ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಕೋಪಕ್ಕೂ ಪ್ರೀತಿಗೂ ಪಾತ್ರನಾದ ರಾವಣ!

Last Updated 9 ಜುಲೈ 2018, 8:43 IST
ಅಕ್ಷರ ಗಾತ್ರ

ರಾವಣನ ಪೂರ್ವವೃತ್ತಾಂತ ದೊರೆಯುವುದು ನಮಗೆ ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ದಲ್ಲಿ. ಈ ಕಾಂಡ ಅನಂತರ ಸೇರಿಕೊಂಡದ್ದು ಎಂಬ ವಾದವೂ ಉಂಟು ಎಂಬುದನ್ನು ಈ ಮೊದಲು ನೋಡಿದ್ದೇವೆ. ಇದು ಎಷ್ಟು ದಿಟವೋ, ಅಲ್ಲವೋ – ಹೇಳುವುದು ಕಷ್ಟ; ಆದರೆ ಬಾಲಕಾಂಡ ಮತ್ತು ಉತ್ತರಕಾಂಡದಲ್ಲಿ ಕಾವ್ಯಗುಣಗಳು ಕಡಿಮೆ ಎನ್ನುವುದನ್ನಂತೂ ಹೇಳಲಾದೀತು.

ನಾಯಕನ ಹುಟ್ಟು, ಆ ಹುಟ್ಟಿಗೆ ಕಾರಣ, ಆ ಕಾರಣವನ್ನು ಪೂರೈಸಲು ಅವನು ನಡೆಸಿದ ಕಾರ್ಯಗಳು – ಇವೆಲ್ಲವನ್ನೂ ಹೇಳಿದ ಮೇಲೆ ಪ್ರತಿನಾಯಕನ ಬಗ್ಗೆಯೂ ಹೇಳದಿದ್ದರೆ ಹೇಗೆ? ಆದರೆ ರಾವಣನ ಸಂಹಾರ ನಡೆದಮೇಲೆ ಅವನ ಜನ್ಮವೃತ್ತಾಂತವನ್ನು ಹೇಳಿರುವುದು ಗಮನಾರ್ಹ. ಕಥೆಯನ್ನು ಹೇಳುವ ಸಹಜರೀತಿ ಎಂದರೆ ರಾಮನ ಕಥೆಯ ಜೊತೆಗೆ ರಾವಣನ ವೃತ್ತಾಂತವನ್ನೂ ಹೇಳುವುದು. ಆದರೆ ರಾಮಾಯಣದಲ್ಲಿ ಹೀಗೆ ನಡೆದಿಲ್ಲ; ರಾವಣನ ವಧೆ ನಡೆದ ಬಳಿಕ ಅವನ ಜನ್ಮವೃತ್ತಾಂತವನ್ನೂ ಅವನ ಶೌರ್ಯವನ್ನೂ ಹೇಳಲಾಗಿದೆ.

ಹೀಗೇಕೆ ಎನ್ನುವ ಪ್ರಶ್ನೆ ಇಲ್ಲಿ ಏಳದಿರದು. ಇಲ್ಲಿ ಇನ್ನೂ ಒಂದು ಸ್ವಾರಸ್ಯವುಂಟು: ರಾವಣನ ಕಥೆಯನ್ನು ಋಷಿಗಳು ರಾಮನಿಗೆ ಹೇಳುತ್ತಾರೆ! ಉತ್ತರಕಾಂಡ ಆರಂಭವಾಗುವುದೇ ಈ ಭಾಗದಿಂದ. ರಾವಣಾದಿ ರಾಕ್ಷಸರನ್ನು ರಾಮನು ಸಂಹರಿಸಿ, ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗಿದ್ದಾನೆ. ಆಗ ಅವನನ್ನು ಅಭಿನಂದಿಸಲು ಎಲ್ಲ ಋಷಿಗಳೂ ಆಗಮಿಸುತ್ತಾರೆ; ಹೀಗೆ ಬಂದವರು ರಾಮನಿಗೆ ರಾವಣನ ಕಥೆಯನ್ನು ಹೇಳುತ್ತಾರೆ. (ಈ ಕಥೆಯ ವಿವರಗಳನ್ನು ಮುಂದೆ ನೋಡೋಣವಾಗುತ್ತದೆ.) ನಾಲ್ಕು ದಿಕ್ಕುಗಳಿಂದಲೂ ಋಷಿಗಳು ಬಂದರೆಂಬುದನ್ನು ಸೂಚಿಸಿರುವುದು ಕೂಡ ಗಮನಾರ್ಹ. ಪೂರ್ವದಿಕ್ಕಿನಿಂದ ಕೌಶಿಕ, ಯವಕ್ರೀತ, ಗಾರ್ಗ್ಯ, ಗಾಲವ ಮತ್ತು ಕಣ್ವರೂ, ದಕ್ಷಿಣದಿಕ್ಕಿನಿಂದ ಆತ್ರೇಯ, ನಮುಚಿ, ಪ್ರಮುಚಿ, ಅತ್ರಿ, ಸುಮುಖ, ವಿಮುಖ ಮತ್ತು ಅಗಸ್ತ್ಯರೂ, ಪಶ್ಚಿಮದಿಕ್ಕಿನಿಂದ ನೃಷದ್ಗು, ಕವಷ, ಧೌಮ, ರೌದ್ರೇಯ ಮತ್ತು ಅವರ ಶಿಷ್ಯರೂ, ಉತ್ತರದಿಕ್ಕಿನಿಂದ ವಸಿಷ್ಠ, ಕಶ್ಯಪ, ಅತ್ರಿ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭರದ್ವಾಜರೂ ಬಂದರಂತೆ. (ರಾವಣನು ಎಲ್ಲ ದಿಕ್ಕುಗಳನ್ನೂ ತನ್ನ ವಶದಲ್ಲಿಟ್ಟುಕೊಂಡಿದ್ದ ಎನ್ನುವುದನ್ನು ನೆನಪಿಸಿಕೊಳ್ಳಬಹುದು.)

ಜಗತ್ತಿನ ಮಿಥ್‌ಗಳನ್ನು ನೋಡಿದರೆ ನಮಗೆ ಈ ಪ್ರಶ್ನೆಗೆ ಉತ್ತರ ದೊರೆಯಬಹುದು. ಮಿಥ್‌ಗಳು ಹೇಗೆ ಕೆಲಸ ಮಾಡುತ್ತವೆ? ಅವುಗಳ ಉದ್ದೇಶ ಏನು? ಇಂಥವು ಈ ಕಥನವಿಧಾನದಲ್ಲಿ ಅಡಕವಾಗಿರುತ್ತವೆ. ಕಾರ್ಲ್ ಯೂಂಗ್‌, ಜೋಸೆಫ್‌ ಕ್ಯಾಂಬಲ್‌ ಮುಂತಾದವರ ಬರಹಗಳನ್ನು ಇಲ್ಲಿ ಗಮನಿಸಬಹುದು.

ಮಿಥ್‌ಗಳ ನಾಯಕ(ಹೀರೋ)ನ ಜನ್ಮದ ಹಿಂದೆ ನಿರ್ದಿಷ್ಟವಾದ ಗುರಿಯಿರುವುದಷ್ಟೆ. ಅದನ್ನು ಅವನು ಹೇಗೆ ಸಾಧಿಸುತ್ತಾನೆ – ಎನ್ನುವುದರ ನಿರೂಪಣೆ ಮಿಥ್‌ನ ಪ್ರಮುಖ ಅಂಶಗಳಲ್ಲೊಂದು. ಇಂಥ ಮಿಥ್‌ಗಳ ಮೂಲಮಾತೃಕೆಗಳು ಎಷ್ಟು – ಎನ್ನುವುದರ ಅಧ್ಯಯನವನ್ನೂ ಕೆಲವರು ಮಾಡಿದ್ದಾರೆ. (ಮುಂದೆ ಈ ವಿವರಗಳನ್ನು ನೋಡೋಣ.) ಅವುಗಳಲ್ಲಿ ಒಂದು: ನಾಯಕನಾದವನು ತನಗೆ ಅಪರಿಚಿತವಾಗಿರುವ ಸ್ಧಳಕ್ಕೆ ಧಾವಿಸಿ, ಪ್ರತಿನಾಯಕನನ್ನು ಲೋಕೋದ್ಧಾರಕ್ಕಾಗಿ ಸಂಹರಿಸುವುದು. ಪ್ರತಿನಾಯಕನ ಬಗ್ಗೆಯೂ ವಿವರಗಳೂ ಅವನಿಗೆ ತಿಳಿದಿರುವುದಿಲ್ಲ. ಹೀಗೆ ವೈಯಕ್ತಿಕ ವಿವರಗಳು ಅಪರಿಚಿತವಾಗಿರುತ್ತವೆ; ಆದರೆ ಅವನು ಮಾಡಿರುವ ಅಧರ್ಮದ ಕೆಲಸಗಳು ತಿಳಿಯುವಂತಿರುತ್ತವೆ. ಈ ಮಾದರಿಯ ಮಿಥ್‌ಗಳು ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ಕಾಣಬಹುದು. ರಾಮಾಯಣವೂ ಕೂಡ ಈ ಗುಂಪಿಗೆ ಸೇರುವಂಥ ‘ಮಿಥ್‌’.

ಮಿಥ್‌ಗಳು ಹೇಳುವ ಪ್ರತಿನಾಯಕರು ಸಾಮಾನ್ಯವಾಗಿ ‘ರಾಕ್ಷಸ’ರು. ಇಲ್ಲಿ ‘ರಾಕ್ಷಸ’ ಎನ್ನುವುದು ಒಂದು ‘ಸಂಕೇತ’. ನಮ್ಮಲ್ಲಿಯೇ, ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿಯೇ ಇರುವ ಕೇಡಿನ ಪ್ರತಿರೂಪ, ದೋಷ–ದೌರ್ಬಲ್ಯಗಳ ಮೂರ್ತರೂಪ. ಈ ರಾಕ್ಷಸತ್ವ ಎನ್ನುವುದುಯುಗದಿಂದ ಯುಗಕ್ಕೆ, ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೂಪಗಳಲ್ಲಿಯೂ ಗುಣಗಳಲ್ಲಿಯೂ ಪ್ರಕಟವಾಗಿರುತ್ತವೆ. ರಾಕ್ಷಸತ್ವನ್ನು ಗೆಲ್ಲಬೇಕು – ಎಂಬುದೇ ಎಲ್ಲ ‘ಮಿಥ್‌’ಗಳೂ ಕೊಡುವ ಪ್ರಧಾನ ಸಂದೇಶ. 'A living myth presents contemporary models' (ಜೀವಂತ ಮಿಥ್‌ಗಳು ಸಾಮಯಿಕ ಮಾದರಿಗಳನ್ನು ಪ್ರಕಟಿಸುತ್ತಿರುತ್ತವೆ) – ಎನ್ನುತ್ತಾರೆ, ಜೋಸೆಫ್‌ ಕ್ಯಾಂಬೆಲ್‌. ಹೀಗಾಗಿ ನಾವು ಇಂದು ನಡೆಸುವ ರಾಮಾಯಣದ ಅಧ್ಯಯನವು ಇಂದಿನ ‘ರಾವಣ’ನನ್ನು ಗುರುತಿಸಲು ನೆರವಾಗಬೇಕು. ಆದುದರಿಂದ ರಾಮಾಯಣವನ್ನು ಎಂದೋ ನಡೆದ ಇತಿಹಾಸವೆಂದೋ, ಅಥವಾ ಎಂದೂ ನಡೆಯದ ಕಥೆಯೆಂದೋ ತಿಳಿದರೆ ಪ್ರಯೋಜವಿರದು; ಇಂದಿಗೂ ಎಂದೆಂದಿಗೂ ನಡೆಯುತ್ತಿರುವುದೇ ರಾಮ–ರಾವಣರ ಯುದ್ಧ ಎಂದು ತಿಳಿದು ರಾಮಾಯಣಸಾಗರದಲ್ಲಿ ಇಳಿದರೆ, ಆಗ ನಮ್ಮ ಕಾಳದ ಯುದ್ಧವನ್ನು ಗೆಲ್ಲಲು ಬೇಕಾದ ಆಯುಧಗಳು ನಮಗೆ ಸಿಕ್ಕುತ್ತವೆ – ಎನ್ನುತ್ತವೆ, ಮಿಥ್‌ಗಳು.

ಮಾಯುರಾಜನ ‘ಉದಾತ್ತ ರಾಘವಮ್‌’ ಎಂಬ ರಾಮಾಯಣನಾಟಕದ ನಾಂದಿಪದ್ಯವನ್ನು ಇಲ್ಲಿ ಉಲ್ಲೇಖಿಸಬಹುದು:

ಪೌಲಸ್ತ್ಯಪೀನಭುಜಸಂಪದುದಸ್ಯಮಾನ–

ಕೈಲಾಸಸಂಭ್ರಮವಿಲೋಲದೃಶಃ ಪ್ರಿಯಾಯಾಃ ।

ಶ್ರೇಯಾಂಸಿ ವೋ ದಿಶತು ನಿಹ್ನುತಕೋಪಚಿಹ್ನ–

ಮಾಲಿಂಗನೋತ್ಪುಲಕಮಾಸಿತಮಿಂದುಮೌಲೇಃ ।।

ಇದರ ಭಾವಾರ್ಥ ಹೀಗೆ:

‘ರಾವಣನು ತನ್ನ ಬಲವಾದ ಭುಜಗಳಿಂದ ಕೈಲಾಸಪರ್ವತವನ್ನು ಎತ್ತುತ್ತಿದ್ದಾನೆ. ಆಗ ಭಯಗೊಂಡ ಪಾರ್ವತಿಯು ಶಿವನನ್ನು ಆಲಂಗಿಸಿಕೊಂಡಳು. ಪ್ರಿಯೆಯ ಅಪ್ಪುಗೆಯಿಂದ ಪುಳಕ ಮತ್ತು ರಾವಣನ ದುಷ್ಕೃತ್ಯದಿಂದ ಕೋಪ – ಈ ಎರಡು ಭಾವಗಳೂ ಶಿವನದಲ್ಲಿ ಏಕಕಾಲದಲ್ಲಿ ಪ್ರಕಟವಾದವು. ಆದರೆ ಅವನು ತನ್ನ ಕೋಪವನ್ನು ನಿಗ್ರಹಿಸಿಕೊಂಡನಂತೆ; ಅದಕ್ಕೆ ಕಾರಣವಾದದ್ದು, ಮಡದಿಯ ಆಲಿಂಗನಕ್ಕೆ ಪರೋಕ್ಷವಾಗಿ ಕಾರಣನಾದ ರಾವಣನ ಬಗ್ಗೆ ಮೂಡಿದ ಮೆಚ್ಚುಗೆ! ಹೀಗೆ ಹಿತಾಹಿತಗಳಲ್ಲಿ ಸಮತೆಯಿಂದ ಪೀಠಸ್ಥನಾಗಿರುವ ಶಿವನರೋಮಾಂಚನವೂ ಕೋಪವೂ ನಮ್ಮನ್ನು ಕಾಪಾಡಲಿ.’

ರಾವಣನು ಸೆರೆಯಲ್ಲಿಟ್ಟುಕೊಂಡದ್ದು ಅಷ್ಟದಿಕ್ಪಾಲಕರನ್ನು ಎನ್ನುವುದನ್ನೂ ಶಿವನಿಗೂ ಎಂಟು ‘ದೇಹ’ಗಳು ಎಂಬ ಎಣಿಕೆಯಿರುವುದನ್ನೂ ಇಲ್ಲಿ ಗಮನಿಸಬಹುದು.

ರಾವಣ ಎಂಬ ರಾಕ್ಷಸನ ಕೃತ್ಯವನ್ನು ವರ್ಣಿಸುವ ನೆಪದಲ್ಲಿ ಕವಿಯು ಮಹಾಕಾವ್ಯ (ಮಿಥ್‌) ನಮಗೆ ನೀಡುವ ಎಲ್ಲ ಕಾಲದ ತಿಳಿವಳಿಕೆ ಎಂಥದೆಂಬುದನ್ನು ಇಲ್ಲಿ ಧ್ವನಿಸಿದ್ದಾನೆ. ರಾಕ್ಷಸಬುದ್ಧಿಯು ನಮ್ಮನ್ನು ಉಧ್ವಸ್ತಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತದೆ; ಆದರೆ ನಾವು ಅದರಿಂದ ವಿಚಲಿತವಾಗದೆ ಜೀವನದಲ್ಲಿ ಮುಂದುವರಿಯಬೇಕು. ಇದನ್ನೇ ಜೋಸೆಫ್‌ ಕ್ಯಾಂಬೆಲ್‌ ‘A myth is a life-shaping image' (ಮಿಥ್‌ ಎನ್ನುವುದು ಜೀವನವನ್ನು ರೂಪಿಸುವ ರೂಪಕ) ಎಂದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT