ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಕಾರಂಜಿ ಈ ಸಂಗ್ರಹಾಲಯ

Last Updated 6 ಜುಲೈ 2018, 20:30 IST
ಅಕ್ಷರ ಗಾತ್ರ

ಆ ವರಣದೊಳಗೆ ಕಾಲಿಟ್ಟೊಡನೇ ‘ಮನುಷ್ಯ ಒಂದು ಉಪಕರಣ ತಯಾರಿಸುವ ಪ್ರಾಣಿ’ ಎಂಬಬೆಂಜಮಿನ್ ಫ್ರಾಂಕ್ಲಿನ್ ಅವರ ಉಕ್ತಿಯೇ ಈ ಸಂಸ್ಥೆಯ ಪ್ರಾಥಮಿಕ ಪರಿಚಯ ಮಾಡಿಕೊಡುತ್ತದೆ. ಸುತ್ತ ಕಣ್ಣು ಹಾಯಿಸಿದರೆ ಮಾನವ ನಿರ್ಮಿತ ಕೃತಕ ಉಪಕರಣಗಳು, ವಿವಿಧ ವಿಜ್ಞಾನ ಮಾದರಿಗಳು,ಜ್ಯಾಕೋಬ್ಸ್ ಲ್ಯಾಡರ್ ಉಪಕರಣ, ಹೈ ವೊಲ್ಟೇಜ್ ಮೂಲಕ ದೀಪವು ಹೊತ್ತಿ ಮೇಲೆರುವ ಉಪಕರಣಗಳೇ‌ ಕಾಣಸಿಗುತ್ತವೆ.

‘ಒಂದು ವಸ್ತುಸಂಗ್ರಹಾಲಯ ಹಲವು ಜಗತ್ತು’ ಎಂಬ ಮಾತು ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯಕ್ಕೆ ಸರಿಹೊಂದುತ್ತದೆ. ಮಾಹಿತಿ ಕಣಜವಾಗಿರುವ ಈ ವಸ್ತುಸಂಗ್ರಹಾಲಯ ಮಕ್ಕಳ ಪಿಕ್‌ನಿಕ್‌ಗೆ ಒಂದು ಒಳ್ಳೆಯ ತಾಣ. ಇಲ್ಲಿ ಮಕ್ಕಳಷ್ಟೇ ಅಲ್ಲ, ಹಿರಿಯರ ಕುತೂಹಲ ತಣಿಸುವ ಅನೇಕ ಅಂಶಗಳಿವೆ. ಪುರಾತನ ಯಂತ್ರಗಳು,ಸಲಕರಣೆಗಳು, ವಿಸ್ಮಯಗೊಳಿಸುವ ವಿಜ್ಞಾನ ಪರೀಕ್ಷೆಗಳು, ಥ್ರೀ ಡಿ ದೃಶ್ಯಾವಳಿಗಳು ಹುಬ್ಬೇರಿಸುವಂತೆ ಮಾಡುತ್ತವೆ.

ಕಸ್ತೂರ ಬಾ ರಸ್ತೆಯಲ್ಲಿರುವ ಈ ಸಂಗ್ರಹಾಲಯವನ್ನುಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ 1962ರಲ್ಲಿ ಸ್ಥಾಪಿಸಲಾಗಿದೆ. ರಾಟೆಯಂತಹ ಒಂದು ಸರಳ ಯಂತ್ರದಿಂದ ಆರಂಭಿಸಿ ರಾಕೆಟ್ಟಿನ ನಿಯಂತ್ರಣ ವ್ಯವಸ್ಥೆಯಂತಹ ತನಕವೂ ಮಾಹಿತಿ ಇಲ್ಲಿದೆ. ವಸ್ತು ಸಂಗ್ರಹಾಲಯದಲ್ಲಿ ರೈಟ್ ಸಹೋದರರು 1903ರಲ್ಲಿ ಕಂಡು ಹಿಡಿದ ಜಗತ್ತಿನ ಮೊಟ್ಟ ಮೊದಲ ವಿಮಾನ ನೋಡುಗರ ಗಮನ ಸೆಳೆಯುತ್ತದೆ. ಮಕ್ಕಳಿಗಂತೂ ಇದೊಂದು ವಿಸ್ಮಯ. 275 ಕೆ.ಜಿ ಭಾರದ 6.5 ಇಂಚಿನ ಉದ್ದದ ವಿಮಾನ ಇದಾಗಿದ್ದು, ಈ ವಿಮಾನವನ್ನು ನಾವೇ ಚಲಾಯಿಸುವ ಅವಕಾಶವೂ ಇಲ್ಲಿದೆ. ಪಕ್ಕದಲ್ಲಿನ ಮೇಜಿನ ಮೇಲೆ ಮಲಗಿ,ಕೈ ಮತ್ತು ಕಾಲುಗಳ ಚಲನೆ ಮೂಲಕ ಕಂಪ್ಯೂಟರ್ ಮಾನಿಟರ್ ನೋಡುತ್ತಾ ಪುಟಾಣಿಗಳು ಸಂಭ್ರಮಿಸುತ್ತಿದ್ದರು.

ಹಾಗೇ ಪಕ್ಕಕ್ಕೆ ತಿರುಗಿದರೆಬೃಹದಾಕಾರದ ಡೈನೋಸಾರ್ ಬೆಚ್ಚಿ ಬೀಳಿಸುವಂತಿದೆ.ಜೋರಾದ ಧ್ವನಿಯೊಂದಿಗೆ ಬಾಯಿ ತೆಗೆದು ಮುಚ್ಚುತ್ತಾ ಹಿಂದೆ ಮುಂದೆ ದೇಹದ ಚಲನೆಯಿಂದ ಇದಕ್ಕೆ ಜೀವ ಇದೆಯೇನೋ ಎಂಬ ಅನುಮಾನ ಕ್ಷಣಕಾಲ ಕಾಡದಿರದು. ಇಲ್ಲಿ ಯಂತ್ರಗಳ ಕಾರ್ಯವಿಧಾನವನ್ನು ಸರಳವಾಗಿ ವಿವರಿಸುವ ಮಾದರಿಗಳಿವೆ.

ಎರಡನೇ ಮಹಡಿಯಲ್ಲಿನ‘ಸ್ಪೇಸ್‌ ಟೆಕ್ನಾಲಜಿ’ ವಿಜ್ಞಾನ ಸಂಬಂಧಿತ ವಿಷಯ, ಮಾಹಿತಿಗಳಿಂದ ಇಷ್ಟವಾಗುತ್ತದೆ.ಫ್ಲೈಟ್ ಮೆಕ್ಯಾನಿಕ್ಸ್, ಮಿಷನ್ ಕಂಟ್ರೋಲ್ ಸೆಂಟರ್, ಗಗನಯಾತ್ರಿ ,ಉಪಗ್ರಹಗಳು, ರಾಕೆಟ್ಸ್, ಸ್ಪೇಸ್ ಅಪ್ಲಿಕೇಶನ್‌ಗಳು, ಜಿಪಿಎಸ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಬಾಹ್ಯಾಕಾಶ ಖಗೋಳಶಾಸ್ತ್ರ,, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ, ಸ್ಪೇಸ್ ಮೆಟೀರಿಯಲ್ಸ್, ಸ್ಪೇಸ್ ಆಹಾರ, ಸ್ಪೇಸ್ ವೇರ್ ಮೊದಲಾದ ವಿಚಾರಗಳ ಬಗ್ಗೆ ಇಲ್ಲಿ ಸಮಗ್ರವಾಗಿ ಅರಿತುಕೊಳ್ಳಬಹುದು.ಸುನಿತಾ ವಿಲಿಯಮ್ಸ್ ಅವರ ವಿಡಿಯೋ ಜೊತೆ ನಾವು ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವಂತೆ ಅನುಭವಗಳನ್ನು ಇಲ್ಲಿ ದಕ್ಕಿಸಿಕೊಳ್ಳಬಹುದು. ಕಲ್ಪನಾ ಚಾವ್ಲಾರವರ ಬಾಹ್ಯಕಾಶದ ಅಪರೂಪದ ಪೋಟೊಗಳು ಇಲ್ಲಿವೆ. ಬಾಹ್ಯಾಕಾಶದ ಕುರಿತಾದ ಕುತೂಲವನ್ನು ಇಲ್ಲಿ ತಣಿಸಿಕೊಳ್ಳಬಹುದು

ಮೂರನೇ ಮಹಡಿಯಲ್ಲಿ ‘ಬಾಲ ವಿಜ್ಞಾನ –ಮಕ್ಕಳಿಗಾಗಿ ವಿಜ್ಞಾನ’ ಮಕ್ಕಳಿಗಾಗಿಯೇ ಇದೆ.ಇಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಧ್ವನಿಯೊಂದಿಗೆ ನಿಸರ್ಗದ ವಿಚಿತ್ರ ಧ್ವನಿಗಳನ್ನು ಆಲಿಸಬಹುದು. ದೊಡ್ಡದಾದ ಕೀಬೋರ್ಡ್‌ ಮೇಲೆ ಹೆಜ್ಜೆ ಹಾಕಿದರೆ ಸಪ್ತ ಸ್ವರ ಕೇಳಿಸುತ್ತದೆ. ಪುಟಾಣಿ ರೈಲು ಇಲ್ಲಿನ ವಿಶೇಷ. ರೈಲಿನಲ್ಲಿ ಕುಳಿತು ಕೆಲ ಪುಟಾಣಿಗಳು ಆನಂದಿಸುತ್ತಿದ್ದರು. ಇಲ್ಲಿರುವ ಗಾಜಿನ ಮನೆ ಹೊಕ್ಕರೆ ಹೊರಬರಲು ದಾರಿ ತಡಕಾಡಬೇಕಾಗುತ್ತದೆ. ಇದಲ್ಲದೇ ಹುಲಿ, ಸಿಂಹ, ಕರಡಿಗಳ ದೇಹಕ್ಕೆ ನಮ್ಮ ಮುಖ ಹಾಕಿ ಪ್ರಾಣಿ ರೂಪದಲ್ಲಿ ನಾವು ಹೇಗೆ ಕಾಣುತ್ತೇವೆ ಎಂಬ ಕುತೂಹಲಕಾರಿ ಆಟಗಳನ್ನೂ ಆಡುತ್ತಾ ನಾನು ಹುಲಿ, ಸಿಂಹ ಎನ್ನುತ್ತಿದ್ದ ಪುಟಾಣಿಗಳ ಸಂಭ್ರಮ ಎಲ್ಲೆ ಮೀರಿತ್ತು.

ಕಾರವಾರದಿಂದ ಮಕ್ಕಳನ್ನು ಕರೆದುಕೊಂಡ ಬಂದಿದ್ದ ಕೃಷ್ಣಕುಮಾರ್ ‘ಅಬ್ಬಾ.! ಮಕ್ಕಳ ಜ್ಞಾನದೊಂದಿಗೆ ನಮ್ಮ ಜ್ಞಾನವೂ ಇಲ್ಲಿ ವೃದ್ಧಿಯಾಗುತ್ತದೆ. ಮೊದಲ ಬಾರಿ ಇಲ್ಲಿಗೆ ಬಂದಿದ್ದೇನೆ, ಮತ್ತೆ ಮತ್ತೆ ಬರಬೇಕು ಎನಿಸುತ್ತಿದೆ’ ಎಂದು ಅನಿಸಿಕೆ ಹಂಚಿಕೊಂಡರು.

ಈ ವಸ್ತು ಸಂಗ್ರಹಾಲಯದಲ್ಲಿ VITM.IN ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಉಚಿತ ವೈಫೈ ಲಭ್ಯವಿದ್ದು, ಸಂದರ್ಶಕರು ಸ್ಥಳದಲ್ಲಿಯೇ ಆ್ಯಪ್‌ ಅನ್ನು ತಮ್ಮ ಮೊಬೈಲಿಗೆ ಇನ್‌ಸ್ಟಾಲ್‌ ಮಾಡಿಸಿಕೊಂಡಲ್ಲಿಆ ವಸ್ತು ಸಂಗ್ರಹಾಲಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ: 080–22864009

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT