ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿಗೆ ಏಕೆ ಐಡಿಬಿಐ ಮೇಲೆ ಪ್ರೀತಿ?!

ಐಡಿಬಿಐ ಷೇರು ಖರೀದಿಗೆ ಅನುಮತಿ ನೀಡಿರುವುದರ ಸುತ್ತ...
Last Updated 6 ಜುಲೈ 2018, 18:46 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮಾಲೀಕತ್ವದ ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ನ (ಐಡಿಬಿಐ ಬ್ಯಾಂಕ್‌) ಶೇಕಡ 51ರಷ್ಟು ಷೇರುಗಳನ್ನು ಖರೀದಿಸಲು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಅನುಮತಿ ನೀಡಿರುವುದು ಈಗೊಂದು ವಾರದಿಂದ ಸುದ್ದಿಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದರ ಕುರಿತ ಚರ್ಚೆಯು ಪತ್ರಿಕೆಗಳ ಪುಟಗಳನ್ನು ದಾಟಿ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳ ಮನೆ ಜಗುಲಿಗೂ ಬಂದಿದೆ. ಈ ಸುದ್ದಿ ಹಾಗೂ ಸುದ್ದಿಯ ಕಾರಣದಿಂದಾಗಿ ನಡೆಯುತ್ತಿರುವ ಚರ್ಚೆಗಳು ಏನನ್ನು ಧ್ವನಿಸುತ್ತಿವೆ?

* ಷೇರು ಖರೀದಿಗೆ ಅನುಮತಿ ನೀಡಿರುವುದು ಸುದ್ದಿ ಮಾಡುತ್ತಿರುವುದು ಏಕೆ?
ಕಾರ್ಪೊರೆಟ್‌ ವಲಯದಲ್ಲಿ ಒಂದು ಕಂಪನಿಯ ಷೇರುಗಳನ್ನು ಇನ್ನೊಂದು ಕಂಪನಿ ಖರೀದಿಸುವುದು ಸುದ್ದಿಯಾಗುತ್ತದೆ ಎಂಬುದು ನಿಜ. ಆದರೆ, ಎಲ್‌ಐಸಿಯು ಐಡಿಬಿಐ ಬ್ಯಾಂಕಿನಲ್ಲಿ ಸರಿಸುಮಾರು ಶೇಕಡ 11ರಷ್ಟು ಷೇರುಗಳನ್ನು ಈಗಾಗಲೇ ಹೊಂದಿದೆ. ಎಲ್‌ಐಸಿ ಈಗ ಹೆಚ್ಚುವರಿಯಾಗಿ ಶೇಕಡ 40ರಷ್ಟು ಷೇರುಗಳನ್ನು (ಒಟ್ಟು ಶೇ 51ರಷ್ಟು) ಖರೀದಿಸಲಿದೆ ಎಂದು ವರದಿಯಾಗಿದೆ. ಇದು ಚರ್ಚೆಯಾಗಬೇಕಾದ ವಿಚಾರವಂತೂ ಖಂಡಿತ ಹೌದು.

ದೇಶದ ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚುತ್ತಿರುವುದು, ಅತಿಹೆಚ್ಚು ಎನ್‌ಪಿಎ ಹೊಂದಿರುವ ಕೆಲವು ಬ್ಯಾಂಕ್‌ಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಟ್ಟುನಿಟ್ಟಿನ ನಿಬಂಧನಾ ಕ್ರಮಗಳ ವ್ಯಾಪ್ತಿಗೆ ತಂದಿರುವುದು ಹಳೆಯ ಸುದ್ದಿ. ಈ ಕ್ರಮದ ವ್ಯಾಪ್ತಿಗೆ ಐಡಿಬಿಐ ಬ್ಯಾಂಕನ್ನು ಆರ್‌ಬಿಐ 2017ರ ಮೇ ತಿಂಗಳಲ್ಲೇ ಒಳಪಡಿಸಿದೆ. ದೇಶದಲ್ಲಿ ಅತಿಹೆಚ್ಚಿನ ಎನ್‌ಪಿಎ ಹೊಂದಿರುವ ಬ್ಯಾಂಕ್‌ಗಳ ಸಾಲಿನಲ್ಲಿ ಐಡಿಬಿಐ ಕೂಡ ಮುಂಚೂಣಿ ಸ್ಥಾನ ಪಡೆದುಕೊಂಡಿದೆ! ಇಂತಹ ಬ್ಯಾಂಕಿನ ಷೇರುಗಳನ್ನು ಎಲ್‌ಐಸಿಯಂತಹ ಸಂಸ್ಥೆ ಖರೀದಿಸಲು ಮುಂದಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

* ಷೇರು ಖರೀದಿಯ ಮೊತ್ತ ಎಷ್ಟು? ಐಡಿಬಿಐ ಬ್ಯಾಂಕಿನ ಎನ್‌ಪಿಎ ಪ್ರಮಾಣ ಎಷ್ಟು?
ಎಲ್‌ಐಸಿಯು ಖರೀದಿ ಮಾಡಲಿರುವ ಷೇರುಗಳ ಮೊತ್ತ ಅಂದಾಜು ₹ 13 ಸಾವಿರ ಕೋಟಿ ಆಗಬಹುದು ಎಂಬ ಅಂದಾಜಿದೆ. ಎಲ್‌ಐಸಿಯ ಆರ್ಥಿಕ ಶಕ್ತಿಗೆ ಹೋಲಿಕೆ ಮಾಡಿದರೆ, ಈ ಮೊತ್ತ ಏನೇನೂ ಅಲ್ಲ. ಎಲ್‌ಐಸಿಯು 2016–17ನೇ ಆರ್ಥಿಕ ವರ್ಷ ಪೂರ್ಣಗೊಳ್ಳುವ ಹೊತ್ತಿಗೆ ₹ 22.75 ಲಕ್ಷ ಕೋಟಿಯಷ್ಟು ಬೃಹತ್ ಆದ ನಿಧಿಯನ್ನು ನಿರ್ವಹಣೆ ಮಾಡುತ್ತಿತ್ತು. ಹಾಗೆಯೇ ಈ ವಿಮಾ ಕಂಪನಿಯು ಎನ್‌ಪಿಎ ಸೋಂಕಿಗೆ ತುತ್ತಾಗಿರುವ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಎಲ್‌ಐಸಿ ಈಗಾಗಲೇ ಕಾರ್ಪೊರೇಷನ್‌ ಬ್ಯಾಂಕ್‌ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ಗಳಲ್ಲಿ ತಲಾ ಶೇಕಡ 10ರಷ್ಟಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಕಾರ್ಪೊರೇಷನ್‌ ಬ್ಯಾಂಕಿನ ಎನ್‌ಪಿಎ ಪ್ರಮಾಣ ಹಿಂದಿನ ಆರ್ಥಿಕ ವರ್ಷ ಅಂತ್ಯದ ಗೊತ್ತಿಗೆ ಶೇಕಡ 16.41ರಷ್ಟು ಆಗಿತ್ತು.

ಇತ್ತ, ಐಡಿಬಿಐ ಬ್ಯಾಂಕಿನ ಎನ್‌ಪಿಎ ಪ್ರಮಾಣ ಹಾಗೂ ಈ ಬ್ಯಾಂಕಿನ ನಷ್ಟದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. 2015-16ರಲ್ಲಿ ₹ 3,664 ಕೋಟಿ, 2016-17ರಲ್ಲಿ ₹ 5,158 ಕೋಟಿ ಮತ್ತು 2017-18ರಲ್ಲಿ ₹ 8,237 ಕೋಟಿ ನಷ್ಟವನ್ನು ಐಡಿಬಿಐ ಬ್ಯಾಂಕ್‌ ದಾಖಲಿಸಿದೆ. ಈ ಮೂರು ವರ್ಷಗಳಲ್ಲಿ ಬ್ಯಾಂಕಿನ ಎನ್‌ಪಿಎ ಪ್ರಮಾಣ ಶೇಕಡ 11 ಇದ್ದಿದ್ದು ಶೇಕಡ 28ಕ್ಕೆ ಹೆಚ್ಚಳ ಕಂಡಿದೆ. ಶೇಕಡ 28ರಷ್ಟು ಎನ್‌ಪಿಎ ಅಂದರೆ, ಈ ಬ್ಯಾಂಕ್‌ ಸಾಲವಾಗಿ ಕೊಟ್ಟ ಪ್ರತಿ ₹ 100ರಲ್ಲಿ ₹ 28 ಬ್ಯಾಂಕಿಗೆ ಮರಳಿ ಬರುವ ಸಾಧ್ಯತೆ ತೀರಾ ಕ್ಷೀಣ ಎಂದು ಅರ್ಥ.

* ‘ರೋಗಗಸ್ತ’ ಬ್ಯಾಂಕಿನ ಷೇರು ಖರೀದಿ ಎಷ್ಟು ಸರಿ?
ಎಲ್‌ಐಸಿ ಬಂಡವಾಳ ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಬಿಟ್ಟಿಲ್ಲ. ಹಾಗಾಗಿ, ಈ ಸಂಸ್ಥೆಯಲ್ಲಿನ ಬಹುಪಾಲು ಹಣ ವಿಮಾ ಗ್ರಾಹಕರದ್ದು. ಅವರು ವಿಮೆಯ ಕಂತಿನ ರೂಪದಲ್ಲಿ ಪಾವತಿ ಮಾಡುವ ಹಣವನ್ನು ಸರಿಯಾಗಿ ನಿರ್ವಹಣೆ ಮಾಡಿ, ಅವರಿಗೆ ಒಂದಿಷ್ಟು ಲಾಭ ತಂದುಕೊಟ್ಟು, ತಾನೂ ಒಂದಿಷ್ಟು ಲಾಭ ಮಾಡಿಕೊಳ್ಳುವುದು ಎಲ್‌ಐಸಿಯ ಮೂಲ ಚಟುವಟಿಕೆಗಳಲ್ಲಿ ಒಂದು. ಇಂದಿಗೂ ಭಾರತದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳ ಕುಟುಂಬದ ತರುಣನೊಬ್ಬ ನೌಕರಿಗೆ ಸೇರಿದಾಕ್ಷಣ, ‘ಒಂದು ಎಲ್‌ಐಸಿ ಪಾಲಿಸಿ ಮಾಡಿಸು’ ಎಂದು ಮನೆಯ ಹಿರಿಯರು ಹೇಳುವುದುಂಟು. ‘ಯೋಗಕ್ಷೇಮಮ್‌ ವಹಾಮ್ಯಹಂ’ (ಯೋಗಕ್ಷೇಮ ನೋಡಿಕೊಳ್ಳುವುದು ನನ್ನ ಹೊಣೆ) ಎಂಬ ಘೋಷವಾಕ್ಯವನ್ನು ಹೊಂದಿರುವ ಎಲ್ಐಸಿಯು ವಿಮಾ ಗ್ರಾಹಕರ ಹಣದ ಟ್ರಸ್ಟಿಯಾಗಿಯೂ ಕೆಲಸ ಮಾಡಬೇಕು. ಹೀಗಿರುವಾಗ, ‘ರೋಗಗ್ರಸ್ತ’ ಬ್ಯಾಂಕಿನಲ್ಲಿ ತನ್ನ ಪಾಲನ್ನು ಶೇಕಡ 51ರಷ್ಟಕ್ಕೆ ಹೆಚ್ಚಿಸುವ ಎಲ್‌ಐಸಿ ತೀರ್ಮಾನ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಸಾರ್ವಜನಿಕರ ನಡುವೆ ನಡೆದಿದೆ.

ಇದೊಂದೇ ಅಲ್ಲ. ಇಲ್ಲಿ ಇನ್ನೊಂದು ವಾದವೂ ಇದೆ. ಐಡಿಬಿಐ ಬ್ಯಾಂಕ್‌ ಕೇಂದ್ರದ ಮಾಲೀಕತ್ವಕ್ಕೆ ಸೇರಿದ್ದು. ಅಂದರೆ, ಎನ್‌ಪಿಎ ಮೂಲಕ ಈ ಬ್ಯಾಂಕ್‌ ಕಳೆದುಕೊಂಡಿರುವ ಹಣವನ್ನು ಪುನರ್ಧನ ಯೋಜನೆ ಮೂಲಕ ಭರಿಸಿಕೊಡುವ ಜವಾಬ್ದಾರಿ ಕೇಂದ್ರದ ಮೇಲೆ ಇದೆ. ಈಚೆಗೆ ಘೋಷಿಸಿದ ಪುನರ್ಧನ ಯೋಜನೆಯ ಮೂಲಕ ಈ ಬ್ಯಾಂಕ್‌ಗೆ ₹ 10,610 ಕೋಟಿಯಷ್ಟು ಹಣವನ್ನು ನೀಡಲಾಗಿದೆ ಎಂಬುದೂ ನಿಜ. ಬ್ಯಾಂಕಿನ ಶೇಕಡ 51ರಷ್ಟು ಷೇರುಗಳನ್ನು ಎಲ್‌ಐಸಿಗೆ ವರ್ಗಾಯಿಸಿ, ಬ್ಯಾಂಕಿನ ಮುಂದಿನ ನಷ್ಟಗಳಿಗೆ ಎಲ್‌ಐಸಿಯನ್ನು ಹೊಣೆಯಾಗಿಸುವ ಆಲೋಚನೆ ಇದರ ಹಿಂದೆ ಇದೆಯೇ ಎಂಬ ಪ್ರಶ್ನೆಯನ್ನೂ ಎತ್ತಲಾಗಿದೆ.

* ಹಾಗಾದರೆ, ಬ್ಯಾಂಕಿನ ಷೇರುಗಳನ್ನು ಎಲ್‌ಐಸಿ ಖರೀದಿ ಮಾಡುವುದು ಸಂಪೂರ್ಣ ತಪ್ಪೇ?
ಷೇರು ಖರೀದಿ ಒಪ್ಪಂದ ಸರಿ ಎಂಬ ಮಾತುಗಳು ಕೂಡ ಇವೆ. ‘ಈ ಕ್ರಮದಿಂದಾಗಿ ಎಲ್‌ಐಸಿಗೆ ಮುಂದಿನ ದಿನಗಳಲ್ಲಿ ಪ್ರಯೋಜನ ಆಗುತ್ತದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಈಚೆಗೆ ಹೇಳಿದ್ದಾರೆ. ‘ಐಡಿಬಿಐ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ತೀರ್ಮಾನಿಸುವ ಮೂಲಕ ಎಲ್‌ಐಸಿ ಲಾಭ ಮಾಡಿಕೊಳ್ಳಲಿದೆ ಎಂಬುದನ್ನು ನಾನು ಖಂಡಿತವಾಗಿ ಹೇಳಬಲ್ಲೆ. ಬ್ಯಾಂಕಿನ ಸ್ಥಿತಿ ಸುಧಾರಿಸುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಅದರ ಮಾರುಕಟ್ಟೆ ಬಂಡವಾಳದ ಮೊತ್ತ ಹೆಚ್ಚಾಗುತ್ತದೆ. ಹೂಡಿಕೆಯ ಮೇಲೆ ಒಳ್ಳೆಯ ಆದಾಯ ಪಡೆಯಲು ಎಲ್‌ಐಸಿಗೆ ಸಾಧ್ಯವಾಗುತ್ತದೆ’ ಎಂದೂ ಮಾಧ್ಯಮಗಳ ಜೊತೆ ಮಾತನಾಡುವಾಗ ರಾಜೀವ್‌ ಹೇಳಿದ್ದಾರೆ.

ಇದರ ಜೊತೆಯಲ್ಲೇ, ಎಲ್‌ಐಸಿ ಹೂಡಿಕೆ ಪರ ಇರುವ ಇನ್ನೊಂದು ವಾದವನ್ನೂ ಇಲ್ಲಿ ಉಲ್ಲೇಖಿಸಬೇಕು. ಎಲ್‌ಐಸಿ ಎಂಬುದು ಹಣಕಾಸಿನ ಆಸ್ತಿಯನ್ನು ನಿರ್ವಹಿಸುವ ಸಂಸ್ಥೆ. ಜನ ಈ ಸಂಸ್ಥೆಯಲ್ಲಿ ವಿಶ್ವಾಸವಿಟ್ಟು, ವಿಮೆ ಖರೀದಿಸುತ್ತಾರೆ. ವಿಮೆಗಾಗಿ ಜನ ಕೊಡುವ ಹಣವನ್ನು ಎಲ್‌ಐಸಿ ವಿವಿಧೆಡೆ ಹೂಡಿಕೆ ಮಾಡಿ, ಲಾಭ ಗಳಿಸುತ್ತದೆ. ವಿಮಾದಾರರಿಗೂ ಲಾಭದ ಒಂದಂಶವನ್ನು ಕೊಡುತ್ತದೆ. ಹೀಗಿರುವಾಗ, ಎಲ್‌ಐಸಿಯು ನಿರ್ದಿಷ್ಟ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು, ಕೆಲವು ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು ಎನ್ನುವುದು ಸರಿಯಲ್ಲ ಎಂಬುದು ಈ ವಾದದ ತಿರುಳು.

* ಇಲ್ಲಿ ನಿಯಮದ ಉಲ್ಲಂಘನೆಯೇನಾದರೂ ಆಗಿದೆಯೇ?
‘ಐಡಿಬಿಐ ಬ್ಯಾಂಕಿಗೆ ಬಂಡವಾಳದ ಮೊತ್ತ ಒದಗಿಸಿಕೊಡಲು ವಿಮಾ ಗ್ರಾಹಕರ ಹಣವನ್ನು ಬಳಸುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು’ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘ (ಎಐಬಿಒಎ) ರಾಷ್ಟ್ರಪತಿಗೆ ಮನವಿ ಮಾಡಿದೆ. ‘ಐಆರ್‌ಡಿಎ ನಿಗದಿ ಮಾಡಿರುವ ಮಿತಿಗಿಂತ ಹೆಚ್ಚಿನ ಷೇರು ಪಾಲನ್ನು ಹೊಂದಲು ಎಲ್‌ಐಸಿಗೆ ಅವಕಾಶ ಮಾಡಿಕೊಡಬಾರದು’ ಎಂದೂ ಸಂಘ ಆಗ್ರಹಿಸಿದೆ. ವಿಮಾ ಕಾಯ್ದೆ – 1938ರ ಪ್ರಕಾರ ವಿಮಾ ಸಂಸ್ಥೆಯು ಒಂದೇ ಕಂಪನಿಯಲ್ಲಿ ಶೇಕಡ 15ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದ ಷೇರು ಹೊಂದುವಂತಿಲ್ಲ. ‘ಆದರೆ, ಈ ನಿಯಮಕ್ಕೆ ಕೆಲವು ಸಂದರ್ಭಗಳಲ್ಲಿ ವಿನಾಯಿತಿ ನೀಡುವ ಅಧಿಕಾರ ಐಆರ್‌ಡಿಎಗೆ ಇದೆ’ ಎಂಬ ವಾದವೂ ಇದೆ.

* ವಿಮೆ ಹೊಂದಿರುವವರು ತಮ್ಮ ಹಣ ಕಳೆದುಕೊಳ್ಳಬೇಕಾದೀತೇ?
ಖಂಡಿತ ಇಲ್ಲ. ಆ ಬಗ್ಗೆ ಭಯ ಬೇಡ. ಎಲ್‌ಐಸಿ ಬಳಿ ಇರುವ ಆರ್ಥಿಕ ಸಂಪತ್ತಿಗೆ ಹೋಲಿಸಿದರೆ, ಈಗ ಅದು ಮಾಡಲಿರುವ ಹೂಡಿಕೆ ಏನೇನೂ ಅಲ್ಲ. ಹಾಗಾಗಿ, ಅಷ್ಟೂ ಹಣ ವ್ಯರ್ಥವಾದರೂ ವಿಮಾ ಗ್ರಾಹಕರು ಹಣ ಕಳೆದುಕೊಳ್ಳುವುದಿಲ್ಲ. ಆದರೆ ಅವರು ಪಡೆಯುವ ಬೋನಸ್‌ ಮೊತ್ತದಲ್ಲಿ ತುಸು ಕಡಿತ ಆಗಬಹುದು ಎಂದು ವಿಮಾ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT