ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ ಕೋಟೆ ಉಳಿವಿಗೆ ಬೇಕಿದೆ ಇಚ್ಛಾಶಕ್ತಿ

ಒತ್ತುವರಿಯ ಹುನ್ನಾರ
Last Updated 7 ಜುಲೈ 2018, 6:54 IST
ಅಕ್ಷರ ಗಾತ್ರ

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಒಳಪಟ್ಟಿರುವ ಇಲ್ಲಿ ಐತಿಹಾಸಿಕ ಕೋಟೆಯ ಹೊರ ಆವರಣವನ್ನು ನಿಧಾನವಾಗಿ ಪ್ರಭಾವಿಗಳು ಮಣ್ಣು ಮುಚ್ಚಿ ಒತ್ತುವರಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಎಲ್ಲೆಡೆ ಆರೋಪಗಳು ಕೇಳಿಬರುತ್ತಿವೆ.

ಇಲ್ಲಿನ ಕೋಟೆ ನೆಲದ ಪಾಯದ ಮೇಲೆ ನಿರ್ಮಾಣ ಮಾಡಿರುವ ಕೋಟೆ 300 ಮೀ. ಉದ್ದ,182 ಮೀ. ಅಗಲದ ಆಮೆ ಆಕೃತಿಯಲ್ಲಿ ನಿರ್ಮಾಣ ಮಾಡಿರುವ ಕೋಟೆಗೆ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಪ್ರವೇಶದ್ವಾರ ಕಲ್ಪಿಸಲಾಗಿತ್ತು. ಪ್ರಸ್ತುತ ಪೂರ್ವ ದ್ವಾರ ನಾಶವಾಗಿದೆ ಈ ಹಿಂದೆ ದೇವನದೊಡ್ಡಿಯಾಗಿದ್ದ ಸಂದರ್ಭದಲ್ಲಿ ಮಣ್ಣಿನಿಂದ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ, ಲಭ್ಯ ಇತಿಹಾಸದ ಮಾಹಿತಿ ಪ್ರಕಾರ ಆವತಿ ನಾಡ ಪ್ರಭು ರಣಭೈರೇಗೌಡರ ಮಗ ಮಲ್ಲಭೈರೇಗೌಡ ಕ್ರಿ.ಶ.1501 ರಲ್ಲಿ ಕಲ್ಲಿನ ಕೋಟೆಯನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿದ್ದರು. ಕೋಟೆಯ ಹೊರಭಾಗದಲ್ಲಿ ಶತ್ರುಗಳಿಂದ ರಕ್ಷಿಸಲು ಕೋಟೆಯ ಸುತ್ತ ಪ್ರವೇಶ ದ್ವಾರ ಹೊರತು ಪಡಿಸಿ ಆಳವಾದ ಕಂದಕ (ಬುರುಜು)ಸೃಷ್ಟಿ ಮಾಡಿ ಇಡಿ ವರ್ಷ ನೀರು ತುಂಬಿರುವಂತೆ ವ್ಯವಸ್ಥೆ ಮಾಡಿದ್ದರು. ಕೋಟೆ ಗೋಡೆಯ ಪಕ್ಕದಲ್ಲಲೇ ಇರುವ ಕಂದಕಗಳನ್ನು ವ್ಯವಸ್ಥಿತವಾಗಿ ಮಣ್ಣುಗಳಿಂದ ತುಂಬಿಸಿ ಒತ್ತುವರಿ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

2008 ರಲ್ಲಿ ಕೇಂದ್ರ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಕೋಟೆ ಕೇಂದ್ರ ಭಾಗದಿಂದ ಒಳ ಆವರಣ 100 ಮೀ. ಮೊದಲ ಹಂತ, 300 ಮೀ. ಎರಡನೇ ಹಂತದಲ್ಲಿ ಯಾವುದೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸದಂತೆ ಆದೇಶ ಮಾಡಿತ್ತು, ಅಂದು ಹಾಲಿ ವಾಸವಿದ್ದ ಸ್ಥಳೀಯ ನಿವಾಸಿಗಳಿಗೆ ನೋಟೀಸ್ ನೀಡಿತ್ತು ಹೊರತುಪಡಿಸಿದರೆ ಈವರೆವಿಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಪ್ರಾಗೈತಿಕ ಇತಿಹಾಸ ಹೊಂದಿರುವ ಕಲ್ಲಿನ ಕೋಟೆ ವ್ಯಾಪ್ತಿ ರಕ್ಷಣೆಯೇ ಇಲ್ಲ ಒಬ್ಬ ಕಾವಲುಗಾರ ನೇಮಕ ಮಾಡಿರುವುದು ಬಿಟ್ಟರೆ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎನ್ನುತ್ತಾರೆ ಚಂದ್ರಶೇಖರ್.

ಐತಿಹಾಸಿಕ ಕೋಟೆ ವ್ಯಾಪ್ತಿಯನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡುವಲ್ಲಿ ಸಂಬಂಧಿಸಿದ ಇಲಾಖೆ ಸಂಪೂರ್ಣ ವಿಫಲವಾಗಿದೆ, ಕೋಟೆ ಹೊರಭಾಗ ಎಷ್ಟು ಅಡಿ ವಿಸ್ತೀರ್ಣ ಎಂಬುದು ಸಾರ್ವಜನಿಕರಿಗೆ ತಿಳಿದಿಲ್ಲ. ಕಂದಕದ ಜಾಗವನ್ನು ವ್ಯವಸ್ಥಿತವಾಗಿ ನಕಲು ದಾಖಲೆಯನ್ನು ಸೃಷ್ಟಿಸಲಾಗುತ್ತಿದೆ ಇದಕ್ಕೆ ಪುರಸಭೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ವಿಪರ್ಯಾಸವೆಂದರೆ ಪುರಸಭೆ ವ್ಯಾಪ್ತಿಯ ವಿಸ್ತೀರ್ಣವೇ ಈವರೆವಿಗೆ ಪುರಸಭೆ ಅಧಿಕಾರಿಗಳಿಗೆ ಗೊತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಹೋಟೆಲ್ ನ ತೆರಿಗೆ ಆವತಿ ಗ್ರಾಮ ಪಂಚಾಯಿತಿ ಪಡೆಯುತ್ತಿದೆ ಆಯ್ಕೆಗೊಂಡ ಸದಸ್ಯರಿಗೆ ಇಚ್ಚಾಶಕ್ತಿ ಜತೆಗೆ ಸಾಮಾಜಿಕ ಸೇವೆಯ ಕಾಲಜಿಯೇ ಇಲ್ಲ ಎಂದು ದೂರುತ್ತಾರೆ ಮುನಿಯಪ್ಪ.

ಕಳೆದೆರಡು ವರ್ಷಗಳ ಹಿಂದೆ ಕೋಟೆ ಒಳಭಾಗದ ಗೋಡೆಗಳು ಮಳೆಯಿಂದ ಕುಸಿತವಾಗಿತ್ತು ದುರಸ್ತಿಯ ನಂತರವು ಮತ್ತೊಮ್ಮೆ ಕಳಪೆ ಕಾಮಗಾರಿಯಿಂದ ಕುಸಿದಿತ್ತು. ಕೇಂದ್ರ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ವತಿಯಿಂದ ಬರುವ ಅನುದಾನ ಸದ್ಬಳಕೆಯಾಗುತ್ತಿಲ್ಲ, ಕೋಟೆಯ ಅಕ್ಕಪಕ್ಕ ಗಿಡಗಂಟೆ ಹೊರಹಾಕಲು ಕಾರ್ಮಿಕರನ್ನು ಬಳಕೆ ಮಾಡುವ ಸಂದರ್ಭದಲ್ಲಿ ಕೂಲಿ ಕೆಲಸಗಾರರು ಕಡಿಮೆ ಇದ್ದರು ಹೆಚ್ಚು ತೋರಿಸಿ ಅನುದಾನ ಲಪಟಾಯಿಸಲಾಗುತ್ತಿದೆ. ಸರ್ಕಾರ ಯಾರಿಗೋ ಗುತ್ತಿಗೆ ನೀಡುತ್ತದೆ ಗುತ್ತಿಗೆ ಪಡೆದವರು ಮತ್ಯಾರಿಗೋ ನೀಡುತ್ತಾರೆ, ಅಧಿಕಾರಿಗಳು ಮಾತ್ರ ಇತ್ತ ತಲೆಹಾಕುವುದಿಲ್ಲ. ಲಕ್ಷಾಂತರ ಅನುದಾನ ಐತಿಹಾಸಿಕ ಕೋಟೆ ಸಂರಕ್ಷಣೆ ನೆಪದಲ್ಲಿ ವೆಚ್ಚವಾಗುತ್ತಿದೆ. ಕೋಟೆ ಜಾಗ ಒತ್ತುವರಿ ಮತ್ತು ಬಳಕೆಯಾಗುತ್ತಿರುವ ಅನುದಾನದ ಬಗ್ಗೆ ಸಮಗ್ರ ತನಿಖೆಯಾಗಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂಬುದಾಗಿ ಪ್ರಜಾವಿಮೋಚನಾ ಚಳುವಳಿ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯ ಘಟಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಎಚ್ಚರಿಕೆ ನೀಡಿದರು.

ಐತಿಹಾಸಿ ಕೋಟೆ ವ್ಯಾಪ್ತಿಯ ಜಾಗ ಕಂದಾಯ ಇಲಾಖೆ ಮತ್ತು ಪುರಸಭೆ ವ್ಯಾಪ್ತಿಗೆ ಬರುವುದೇ ಇಲ್ಲ, ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಿಸಿದ್ದು ಕೋಟೆ ಹೊರಭಾಗದಲ್ಲಿ 100 ಮೀಟರ್ ಜಾಗ ವ್ಯಾಪ್ತಿಯಲ್ಲಿ ಪುರಸಭೆಯಿಂದ ಯಾವುದೇ ದಾಖಲೆ ನೀಡುತ್ತಿಲ್ಲ ಈ ಹಿಂದೆ ನೀಡಿದ್ದರೆ ಊರ್ಜಿತವಾಗುವುದಿಲ್ಲ ಕೋಟೆ ರಕ್ಷಣೆ ಬಗ್ಗೆ ನಮಗೂ ಕಾಳಜಿ ಇದೆ,ಕಾವಲುಗಾರ ಪುರಸಭೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಎಂ.ಮೂರ್ತಿ.

ಕೋಟೆ ಹೊರಭಾಗದಲ್ಲಿ ನೂರು ಮೀಟರ್ ನಲ್ಲಿ ಕಳೆದ 20 ವರ್ಷಗಳಿಂದ ಆಗಿರುವ ಕಟ್ಟಡ ಹೊರತು ಪಡಿಸಿ ಪ್ರಸ್ತುತ ಯಾವುದೆ ಅಭಿವೃದ್ಧಿ ಕಾಮಗಾರಿ ಮಾಡುವಂತಿಲ್ಲ ಎಂದು ಭಾರತೀಯ ಪುರಾತತ್ವಸರ್ವೇಕ್ಷಣ ಇಲಾಖೆ ತಾಂತ್ರಿಕ ಡೆಪ್ಯೂಟಿ ಇಂಜಿನಿಯರ್ ರಂಗನಾಥ್ ತಿಳಿಸಿದ್ದಾರೆ. ಇಲಾಖೆಗೆ ಸಂಬಂಧಿಸಿದ ಒಂದೊಂದು ಕಲ್ಲುಗಳು ಅಮೂಲ್ಯ ಹಾಗೂ ಕೋಟೆ ವ್ಯಾಪ್ತಿಯ ಜಾಗಗಳು ಅಷ್ಟೇ ಶ್ರೇಷ್ಟ ಶೀಘ್ರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಐತಿಹಾಸಿ ಕೋಟೆ ಒಳ ಆವರಣದ ಪಶ್ಚಿಮ ಭಾಗದ ಅಂಚಿನಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಆವತಿ ನಾಡ ಪ್ರಭುಗಳ ಕೊಡುಗೆಯಾಗಿದೆ, ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ, ಅರ್ಧಮಂಟಪ, ನವರಂಗ ಮತ್ತು ಮುಖ ಮಂಟಪವಿದೆ. ವಿಶಾಲವಾದ ನವರಂಗಕ್ಕೆ ನಾಲ್ಕು ಕೃಷ್ಣ ಶಿಲೆಯ ಕೆತ್ತನೆಯ ಕಂಬಗಳಿವೆ, ಶಿಲ್ಪಿ ಈ ಕಂಬಗಳನ್ನು ಶಿಲ್ಪಾಭಿಷೆಕದಂತೆ ಕೆತ್ತಿದ್ದಾನೆ, ರಾಮಾಯಣದ ವೃತ್ತಾಂತ ಸಾರುವ ಶಿಲ್ಪ ಕೆತ್ತನೆಗಳಿವೆ. ದೇವಾಲಯದ ಎಡಬದಿಯಲ್ಲಿರುವ ತೆರದ ಕೈಸಾಲೆಯ ಗೋಡೆಯಲ್ಲಿ ಕ್ರಿ.ಶ.1619 ರ ಶಾಸನವಿದ್ದು ಆವತಿ ನಾಡ ಪ್ರಭುಗಳು ಈ ದೇವಾಲಯಕ್ಕೆ ದತ್ತಿ ನೀಡಿದ ವಿವರಗಳನ್ನು ಸಾರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT