ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ಸಂತೆ, ಹಿಂದೆ ಹೀಗೂ ಇತ್ತು!

Last Updated 7 ಜುಲೈ 2018, 12:28 IST
ಅಕ್ಷರ ಗಾತ್ರ

ಎನ್‌.ಆರ್‌.ಪುರ: ಸಂತೆ ಮಾರುಕಟ್ಟೆ ಎನ್ನುವುದು ಸರಕು ಮಾರುವವರನ್ನು ಮತ್ತು ಕೊಳ್ಳುವವರನ್ನು ಒಂದೆಡೆ ಸೇರಿಸುವ ಸ್ಥಳವಾಗಿದೆ. ವಿಭಿನ್ನ ವ್ಯಕ್ತಿತ್ವ, ಗುಣ ಸ್ವಭಾವದ ಜನರೆಲ್ಲರೂ ಅಲ್ಲಿ ಕಲೆಯುತ್ತಾರೆ. ಇಂತಹ ಒಂದು ಸ್ಥಳ ಪ್ರತಿ ಊರಿನಲ್ಲಿಯೂ ಇರುವುದನ್ನು ಕಾಣಬಹುದು.

ನಮ್ಮೂರ ಸಂತೆಯ ಬಗ್ಗೆ ಕೆದಕುತ್ತಾ ಹೋದಂತೆ ಹಲವು ಕುತೂಹಲಕಾರಿ ಹಾಗೂ ವಿಶಿಷ್ಟ ಎನಿಸುವಂತಹ ವಿಚಾರಗಳು ತೆರೆದುಕೊಂಡವು. ನರಸಿಂಹರಾಜಪುರ ಎಡೆಹಳ್ಳಿ ಗ್ರಾಮ ಎಂದು ಕರೆಯುವ ಜಾಗದಲ್ಲಿ ನೂರಾರು ವರ್ಷಗಳಿಂದಲೂ ಸಂತೆ ಸೇರುತ್ತದೆ. ತಲಾತಲಾಂತರದಿಂದಲೂ ಇಲ್ಲಿ ಶನಿವಾರ ಸಂತೆ ಸೇರುವುದು ವಾಡಿಕೆ. ಶನಿವಾರವೇ ಸಂತೆ ಸೇರಲು ಕಾರಣ ಪ್ರತಿ ಶುಕ್ರವಾರ ತರೀಕೆರೆಯಲ್ಲಿ ಸಂತೆ ಸೇರುತ್ತಿತ್ತು. ಅಲ್ಲಿಂದ ಎನ್.ಆರ್.ಪುರಕ್ಕೆ ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಮೊದಲು ಕೇವಲ 25 ಮೈಲಿಯಾಗುತ್ತಿತ್ತು. ತರೀಕೆರೆಯಲ್ಲಿ ಸಂತೆ ಮುಗಿಸಿ ಇಲ್ಗೆ ಬಂದು ಸಂತೆ ಮಾಡಿ ನಂತರ, ಭಾನುವಾರ ಕೊಪ್ಪದ ಸಂತೆಗೆ ಹೋಗುವುದು ಮೊದಲಿನಿಂದಲೂ ನಡೆಯುತ್ತಿದೆ.

1962–63 ಹಾಗೂ ಅದಕ್ಕಿಂತಲೂ ಹಿಂದಿನ ದಾಖಲೆಗಳ ಪ್ರಕಾರ ಈಗಿನ ಸರ್ಕಾರಿ ಪ್ರೌಢಶಾಲೆಯ ಸ್ಥಳ ಹಾಗೂ ನೇತಾಜಿ ನಗರ ಪ್ರದೇಶದ ಸುಮಾರು 1 ಎಕರೆಯಲ್ಲಿ ಸಂತೆ ಮೈದಾನವಿತ್ತು. ಈ ಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ್ದ ಸಣ್ಣಸಣ್ಣ ಕೊಠಡಿಗಳು ಇದ್ದವು. ಸಂತೆ ದಿನದಂದು ವ್ಯಾಪಾರಿಗಳು ಟೆಂಟ್ ಹಾಗೂ ಕೊಠಡಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದರು. ಹಿಂದಿನ ಕಾಲದಲ್ಲಿ ಇಲ್ಲಿಗೆ ತರೀಕೆರೆಯಿಂದ ವಡ್ಡರ ಬಂಡಿಯ ಮೂಲಕ ತಡಸ ಮಾರ್ಗವಾಗಿ ವ್ಯಾಪಾರಸ್ಥರು ಬರುತ್ತಿದ್ದರು. ಸಾಂಬಾರ ಪದಾರ್ಥಗಳಾದ ಮೆಣಸಿನಕಾಳು, ಏಲಕ್ಕಿ, ಅಡಿಕೆ ಮುಂತಾದವುಗಳಿಗೆ ಇಲ್ಲಿನ ಸಂತೆ ಹೆಸರುವಾಸಿಯಾಗಿತ್ತು. ಹಳ್ಳಿಯವರಿಗೆ ವೀಳ್ಯೆದೆಲೆ, ತಂಬಾಕು ಎಂದರೆ ಬಹಳ ಪ್ರಿಯ. ಸಾಮಾನ್ಯವಾಗಿ ವ್ಯಾಪಾರಿಗಳು ವೀಳ್ಯದೆಲೆ ಪಿಂಡಿಗಳನ್ನು ಕುದುರೆಯ ಮೇಲೆ ಹೊರಿಸಿಕೊಂಡು ಇಲ್ಲಿಗೆ ತರುತ್ತಿದ್ದರು. ಕಾಲ ಕ್ರಮೇಣ ವಡ್ಡರ ಬಂಡಿಗಳು ಹೋಗಿ ಎತ್ತಿನ ಗಾಡಿಗಳಲ್ಲಿ ಸಾಂಬಾರ ಪದಾರ್ಥ ಬರುತ್ತಿದ್ದವು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಎತ್ತುಗಳಿಗೆ ಡಬ್ಬದಲ್ಲಿ ಹುರುಳಿ ಬೇಯಿಸಿ ಹಾಕುತ್ತಿದ್ದರು. ಹುರುಳಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದ್ದರಿಂದ ಸಾಂಬಾರಿಗಾಗಿ ಇದನ್ನು ಜನ ಬಳಸುತ್ತಿದ್ದರು. ಇದರ ಸಾಂಬಾರಿಗೆ ರಾಗಿ ಮುದ್ದೆ ಮಾಡಿ ಸೇವಿಸಿದರೆ ಚಪ್ಪರಿಸಿ ತಿನ್ನುವಂತಾಗುತ್ತಿತ್ತು. ಅದರ ರುಚಿ ಬಲ್ಲವನೇ ಬಲ್ಲ ಎನ್ನುತ್ತಾರೆ ಹಿರಿಯರು.

ಸಂತೆಯಲ್ಲಿ ದೊರೆಯುವ ವಸ್ತುಗಳು ಎಷ್ಟು ಅಗ್ಗವಾಗಿತ್ತೆಂದರೆ ನಂಬಲೂ ಸಾಧ್ಯವಾಗದ ಬೆಲೆಯಿತ್ತು. ಬಹಳ ಹಿಂದೆ ₹1ಕ್ಕೆ 16 ತೆಂಗಿನಕಾಯಿ, ₹1ಕ್ಕೆ 3 ಸೇರು ಅಕ್ಕಿ, 4 ಆಣೆಗೆ 2 ಸೇರು ಬೆಲ್ಲ, 10 ಪೈಸೆಗೆ ಒಂದು ಸೇರು ಮಂಡಕ್ಕಿ, ₹1ಕ್ಕೆ 10ಮೊಟ್ಟೆ, 50 ಪೈಸೆಗೆ 1 ಕೆ.ಜಿ. ಮಟನ್ ಸಿಗುತ್ತಿತ್ತು ಎಂದು ಹಿರಿಯರು ತಿಳಿಸುವಾಗ ಆಶ್ಚರ್ಯ ಎನಿಸುತ್ತದೆ.

ಈ ಸಂತೆಯ ಇನ್ನೊಂದು ವಿಶೇಷವೆಂದರೆ ಸುತ್ತಮುತ್ತಲ ಹಳ್ಳಿಗಳಿಂದ ಸೇರುತ್ತಿದ್ದ ಜನರ ಮನೋರಂಜನೆಗಾಗಿ ಟೆಂಟ್‌ ಸಿನಿಮಾಗಳು ಹಾಗೂ ನಾಟಕ ಮಂಡಳಿಗಳೂ ಸಹ ಬರುತ್ತಿದ್ದವು. ಬಳೆಗಾರರು ಮನೆ, ಮನೆಗೆ ತೆರಳಿ ಹೆಣ್ಣುಮಕ್ಕಳಿಗೆ ಬಳೆ ತೊಡಿಸಿ ಹೋಗುತ್ತಿದ್ದುದು ವಿಶೇಷವಾಗಿತ್ತು. ಶನಿವಾರ ಬಂತೆಂದರೆ ಹಳ್ಳಿಹೈಕಳುಗಳಿಗೆ ಖುಷಿಯೋ ಖುಷಿ. ಸಂತೆಗೆ ಹೋಗುವುದೆಂದರೆ ಒಂದು ತರಹದ ಕುತೂಹಲ. ನಮಗೆ ತಿನ್ನಲು ಬೆಲ್ಲ, ಮಂಡಕ್ಕಿ, ಉರುಗಡಲೆ, ಕಡಲೆಕಾಯಿ ಪುಕ್ಕಟೆಯಾಗಿ ಸಿಗುತ್ತಿತ್ತು ಎಂದು ಹಿರಿಯರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಹಿಂದೆ ಈಗಿನ ಪದವಿಪೂರ್ವ ಕಾಲೇಜಿನ ಪ್ರದೇಶದಲ್ಲಿ ಸಂತೆ ಸೇರುತ್ತಿತ್ತು. ಎತ್ತಿನ ಗಾಡಿಯ ಕೆಳಭಾಗದಲ್ಲಿ ಹಾಗೂ ಟೆಂಟ್‌ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ವಾರಕ್ಕೊಮ್ಮೆ ಹಳ್ಳಿಯಿಂದ ಜನ ಬಂದು ಸೇರುತ್ತಿದ್ದರು. ಹಳೆ ಸಂತೆ ಮೈದಾನದ ಕಟ್ಟಡದಲ್ಲಿ ಶಾಲೆ ನಿರ್ಮಾಣವಾದ ಮೇಲೆ 1963ರಲ್ಲಿ ಈಗಿನ ಟಿಎಪಿಸಿಎಂಎಸ್ ಹಿಂಭಾಗದ ಜಾಗವನ್ನು ಸಂತೆ ಮೈದಾನಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಪ್ರಸ್ತಾವನೆ ನಡೆದಿತ್ತು. ನಂತರದಲ್ಲಿ ಈ ಪ್ರಸ್ತಾವನೆ ಅಪೂರ್ಣವಾಗಿ ಹಳೇಪೇಟೆಯ ಸರ್ವೇ ನಂ 178ರಲ್ಲಿ ಸಂತೆ ಸೇರುತ್ತಿತ್ತು.

2010ರ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಸಂತೆಯ ಹಿಂದಿನ ಗತವೈಭವ ಪ್ರಸ್ತುತ ಮಾಯವಾಗಿದೆ. ವಾಹನದ ಸೌಕರ್ಯಗಳು ಸೀಮಿತವಾಗಿದ್ದ ಕಾಲದಲ್ಲಿ ಸಂತೆಗೆ ಹಳ್ಳಿಗಳಿಂದ ಜನರು ನಡೆದು ಕೊಂಡು ಬಂದು ವಾರಕ್ಕಾಗುವಷ್ಟು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆಗ ಸಂತೆ ದಿನ ಪಟ್ಟಣದ ತುಂಬೆಲ್ಲಾ ಜನ ಇರುತ್ತಿದ್ದರು. ಕೇವಲ ನಾಲ್ಕೈದು ರೂಪಾಯಿಗಳಿಗೆ ಚೀಲಗಟ್ಟಲೆ ಸರಕುಗಳನ್ನು ತರುತ್ತಿದ್ದ ಆ ದಿನಗಳು, ಪ್ರಸ್ತುತ ಹೆಚ್ಚಿನ ಹಣ ವ್ಯಯಿಸಿದರೂ ಚೀಲ ತುಂಬದ ಸ್ಥಿತಿ, ಗತವೈಭವದ ದಿನಗಳು ಕನಸೋ, ನನಸೋ ಎಂಬುದು ತಿಳಿಯದಾಗಿದೆ ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT