ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಕ್ಕೆ 2 ಬಾರಿ ನೀಟ್‌, ಜೆಇಇ; ಆನ್‌ಲೈನ್‌ನಲ್ಲಿ ಯುಜಿಸಿ–ನೆಟ್‌ 

Last Updated 7 ಜುಲೈ 2018, 12:43 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಎಸ್‌ಇ ಆಯೋಜಿಸುವ ರಾಷ್ಟ್ರೀಯ ಮಟ್ಟದ ನೆಟ್(ಎನ್‌ಇಟಿ), ನೀಟ್‌(ಎನ್‌ಇಇಟಿ) ಹಾಗೂ ಜೆಇಇ(ಮೇನ್ಸ್) ಪರೀಕ್ಷೆಗಳನ್ನು ನೂತನವಾಗಿ ರಚಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್‌), ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಏಪ್ರಿಲ್‌ನಲ್ಲಿ ಜೆಇಇ(ಮೇನ್ಸ್‌) ಹಾಗೂ ಫೆಬ್ರುವರಿ ಮತ್ತು ಮೇನಲ್ಲಿ ನೀಟ್‌ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

ಇದೇ ವರ್ಷದಿಂದ ಎನ್‌ಟಿಎ ಕಾರ್ಯಾರಂಭಿಸಲಿದ್ದು, ಡಿಸೆಂಬರ್‌ನಲ್ಲಿ ನಡೆಯಲಿರುವ ನೆಟ್‌ ಮೊದಲ ಪರೀಕ್ಷೆಯಾಗಿರಲಿದೆ. ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಪರೀಕ್ಷೆಗಳು ನಡೆಯಲಿವೆ. ಇದರಿಂದ ಪೇಪರ್ ಲೀಕ್‌ ತಡೆಯುವುದು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ(ಸಿಮ್ಯಾಟ್‌) ಹಾಗೂ ಫಾರ್ಮಸಿ ಆ್ಯಪ್ಟಿಟ್ಯೂಡ್‌ ಟೆಸ್ಟ್‌(ಸಿಪ್ಯಾಟ್‌) ಪರೀಕ್ಷೆಗಳನ್ನೂ ಎನ್‌ಟಿಎ ನಡೆಸಲಿದೆ.

ಎರಡೂ ಸಲ ಅವಕಾಶ: ದೇಶದ ವೈದ್ಯಕೀಯ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್‌ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ. ಎರಡೂ ಸಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದ್ದು, ಎರಡರಲ್ಲಿ ಅತಿ ಹೆಚ್ಚು ಅಂಕವನ್ನು ಪ್ರವೇಶ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ.

ವೈಜ್ಞಾನಿಕ, ವಿದ್ಯಾರ್ಥಿ ಸ್ನೇಹಿ, ಅಂತರರಾಷ್ಟ್ರೀಯ ನಿಯಮಗಳನ್ನು ಅಳವಡಿಸಿಕೊಂಡಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದಿಲ್ಲ ಎಂದು ಜಾವಡೇಕರ್‌ ತಿಳಿಸಿದ್ದಾರೆ.

ಆಗಸ್ಟ್‌ ಕೊನೆಯ ವಾರದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್‌ ಕೇಂದ್ರಗಳಲ್ಲಿ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಎನ್‌ಟಿಎ ಅನುವು ಮಾಡಿಕೊಡಲಿದೆ.

ಕಂಪ್ಯೂಟರೀಕೃತ ಪರೀಕ್ಷೆಗಳು 4–5 ದಿನ ನಡೆಯಲಿದ್ದು, ವಿದ್ಯಾರ್ಥಿಗಳೇ ದಿನಾಂಕ ಆಯ್ಕೆ ಮಾಡಿಕೊಳ್ಳಲೂ ಅವಕಾಶ ನೀಡಲಾಗುತ್ತದೆ. ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪರೀಕ್ಷೆ ವೇಳಾಪಟ್ಟಿಯನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಪಠ್ಯಕ್ರಮ, ಪ್ರಶ್ನೆಗಳ ಮಾದರಿ, ಭಾಷೆ ಹಾಗೂ ಪರೀಕ್ಷಾ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಈ ವರೆಗೂ ಈ ಎಲ್ಲ ಪರೀಕ್ಷೆಗಳನ್ನು ಸಿಬಿಎಸ್‌ಇ ನಡೆಸುತ್ತಿತ್ತು. ಜೆಇಇ(ಅಡ್ವಾನ್ಸಡ್‌) ಪರೀಕ್ಷೆಯ ಆಯೋಜನೆಯನ್ನು ಐಐಟಿ ಮುಂದುವರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT