ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡ ಸಿಹಿ, ಕಂಡ ಕಹಿಯ ಒಗರು ನೆನಪು

ಆತ್ಮಕಥನ
Last Updated 10 ಜುಲೈ 2018, 7:10 IST
ಅಕ್ಷರ ಗಾತ್ರ

ಬಿ.ಎ. ಮೊಹಿದೀನ್‌ ಆತ್ಮಕಥನ: ನನ್ನೊಳಗಿನ ನಾನು

ನೇರ ನಡೆ–ನುಡಿಯ, ಸರಳ ಸಜ್ಜನ ರಾಜಕಾರಣಿ ಬಿ.ಎ. ಮೊಹಿದೀನ್‌. ದಶಕಗಳ ಕಾಲ ಅಧಿಕಾರ ರಾಜಕಾರಣದ ಕೇಂದ್ರದಲ್ಲಿದ್ದೂ ಕೈ, ಬಾಯಿ ಶುದ್ಧವಾಗಿಟ್ಟುಕೊಂಡ; ಬದುಕಿನುದ್ದಕ್ಕೂ ತಾನು ನಂಬಿದ ಮನುಷ್ಯಪರ ತತ್ವ, ಸಿದ್ಧಾಂತಗಳನ್ನು ಸದ್ದಿಲ್ಲದೆ ಬದುಕುತ್ತಿರುವ ಅಪರೂಪದ ಮುತ್ಸದ್ದಿ, ಸ್ನೇಹಜೀವಿ. ಪೇಜಾವರ ಎಂಬ ಕುಗ್ರಾಮದ ಅನಕ್ಷರಸ್ಥ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ರಾಜಕಾರಣದಲ್ಲಿ ಗುರುತಿಸಿಕೊಂಡು, ಒಂದೊಂದೇ ಮೆಟ್ಟಿಲೇರಿ ರಾಜ್ಯದ ಉನ್ನತ ಶಿಕ್ಷಣ ಸಚಿವರ ಹುದ್ದೆಯನ್ನೂ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ನಿರ್ವಹಿಸಿದ ಧೀಮಂತ.

ಈಗ 80ರ ಇಳಿಸಂಜೆಯಲ್ಲಿ, ಆಗಾಗ್ಗೆ ಕಾಡುವ ತೀವ್ರ ಅನಾರೋಗ್ಯದ ನಡುವೆ, ತಾನು ಹಾದು ಬಂದ ಜನರಾಜಕೀಯದ ರಾಜಮಾರ್ಗದತ್ತ ಮೊಹಿದೀನ್‌ ಅವರು ಸಣ್ಣದೊಂದು ಹೊರಳು ನೋಟವನ್ನು ಬೀರಿದ್ದಾರೆ– ಈ ಪುಸ್ತಕದಲ್ಲಿ. ಇದು ಅವರು ಬಯಸಿ ಬರೆದ ಪುಸ್ತಕವಲ್ಲ. ಏಕೆಂದರೆ ತನ್ನ ಬಗ್ಗೆ ತಾನೇ ಬರೆದುಕೊಳ್ಳಬೇಕೆಂಬ ಯಾವ ಹಪಾಹಪಿಯೂ ಅವರಿಗಿಲ್ಲ. ಆದರೆ ಕರಾವಳಿಯ ಲೇಖಕರಿಬ್ಬರು (ಮುಹಮ್ಮದ್‌ ಕುಳಾಯಿ ಮತ್ತು ಬಿ.ಎ.ಮುಹಮ್ಮದ್‌ ಅಲಿ) ಅವರನ್ನು ಬೆಂಬಿಡದೆ ಕಾಡಿ, ಬೇಡಿ, ಅವರ ನೆನಪುಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಎಂದೂ ಯಾರ ಮುಂದೆಯೂ ಕೈಚಾಚದೆ, ಮುನ್ನಡೆದ ರಾಜಕೀಯ ದಾರಿಯಲ್ಲಿ ಸಿಕ್ಕಿದ ಅವಕಾಶಗಳನ್ನು ಜನರಿಗಾಗಿ ಸದ್ಬಳಕೆ ಮಾಡಿಕೊಂಡ ಮೊಹಿದೀನ್‌ ಅವರ ಈ ಹೊರಳುನೋಟದಲ್ಲಿ ಉಂಡ ಕಹಿಯೂ ಇದೆ, ಕಂಡ ಸಿಹಿಯೂ ಇದೆ. ಯಾವ ಪೂರ್ವಗ್ರಹಗಳೂ ಇಲ್ಲದೆ, ರಾಜಕಾರಣವನ್ನು ನಿರ್ಮೋಹದಿಂದ ಗ್ರಹಿಸಿದ ಅವರ ಒಳನೋಟ ಮಾತ್ರ ಅನನ್ಯ. ಇನ್ನೆರಡು ವಾರಗಳಲ್ಲಿ ಬಿಡುಗಡೆ ಕಾಣಲಿರುವ ಮೊಹಿದೀನ್‌ ಅವರ ಆತ್ಮಕಥನ ‘ನನ್ನೊಳಗಿನ ನಾನು’ ಪುಸ್ತಕದಿಂದ ಆಯ್ದ ಭಾಗ ಇಲ್ಲಿದೆ...

**

1980ರ ಜೂನ್ ತಿಂಗಳಲ್ಲಿ ನವಲಗುಂದದಲ್ಲಿ ನಡೆದ ರೈತ ದಂಗೆಯನ್ನು ಬಳಸಿಕೊಳ್ಳುವುದರ ಮೂಲಕ ದೇವರಾಜ ಅರಸು ಅವರು ಮತ್ತೊಮ್ಮೆ ಇಂದಿರಾ ಗಾಂಧಿಯ ವಿರುದ್ಧ ರಾಜಕೀಯ ಶಕ್ತಿಯಾಗಿ ಎದ್ದು ನಿಲ್ಲಲು ಪ್ರಯತ್ನಿಸಿದರು.
ಆದರೆ ಆ ಸಂದರ್ಭದಲ್ಲಿ ಅತ್ಯಂತ ಅನಿರೀಕ್ಷಿತವಾದ ದುರಂತ ಒಂದು ಸಂಭವಿಸಿತು. ಅರಸು ಅವರ ಪ್ರೀತಿಯ ಮಗಳಾದ ನಾಗರತ್ನಾ ತಮ್ಮ ತೋಟದ ಮನೆಯಲ್ಲಿ ತೋಡಿಸಿದ್ದ ಬಾವಿಗೆ ಕಾಲು ಜಾರಿ ಬಿದ್ದು ಅಸುನೀಗಿದರು. ನಾಗರತ್ನಾ ಅವರು ಡಾ. ಎಂ.ಡಿ. ನಟರಾಜ್ ಅವರ ಪತ್ನಿ. ಈ ದುರ್ಘಟನೆಯಿಂದ ದಿಗ್ಭ್ರಮೆಗೊಳಗಾದ ಅರಸು ಅವರು ಕೆಲವು ದಿನಗಳ ಕಾಲ ಮೌನಿಯಾಗಿ ಉಳಿದರು.

ಗುಂಡೂರಾವ್ ಅವರ ಆಡಳಿತದಿಂದ ಜನ ಭ್ರಮನಿರಸನಗೊಂಡಿದ್ದರು. ಗುಂಡೂರಾವ್ ಮತ್ತು ಬಂಗಾರಪ್ಪ ಅವರ ವಿರಸ ತಾರಕಕ್ಕೇರಿತ್ತು. ರೈತ ಚಳವಳಿ, ಗೋಕಾಕ್ ಚಳವಳಿಗಳು ನಡೆದವು. ರಾಜ್ಯದಲ್ಲಿ ಬದಲಿ ಶಕ್ತಿಯೊಂದರ ಉಗಮಕ್ಕೆ ರಂಗ ಸಜ್ಜಾಗಿತ್ತು. ಇದನ್ನು ಮನಗಂಡ ದೇವರಾಜ ಅರಸು ಅವರು 1982ರಲ್ಲಿ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿದರು. ಕ್ರಾಂತಿರಂಗ ಜನಾಕರ್ಷಣೆಯ ಬಿಂದುವಾಯಿತು. ಜಾರ್ಜ್ ಫರ್ನಾಂಡಿಸ್, ಚಂದ್ರಶೇಖರ್‌ರಂತಹ ರಾಷ್ಟ್ರೀಯ ನಾಯಕರು ಅರಸು ಅವರಿಗೆ ಬೆಂಬಲ ಸೂಚಿಸಿದರು. ಅರಸು ಅವರ ರಾಜಕೀಯ ಬದುಕಿನಲ್ಲಿ ಹೊಸ ಆಸೆಯೊಂದು ಚಿಗುರೊಡೆಯಲು ಪ್ರಾರಂಭವಾಯಿತು. ಅರಸು ಒಲವಿನ ರಾಜಕೀಯ ಗಾಳಿ ಬೀಸಲಾರಂಭಿಸಿತು. ಅರಸು ಅವರನ್ನು ಬೆಂಬಲಿಸದೆ ನಾವು ತಪ್ಪು ಮಾಡಿದ್ದೇವೆ ಎಂಬ ಭಾವನೆ ಹಿಂದುಳಿದ ವರ್ಗಗಳಲ್ಲಿ ಮೂಡತೊಡಗಿತು. ಇಂತಹ ಪರ್ವ ಕಾಲದಲ್ಲಿ 1982ರ ಜೂನ್ 6ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಜಯನಗರ ಬಡಾವಣೆಯ ತಮ್ಮ ಗೆಳೆಯರ ಮನೆಯೊಂದರಲ್ಲಿ ಹೃದಯಾಘಾತದಿಂದ ದೇವರಾಜ ಅರಸು ಅವರ ಪ್ರಾಣಪಕ್ಷಿ ಹಾರಿಹೋಯಿತು.

ನನ್ನ ರಾಜಕೀಯದ ದುರಂತದ ದಿನಗಳು: ದೇವರಾಜ ಅರಸು ಅವರ ಮರಣಾನಂತರ ನಾನು ಮತ್ತು ಜಿಲ್ಲೆಯ ನನ್ನ ಎಲ್ಲ ಸಹೋದ್ಯೋಗಿ ಶಾಸಕರು ಅರಸು ಅವರು ಸ್ಥಾಪಿಸಿದ್ದ ಕ್ರಾಂತಿರಂಗ ಪಕ್ಷವನ್ನು ಸೇರದೆ ನಾವೆಲ್ಲ ಒಟ್ಟಾಗಿ ಇಂದಿರಾ ಕಾಂಗ್ರೆಸ್‌ಗೆ ಮರಳಿದೆವು. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದರು. ನಾನು 1983ರ ವರೆಗೂ ಶಾಸಕನಾಗಿದ್ದೆ. ಈ ಅವಧಿಯಲ್ಲಿ ನಾನು ನನ್ನ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ್ದೆ ಮತ್ತು ಪಕ್ಷ ಸಂಘಟನೆಯ ಕೆಲಸವನ್ನೂ ಮಾಡಿದ್ದೆ.

1983ರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಬಂಟ್ವಾಳ ಕ್ಷೇತ್ರಕ್ಕೆ ಮರಳಿ ನಾನು ಮತ್ತೆ ಆ ಕ್ಷೇತ್ರದ ಟಿಕೆಟ್ ಕೇಳಿದೆ. ಆ ಕ್ಷೇತ್ರದಲ್ಲಿ ಅತ್ಯಂತ ಪ್ರಬಲ ಅಭ್ಯರ್ಥಿಯಾಗಿದ್ದಂತಹ ರುಕ್ಮಯ ಪೂಜಾರಿ ಅವರನ್ನು ಬಹುದೊಡ್ಡ ಅಂತರದಲ್ಲಿ ಸೋಲಿಸಿ ಕ್ಷೇತ್ರಕ್ಕಾಗಿ ಬಹಳಷ್ಟು ದುಡಿದ ನನಗೆ 1983ರ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು ಟಿಕೆಟನ್ನು ಕೊಡಲು ಬಿಡಲೇ ಇಲ್ಲ. ಆದರೂ ನಾನು‍ಪಕ್ಷಕ್ಕಾಗಿ ಅವಿರತವಾಗಿ ಕೆಲಸವನ್ನು ಮಾಡಿದೆ. 1983ರ ಚುನಾವಣೆಯ ಫಲಿತಾಂಶ ಬಂದಾಗ ಈಗಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಹೀನಾಯವಾಗಿ ಸೋಲು ಅನುಭವಿಸಿತ್ತು.

ಜಿಲ್ಲೆಯ 9 ಕ್ಷೇತ್ರಗಳಾದಂತಹ ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ಟಾಳ, ಮಂಗಳೂರು, ಉಳ್ಳಾಲ, ಸುರತ್ಕಲ್ ಮತ್ತು ಮೂಡುಬಿದಿರೆ ಇವೆಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸೋತಿದ್ದು ಮಾತ್ರವಲ್ಲ, ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಥಮ ಬಾರಿಗೆ 6 ಸ್ಥಾನಗಳನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿತು. ಸುಳ್ಯ ಕ್ಷೇತ್ರದಿಂದ ಬಿಜೆಪಿಯ ಬಾಕಿಲ ಹುಕ್ರಪ್ಪ, ಪುತ್ತೂರಿನಿಂದ ರಾಮ ಭಟ್, ವಿಟ್ಲದಲ್ಲಿ ರುಕ್ಮಯ ಪೂಜಾರಿ, ಬೆಳ್ತಂಗಡಿಯಲ್ಲಿ ವಸಂತ ಬಂಗೇರ, ಬಂಟ್ವಾಳದಲ್ಲಿ ಶಿವರಾವ್, ಮಂಗಳೂರಿನಲ್ಲಿ ಧನಂಜಯ ಕುಮಾರ್ ಬಿಜೆಪಿಯ ಶಾಸಕರಾಗಿ ಆಯ್ಕೆಯಾದರು. ಉಳ್ಳಾಲದಲ್ಲಿ ರಾಮಚಂದ್ರರಾವ್ ಸಿಪಿಎಂನಿಂದ ಗೆದ್ದರೆ, ಸುರತ್ಕಲ್‌ನಿಂದ ಲೋಕಯ್ಯ ಶೆಟ್ಟಿ ಕ್ರಾಂತಿರಂಗದಿಂದ ಮತ್ತು ಮೂಡುಬಿದಿರೆಯಿಂದ ಅಮರನಾಥ್ ಶೆಟ್ಟಿ ಅವರು ಜನತಾ ಪಕ್ಷದಿಂದ ಗೆಲುವು ಸಾಧಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗುವುದರ ಜೊತೆಗೆ ರಾಜ್ಯದಲ್ಲಿಯೂ ಕಾಂಗ್ರೆಸ್ ಸೋತು ಜನತಾ ಪಾರ್ಟಿ ಬಿಜೆಪಿಯವರ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಚುನಾವಣೆಯಲ್ಲಿ ಬಿಜೆಪಿಯಿಂದ 18 ಶಾಸಕರು ಆಯ್ಕೆಯಾಗಿದ್ದರೆ ಜನತಾ ಪಾರ್ಟಿಯಿಂದ 95 ಮಂದಿ ಶಾಸಕರು, ಕಾಂಗ್ರೆಸ್‌ನಿಂದ 82 ಮತ್ತು ಇತರ 29 ಜನ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆಯವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಕಾಂಗ್ರೆಸೇತರ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. 1983 ರಿಂದ 1985ರವರೆಗೆ ಇವರ ಸರ್ಕಾರ ನಡೆಯಿತು.

ಬಿಜೆಪಿಯ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿದ್ದಂತಹ ರಾಮಕೃಷ್ಣ ಹೆಗಡೆ ಅವರಿಗೆ ಬಿಜೆಪಿಯವರು ಬಹಳ ಕಿರುಕುಳ ನೀಡಲಾರಂಭಿಸಿದರು. ಒಂದು ರೀತಿಯ ಹಂಗಿನ ಸರ್ಕಾರ ನಡೆಸುತ್ತಿರುವಂತಹ ಪರಿಸ್ಥಿತಿ ಅವರದ್ದಾಗಿತ್ತು. ಅದೇ ಸಂದರ್ಭದಲ್ಲಿ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಿತು. ಈ ಚುನಾವಣೆಗಳ ನಂತರ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಶಿಫಾರಸು ಮಾಡಿದರು. ಹಾಗೆ 1985ರಲ್ಲಿ ಕರ್ನಾಟಕ ವಿಧಾನಸಭೆಗೆ ಮಧ್ಯಾವಧಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸಹ ನಾನು ಎಷ್ಟೇ ಪ್ರಯತ್ನಿಸಿದರೂ ನನಗೆ ಟಿಕೆಟ್ ಕೊಡಲಿಕ್ಕೆ ಜನಾರ್ದನ ಪೂಜಾರಿ ಬಿಡಲೇ ಇಲ್ಲ. ಕಾಂಗ್ರೆಸ್‌ನಿಂದ ಕೆಲವು ಹೊಸ ಮುಖಗಳನ್ನು ಜಿಲ್ಲೆಯಲ್ಲಿ ಪರಿಚಯಿಸಲಾಯಿತು.

ಬಂಟ್ವಾಳದಿಂದ ರಮಾನಾಥ ರೈ, ವಿಟ್ಲದಿಂದ ಬಿ.ಎ. ಉಮರಬ್ಬ, ಪುತ್ತೂರಿನಿಂದ ವಿನಯಕುಮಾರ್ ಸೊರಕೆ, ಸುರತ್ಕಲ್‌ನಿಂದ ಎನ್.ಎಂ. ಅಡ್ಯಂತಾಯ ಹೀಗೆ ಕೆಲವು ಹೊಸ ಮುಖಗಳನ್ನು ಹಾಕಿ ಚುನಾವಣೆ ಎದುರಿಸಲಾಯಿತು. ಫಲಿತಾಂಶ ಬಂದಾಗ ಜನತಾ ಪಕ್ಷ ಅತ್ಯಂತ ದೊಡ್ಡ ಬಹುಮತದೊಂದಿಗೆ ಗೆದ್ದು ಅಧಿಕಾರದ ಗದ್ದುಗೆ ಏರಿತು. 1985ರ ಚುನಾವಣೆಯಲ್ಲಿ ಜನತಾ ಪಕ್ಷ 139 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 65 ಸ್ಥಾನಗಳಲ್ಲಿ ಮಾತ್ರ ವಿಜಯ ಸಾಧಿಸಿತು. ವಿಶೇಷವೆಂದರೆ 1983ರ ಚುನಾವಣೆಯಲ್ಲಿ 18 ಸ್ಥಾನಗಳನ್ನು ಹೊಂದಿದ್ದಂತಹ ಬಿಜೆಪಿ ಹೀನಾಯವಾಗಿ ಸೋತು ಕೇವಲ 2 ಸ್ಥಾನಗಳನ್ನು ಮಾತ್ರ ಉಳಿಸಿಕೊಂಡಿತು.

ಸಿಪಿಐ 3, ಸಿಪಿಎಂ 3, ಸ್ವತಂತ್ರವಾಗಿ 13 ಮಂದಿ ಗೆದ್ದು ಬಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿತು. ಸುಳ್ಯದಿಂದ ಕುಶಲ, ಪುತ್ತೂರಿನಿಂದ ವಿನಯಕುಮಾರ್ ಸೊರಕೆ, ವಿಟ್ಲದಿಂದ ಬಿ.ಎ. ಉಮರಬ್ಬ, ಬಂಟ್ವಾಳದಿಂದ ಬಿ.ರಮಾನಾಥ ರೈ, ಮಂಗಳೂರಿನಿಂದ ಬ್ಲೇಸಿಯಸ್ ಎಂ. ಡಿಸೋಜ, ಉಳ್ಳಾಲದಿಂದ ಬಿ.ಎಂ. ಇದಿನಬ್ಬ, ಸುರತ್ಕಲ್‌ನಿಂದ ಎನ್.ಎಂ. ಅಡ್ಯಂತಾಯ ಕಾಂಗ್ರೆಸ್‌ನ ಶಾಸಕರಾಗಿ ಆಯ್ಕೆಯಾದರು. ಮೂಡುಬಿದಿರೆಯಿಂದ ಅಮರನಾಥ ಶೆಟ್ಟಿ ಅವರು ಜನತಾ ಪಕ್ಷದಿಂದ ಗೆದ್ದರೆ, ಬೆಳ್ತಂಗಡಿಯಲ್ಲಿ ಪುನಃ ವಸಂತ ಬಂಗೇರ ಅವರು ಬಿಜೆಪಿಯ ಶಾಸಕರಾಗಿ ಆಯ್ಕೆಯಾದರು. ಈ ಚುನಾವಣೆಯೊಂದಿಗೆ ನನ್ನ ರಾಜಕೀಯದ ಒಂದು ಹಂತ ಮುಗಿಯಿತು. ನಾನು ರಾಜಕೀಯ ಪರದೆಯ ಹಿಂದೆ ಸರಿದು ಹೋದೆ.

ಹೀಗೇಕೆ ಮಾಡಿದರು ಈ ಮೂವರು?: ಒಂದು ಹಂತದಲ್ಲಿ ನನ್ನ ರಾಜಕೀಯ ಜೀವನವನ್ನು ಮುಗಿಸಿದವರು ಮೂರು ಜನ. ಜನಾರ್ದನ ಪೂಜಾರಿ, ಆಸ್ಕರ್‌ ಫರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ. ಈ ಮೂರು ಜನ ನನಗೇಕೆ ಈ ರೀತಿಯ ಅನ್ಯಾಯ ಮಾಡಿದರು ಎಂದು ಈಗಲೂ ನಾನು ಒಮ್ಮೊಮ್ಮೆ ಯೋಚಿಸುತ್ತೇನೆ. ಈ ಮೂವರಿಗೂ ನಾನು ಯಾವುದೇ ಹಂತದಲ್ಲಿ ಯಾವುದೇ ರೀತಿಯ ತೊಂದರೆ ಕೊಟ್ಟವನಲ್ಲ. ಸಾಧ್ಯವಾದಾಗ ಅವರಿಗೆ ಸಹಕಾರ ನೀಡಿದ್ದೇನೆ. ಆದರೆ ಈ ಮೂವರು ನನಗೆ ಮಾಡಿದ ಘನ ಘೋರ ಅನ್ಯಾಯ ಈಗಲೂ ಒಮ್ಮೊಮ್ಮೆ ನೆನಪಾಗುವಾಗ ನನಗೇಕೋ ಒಂದು ರೀತಿಯ ನೋವು ಕಾಡುತ್ತದೆ. ನಾನು 1969ರಿಂದ ಸಕ್ರಿಯವಾಗಿ ರಾಜಕಾರಣದಲ್ಲಿದ್ದವನು. ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ. ಇಂದಿರಾ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ದೇವರಾಜ ಅರಸು ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದವನು.

ಜಿಲ್ಲೆಯಲ್ಲಿ ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣ ಮತ್ತು ಸೇಮಿತ ಕೊಲೆ ಪ್ರಕರಣವಾದಾಗ ಅದರಲ್ಲಿ ಅನ್ಯಾಯಕ್ಕೆ ಒಳಗಾದವರ ಪರವಾಗಿ, ಗೇಣಿದಾರರ ಪರವಾಗಿ ನಿರಂತರ ಹೋರಾಟ ಮಾಡಿದವನು. 1977ರವರೆಗೂ ನಾನು ಕಾಂಗ್ರೆಸ್‌ನಲ್ಲೇ ಅವಿರತ ಹೋರಾಟವನ್ನು ಮಾಡಿದವನು. ಆದರೆ ಈ ಜನಾರ್ದನ ಪೂಜಾರಿ ಯಾರು? ಓರ್ವ ವಕೀಲ. ಬಂಟ್ವಾಳದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದವರು.

ಆಗಿನ ಪ್ರಖ್ಯಾತ ವಕೀಲ ಯೂಸುಫ್ ಹೈದರ್ ಅವರ ಸಹಾಯಕ. ಯೂಸುಫ್ ಹೈದರ್ ಅವರು ಸೇಮಿತ ಕೊಲೆ ಪ್ರಕರಣದಲ್ಲಿ ಗೇಣಿದಾರರ ಪರವಾಗಿ ವಾದ ಮಾಡಿದವರು. ಎಲ್ಲಿಯವರೆಗೆಂದರೆ ಸೇಮಿತ ಕೊಲೆ ಪ್ರಕರಣದಲ್ಲಿ ಕೆಲವು ಸಾಕ್ಷಿಗಳ ಅಗತ್ಯವಿದ್ದು ಸದಾನಂದ ಪೂಂಜಾ ಅಂತಹವರು ಆ ಸಾಕ್ಷಿಯನ್ನು ಹಾಕುವಂತಹ ಸಂದರ್ಭದಲ್ಲಿ ಇದೇ ಜನಾರ್ದನ ಪೂಜಾರಿ ‘ನಿಮಗೆಲ್ಲ ಯಾಕ್ರೀ ಈ ಉಸಾಬರಿ? ಈ ಗೇಣಿದಾರರು, ಬಡವರು ಅಂತ ಹೋರಾಟ ಮಾಡಿ ಸುಮ್ಮನೆ ನೀವು ನಿಮ್ಮನ್ನು ಯಾಕೆ ತೊಂದರೆಗೆ ಒಳಪಡಿಸಿಕೊಳ್ಳುತ್ತೀರಿ’ ಎಂದು ಹೇಳಿದವರು.

ಈ ಜನಾರ್ದನ ಪೂಜಾರಿ ರಾಜಕೀಯಕ್ಕೆ ಬಂದದ್ದು ವೀರಪ್ಪ ಮೊಯ್ಲಿ ಅವರ ಕೃಪೆಯಿಂದ. ವೀರಪ್ಪ ಮೊಯ್ಲಿ ಅವರಿಗೆ ಆಗಿನ ಲೋಕಸಭಾ ಸದಸ್ಯ ಕೆ.ಕೆ. ಶೆಟ್ಟಿ ಅವರ ಮೇಲೆ ಏನೋ ಒಂದು ಸಣ್ಣ ಅಸಮಾಧಾನವಿತ್ತು. ಅವರು ಸಮಯಕ್ಕಾಗಿ ಕಾಯುತ್ತಾ ಇದ್ದರು. 1977ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆ.ಕೆ. ಶೆಟ್ಟಿ ಅವರು ಏನೋ ಒಂದು ಮಾತಿಗೆ ‘ನಾನು ಈ ಸಲ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಹೇಳಿಬಿಟ್ಟರು.

ಇದನ್ನೇ ಕಾಯುತ್ತಿದ್ದಂತಹ ವೀರಪ್ಪ ಮೊಯ್ಲಿ ಅವರು, ಟಿ.ಎ. ಪೈ ಅವರನ್ನು ಸಂಪರ್ಕಿಸಿದರು. ಆಗ ಟಿ.ಎ. ಪೈ ಅವರು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ ಬಹಳ ಪ್ರಭಾವಿ ರಾಜಕಾರಣಿಯಾಗಿದ್ದರು. ದೇವರಾಜ ಅರಸು ಅವರು ಸಹ ಟಿ.ಎ. ಪೈ ಅವರಿಗೆ ತುಂಬಾ ಗೌರವವನ್ನು ಕೊಡುತ್ತಿದ್ದರು.

ವೀರಪ್ಪ ಮೊಯ್ಲಿ , ಟಿ.ಎ. ಪೈ ಅವರ ತಲೆ ತಿಂದರು. ‘ಸಾರ್, ನಿಮ್ಮ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರು ಬಿಲ್ಲವರಾಗಿದ್ದಾರೆ. ನೀವು ಗೆಲ್ಲಲು ಬಿಲ್ಲವರ ಮತ ಬಹಳ ಅಗತ್ಯ. ಬಿಲ್ಲವರ ಮನವೊಲಿಸಿ
ಕೊಳ್ಳಬೇಕಾದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಾವು ಓರ್ವ ಹಿಂದುಳಿದ ಬಿಲ್ಲವ ಅಭ್ಯರ್ಥಿಗೆ ಟಿಕೆಟನ್ನು ಕೊಡಬೇಕು’ ಎಂದು. ಟಿ.ಎ. ಪೈ ಅವರಿಗೆ ಇದು ಸರಿ ಕಂಡಿರಬೇಕು ಮತ್ತು ಹೇಗೂ ಕೆ.ಕೆ. ಶೆಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂತಲೂ ಹೇಳಿದ್ದಾರೆ. ‘ಆಯಿತಪ್ಪ ಒಂದು ಒಳ್ಳೆಯ ಬಿಲ್ಲವ ಅಭ್ಯರ್ಥಿಯನ್ನು ಹುಡುಕು’ ಎಂದು ಹೇಳಿದರು.

ಇಲ್ಲಿಗೆ ಕೆ.ಕೆ. ಶೆಟ್ಟಿ ಅವರನ್ನು ಬದಿಗೆ ಸರಿಸುವ ವೀರಪ್ಪ ಮೊಯ್ಲಿ ಅವರ ಉದ್ದೇಶ ಈಡೇರುತ್ತದೆ. ಓರ್ವ ಬಿಲ್ಲವ ಅಭ್ಯರ್ಥಿಯ ಹುಡುಕಾಟದಲ್ಲಿ ವೀರಪ್ಪ ಮೊಯ್ಲಿ ತೊಡಗಿದರು. ಆವಾಗ ಅವರ ಕಣ್ಣಿಗೆ ಬಿದ್ದದ್ದು ಈ ಪೂಜಾರಿ. ಆಗ ಇವರು ಜನಾರ್ದನ ಪೂಜಾರಿ ಅಲ್ಲ, ಖಾಲಿ ಜನಾರ್ದನ ಅಷ್ಟೆ. ‘ಪೂಜಾರಿ’ ಆಮೇಲೆ ವೀರಪ್ಪ ಮೊಯ್ಲಿ ಸೇರಿಸಿದ್ದು. ಹಾಗೆ ಜನಾರ್ದನ ಪೂಜಾರಿ ಅವರನ್ನು ಸಂಪರ್ಕಿಸಿ ಅವರನ್ನು ಹುರಿದುಂಬಿಸಿದರು. ಪೂಜಾರಿ ಹಿಂಜರಿದಿದ್ದರು. ಅದುವರೆಗೆ ರಾಜಕೀಯ ಏನು ಎಂದು ಗೊತ್ತಿರದಿದ್ದ ಅವರಿಗೆ ಖಾದಿ ಅಂಗಿಯನ್ನು ಹಾಕಿಸಿ ಟಿ.ಎ. ಪೈ ಅವರ ಎದುರಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಅವರನ್ನು ಹೊಗಳಿ ಪರಿಚಯಿಸಿ ಟಿ.ಎ. ಪೈ ಅವರನ್ನು ಒಪ್ಪಿಸಿದರು. ಆಮೇಲೆ ದೇವರಾಜ ಅರಸು ಅವರ ಹತ್ತಿರ ಟಿ.ಎ. ಪೈ ಮತ್ತು ವೀರಪ್ಪ ಮೊಯ್ಲಿ ಹೋಗಿ ಜನಾರ್ದನ ಪೂಜಾರಿ ಅವರ ಹೆಸರನ್ನು ಹೇಳಿ, ಅವರ ಬಗ್ಗೆ ಸ್ವಲ್ಪ ಹೊಗಳಿ, ಅರಸು ಅವರ ಮನವೊಲಿಸಿದರು.

ಹೀಗೆ ಕಾಂಗ್ರೆಸ್ ಪಕ್ಷದ ನಾಲ್ಕಾಣೆಯ ಸದಸ್ಯನೂ ಅಲ್ಲದ ಒಬ್ಬ ವ್ಯಕ್ತಿ ನೇರವಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರು. ಯಾರಿಗೂ ಪರಿಚಯ ಇಲ್ಲದ ಈ ಜನಾರ್ದನ ಪೂಜಾರಿ ಚುನಾವಣಾ ಕಣಕ್ಕೆ ಇಳಿದರು. ಆಗ ಇಂಗ್ಲಿಷ್ ದೈನಿಕವೊಂದರಲ್ಲಿ ಬಂದ ಒಂದು ತಲೆಬರಹ ಈಗಲೂ ನನಗೆ ನೆನಪಾಗುತ್ತಿದೆ, ‘ಹೂ ಈಸ್ ದಿಸ್ ಪೂಜಾರಿ’.

ಈಜನಾರ್ದನ ಪೂಜಾರಿ ಚುನಾವಣೆಯಲ್ಲಿ ಗೆದ್ದರಲ್ಲ, ಅದು ಇಂದಿರಾ ಗಾಂಧಿ ಅವರ ಹೆಸರಿನಿಂದ ಮಾತ್ರ ಗೆದ್ದದ್ದಲ್ಲದೆ,ಜನಾರ್ದನ ಪೂಜಾರಿ ಗೆದ್ದದ್ದಲ್ಲ. ಈ ಇಂದಿರಾ ಗಾಂಧಿಯವರ ಹೆಸರು ಈ ಜಿಲ್ಲೆಯಲ್ಲಿ ಇಷ್ಟೊಂದು ಪ್ರಚಲಿತಕ್ಕೆ ಬರಲು ಕಾರಣ ಯಾರು? ದೇವರಾಜ ಅರಸು ಅವರು. ದೇವರಾಜ ಅರಸು ಅವರ ಎಲ್ಲ ಕಾರ್ಯಕ್ರಮಗಳನ್ನು ಈ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದವರು ಯಾರು? ನಾವು. ಅದು ನಾನಾಗಿರಬಹುದು, ಸುಬ್ಬಯ್ಯ ಶೆಟ್ಟಿ ಅವರಾಗಿರಬಹುದು. ಕೆ.ಕೆ ಶೆಟ್ಟಿ ಅವರಾಗಿರಬಹುದು. ನಾವೆಲ್ಲ ನಿರಂತರವಾಗಿ ದುಡಿದ ಆ ಬೆವರಿನ ಫಲದಿಂದಾಗಿ ಜನಾರ್ದನ ಪೂಜಾರಿ ಅವರು ಲೋಕಸಭಾ ಸದಸ್ಯರಾದದ್ದು. ಆದರೆ ಗೆದ್ದ ನಂತರ ಈಜನಾರ್ದನ ಪೂಜಾರಿ ನಮ್ಮನ್ನೆಲ್ಲ ಮರೆತುಬಿಟ್ಟರು.

ಇಡೀ ಜಿಲ್ಲೆಯ ರಾಜಕೀಯವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡರು. ಎಲ್ಲಿಯವರೆಗೆ ಎಂದರೆ, ಒಂದು ಗ್ರಾಮ ಪಂಚಾಯಿತಿ ಚುನಾವಣೆ ಆಗುವಾಗ ಅಲ್ಲಿಯ ಅಭ್ಯರ್ಥಿಯ ಹೆಸರು ಕೂಡಾಜನಾರ್ದನ ಪೂಜಾರಿ ಹೇಳಬೇಕು. ಕಾರ್ಪೊರೇಷನ್ ಚುನಾವಣೆ ಆಗುವಾಗಲೂ ಯಾರಿಗೆಲ್ಲ ಟಿಕೆಟ್ ಕೊಡಬೇಕು ಎಂದು ಈ ಪೂಜಾರಿ ಹೇಳಬೇಕು. ಯಾರು ಮೇಯರ್ ಆಗಬೇಕು ಅದನ್ನೂ ಪೂಜಾರಿಯೇ ಹೇಳಬೇಕು. ಅಂತಹ ಒಂದು ಪರಿಸ್ಥಿತಿಯನ್ನು ಪೂಜಾರಿ ತಮ್ಮ ಸ್ವಾರ್ಥಕ್ಕಾಗಿ ನಿರ್ಮಾಣ ಮಾಡಿಕೊಂಡರು. ನಾವೆಲ್ಲ ದುಡಿದದ್ದು, ಪೂಜಾರಿ ಬಂದು ಕುಳಿತದ್ದು, ನಮ್ಮನ್ನೆಲ್ಲ ತುಳಿದದ್ದು.

ಈಜನಾರ್ದನ ಪೂಜಾರಿ ಅವರು ಎಷ್ಟು ಅಹಂಕಾರವನ್ನು ಪ್ರದರ್ಶಿಸಿದ್ದರು ಮತ್ತು ನನಗೆ ಅವಮಾನ ಮಾಡಿದ್ದರು ಎಂದರೆ 1985ರಲ್ಲಿ ನಾನು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಬಹಳಷ್ಟು ಪ್ರಯತ್ನಿಸುತ್ತಿರುವಾಗ ಒಮ್ಮೆಯೂ ಸಹ ಅವರನ್ನು ಭೇಟಿಯಾಗುವ ಅವಕಾಶವನ್ನು ನನಗೆ ಕೊಡಲೇ ಇಲ್ಲ. ಎಷ್ಟೋ ಸಲ ಫೋನ್‌ನಲ್ಲಿ ಪ್ರಯತ್ನಿಸಿದರೂ ಸೌಜನ್ಯಕ್ಕಾದರೂ ಮಾತನಾಡಲಿಲ್ಲ. ಆಸ್ಕರ್ ಫರ್ನಾಂಡಿಸ್ ಅವರು ನನಗೆ ಸಲಹೆ ನೀಡಿ, ‘ನೀವು ಪೂಜಾರಿ ಅವರನ್ನು ಕಂಡು ಮಾತನಾಡಿಸಿ, ಅವರನ್ನು ಒಪ್ಪಿಸಿ’ ಎಂದು ಹೇಳಿದ್ದರೂ ಸಹ ನನ್ನನ್ನು ಭೇಟಿಯಾಗುವ ಕನಿಷ್ಠ ಸೌಜನ್ಯವನ್ನೂ ಈ ಪೂಜಾರಿ ತೋರಿಸಲಿಲ್ಲ.

ಅದು ಮಾತ್ರ ಅಲ್ಲ, ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ಅವರಿಗೆ ಟಿಕೆಟ್ ಖಾತ್ರಿಯಾಗಿ ಅವರ ಹೆಸರು ಘೋಷಣೆಯಾದ ನಂತರ ನಾನು ಪುನಃ ಪೂಜಾರಿ ಅವರಿಗೆ ಫೋನ್ ಮಾಡಿದಾಗ, ಫೋನ್‌ನಲ್ಲಿ ಮಾತನಾಡಿದರು. ಆವಾಗ ಅವರು ಹೇಳಿದ ಮಾತು ಇಂದೂ ಸಹ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಪೋಲೆ, ಪೋಲೆ, ಫೀಲ್ಡ್ ಕೆಲಸ ಮಲ್ಪುಲೆ, ಬೊಕ್ಕ ಪೂರ ತೂಕ’ (ಹೋಗಿ ಹೋಗಿ, ಫೀಲ್ಡ್‌ನಲ್ಲಿ ಕೆಲಸ ಮಾಡಿ, ಮತ್ತೆ ಎಲ್ಲ ನೋಡುವ) ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು.

ಆಸ್ಕರ್ ಫರ್ನಾಂಡಿಸ್ ಅವರು ನಾನು ಗುರುತಿಸಿದ ಜಿಲ್ಲೆಯ ಓರ್ವ ಯುವಕ. ಹರಿಶ್ಚಂದ್ರ ಬೆಂಗ್ರೆ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಯೂತ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದವರು ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಅವರು. ಆಗ ಆಸ್ಕರ್ ಫರ್ನಾಂಡಿಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಅವರನ್ನು ರಾಜಕೀಯದಲ್ಲಿ ಮೇಲೆ ತರಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಅದಕ್ಕಾಗಿ ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಅರ್ಬನ್ ಮತ್ತು ರೂರಲ್ ಎಂದು ವಿಭಜಿಸಿ ಉಡುಪಿಯನ್ನು ದಕ್ಷಿಣ ಕನ್ನಡದ ರೂರಲ್ ಜಿಲ್ಲೆ ಎಂದು ಗುರುತಿಸಿ, ಆ ಜಿಲ್ಲೆಗೆ ಆಸ್ಕರ್ ಫರ್ನಾಂಡಿಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಇದಕ್ಕೆ ಕೆಲವರ ಆಕ್ಷೇಪ ಇದ್ದರೂ ನಾನು ಅದಕ್ಕೆ ಸಮಜಾಯಿಸಿ ಕೊಟ್ಟಿದ್ದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಿಂದ ಬೈಂದೂರುವರೆಗೆ ಬಹಳ ವಿಶಾಲವಾಗಿದೆ. ಇದನ್ನು ಹೀಗೆ ವಿಭಜಿಸದಿದ್ದರೆ ಯುವ ಕಾಂಗ್ರೆಸ್‌ನ ಸಂಘಟನೆಗೆ ಕಷ್ಟವಾಗಬಹುದೆಂದು ಕಾರಣ ನೀಡಿದ್ದೆ. ನನಗೆ ಆಸ್ಕರ್ ಅವರಿಗೆ ಒಂದು ಸೂಕ್ತ ಸ್ಥಾನಮಾನ ಕೊಡಬೇಕು ಎಂಬ ಉದ್ದೇಶ ಮನಸ್ಸಿನಲ್ಲಿತ್ತು. ಇದು ಸುಬ್ಬಯ್ಯಶೆಟ್ಟಿ ಅವರಿಗೆ ಇಷ್ಟವಿರಲಿಲ್ಲ. 1980ರ ಲೋಕಸಭಾ ಚುನಾವಣೆ ಬಂದಾಗ ಟಿಕೆಟ್ ಕೊಡುವಾಗ ಯುವ ಕಾಂಗ್ರೆಸ್‌ಗೆ ಒಂದು ಪ್ರಾತಿನಿಧ್ಯ ಕೊಡಬೇಕು ಎಂದು ಕಾಂಗ್ರೆಸ್‌ನಲ್ಲಿ ತೀರ್ಮಾನ ಆದ ಕಾರಣ ಆ ಕೋಟಾದಲ್ಲಿ ಆಸ್ಕರ್‌ಗೆ ಉಡುಪಿ ಲೋಕಸಭೆಗೆ ಟಿಕೆಟ್ ಸಿಕ್ಕಿತು ಮತ್ತು ಅವರು, ಟಿ.ಎ. ಪೈ ಎದುರು ಭರ್ಜರಿ ವಿಜಯವನ್ನು ಸಾಧಿಸಿ ಲೋಕಸಭಾ ಸದಸ್ಯರಾದರು.

1985ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಂಟ್ಟಾಳದ ಟಿಕೆಟಿಗಾಗಿ ಪುನಃ ಪ್ರಯತ್ನಿಸುತ್ತಿರುವಾಗ ನನ್ನ ಮಿತ್ರ ಮಾಜಿ ಶಾಸಕ ಶುಂಠಿಕೊಪ್ಪ ಇಬ್ರಾಹಿಂ ಅವರು ನನಗೆ ತುಂಬ ಬೆಂಬಲ ನೀಡಿದ್ದರು. ಇಬ್ರಾಹಿಂ ಅವರು ಗುಂಡೂರಾವ್ ಅವರ ಅತ್ಯಂತ ಆತ್ಮೀಯರಾಗಿದ್ದರು. ಗುಂಡೂರಾವ್ ಬಳಿಗೂ ನನ್ನನ್ನು ಕರೆದುಕೊಂಡು ಹೋಗಿದ್ದರು. ಶಾಸಕನಾಗಿ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ದೇವರಾಜ ಅರಸು ಅವರ ಜೊತೆಗಿದ್ದು, ಆ ನಂತರ ಕಾಂಗ್ರೆಸ್‌ಗೆ ಬಂದ ಇತರ ಎಲ್ಲ ಜಿಲ್ಲೆಗಳಲ್ಲಿ ಇತರ ಎಲ್ಲ ಶಾಸಕರಿಗೆ ಸಮಾನ ಸ್ಥಾನಮಾನ ನೀಡಲಾಗಿದೆ. ನಿಮಗೆ ಟಿಕೆಟ್ ನಿರಾಕರಿಸುವುದು ಸರಿಯಲ್ಲ.

ನೀವು ಇಲ್ಲಿಯೇ ಕುಳಿತುಕೊಳ್ಳಬೇಡಿ. ದೆಹಲಿಗೆ ಹೋಗಿ ಪ್ರಯತ್ನಿಸಿ ಎಂದು ಗುಂಡೂರಾವ್ ಸಲಹೆ ನೀಡಿದ್ದರು. ನನಗೆ ಆ ಸಂದರ್ಭದಲ್ಲಿ ಸಹಾಯ ಮಾಡಬಹುದಾಗಿದ್ದ ಏಕೈಕ ವ್ಯಕ್ತಿ ಫರ್ನಾಂಡಿಸ್. ನಾನು ಆಸ್ಕರ್‌ಗೆ ಮಾಡಿದ್ದ ಉಪಕಾರವನ್ನು ಸ್ಮರಿಸಿಯಾದರೂ ನನಗೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಬಹುದು ಎಂದು ಆಗ ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು.

ದೆಹಲಿಗೆ ಹೋಗಿ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ನನ್ನ ಎಲ್ಲ ಭಾವನೆಗಳನ್ನು ವಿವರಿಸಿ ಟಿಕೆಟ್ ಕೇಳಿದೆ. ಆದರೆ ಆಸ್ಕರ್ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದರು. ‘ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಅವರ ತೀವ್ರ ಒತ್ತಡ ನನ್ನ ಮೇಲೆ ಇದೆ. ನನಗೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕೈಚೆಲ್ಲಿದ್ದರು. ಆಗ ನಾನು ಹೇಳಿದೆ ‘ಬಂಟ್ವಾಳ ವಿಧಾನಸಭಾ ಕ್ಷೇತ್ರ ನಿಮ್ಮ ಉಡುಪಿ ಲೋಕಸಭಾ ಕ್ಷೇತ್ರದ ಒಳಗೆ ಬರುತ್ತದೆ. ಅಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂದು ನಿರ್ಧರಿಸುವವರು ನೀವು. ಕೇಂದ್ರದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದೀರಿ. ಖಂಡಿತವಾಗಿಯೂ ನೀವು ನನಗೆ ಸಹಾಯ ಮಾಡಬಹುದು. ನನಗೆ ಟಿಕೆಟ್ ನಿರಾಕರಿಸಿದರೆ ನೀವು ನನ್ನನ್ನು ರಾಜಕೀಯದ ತಿಪ್ಪೆಗುಂಡಿಗೆ ಎಸೆದಂತೆ’ ಎಂದು ಹೇಳಿದೆ. ಆದರೂ ಆಸ್ಕರ್ ಫರ್ನಾಂಡಿಸ್ ಮನಸ್ಸು ಮಾಡಲಿಲ್ಲ.

‘ನೀವು ಈಗ ಸಾಮಾನ್ಯ ರಾಜಕಾರಣಿ ಅಲ್ಲ. ಪ್ರಧಾನಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದೀರಿ. ಈ ದೇಶದ ಅನೇಕ ವ್ಯಕ್ತಿಗಳ ರಾಜಕೀಯ ಭವಿಷ್ಯ ನಿಮ್ಮ ಕೈಯಲ್ಲಿದೆ. ನಿಮ್ಮಿಂದ ಯಾರಿಗೂ ಅನ್ಯಾಯವಾಗಬಾರದು. ನಿಮ್ಮ ಚುನಾವಣೆಯಲ್ಲಿ ನಾನು ದುಡಿದಿದ್ದೇನೆ. ಬಂಟ್ವಾಳ ಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಲೀಡ್ ತೆಗೆದುಕೊಟ್ಟಿದ್ದೇನೆ. ನಾನು ಅರಸು ಜೊತೆ ನಿಂತೆ ಎಂಬ ಕಾರಣಕ್ಕಾಗಿ ನನಗೆ ಟಿಕೆಟ್ ನಿರಾಕರಿಸುವುದು ಸರಿಯಲ್ಲ. ಬೇರೆ ಎಲ್ಲಾ ಜಿಲ್ಲೆಗಳಲ್ಲೂ ಅರಸು ಜೊತೆಗಿದ್ದು ಬಿಟ್ಟು ಬಂದವರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದೆಲ್ಲ ಹೇಳಿ ಮನವರಿಕೆ ಮಾಡಿದೆ. ಆದರೂ ಆಸ್ಕರ್ ಫರ್ನಾಂಡಿಸ್ ಮನಸ್ಸು ಕರಗಲೇ ಇಲ್ಲ.

ವೀರಪ್ಪ ಮೊಯ್ಲಿ ಅವರು ನನ್ನ ರಾಜಕೀಯ ಬದುಕಿಗೆ ಏಕೆ ಅಡ್ಡಗಾಲಿಟ್ಟರು ಎಂಬುದು ಇಂದಿಗೂ ಒಂದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಏಕೆಂದರೆ ನಾನೆಂದೂ ಮೊಯ್ಲಿ ಅವರಿಗೆ ಯಾವ ರೀತಿಯ ತೊಂದರೆಯನ್ನೂ ಕೊಟ್ಟವನಲ್ಲ. ಅರಸು ಮತ್ತು ಇಂದಿರಾ ಗಾಂಧಿ ಅವರ ಮಧ್ಯೆ ರಾಜಕೀಯ ಬಿರುಕನ್ನು ಹುಟ್ಟಿಸುವುದರಲ್ಲಿ ಮೊಯ್ಲಿ ಅವರ ಕಿಂಚಿತ್ ಕೈವಾಡ ಇದೆ ಎಂಬ ಸುದ್ದಿ ಇತ್ತಾದರೂ ಅದನ್ನು ಎಲ್ಲಿಯೂ ಎಂದೂ ನಾನು ಹೇಳಿಕೊಂಡವನಲ್ಲ. ಆದರೂ ಮೊಯ್ಲಿ ನನಗೇಕೆ ಅನ್ಯಾಯ ಮಾಡಿದರು ಎಂಬ ಪ್ರಶ್ನೆ ಇಂದಿಗೂ ನನ್ನ ಮನಸ್ಸಿನಲ್ಲಿ ಉಳಿದಿದೆ.

ನಾನು ದೇವರಾಜ ಅರಸು ಜೊತೆ ಹೋಗಿದ್ದೆ ಎಂಬ ಕಾರಣವನ್ನು ನೀಡಿ ನನ್ನನ್ನು ತುಳಿದರು. ಇಡೀ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿಯೂ ಸಹ ಅರಸು ಜೊತೆ ಹೋಗಿ ಹಿಂದೆ ಬಂದವರಿಗೆ ಈ ಪರಿಸ್ಥಿತಿ ಆಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಅರಸು ಜೊತೆ ಹೋಗಿ ಬಂದವರು. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಅರಸು ಜೊತೆ ಹೋಗಿಬಂದ ಎಲ್ಲ ನಾಯಕರನ್ನು ನೆಲಸಮ ಮಾಡಿಬಿಟ್ಟರು.

ಕಾಪು ಭಾಸ್ಕರ ಶೆಟ್ಟಿ, ದಾಮೋದರ ಮುಲ್ಕಿ, ಬಿ. ಸುಬ್ಬಯ್ಯ ಶೆಟ್ಟಿ, ಆನಂದಕುಂದ ಹೆಗ್ಡೆ; ಪಕ್ಷಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ, ಭೂಸುಧಾರಣೆಯ ಕಾನೂನು ಬಂದಾಗ ತನ್ನ ಜಮೀನನ್ನು ಗೇಣಿದಾರರಿಗೆ ಸ್ವಇಚ್ಛೆಯಿಂದ ಬಿಟ್ಟುಕೊಟ್ಟ ಎ.ಜೆ. ಕೊಡ್ಗಿ ಈ ಎಲ್ಲ ನಾಯಕರನ್ನು ಈಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ನಿಷ್ಕರುಣೆಯಿಂದ ತುಳಿದುಬಿಟ್ಟರು.

ಆಸ್ಕರ್ ಫರ್ನಾಂಡಿಸ್ ಮನಸ್ಸು ಮಾಡಿದ್ದರೆ ನ್ಯಾಯ ಒದಗಿಸಬಹುದಾಗಿತ್ತು. ಅವರು ಕೂಡಾ ಈ ಪೂಜಾರಿ, ಮೊಯ್ಲಿ ಅವರಿಗೆ ಹೆದರಿದರು. ಆನಂದಕುಂದ ಹೆಗ್ಡೆ ಬಹಳ ಸುಂದರ ಕನ್ನಡ ಮಾತಾಡುವವರು. ಈ ಮೂರು ಜನರಿಗೆ ಅವರೊಂದೊಂದು ಹೆಸರಿಟ್ಟಿದ್ದರು. ಒಬ್ಬ ಕೀಚಕ, ಮತ್ತೊಬ್ಬ ನಯವಂಚಕ, ಇನ್ನೊಬ್ಬ ಮಾಯಾವಿ. ಈ ತ್ರಿಮೂರ್ತಿಗಳು ನಮ್ಮನ್ನು ಮೇಲೆ ಬರಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು ಮತ್ತು ಹಾಗೆಯೇ ಆಯಿತು.

ಈ ಎಲ್ಲ ಘಟನೆಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ ಅಷ್ಟೆ. ಈ ಗಳಿಗೆಯಲ್ಲಿ ನನ್ನ ಮನಸ್ಸಿನಲ್ಲಿ ಈ ಮೂರು ಜನರ ಮೇಲೆ ಯಾವುದೇ ರೀತಿಯ ಕೋಪವಾಗಲಿ, ದ್ವೇಷವಾಗಲಿ ಖಂಡಿತಾ ಇಲ್ಲ. ಇವೆಲ್ಲ ರಾಜಕೀಯದಲ್ಲಿ ಆಗಬಹುದಾದ ಘಟನೆಗಳು. ಇಲ್ಲಿ ಯಾರನ್ನು ಯಾರೂ ದೂಷಿಸಬಾರದು. ದೂಷಿಸುವುದು ಸಹ ಸರಿಯಲ್ಲ.ಜನಾರ್ದನ ಪೂಜಾರಿ ಅವರು ಈಗ ನನ್ನ ಹಾಗೆ ವಯೋವೃದ್ಧರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿರಂತರ ರಾಜಕೀಯ ಸೋಲಿನಿಂದ, ಕಾಲಚಕ್ರದ ಹೊಡೆತದಿಂದ, ಸಣ್ಣಪುಟ್ಟ ಘಟನೆಗಳಿಂದ ಬಹಳ ನೊಂದಿದ್ದಾರೆ, ನಲುಗಿದ್ದಾರೆ. ಅವರಿಗೆ ದೇವರು ಆರೋಗ್ಯವನ್ನು, ಮನಃಶಾಂತಿಯನ್ನು ನೀಡಲಿ ಎಂದು ನಾನು ಬಯಸುತ್ತೇನೆ.

ಹಾಗೆಯೇ ಆಸ್ಕರ್ ಫರ್ನಾಂಡಿಸ್, ಈಗಲೂ ನನ್ನನ್ನು ಕಂಡರೆ ಬಹಳ ಗೌರವಪೂ ರ್ವಕವಾಗಿ ವ್ಯವಹರಿಸುತ್ತಾರೆ. ನನ್ನನ್ನು ಬಹಳಷ್ಟು ಪ್ರೀತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಅವರಿಗೆ ಇನ್ನೂ ರಾಜಕೀಯ ಭವಿಷ್ಯವಿದೆ. ಅವರಿಗೂ ನಾನು ಶುಭವನ್ನು ಹಾರೈಸುತ್ತೇನೆ. ವೀರಪ್ಪ ಮೊಯ್ಲಿ ಅವರು ಸಕ್ರಿಯವಾಗಿ ರಾಜಕಾರಣದಲ್ಲಿದ್ದಾರೆ. ಕೇಂದ್ರದಲ್ಲಿ ಈಗ ರಾಷ್ಟ್ರಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈಗಲೂ ನನ್ನನ್ನು ಭೇಟಿಯಾದಾಗಲೆಲ್ಲಾ ಪ್ರೀತಿಪೂರ್ವಕವಾಗಿ ಮಾತನಾಡಿಸುತ್ತಾರೆ.

ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಹಜ್‌ಗೆ ಸಂಬಂಧಪಟ್ಟ ವಿಷಯದಲ್ಲಿ ವೀರಪ್ಪ ಮೊಯ್ಲಿ ಅವರಿಗೆ ಒಂದು ಮನವಿಯನ್ನು ಕೊಡಲು ದೆಹಲಿಗೆ ಒಂದು ನಿಯೋಗದಲ್ಲಿ ಹೋಗಿದ್ದೆವು. ನಮ್ಮನ್ನು ನೋಡಿದ ವೀರಪ್ಪ ಮೊಯ್ಲಿ ಅವರು ‘ನೀವು ಯಾವುದೇ ಕೆಲಸಕ್ಕೆ ಬಂದರೂ ನಾನು ನಿಮಗೆ ಮಾಡಿಕೊಡುವುದಿಲ್ಲ. ಯಾಕೆಂದರೆ ನಿಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರು ನನಗೆ ಮೋಸ ಮಾಡಿದ್ದಾರೆ’ ಎಂದು ಹೇಳಿದರು. ಈ ಮಾತು ಮೊಯ್ಲಿ ಹೇಳಲು ಕಾರಣವೂ ಇತ್ತು. ಮೊಯ್ಲಿಗೆ ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿರಲಿಲ್ಲ. ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಕೋಪದಲ್ಲಿ ಅವರು ನಮಗೆ ಈ ಮಾತನ್ನು ಹೇಳಿದ್ದರು.

ನಾನು ತುಸು ಏರಿದ ಧ್ವನಿಯಲ್ಲಿ ‘ಮೊಯ್ಲಿ ಅವರೇ, ನಿಮಗೆ ಪುನರ್ಜನ್ಮ ಕೊಟ್ಟದ್ದು ಚಿಕ್ಕಬಳ್ಳಾಪುರ ಆಗಿರಬಹುದು, ಆದರೆ ನಿಮಗೆ ರಾಜಕೀಯ ಜನ್ಮ ಕೊಟ್ಟದ್ದು ದಕ್ಷಿಣ ಕನ್ನಡ ಜಿಲ್ಲೆ. ಈ ಬಾರಿ ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯವರು ಟಿಕೆಟ್ ಕೊಡಬಾರದು ಎಂದು ತೀರ್ಮಾನಿಸಿದ್ದರೆ ಅದು ನಿಮ್ಮ ಒಳ್ಳೆಯದಕ್ಕೆ. ಅದರಿಂದ ನಿಮಗೆ ಒಳ್ಳೆಯದೇ ಆಯಿತು. ಚಿಕ್ಕಬಳ್ಳಾಪುರದಲ್ಲಿ ನಿಂತ ಕಾರಣ ನೀವು ಲೋಕಸಭಾ ಸದಸ್ಯರಾದಿರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಂತಿದ್ದರೆ ನೀವು ಲೋಕಸಭಾ ಸದಸ್ಯರಾಗುತ್ತಿರಲಿಲ್ಲ. ಖಂಡಿತಾ ಸೋಲುತ್ತಿದ್ದಿರಿ. ನೀವು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆಭಾರಿಯಾಗಿರಬೇಕು. ನೀವು ಈ ರೀತಿ ಹೇಳುವುದು ಸರಿಯಲ್ಲ’ ಎಂದು ಖಡಾಖಂಡಿತವಾಗಿ ಹೇಳಿದೆ. ಆಗಲೇ ಮೊಯ್ಲಿ ಅವರು ಬದಲಾದರು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿದರು. ನಮ್ಮ ಮನವಿಯನ್ನು ಸ್ವೀಕರಿಸಿದರು. ನನ್ನ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗಿಬಿಟ್ಟರು. ನಾನು ಹೇಳಿದ್ದು ಸತ್ಯವಾಗಿತ್ತು.

ಮೊಯ್ಲಿ ಅವರಿಗೂ ನಾನು ಒಳಿತನ್ನು ಆಶಿಸುತ್ತೇನೆ. ಇಲ್ಲಿ ನಾನು ನೆನಪಿಸಿಕೊಂಡಿರುವುದು ಇತಿಹಾಸದ ಕೆಲವು ಘಟನೆಗಳನ್ನು ಮಾತ್ರ. ಯಾರೂ ಇದನ್ನು ಅಪಾರ್ಥ ಮಾಡಿಕೊಳ್ಳಬಾರದು ಮತ್ತು ರಾಜಕೀಯದಲ್ಲಿ ಇವೆಲ್ಲ ಸಹಜವಾದ ಪ್ರಕ್ರಿಯೆಗಳೆಂದು ಭಾವಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT