ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ಮಕ್ಕಳ ವಿಡಿಯೊ ನೋಡಿ ಮಹಾರಾಷ್ಟ್ರದಲ್ಲಿ ಮುಗ್ಧರ ಕೊಂದರು

Last Updated 6 ಜುಲೈ 2018, 6:35 IST
ಅಕ್ಷರ ಗಾತ್ರ

ಮುಂಬೈ: ವಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿದ್ದ ಮಕ್ಕಳ ಕಳ್ಳರ ವಿಡಿಯೊ ನೋಡಿ ಉದ್ರಕ್ತರಾಗಿದ್ದ ಜನರು ಮಹಾರಾಷ್ಟ್ರದ ಧುಲೆ ಜಿಲ್ಲೆಯ ರೈನ್ಪಾದಾಗ್ರಾಮದಲ್ಲಿ ಐವರು ಮುಗ್ಧರನ್ನು ಜುಲೈ 1ರಂದು ಹೊಡೆದು ಕೊಂದರು. ಜನರಲ್ಲಿ ಅಷ್ಟು ಸಿಟ್ಟು ಬರಿಸಿದ್ದ ಆ ವಿಡಿಯೊ ಭಾರತಕ್ಕೆ ಸಂಬಂಧಿಸಿದ್ದೇ ಅಲ್ಲ ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ವಿಡಿಯೊದ ಇತ್ಯೋಪರಿಯನ್ನು ಎನ್‌ಡಿಟಿವಿ ವಾಹಿನಿಗೆ ವಿವರಿಸಿರುವ ಬೂಮ್‌ಲೈವ್ ಜಾಲತಾಣದ ಕಾರ್ಯನಿರ್ವಾಹಕ ನಿರ್ದೇಶಕ ಜೆನ್ಸಿ ಜೇಕಬ್, ‘ಈ ವಿಡಿಯೊದಲ್ಲಿರುವ ಭಾರತೀಯ ಮಕ್ಕಳು ಅಲ್ಲ. 2013ರಲ್ಲಿ ಸಿರಿಯಾದಲ್ಲಿ ಅನಿಲ ಬಾಂಬ್ (ನರ್ವ್ ಗ್ಯಾಸ್) ದಾಳಿಯಿಂದ ಮೃತಪಟ್ಟ ಮಕ್ಕಳ ಶವಗಳಿರುವ ವಿಡಿಯೊ ಅದು’ ಎನ್ನುತ್ತಾರೆ.

ಆದರೆ ಉದ್ರೇಕಕಾರಿ ವಾಯ್ಸ್‌ಓವರ್ ಇರುವ ಈ ಸುಳ್ಳು ವಿಡಿಯೊದಿಂದ ಪ್ರಭಾವಿತರಾದ ಜನರು ದೇಶದ ವಿವಿಧೆಡೆ ಈವರೆಗೆ 20ಕ್ಕೂ ಹೆಚ್ಚು ಮಕ್ಕಳನ್ನು ಕೊಂದಿದ್ದಾರೆ. ವಿಡಿಯೊ ಎಡಿಟಿಂಗ್ ತಂತ್ರಜ್ಞಾನ ಚೆನ್ನಾಗಿ ಬಲ್ಲವರೇ ಈ ವಿಡಿಯೊ ಸೃಷ್ಟಿಸಿದ್ದಾರೆ ಎನ್ನುವುದು ನಿರ್ವಿವಾದ. ಆದರೆ ಅವರು ಯಾರು ಎಂಬ ಪ್ರಶ್ನೆಗೆ ಮಾತ್ರ ಈವರೆಗೆ ಉತ್ತರ ಸಿಕ್ಕಿಲ್ಲ.

ಮಾಲೆಗಾವ್‌ನಲ್ಲಿ ಇಬ್ಬರ ಹತ್ಯೆಗೆ ಕಾರಣವಾದ ಮತ್ತೊಂದು ವಿಡಿಯೊ ಬಗ್ಗೆ ವಿಚಾರಿಸಿದಾಗ ಧುಲೆ ಸಮೀಪದ ಸಕ್ರಿ ಪಟ್ಟಣದಲ್ಲಿ ನಡೆದ ಮಕ್ಕಳ ಅಪಹರಣಕ್ಕೆ ಸಂಬಂಧಿಸಿದ ಕಥೆಯಿರುವ ವಿಡಿಯೊ ವಿಚಾರ ಪ್ರಸ್ತಾಪವಾಯಿತು. ಪೊಲೀಸರು ಈ ವಿಡಿಯೊದಲ್ಲಿರುವ ಸಂಗತಿ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದು. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳುತ್ತಾರೆ.

ಭಾರತದೊಂದಿಗೆ ನೇರವಾದ ಸಂಬಂಧವೇ ಇರದ ಸುಳ್ಳು ವಿಡಿಯೊ ಇಂದಿಗೂ ಧುಲೆ, ನಾಸಿಕ್ ಮತ್ತು ನಂದರ್‌ಬಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಲಾವಣೆಯಲ್ಲಿದೆ. ದುರಂತವೆಂದರೆ ಈ ವಿಡಿಯೊ ಚಾಲ್ತಿಯಲ್ಲಿರುವ ಬಹುತೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವೇ ಸರಿಯಾಗಿಲ್ಲ. ಆದರೆ ವಿಡಿಯೊಗಳ ಪ್ರಭಾವಕ್ಕೆ ಮಾತ್ರ ಕುತ್ತು ಬಂದಿಲ್ಲ.

ಈ ವಿಡಿಯೊಗಳ ತಪ್ಪು ಸಂದೇಶ ಇಂದು ಮಹಾರಾಷ್ಟ್ರದ ಅನೇಕ ಮನೆಗಳನ್ನು ತಲುಪಿದೆ. ಇದೇ ಕಾರಣಕ್ಕೆ ರೈನ್‌ಪಾದಾ ಗ್ರಾಮದಲ್ಲಿ ಐವರು ಮುಗ್ಧರ ಮಾರಣಹೋಮ ನಡೆಯಿತು. ಬಸ್ಸಿನಲ್ಲಿ ಗ್ರಾಮಕ್ಕೆ ಬಂದಿದ್ದ ಐವರು ಅಲ್ಲಿಯೇ ಇದ್ದ ಆರು ವರ್ಷದ ಬಾಲಕಿಯೊಂದಿಗೆ ಮಾತನಾಡಲು ಯತ್ನಿಸಿದ್ದನ್ನೇ ನೆಪ ಮಾಡಿಕೊಂಡ ಗುಂಪು, ಕೋಲು ಮತ್ತು ಚಪ್ಪಲಿಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿತು.

ಹೊಡೆದು ಕೊಲ್ಲುವುದನ್ನು ನೋಡಲು, ಅವಕಾಶ ಸಿಕ್ಕರೆ ಹೊಡೆಯಲು ಅಕ್ಕಪಕ್ಕದ ಹಳ್ಳಿಗಳಿಂದ ಮೂರು ಸಾವಿರಕ್ಕೂ ಹೆಚ್ಚು ಜನರು ಗುಂಪುಗೂಡಿದ್ದರು. ‘ಶಂಕಿತರನ್ನು ಕೊಲ್ಲಬಾರದು, ಪೊಲೀಸರಿಗೆ ಒಪ್ಪಿಸಬೇಕು’ ಎಂಬ ಅಭಿಪ್ರಾಯವನ್ನು ಸ್ಥಳದಲ್ಲಿದ್ದ ಕೆಲವರು ವ್ಯಕ್ತಪಡಿಸಿದರಾದರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಉದ್ರಿಕ್ತರು ಇರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು 23 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈವರೆಗೆ ಸುಳ್ಳು ಹರಡಿದ್ದು ಹೇಗೆ? ಇದಕ್ಕೆ ಮೂಲ ಕಾರಣ ಯಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ.

‘ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾಗಿ ಹಿಂಸಾಚಾರ ಎಸಗುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು’ ಎಂದು ಕೇಂದ್ರ ಸರ್ಕಾರ ಗುರುವಾರ ಮಹಾರಾಷ್ಟ್ರಕ್ಕೆ ಸೂಚಿಸಿದೆ. ಇದೀಗ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರವು, ಪೊಲೀಸರಿಗೆ ಇಂಥ ಗ್ರೂಪ್‌ಗಳೊಳಗೆ ನುಸುಳಿಕೊಳ್ಳಲು ಸೂಚಿಸಿದೆ.

ವಾಟ್ಸ್ಯಾಪ್‌ನ ಜೊತೆಜೊತೆಗೆ ಕೆಲಸ ಮಾಡುತ್ತಿರುವ ಪೊಲೀಸರು ಇಂಥ ಸುದ್ದಿಗಳು ಎಲ್ಲಿ ಹುಟ್ಟುತ್ತವೆ? ಏಕೆ ಹರಡುತ್ತವೆ ಎಂಬುದನ್ನು ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ. ಸುಳ್ಳು ಸುದ್ದಿಯೊಂದು ಪ್ರಭಾವ ಬೀರುವ ಮೊದಲೇ ವಾಸ್ತವ ಸಂಗತಿ ವಿವರಿಸಿ, ಜನರನ್ನು ಕಾಪಾಡುವುದು ಪೊಲೀಸರ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT