ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಮಿ ಸಭಾಪತಿ ಅಧಿಕಾರ ವ್ಯಾಪ್ತಿ ಜಿಜ್ಞಾಸೆ

ಪ್ರಮಾಣವಚನ ಅಧಿಕಾರವಷ್ಟೇ -ಬಿಜೆಪಿ ; ಎಲ್ಲ ಅಧಿಕಾರಗಳೂ ಇವೆ -ಸರ್ಕಾರದ ಸಮಜಾಯಿಷಿ
Last Updated 6 ಜುಲೈ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಹಂಗಾಮಿ’ ಸಭಾಪತಿ ಅಧಿಕಾರ ವ್ಯಾಪ್ತಿ ವಿಷಯವು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಆಯನೂರು ಮಂಜುನಾಥ ವಿಷಯ ಪ್ರಸ್ತಾಪಿಸಿ, ‘ಹಂಗಾಮಿ ಸಭಾಪತಿ ಅಧಿಕಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಅವರಿಗೆ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಅಧಿಕಾರವಷ್ಟೇ ಇದೆ. ಈಗ ರಾಜ್ಯ ಸರ್ಕಾರ ಬಜೆಟ್‌ ಮಂಡಿಸಿದೆ. ಇಂತಹ ವೇಳೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ’ ಎಂದರು.

‘ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸುವ ಅಧಿಕಾರವಷ್ಟೇ ಹಂಗಾಮಿ ಸಭಾಪತಿಗೆ ಇದೆ ಎಂದು ಕೆ.ಜಿ.ಬೋಪಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಪ್ರಕರಣದಲ್ಲಿ ಈಗ ಉಪಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ ಅವರೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈಗ ಸರ್ಕಾರ ದ್ವಂದ್ವ ನಿಲುವು ತಾಳಿದೆ. ಇದರಿಂದ ಸಂವಿಧಾನದ ಆಶಯಗಳಿಗೆ ಅಪಚಾರ ಆಗಿದೆ’ ಎಂದು ಪ್ರತಿಪಾದಿಸಿದರು.

‘ಈ ಚರ್ಚೆಯಿಂದ ಸಭಾಪತಿ ಅವರ ಮನಸ್ಸಿಗೆ ಆಘಾತ ಆಗಿರಬಹುದು. ಹಾಗೊಂದು ವೇಳೆ ಅವರು ಪೀಠತ್ಯಾಗ ಮಾಡಿದರೆ ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗುತ್ತದೆ. ಸಭಾಪತಿ ಆಯ್ಕೆ ವಿಚಾರದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ಯೋಚನೆ ಮಾಡಬೇಕಿತ್ತು’ ಎಂದರು.

‘ಈ ವಿಷಯದಲ್ಲಿ ಸರ್ಕಾರದಿಂದ ಲೋಪ ಆಗಿಲ್ಲ. ರಾಜ್ಯಪಾಲರು ನೇಮಕ ಮಾಡಿದ್ದಾರೆ. ಹೊರಟ್ಟಿ ಅವರಿಗೆ ಎಲ್ಲ ಅಧಿಕಾರಗಳು ಇವೆ’ ಎಂದು ಉಪಮುಖ್ಯಮಂತ್ರಿ ಜಿ.‍ಪರಮೇಶ್ವರ, ಕಾಂಗ್ರೆಸ್‌ ಸದಸ್ಯರಾದ ಶರಣಪ್ಪ ಮಟ್ಟೂರ, ಐವನ್‌ ಡಿಸೋಜ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಎಸ್‌.ಎಲ್‌.ಭೋಜೇಗೌಡ ಪ್ರತಿಪಾದಿಸಿದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ‘1984–85ರಲ್ಲಿ ಇಂತಹುದೇ ಸಂದರ್ಭ ಉದ್ಭವವಾಗಿತ್ತು. ಆಗಿನ ಹಂಗಾಮಿ ಸಭಾಪತಿ ಅವರನ್ನು ತೆಗೆದುಹಾಕಲು ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಸಂವಿಧಾನದ ವಿಧಿ 184 ಹಾಗೂ ನಿಯಮ 7,8,9,10 ಹಾಗೂ 10 ಎ ಪ್ರಕಾರ ಹಂಗಾಮಿ ಸಭಾಪತಿ ಅಧಿಕಾರ ವ್ಯಾಪ್ತಿ ಸೀಮಿತ. ಈಗ ಅಧಿಕಾರದಲ್ಲಿ ಮುಂದುವರಿದರೆ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ಉಂಟಾಗುತ್ತದೆ. ಸರ್ಕಾರ ಬೇಗ ತೀರ್ಮಾನ ತೆಗೆದುಕೊಂಡು ಇದಕ್ಕೆ ಇತಿಶ್ರೀ ಹಾಡಬೇಕು’ ಎಂದು ಸಲಹೆ ನೀಡಿದರು.

‘ಜುಲೈ 2ರಿಂದ ಇಲ್ಲಿಯವರೆಗೆ ಸದನವನ್ನು ನಡೆಸಿದ್ದೇನೆ. ಕೆಲವು ಸದಸ್ಯರ ಮಾತಿನಂತೆ ನಡೆದರೆ, ಈವರೆಗೆ ತೆಗೆದುಕೊಂಡ ತೀರ್ಮಾನಗಳು ಕಾನೂನುಬದ್ಧ ಅಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ನೀವೆಲ್ಲ ಬೇಡ ಎಂದರೆ ಪೀಠದಲ್ಲಿ ಒಂದು ನಿಮಿಷವೂ ಕುಳಿತುಕೊಳ್ಳುವುದಿಲ್ಲ’ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ‘ರಾಜ್ಯಪಾಲರ ಆದೇಶದಲ್ಲಿ ಹಂಗಾಮಿ ಸ್ಪೀಕರ್‌ ಎಂಬ ಉಲ್ಲೇಖ ಇಲ್ಲ. ಅವರಿಗೆ ಎಲ್ಲ ಅಧಿಕಾರಗಳು ಇವೆ. ಈ ಅಧಿವೇಶನ ಮುಗಿಯುವ ಮೊದಲು ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ’ ಎಂದರು.

ಕಾನೂನು ಸಚಿವರು ಸದನದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆಕ್ಷೇಪಿಸಿ ಬಿಜೆಪಿಯ ಕೆ.ಬಿ.ಶಾಣಪ್ಪ ಸಭಾತ್ಯಾಗ ನಡೆಸಲು ಮುಂದಾದರು. ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮಾಧಾನಪಡಿಸಿ, ‘ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ಸಭಾಪತಿ ಆಯ್ಕೆಗೆ ಚುನಾವಣಾ ದಿನಾಂಕವನ್ನು ಸರ್ಕಾರ ಇಂದೇ ಪ್ರಕಟಿಸಬೇಕು’ ಎಂದು ಕೋಟ ಒತ್ತಾಯಿಸಿದರು.

ಹೊರಟ್ಟಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು. ಬಳಿಕ ತಮ್ಮ ಕೊಠಡಿಯಲ್ಲಿ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಜತೆಗೆ ಸಮಾಲೋಚನೆ ನಡೆಸಿದರು.

ಕಲಾಪ ಪುನರಾರಂಭಗೊಂಡ ಬಳಿಕ ಕೃಷ್ಣ ಬೈರೇಗೌಡ, ‘ಪೀಠದ ಬಗ್ಗೆ ಚರ್ಚೆ ಮಾಡಲು ಪೀಠಾಧ್ಯಕ್ಷರೇ ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನದ ಮೆರಗು. ಸರ್ಕಾರ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂಬ ಸಂದೇಶ ಇವತ್ತು ರವಾನೆಯಾಗಿದೆ. ಹೊಸ ಸಭಾಪತಿ ಆಯ್ಕೆ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ಬಿಟ್ಟಿದೆ. ಈ ಸಂಬಂಧ ರಾಜ್ಯಪಾಲರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಅವರ ಒಪ್ಪಿಗೆ ಸಿಕ್ಕ ಬಳಿಕ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

**

ಆತ್ಮಸಾಕ್ಷಿಗೆ ಅನುಗುಣ ತೀರ್ಮಾನ ತೆಗೆದುಕೊಳ್ಳಿ; ಆಯನೂರು

‘ಪೀಠದಲ್ಲಿ ಮುಂದುವರಿಯುವ ಬಗ್ಗೆ ಹೊರಟ್ಟಿ ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ನೀವು ಯಾರದ್ದೋ ಮರ್ಜಿಗೆ ಪೀಠದಲ್ಲಿ ಕುಳಿತುಕೊಳ್ಳಬೇಕಿಲ್ಲ’ ಎಂದು ಆಯನೂರು ಮಂಜುನಾಥ ಹೇಳಿದರು.

‘ಸರ್ಕಾರ ಮೈಮರೆತು ಕುಳಿತಿದ್ದರಿಂದ ಸದನದ ಗಾಂಭೀರ್ಯಕ್ಕೆ ಧಕ್ಕೆಯಾಗಿದೆ. ಸರ್ಕಾರದಲ್ಲಿರುವ ಪ್ರಮುಖರು ಆಂತರಿಕ ರಾಜಕಾರಣದಲ್ಲಿ ಮುಳುಗಿದ್ದರು. ಪ್ರಾಮಾಣಿಕ ರಾಜಕಾರಣ ನಡೆಸಿದ್ದರೆ ಸದನದಲ್ಲಿ ಚರ್ಚೆಗೆ ಅವಕಾಶವೇ ಇರುತ್ತಿರಲಿಲ್ಲ’ ಎಂದು ಚುಚ್ಚಿದರು.

ಬಳಿಕ ಬಸವರಾಜ ಹೊರಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಭಾಪತಿ ಎಂದೇ ರಾಜ್ಯಪಾಲರು ನೇಮಕ ಮಾಡಿದ್ದಾರೆ. ಹೀಗಾಗಿ, ನನಗೆ ಎಲ್ಲ ಅಧಿಕಾರಗಳು ಇವೆ’ ಎಂದರು.

**

‘ಚಾಕು’ಚಕ್ಯತೆ ಮಾತು: ವಾಗ್ವಾದ

‘ಕೃಷ್ಣ ಬೈರೇಗೌಡ ಅವರು ಚಾಕುಚಕ್ಯತೆಯಿಂದ ಇಲ್ಲಿ ವಿಷಯ ಮಂಡಿಸಿದ್ದಾರೆ’ ಎಂಬ ಆಯನೂರು ಮಂಜುನಾಥ ಅವರ ಹೇಳಿಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

‘ಈ ಸದನಕ್ಕೆ ಘನತೆ ಇದೆ. ಈ ಪದವನ್ನು ಬೀದಿಯಲ್ಲಿ ಬಳಕೆ ಮಾಡಿ. ಇದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT