ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಕರಣ ಹಂಚಿಕೆ ಸಿಜೆಐ ವಿಶೇಷಾಧಿಕಾರ’

ಮೂರನೇ ಬಾರಿ ತೀರ್ಪು ಪುನರುಚ್ಚರಿಸಿದ ‘ಸುಪ್ರೀಂ’
Last Updated 6 ಜುಲೈ 2018, 19:41 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ನ್ಯಾಯಪೀಠಗಳಿಗೆ ವಿಚಾರಣೆಗಾಗಿ ಪ್ರಕರಣಗಳನ್ನು ಹಂಚುವುದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ (ಸಿಜೆಐ) ವಿಶೇಷಾಧಿಕಾರ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ.

ಮುಖ್ಯ ನ್ಯಾಯಮೂರ್ತಿಯು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಮೊದಲಿಗರು. ನ್ಯಾಯಾಲಯದ ಆಡಳಿತಾತ್ಮಕ ವಿಚಾರಗಳಿಗೆ ಅವರದ್ದೇ ನಾಯಕತ್ವ. ಆಡಳಿತಾತ್ಮಕ ವಿಚಾರಗಳಲ್ಲಿ ಪ್ರಕರಣಗಳ ಹಂಚಿಕೆ ಕೂಡ ಸೇರಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್‌ ಅವರ ಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿಯು ಪ್ರಕರಣಗಳನ್ನು ಹಂಚುವ ಈಗಿನ ಪದ್ಧತಿಯನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿದೆ.

ಪ್ರಕರಣ ಹಂಚಿಕೆ ಮುಖ್ಯ ನ್ಯಾಯಮೂರ್ತಿಯ ವಿಶೇಷಾಧಿಕಾರ ಎಂದು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಮತ್ತು ಮೂವರು ನ್ಯಾಯಮೂರ್ತಿಗಳ ಪೀಠ ಈಗಾಗಲೇ ತೀರ್ಪು ನೀಡಿದೆ.

ಪ್ರಕರಣಗಳ ಹಂಚಿಕೆ ಸಿಜೆಐಯ ವಿಶೇಷಾಧಿಕಾರ ಎಂಬುದರಲ್ಲಿ ಯಾವುದೇ ವಿವಾದ ಇಲ್ಲ ಎಂದು ಸಿಕ್ರಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ನಿಯಮಗಳಲ್ಲಿ ಉಲ್ಲೇಖವಾಗಿರುವ ‘ಮುಖ್ಯ ನ್ಯಾಯಮೂರ್ತಿ’ ಎಂಬ ಪದವನ್ನು ಕೊಲಿಜಿಯಂ ಎಂದೇ ಓದಿಕೊಳ್ಳಬೇಕು (ಕೊಲಿಜಿಯಂ ಎಂದರೆ ಐವರು ಹಿರಿಯ ನ್ಯಾಯಮೂರ್ತಿಗಳು ಇರುವ ಸಮಿತಿ). ಹಾಗಾಗಿ ಪ್ರಕರಣಗಳ ಹಂಚಿಕೆ ಕೊಲಿಜಿಯಂನ ಜವಾಬ್ದಾರಿ.ಇದು ಸಿಜೆಐಯ ವಿವೇಚಾನಾಧಿಕಾರ ಆಗಿರಲು ಸಾಧ್ಯವಿಲ್ಲ. ಪ್ರಕರಣಗಳ ವಿಚಾರಣೆಗೆ ಆಯ್ದ ನ್ಯಾಯಮೂರ್ತಿಗಳೇ ಇರುವ ಪೀಠವನ್ನು ಆಯ್ಕೆ ಮಾಡುವುದು ಅಥವಾ ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ನೀಡಲು
ಸಾಧ್ಯವಿಲ್ಲ ಎಂದು ಶಾಂತಿಭೂಷಣ್‌ ವಾದಿಸಿದ್ದರು.

ಆದರೆ ಈ ವಾದವನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಸಿಕ್ರಿ ಹೇಳಿದ್ದಾರೆ.

ಸಿಜೆಐ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ಅತ್ಯಂತ ಹಿರಿಯರು. ಹಾಗಾಗಿ ಅವರು ಸುಪ್ರೀಂ ಕೋರ್ಟ್‌ನ ವಕ್ತಾರ ಮತ್ತು ನ್ಯಾಯಾಂಗದ ನಾಯಕ ಎಂದು ಪೀಠ ಅಭಿಪ್ರಾಯಪಟ್ಟಿದೆ.

****

ಯಾವುದೇ ವ್ಯವಸ್ಥೆಯೂ ಲೋಪರಹಿತ ಅಲ್ಲ. ಹಾಗಾಗಿ, ನ್ಯಾಯಾಂಗದ ಕಾರ್ಯನಿರ್ವಹಣೆಯ ಸುಧಾರಣೆಗೆ ಸದಾ ಅವಕಾಶ ಇರುತ್ತದೆ ಎಂದೂ ಪೀಠ ಹೇಳಿದೆ.

ನ್ಯಾಯಾಂಗದ ಬಗ್ಗೆ ಜನರ ಮನಸ್ಸಿನಲ್ಲಿ ಇರುವ ವಿಶ್ವಾಸ ಕರಗಿಹೋಗುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲು

-ಎ.ಕೆ.ಸಿಕ್ರಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT