ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯಗೆ ಸಾಕ್ಷಿಯಾದ ಮದುವೆ

ಪ್ರೇಮಿಗಳಿಗೆ ಮದುವೆ ಮಾಡಿಸಿದ ರಂಗನಾಥಪುರ ಗ್ರಾಮಸ್ಥರು
Last Updated 6 ಜುಲೈ 2018, 14:17 IST
ಅಕ್ಷರ ಗಾತ್ರ

ವಿಜಯಪುರ: ಮದುವೆಗೆ ಪೋಷಕರು ಒಪ್ಪದ ಕಾರಣ ಮನೆ ಬಿಟ್ಟು ಬಂದಿದ್ದ ಪ್ರೇಮಿಗಳಿಗೆ ಪಿ. ರಂಗನಾಥಪುರ ಗ್ರಾಮಸ್ಥರು ಮುಂದೆ ನಿಂತು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯದ ಪದವೀಧರೆ ಸಿಮ್ರಾನ್ ಹಾಗೂ ಆಟೊ ಚಾಲಕ ಉಸ್ಮಾನ್‌ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಸಂಬಂಧಿಕರಾಗಿದ್ದರೂ ಸಿಮ್ರಾನ್ ಮನೆ ಪೋಷಕರು ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ.

ಇಬ್ಬರ ಪೂರ್ವಾಪರ ವಿಚಾರಿಸಿದ ಗ್ರಾಮಸ್ಥರು ಸಿಮ್ರಾನ್ ವಯಸ್ಸಿನ ಕುರಿತು ದಾಖಲೆ ಕೇಳಿದ್ದಾರೆ. ಅಂಕಪಟ್ಟಿ, ಆಧಾರ್ ಕಾರ್ಡ್ ತೋರಿಸಿದ ನಂತರ ಗುರುವಾರ ರಾತ್ರಿ ಗ್ರಾಮಸ್ಥರೆಲ್ಲರೂ ಸೇರಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಮ್ರಾನ್, ‘ನಾನು ಉಸ್ಮಾನ್‌ನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಹೆಣ್ಣೂರು ಬಳಿ ಡಿ.ಮಾರ್ಟ್‌ನಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನಾನು ಪದವೀಧರೆ. ನನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನನಗಿದೆ. ನನಗಿಷ್ಟ ಇಲ್ಲದ ಮದುವೆಗೆ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದರು. ಇಲ್ಲಿನ ಗ್ರಾಮಸ್ಥರ ಸಹಕಾರ ಪಡೆದು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದೇವೆ’ ಎಂದರು.

‘ನನ್ನನ್ನು ಅಪಹರಣ ಮಾಡಿದ್ದಾರೆ ಎಂಬುದಾಗಿ ಪೋಷಕರು ದೂರು ನೀಡಿದ್ದಾರೆ. ಇದು ಸುಳ್ಳು. ಈ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಜತೆಗೆ ನಮ್ಮ ಮಾವನಿಗೆ ಕಿರುಕುಳ ಕೊಡುತ್ತಿರುವುದಾಗಿ ತಿಳಿದು ಬಂದಿದೆ. ನಾನು ಬಂದಿರುವ ವಿಷಯ ನಮ್ಮ ಮಾವನಿಗೆ ಗೊತ್ತಿಲ್ಲ. ನಮ್ಮ ರಕ್ಷಣೆಗಾಗಿ ವಿಜಯಪುರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಾಗಿ’ ತಿಳಿಸಿದರು.

ಉಸ್ಮಾನ್ ಮಾತನಾಡಿ, ‘ನಾನು ಚಿಕ್ಕಬಳ್ಳಾಪುರದಲ್ಲಿ ಆಟೊ ಓಡಿಸಿಕೊಂಡು ಜೀವನ ಮಾಡುತ್ತಿದ್ದೇನೆ. ಸಿಮ್ರಾನ್ ಕಾಲೇಜಿಗೆ ಬರುವಾಗ ಪರಿಚಯವಾದರು. ಪರಿಚಯ ಪ್ರೇಮವಾಯಿತು. ನಂತರ ನಮ್ಮ ಸಂಬಂಧಿಕರೇ ಎಂಬುದು ಗೊತ್ತಾಗಿ ಮದುವೆ ಮಾಡಿಕೊಳ್ಳಲು ಯಾವುದೇ ಅಡ್ಡಿ ಬರುವುದಿಲ್ಲವೆಂದು ಅನ್ನಿಸಿತು. ಆದರೆ, ಅವರ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಸಿಮ್ರಾನ್‌ಗೆ ಬೇರೆ ಸಂಬಂಧ ನೋಡುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಅವರ ಸಂಪೂರ್ಣ ಒಪ್ಪಿಗೆ ಮೇರೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದೇವೆ. ಇದರಲ್ಲಿ ಯಾರ ಪಾತ್ರವೂ ಇಲ್ಲ. ನಾವಿಬ್ಬರು ಸುಖವಾಗಿ ಬಾಳಲು ಅವಕಾಶ ಮಾಡಿಕೊಡಿ ಎಂದಷ್ಟೇ ಕೇಳುತ್ತೇನೆ’ ಎಂದರು.

ತಮಟೆ ವಾದನಗಳೊಂದಿಗೆ ಗ್ರಾಮಸ್ಥರು ನೂತನ ವಧುವರರನ್ನು ಮೆರವಣಿಗೆ ಮಾಡಿದರು. ಬಂದಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT