ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರನ್ನು ಎದುರಿಸುವ ಶಸ್ತ್ರಗಳೂ ಇಲ್ಲ!

ಅವಧಿ ಮೀರಿದ ಮದ್ದುಗುಂಡುಗಳ ದಾಸ್ತಾನು; ಪೊಲೀಸ್‌ ತರಬೇತಿಗಿಲ್ಲ ಶಸ್ತ್ರಾಸ್ತ್ರಗಳು
Last Updated 6 ಜುಲೈ 2018, 19:15 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದಕರು ದಾಳಿ ಮಾಡಿದರೆ ನಿಭಾಯಿಸಲು ಪೊಲೀಸರಲ್ಲಿ ಸೂಕ್ತ ಶಸ್ತ್ರಾಸ್ತ್ರಗಳಿಲ್ಲ.ಅಷ್ಟೇ ಅಲ್ಲ, ತರಬೇತಿ ಉದ್ದೇಶ ಮತ್ತು ಬಳಕೆಗೂ ಆಧುನಿಕ ಶಸ್ತ್ರಾಸ್ತ್ರಗಳಿಲ್ಲ. ಈಗ ಇರುವ ಶಸ್ತ್ರಾಸ್ತ್ರಗಳೂ ಓಬೀರಾಯನ ಕಾಲದ್ದು. ಅದರ ಕೊರತೆಯೂ ವ್ಯಾಪಕವಾಗಿದೆ. ಇನ್ನೂ ಗಂಭೀರ ಸಂಗತಿ ಎಂದರೆ, ಅನಿವಾರ್ಯ ಸಂದರ್ಭಗಳಲ್ಲೂ ಪ್ರಯೋಗಿಸಲು ಪೊಲೀಸರಿಗೆ ಮದ್ದು ಗುಂಡುಗಳಿಲ್ಲ!

ಇದು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ದುಸ್ಥಿತಿ. ಭಾರತ ಮಹಾಲೆಕ್ಕ ಪರಿಶೋಧಕರ ವರದಿ ಇಲಾಖೆಯ ಲೋಪಗಳನ್ನು ಎಳೆ– ಎಳೆಯಾಗಿ ಅನಾವರಣಗೊಳಿಸಿದೆ.

ವರದಿಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ರಾಜ್ಯದ ಪ್ರಮುಖ ಪೊಲೀಸ್‌ ತರಬೇತಿ ಶಾಲೆಗಳಾದ ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ, ಕಲಬುರ್ಗಿಯ ಪೊಲೀಸ್‌ ತರಬೇತಿ ಕೇಂದ್ರ ಮತ್ತು ಖಾನಾಪುರ ಪೊಲೀಸ್‌ ತರಬೇತಿ ಶಾಲೆಗಳಲ್ಲಿ ತರಬೇತಿ ಉದ್ದೇಶದ ಶಸ್ತ್ರಾಸ್ತ್ರ ಅಲಭ್ಯತೆ ಗಂಭೀರ ಸ್ವರೂಪದ್ದು.ಶಸ್ತ್ರಾಸ್ತ್ರ ಕವಾಯಿತು/ ಪಾಸಿಂಗ್‌ ಔಟ್‌ ಪೆರೇಡ್‌ಗೆ ಅವಶ್ಯಕವಿರುವ ಡಿಪಿ ರೈಫಲ್‌ ಯಾವುದೇ ತರಬೇತಿ ಕೇಂದ್ರಗಳಲ್ಲೂ ಲಭ್ಯವಿಲ್ಲ.

ಆಯುಧಗಳು ಮತ್ತುಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವಂತೆ ತರಬೇತಿ ಸಂಸ್ಥೆಗಳ ಕೋರಿಕೆಗೆ ಪ್ರತಿಕ್ರಿಯೆಯಾಗಿ ಸಂಬಂಧಪಟ್ಟ ಜಿಲ್ಲಾ ಪೊಲೀಸ್‌ ಮತ್ತು ಕೆಎಸ್‌ಆರ್‌ಪಿಯಿಂದ ತಾತ್ಕಾಲಿಕ ಆಧಾರದ ಮೇಲೆ ಎರವಲು ಪಡೆಯುವಂತೆ ಸರ್ಕಾರ ಸೂಚಿಸಿ ಕೈ ತೊಳೆದುಕೊಂಡಿದೆ ಎಂದು ವರದಿ ಹೇಳಿದೆ.

ಬ್ಯೂರೋ ಆಫ್‌ ಪೊಲೀಸ್‌ ರೀಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌(ಬಿಪಿಆರ್‌ ಅಂಡ್‌ ಡಿ) ನಿಗದಿ ಪಡಿಸಿದ ಮಾನದಂಡಗಳಿಗೆ ಹೋಲಿಸಿದರೆ, ಠಾಣೆಗಳಲ್ಲಿ ಆಯುಧಗಳ ಕೊರತೆ ವ್ಯಾಪಕವಾಗಿದೆ.

ಪ್ರತಿಯೊಂದು ಠಾಣೆಗೂ ಅತ್ಯಂತ ಅವಶ್ಯಕತೆ ಇದ್ದ 0.303 ಟ್ರಂಕೇಟೆಡ್‌ ರೈಫಲ್‌ಗಳ ಗರಿಷ್ಠ ಕೊರತೆ ಇದೆ. ಇದರಿಂದಾಗಿ ಪೊಲೀಸರನ್ನು ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತಗೊಳಿಸುವ ಯೋಜನೆಯ ಉದ್ದೇಶ ಸಾಧಿಸಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವಿಶೇಷ ಕಾರ್ಯಾಚರಣೆಗೆ ಗ್ರೆನೇಡ್‌ ಲಾಂಚರ್‌ ಮತ್ತು ಸೈಲೆನ್ಸರ್‌ನೊಂದಿಗೆ ಎಂಪಿ–5 ಗಳ ಅವಶ್ಯಕತೆ ಇದೆ.

ಸಬ್‌ ಮೆಷಿನ್‌ಗನ್‌ ಎಂಪಿ–5, ಸೈಲೆನ್ಸರ್‌ನೊಂದಿಗೆ ಎಸ್‌ಡಿ–3 ಮೀಡಿಯಂ ಗ್ರೆನೇಡ್‌ ಲಾಂಚರ್‌(ಎಲ್‌ಎಂಜಿ 40 ಎಂಎಂ) ಮತ್ತು ಕ್ರೀಡಾ ಉದ್ದೇಶಕ್ಕಾಗಿ ಸ್ವಯಂ ಚಾಲಿತ ಶಾಟ್‌ಗನ್‌ ಮುಂತಾದ ಶಸ್ತ್ರಾಸ್ತ್ರಗಳ ಖರೀದಿಗೆ ರಾಜ್ಯ ಸರ್ಕಾರ ₹1.19 ಕೋಟಿ ಹಂಚಿಕೆ ಮಾಡಿತ್ತು.

ಆದರೆ, ಅದನ್ನು ಮೊತ್ತವನ್ನು ಬಿಡುಗಡೆ ಮಾಡಲೇ ಇಲ್ಲ. ಖರೀದಿಯೂ ಆಗಲಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಈ ಅಸ್ತ್ರಗಳ ಅಗತ್ಯವಿದೆ ಎಂದು ಸಿಎಜಿ ತಿಳಿಸಿದೆ.

ಅವಧಿ ಮೀರಿದ ಮದ್ದು ಗುಂಡುಗಳು: ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್‌) ಮತ್ತು ಮೈಸೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ಕೇಂದ್ರ ಕಚೇರಿಗಳ ದಾಸ್ತಾನಿನಲ್ಲಿ ಉಪಯೋಗಿಸಲು ಸುರಕ್ಷಿತವಲ್ಲದ ಮತ್ತು ಅವಧಿ ಮೀರಿದ ಮದ್ದುಗುಂಡುಗಳು ಇದ್ದವು.

ಬೆಂಗಳೂರಿನ ಸಿಎಆರ್‌ನಲ್ಲಿ 0.38 ಮತ್ತು 0.410ಬಾಲ್‌/ ಬ್ಲಾಂಕ್ ಶಸ್ತ್ರಾಸ್ತ್ರಗಳು ಅವಧಿ ಮೀರಿ ಹೋಗಿದ್ದವು. ಅಲ್ಲದೆ ಕಾರ್ಯಾಚರಣೆಯಲ್ಲಿ ಬಳಸಲು ಯೋಗ್ಯವಾದ ಸೂಕ್ತ ಶಸ್ತ್ರಾಸ್ತ್ರಗಳು ಇರಲಿಲ್ಲ.

ಇದೇ ರೀತಿ ಮೈಸೂರಿನ ಡಿಎಆರ್‌ನಲ್ಲಿ 0.410 ಬಾಲ್‌ ಮತ್ತು 0.38 ಬ್ಲಾಂಕ್‌ ಶಸ್ತ್ರಾಸ್ತ್ರಗಳ ಸಂಪೂರ್ಣ ದಾಸ್ತಾನು ಮತ್ತು 0.450 ಬಾಲ್‌, 0.455 ಬಾಲ್‌ ಮತ್ತು 0.303 ಬ್ಲಾಂಕ್‌ ಶಸ್ತ್ರಾಸ್ತ್ರಗಳಲ್ಲಿ ಶೇ 90 ರಷ್ಟು ದಾಸ್ತಾನು ಅವಧಿ ಮೀರಿ ಹೋಗಿತ್ತು ಎಂದು ಸಿಎಜಿ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT