪಿದೆ.

ಹೈಕೋರ್ಟ್ ಪೀಠ ಸ್ಥಾಪನೆಯ ಪ್ರಸ್ತಾವನೆ 8 ಬಾರಿ ತಿರಸ್ಕೃತಗೊಂಡಿತ್ತು. ಇದಕ್ಕಾಗಿ ಬೆಂಗಳೂರಿನಲ್ಲಿ 28 ಬಾರಿ ಧರಣಿ ನಡೆಸಿದೆವು. ಮಾಡು ಇಲ್ಲವೆ ಮಡಿ ಎಂಬ ಹೋರಾಟದಲ್ಲಿ ವಕೀಲರು, ಸಂಘ ಸಂಸ್ಥೆಗಳು, ರೈತರು, ಮಹಿಳೆಯರು, ಕಲಾವಿದರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಉತ್ತರ ಕರ್ನಾಟಕದ ಪ್ರತಿಯೊಬ್ಬರೂ ಪಾಲ್ಗೊಂಡಿದ್ದರು. ಪ್ರತಿಯೊಬ್ಬರ ಹೋರಾಟದ ಫಲವಾಗಿ ಈ ಭಾಗದ ಕಕ್ಷಿದಾರರಿಗೆ ಸಿಕ್ಕ ನ್ಯಾಯದಾನಕ್ಕೆ ಈಗ ದಶಕದ ಸಂಭ್ರಮ ಎಂದು ಬಿ.ಡಿ.ಹಿರೇಮಠ ತಮ್ಮ ನೀಳ ಬಿಳಿಗಡ್ಡವನ್ನು ನೇವರಿಸುತ್ತ ನಗೆಚೆಲ್ಲಿದರು.

ಹೋರಾಟದ ಹಾದಿ:

1975– ಪೀಠ ಸ್ಥಾಪನಕ್ಕೆ ಮೊದಲ ಬಾರಿಗೆ ಕೇಂದ್ರಕ್ಕೆ ಪತ್ರ

1979– ಹುಬ್ಬಳ್ಳಿ–ಧಾರವಾಡದಲ್ಲಿ ಪೀಠ ಸ್ಥಾಪಿಸಲು ಅಂದಿನ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ಎಂ.ಚಂದ್ರಶೇಖರ್ ಅವರಿಂದ ರಾಜ್ಯ ಸರ್ಕಾರಕ್ಕೆ ಪತ್ರ

1981– ಪೀಠ ಸ್ಥಾಪನೆಗೆ ಒತ್ತಾಯಿಸಿ ಅಂದಿನ ಮುಖ್ಯಮಂತ್ರಿಯಿಂದ ಕೇಂದ್ರಕ್ಕೆ ಪತ್ರ. ನ್ಯಾಯಮೂರ್ತಿ ಜಸ್ವಂತ ಸಿಂಗ್ ನೇತೃತ್ವದಲ್ಲಿ ಆಯೋಗ ರಚನೆ

1985– ನ್ಯಾ. ಜಸ್ವಂತ ಸಿಂಗ್ ಆಯೋಗದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆ.

1987– ನ್ಯಾ. ಜಸ್ವಂತ ಸಿಂಗ್ ವರದಿಗೆ ರಾಜ್ಯ ಸಂಪುಟಸಭೆ ಒಪ್ಪಿಗೆ

1988– ಕೇಂದ್ರ ಕಾನೂನು ಸಚಿವರಿಗೆ ರಾಜ್ಯದ ಮುಖ್ಯಮಂತ್ರಿಯಿಂದ ಪತ್ರ. ಉತ್ತರ ಕರ್ನಾಟಕದಲ್ಲಿ ಪೀಠ ಸ್ಥಾಪನೆಗೆ ಆಗ್ರಹ

1989– ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಕೇಂದ್ರಕ್ಕೆ ಪತ್ರ

1990– ಈ ಭಾಗದಲ್ಲಿ ಪೀಠ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಮುಖ್ಯನ್ಯಾಯಮೂರ್ತಿಗಳಿಂದ ಕೇಂದ್ರಕ್ಕೆ ಪತ್ರ

1991– ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಮರು ಪರಿಶೀಲನೆ. ಮುಖ್ಯನ್ಯಾಯಮೂರ್ತಿ ಅವರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಲು ಸಚಿವಸಂಪುಟ ಒಪ್ಪಿಗೆ. ಆದರೆ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಲು ಅಸಹಾಯಕತೆ ವ್ಯಕ್ತಪಡಿಸಿದ ಮುಖ್ಯನ್ಯಾಯಮೂರ್ತಿ

1992– ಖಾಯಂ ಪೀಠ ಸ್ಥಾಪನೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಿಂದ ನಿರ್ಣಯ ಮಂಡಣೆ. ಇದೇ ವರ್ಷ ಹೈಕೋರ್ಟ್‌ನ ಪೂರ್ಣ ಪೀಠದಲ್ಲಿ ಈ ವಿಷಯ ಕುರಿತು ಚರ್ಚಿಸುವ ಭರವಸೆ ನೀಡಿದ ಮುಖ್ಯನ್ಯಾಯಮೂರ್ತಿ. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ಪೀಠ ಸ್ಥಾಪನೆಗೆ ಸೂಕ್ತ ಸ್ಥಳ ಗೊತ್ತುಪಡಿಸಲು ತಿಳಿಸಲಾಗಿತ್ತು.

1996– ಪೀಠ ಸ್ಥಾಪನೆ ವಿಚಾರದಲ್ಲಿ ನ್ಯಾ. ಜಸ್ವಂತ್ ಸಿಂಗ್ ಆಯೋಗದ ಶಿಫಾರಸು ಸರ್ವಸಮ್ಮತ ಎಂದು ಮುಖ್ಯಮಂತ್ರಿಯಿಂದ ಮುಖ್ಯನ್ಯಾಯಮೂರ್ತಿಗೆ ಮನವಿ

2000– ಪೀಠ ಸ್ಥಾಪನೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳ ಉನ್ನತ ಸಮಿತಿಯ ನಕಾರ. ಇದರಿಂದ ಹೋರಾಟ ಪ್ರಭಲಗೊಂಡು, ಪ್ರತ್ಯೇಕ ರಾಜ್ಯದ ಗೊತ್ತುವಳಿ ಅಂಗೀಕರಿಸಿದ ವಕೀಲರ ಸಂಘ. ಪ್ರತ್ಯೇಕ ರಾಜ್ಯದ ದ್ವಜಾರೋಹಣ (ಜೂನ್ 21). ಇದೇ ವರ್ಷ ಅಂದಿನ ಪ್ರಧಾನಿ ಅಟಲಬಿಹಾರಿ ವಾಜಿಪೇಯಿ ಅವರನ್ನು ಭೇಟಿ ಮಾಡಿದ ನಿಯೋಗ. ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಧಾನಿಯನ್ನು ಭೇಟಿ ಮಾಡಿ ಪೀಠ ಸ್ಥಾಪನೆಗೆ ಮನವಿ ಮಾಡಿಕೊಂಡರು.

2001– ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌.ಕೆ.ಜೈನ್ ಭೇಟಿ ನೀಡಿದ ಸಂದರ್ಭದಲ್ಲಿ ವಕೀಲರಿಂದ ಪೀಠ ಸ್ಥಾಪನೆಗೆ ಮನವಿ

2002– ಪೀಠ ಸ್ಥಾಪನೆ ಪ್ರಕ್ರಿಯೆಗೆ ಮರುಚಾಲನೆ. ಏಳು ನ್ಯಾಯಮೂರ್ತಿಗಳ ಸಮಿತಿ ರಚಿಸಿದ ಮುಖ್ಯನ್ಯಾಯಮೂರ್ತಿ. ಡಾ. ಡಿ.ಎಂ.ನಂಜುಂಡಪ್ಪ ಅವರು ವರದಿ ಸಲ್ಲಿಸಿ ಪೀಠ ಸ್ಥಾಪನೆಗೆ ಶಿಫಾರಸು ಮಾಡಿದರು.

2003– ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ವಕೀಲರ ಸಂಘದ ಸಭೆ

2004– ಪೀಠ ಸ್ಥಾಪನೆ ತ್ವರಿತಗತಿಯಲ್ಲಿ ಸಾಗಲು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ವಕೀಲರ ತೀರ್ಮಾನ. ಉತ್ತರ ಕರ್ನಾಟಕ ವಕೀಲರಿಂದ ಬೆಂಗಳೂರು ಚಲೋ. ಬಿ.ಡಿ.ಹಿರೇಮಠ ಸೇರಿದಂತೆ ಹಲವರ ಬಂಧನ. ಇದೇ ವರ್ಷ ನ್ಯಾಯಮೂರ್ತಿಗಳ ಸಮಿತಿಯಿಂದ ಸ್ಥಳ ಪರಿಶೀಲನೆ. ಧಾರವಾಡ ಹಾಗೂ ಕಲಬುರ್ಗಿಯಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸಲು ಸರ್ಕಾರ ತೀರ್ಮಾನ.

2005– ಸಂಚಾರಿ ಪೀಠ ಸ್ಥಾಪನೆಯ ಕಾಮಗಾರಿಗಳಿಗೆ ಮುಖ್ಯನ್ಯಾಯಮೂರ್ತಿ ಎನ್‌.ಕೆ.ಸೋಧಿ ಅವರಿಂದ ಶಂಕುಸ್ಥಾಪನೆ

2008– ಧಾರವಾಡ ಸಂಚಾರಿ ಪೀಠ ಸ್ಥಾಪನೆಯ ಅಧಿಸೂಚನೆ ಪ್ರಕಟ

4ನೇ ಜುಲೈ 2008ರಂದು ಹುಬ್ಬಳ್ಳಿ ಧಾರವಾಡದಲ್ಲಿ ಸಂಚಾರಿ ಪೀಠದ ಉದ್ಘಾಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT