ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಳು ಮಾತಿಗೆ ಸಿಕ್ಕಾಗ…

Last Updated 14 ಜುಲೈ 2018, 19:48 IST
ಅಕ್ಷರ ಗಾತ್ರ

ಹೊಸ ಸರ್ಕಾರ. ಹೊಚ್ಚ ಹೊಸ ಮಂತ್ರಿಗಳು. ಮೊದಲ ಅಧಿವೇಶನ. ಮಂತ್ರಿಗಳ ಕುಟುಕು ದರ್ಶನ ಮಾಡುವುದೆಂದು ರಿಪೋರ್ಟರ್ ಭಯಂಕರ್‌ ನಿರ್ಧರಿಸಿದ. ನಿಧಾನಸೌಧದಲ್ಲಿ ಅತ್ತ ಇತ್ತ ಕಣ್ಣಾಡಿಸಿದಾಗ ಮೊದಲು ಸಿಕ್ಕಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ಪಾದುಕೇಶ್.

‘ನಮಸ್ಕಾರ ಸಾರ್, ತಾವು ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖವಾಗಿ ಏನೆಲ್ಲಾ ಬದಲಾವಣೆಗಳನ್ನು ಮಾಡಲಿಚ್ಛಿಸಿರುವಿರಿ?’

ಮಂತ್ರಿ ಸಾಹೇಬ್ರು ಕಿಸೆಯನ್ನೊಮ್ಮೆ ತಡಕಾಡಿ, ‘ಕ್ಷಮಿಸಿ, ಇಂತಹ ಪ್ರಶ್ನೆಗಳಿಗೆ ಉತ್ತರಗಳು ಪೇಪರ್ ಪ್ಯಾಡ್‌ನಲ್ಲಿರುತ್ತೆ. ಇವತ್ತು ತಂದಿಲ್ಲ. ನಾಳೆ ಬನ್ನಿ… ಉತ್ತರ ಓದಿ ಹೇಳುತ್ತೇನೆ’ ಎಂದು ಎಲ್ಲೋ ಹೋದರು. ಇವರು ‘ತೆರೆದ ಪುಸ್ತಕ ಪರೀಕ್ಷೆ’ಯನ್ನು ಜಾರಿಗೆ ತರುವುದು ಗ್ಯಾರಂಟಿ ಎಂದನಿಸಿತು ಭಯಂಕರ್‌ಗೆ. ಅಲ್ಲೇ ಪಕ್ಕದಲ್ಲಿ ಉನ್ನತ ಶಿಕ್ಷಣ ಮಂತ್ರಿ ಮುಜುಗರಪ್ಪಾ ಇದ್ದರು.

‘ಕಾಂಗ್ರೆಟ್ಸ್ ಸರ್’
‘ನೋ ಕಾಂಗ್ರೆಸ್. ಐ ಯಾಮ್ ಜಾಡಿಸ್ ಪಾರ್ಟಿ’
‘ಸಾರ್, ಒಂದೆರಡು ಪ್ರಶ್ನೆಗಳನ್ನು ಕೇಳಬಹುದೇ?’
‘ಆಸ್ಕ್. ಬಟ್ ಹೋನ್ಲಿ ಇಂಗ್ಲೀಸು ಪ್ರಶ್ನೇಸ್’.

ರಿಪೋರ್ಟರ್‌ಗೆ ದಂಗಾಗಿಹೋಯಿತು. ‘ಇಲ್ಲ ಸಾರ್, ನನಗೆ ನಿಮ್ಮಷ್ಟು ಚೆನ್ನಾಗಿ ಇಂಗ್ಲೀಸು ಬರಲ್ಲ. ಅಂದಹಾಗೆ… ನೀವು ಯಾವಾಗ ಇಂಗ್ಲೀಸು ಕಲಿತದ್ದು ಸಾರ್?’
‘ಸೀ... ಐ ವೆಂಟು ಇಂಗ್ಲೀಸ್ ಕ್ಲಾಸು ಟ್ವೆಂಟಿ ದಿನಾಸ್. ಆಫ್ಟರ್ ಹೋನ್ಲಿ ಐ ಕಮ್ ಹಿಯರ್. ನವ್ ಆಲ್ಸೊ… ಐ ಗೋ ಟ್ಯೂಸನ್ ಕ್ಲಾಸು… ಸಿಕ್ಸ್ ಪಿಯಮ್ ಎವ್ರೀ ಡೇ. ನವ್ ಆಸ್ಕ್ ಪ್ರಶ್ನೇಸ್’.

ರಿಪೋರ್ಟರ್ ತಪ್ಪಿಸುವುದಕ್ಕೆ ಏನು ಮಾಡಬೇಕೆಂದು ತೋಚದೆ ಕೊನೆಗೆ, ‘ಸಾರ್, ಐ ಗೋ ಟ್ಯೂಷನ್ ಕ್ಲಾಸು... ದೆನ್ ಆಸ್ಕ್ ಯು ಪ್ರಶ್ನೇಸ್’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.

ನೇರ ಎದುರಾದದ್ದೇ ದಿಕ್ಕೇಟ್ಟಾಶ್ರೀ. ‘ನಮಸ್ಕಾರ ಸಾರ್. ಹೇಗೆ ಹರಿಯುತ್ತಿದೆ… ನೀರಾವರಿ?’

ರಿಪೋರ್ಟರ್‌ನ ಹೆಗಲ ಮೇಲೆ ಕೈಹಾಕಿ ದಿಕ್ಕೆಟ್ಟಾಶ್ರೀ ಬಾಡಿದ ಮುಖದಲ್ಲಿ ಹೇಳಿದರು: ‘ಮೊದಲೇ ಐಟಿ, ಸಿಬಿಐ ಅಂತ ವರಿಯಲ್ಲಿದ್ದೆ. ಈಗ ನೀರಾವರಿ ಖಾತೆ ಸಿಕ್ಕಿದ ಮೇಲೆ ವರಿ ಜಾಸ್ತಿಯಾಗಿಬಿಟ್ಟಿದೇರಿ’.

‘ಏನ್ಸಾರ್ ? ಅಂತಹುದೇನಾಗಿದೆ?’ ಎಂದು ಕುತೂಹಲದಿಂದ ಭಯಂಕರ್ ಕೇಳಿದ.

‘ನಾನು ಖಾತೆಯ ಕಚೇರಿಯನ್ನೇ ಓಪನ್ ಮಾಡಿಲ್ಲ, ವಿರೋಧ ಪಕ್ಷದ ನಾಯಕರು, ‘ಕಮಿಷನ್ ಖಾತೆ ಓಪನ್ ಮಾಡಿದ್ದೇನೆ’ ಎಂದು ಆರೋಪಿಸುವುದೇ? ಒಟ್ಟಾರೆ ಬಾಜಪ್ಪರುಗಳು ನನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ! ಹೇಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದೂಂತ ತುಂಬಾ ವರಿಯಾಗಿಬಿಟ್ಟಿದೆ!’ ನೀರಾವರಿ ಸಚಿವರ ವರಿ ನೋಡಿ ರಿಪೋರ್ಟರ್‌ಗೆ ಕನಿಕರವಾಯಿತು.

ಅಲ್ಲೇ ಆಹಾರ ಮಂತ್ರಿ ಫಾರ್ಚೂನರ್ ಹಾದು ಹೋದರು. ‘ಸಾರ್, ಸಾರ್… ಒಂದ್ನಿಮಿಷ’ ರಿಪೋರ್ಟರ್ ಕೂಗಿದ. ಸಚಿವರು ‘ಓಹೊ ಹೋ! ಏನ್ ಪತ್ರಕರ್ತರೇ, ಹೆಂಗಿದ್ದೀರಿ?’ ಎಂದು ನಿಂತರು.

‘ಸಾರ್, ನೀವು ತುಂಬಾ ಅದೃಷ್ಟವಂತರು. ಮಿನಿಸ್ಟ್ರೇ ಆಗಿಬಿಟ್ರಲ್ಲ! ಅದೂ ಬದ್ಧ ವೈರಿ ಸ್ವಾಮಿಯ ಸಂಪುಟದಲ್ಲೇ!’
ಆಹಾರ ಮಂತ್ರಿ ಕಣ್ಣುಗಳನ್ನೂ ಝೂಮ್ ಮಾಡುತ್ತಾ ಹೇಳಿದರು: ‘ಇದಕ್ಕೆ ಅದೃಷ್ಟ ಅಂತಾರೇನ್ರೀ? ಫಾರ್ಚೂನರ್ ಕಾರು ಕೊಡಿಸದೇ ಇರುವುದರಿಂದ ನನಗೆ ಕೆಲಸದ ಮೇಲೆ ಗಮನ ಕೊಡಲು ಆಗುತ್ತಿಲ್ಲ ಗೊತ್ತೇನ್ರೀ?’

ಪಾಪ, ಅನ್‌ಫಾರ್ಚೂನೇಟ್ ಆಹಾರ ಮಂತ್ರಿ!

ಆ ಕಡೆ ನೋಡಿದರೆ ಸಂಕ್ರಣ್ಣ. ‘ಸಂಕ್ರಣ್ಣ, ನಮಸ್ಕಾರ. ನೀವೀಗ ಕಾಡಿನ ರಾಜ ಅಲ್ವೇ!’ ಎಂದು ಅರಣ್ಯ ಸಚಿವರ ಕೈ ಕುಲುಕಿದ ಭಯಂಕರ್.

‘ಈ ಬಾರಿ ಮಂಗಳೂರಿಗೆ ಹೋಗಿ ಹುಲಿ ಡ್ಯಾನ್ಸ್ ಮಾಡುವ ಸುವರ್ಣಾವಕಾಶ ನನಗೆ ಸಿಕ್ಕಿರುವುದು ನನ್ನ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ. ಹಿಂದಿನ ಅರಣ್ಯ ಸಚಿವರು ಆರಂಭಿಸಿದ ಆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿ ಕಾಡಿನ ರಾಜ ಅವಸರವಸರದಲ್ಲಿ ಹೋದರು. ರಿಪೋರ್ಟರ್ ಅವರ ಹಿಂದೆ ಓಡಿದ. ‘ಸಂಕ್ರಣ್ಣ , ನಿಮ್ಮಲ್ಲಿ ಪರಿಸರ, ಜೀವಿಶಾಸ್ತ್ರ ಮತ್ತು ಮತ್ತು… ರೇಷ್ಮೆ ಖಾತೆಗಳೂ ಇವೆ. ಅವುಗಳ ಬಗ್ಗೆಯೂ ಏನೋ ಕೇಳಬೇಕಾಗಿತ್ತು’. ಸಂಕ್ರಣ್ಣ ರಿಪೋರ್ಟರ್ ಕಿವಿ ಬಳಿ ಬಂದು, ‘ನನ್ನ ಕೈಯಲ್ಲಿ ಈ ಖಾತೆಗಳೂ ಇರುವುದು ನಿಮ್ಮಿಂದ ಈಗಷ್ಟೇ ಗೊತ್ತಾಯಿತು. ಮುಂದೆ ಮಾತನಾಡೋಣ’ ಎಂದು ಹೇಳಿ ಮತ್ತೆ ಓಟ ಮುಂದುವರಿಸಿದರು.

ಭಯಂಕರ್ ಕಣ್ಣಿಗೆ ಬಿದ್ದದ್ದು ಮಂತ್ರಿ ಕಷ್ಟಪ್ಪ ಗೌಡ. ‘ಸಾರ್, ಹೇಗಿದೆ ನಿಮ್ಮ ಕೆಲಸ? ಏನೇನಲ್ಲ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡಿದ್ದೀರಿ?’ ಈ ಪ್ರಶ್ನೆಗೆ ಕಷ್ಟಪ್ಪರು ‘ರೈತರಿಗೆ ಹೊಸ ಚೈತನ್ಯ ಕೊಡಬೇಕೆಂಬುದು ನಮ್ಮ ಆಸೆ. ಶೀಘ್ರದಲ್ಲೇ ನಾವು ಇಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ಅಳವಡಿಸುವಂತೆ ಸುಗ್ರೀವಾಜ್ಞೆ ಹೊರಡಿಸುತ್ತೇವೆ…’ ಎಂದು ಹೇಳುತ್ತಿದ್ದಂತೆ, ಭಯಂಕರ್ ನಡುವೆ ಬ್ರೇಕ್ ಹಾಕಿಬಿಟ್ಟ. ‘ಸಾರ್ ಸಾರ್! ನೀವು ಈ ಸರ್ಕಾರದಲ್ಲಿ ಕೃಷಿ ಮಂತ್ರಿ ಅಲ್ಲ. ಈಗ ನಿಮ್ಮದು ಗ್ರಾಮೀಣಾಭಿವೃದ್ಧಿ ಖಾತೆ!’ ಕಷ್ಟಪ್ಪರು ಫೋನ್ ಕರೆ ಬಾರದಿದ್ದರೂ ಮೊಬೈಲ್ ಕಿವಿಗಂಟಿಸಿಕೊಂಡು ಹೋಗಿಯೇಬಿಟ್ಟರು.

ಬಹಳ ನಿರೀಕ್ಷೆಯಲ್ಲಿ ಕಾಯುತಿದ್ದ ಮೂಢಣ್ಣರನ್ನು ಕಂಡಾಗ ರಿಪೋರ್ಟರ್ ಮುಖ ಅರಳಿತು. ‘ಸಾರ್, ತಮ್ಮ ಲೋಕೋಪಯೋಗಿ ಕೆಲಸ ಜೋರಾಗಿ ನಡೆಯುತ್ತಿರಬೇಕಲ್ಲ?’ ಕೇಳಿದ ಭಯಂಕರ್.

‘ಇದನ್ನು ಪ್ರಕಟಿಸಬೇಡಿ! ನಾನು ಕೆಲಸ ಆರಂಭಿಸಿದರೆ ಸರ್ಕಾರ ಬೀಳುವುದು ಗ್ಯಾರಂಟಿ ಅಂತ ನಮ್ಮ ಪಕ್ಷದ ಜ್ಯೋತಿಷಿ ಹೇಳಿದ್ದಾರೆ!’ ಎಂದು ಮೂಢಣ್ಣ ಗುನುಗುತ್ತಾ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT