ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಜಿಲ್ಲೆಗಳ ಬಗ್ಗೆ ಮಲತಾಯಿ ಧೋರಣೆ: ಶಾಸಕರ ಆರೋಪ

Last Updated 6 ಜುಲೈ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕರಾವಳಿ ಶಾಸಕರು ಶುಕ್ರವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ವಿಧಾನಸಭೆ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮೂರೂ ಜಿಲ್ಲೆಗಳ ಶಾಸಕರೂ ಸಮ್ಮಿಶ್ರ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.

‘ಚುನಾವಣೆಯಲ್ಲಿ ಮೂರು ಜಿಲ್ಲೆಗಳಲ್ಲೂ ಸೋತಿರುವುದರಿಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿವೆ. ಆದ್ದರಿಂದ ದಕ್ಷಿಣಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಬಿಡಿಗಾಸೂ ನೀಡಲಿಲ್ಲ. ಹಳೇಮೈಸೂರು ಪ್ರಾಂತ್ಯದ ಮೂರು ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಈ ಮಲತಾಯಿ ಧೋರಣೆಯ ವಿರುದ್ಧ ಅಧಿವೇಶನದಲ್ಲೂ ಹೋರಾಟ ನಡೆಸುತ್ತೇವೆ’ ಎಂದು ಸುನಿಲ್‌ ಕುಮಾರ್‌ಹೇಳಿದರು.

‘ಸರ್ಕಾರಕ್ಕೆ ತೊಂದರೆ ಬಂದಾಗ ನೀವು ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಕೊಲ್ಲೂರಿಗೆ ಬರುತ್ತೀರಿ. ಆದರೆ, ಈ ಭಾಗದ ಜನರಿಗೆ ಅನುದಾನ ಕೊಡಲು ನಿರ್ಲಕ್ಷ್ಯ ಮಾಡುತ್ತೀರಿ. ಕರಾವಳಿ ಜಿಲ್ಲೆಗಳು ಇರುವುದು ಕೇವಲದೇವಸ್ಥಾನಗಳಿಗೆ ಬಂದು ಅಡ್ಡ ಬಿದ್ದು ಹೋಗುವುದಕ್ಕಲ್ಲ. ಕಡೇ ಪಕ್ಷ ಟೆಂಪಲ್‌ ಟೂರಿಸಂಗೆ ಯೋಜನೆ ಪ್ರಕಟಿಸಬಹುದಿತ್ತು. ಕೂಡಲೇ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ತಾಯಿಯ ಸ್ಥಾನದಲ್ಲಿ ಇದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಹಾಗಿದ್ದರೆ ಅವರು ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಿದ್ದು ಏತಕ್ಕೆ. ಮೀನುಗಾರರ ರಕ್ಷಣೆಗೆ ಯಾವುದೇ ಕಾರ್ಯಕ್ರಮ ಪ್ರಕಟಿಸಲಿಲ್ಲ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಸುವ ಮೂಲಕ ಅವರ ಬದುಕಿಗೆ ಬರೆ ಎಳೆದಿದ್ದಾರೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ದೂರಿದರು.

ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್‌, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್‌, ಸುಳ್ಯ ಶಾಸಕ ಅಂಗಾರ, ಭಟ್ಕಳ ಶಾಸಕ ಸುನಿಲ್‌ ನಾಯ್ಕ್, ಕಾರವಾರ ಶಾಸಕಿ ರೂಪಾಲಿ ನಾಯ್ಕ್‌, ಕುಂದಾಪುರ ಶಾಸಕ ಹಾಲಾಡಿಶ್ರೀನಿವಾಸ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಪುತ್ತೂರು ಶಾಸಕ ಸಂಜೀವ ಮಠಂದೂರು, ಕುಮಟಾ ಶಾಸಕ ದಿನಕರ ಶೆಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT