ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುಕಿ ಹೋಗಿತ್ತ

ಕಥೆ
Last Updated 7 ಜುಲೈ 2018, 20:31 IST
ಅಕ್ಷರ ಗಾತ್ರ

ನೆಚ್ಚಿದ ಎಮ್ಮೆ, ಕೋಣ ಈಯಿತೆಂಬಂತೆ ನಂಬಿಗಸ್ಥ ಟೇಲರ್‌ ಆದ ಮಾದೇವ ಈ ರೀತಿ ಮಾಡಬಹುದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಮಾತನ್ನು ನಂಬಿ ನನ್ನ ಗೆಳೆಯರು ಅನೇಕರು ಅವನಲ್ಲಿ ಬಟ್ಟೆ ಹೊಲಿಯಲಿಕ್ಕೆ ಹಾಕಿದ್ದರು. ಎಷ್ಟೋ ದಿನಗಳಿಂದ ಆತ ಅಂಗಡಿಯ ಬಾಗಿಲನ್ನೇ ತೆರೆದಿಲ್ಲ. ಎಲ್ಲಿ ಹೋದನೆಂದು ತಿಳಿಯುತ್ತಿಲ್ಲ.

ಸರಿಯಾದ ಸಮಯಕ್ಕೆ, ಸರಿಯಾಗಿ ಹೊಲಿದುಕೊಡುವುದಕ್ಕೆ ಮಾದೇವ ಪ್ರಸಿದ್ಧನಾಗಿದ್ದ. ಬಟ್ಟೆ ಹೊಲಿಯುವವನು ಹಾಗೂ ಬಂಗಾರದ ಕೆಲಸ ಮಾಡುವವನು ಹೇಳಿದ ದಿನಕ್ಕೆ ಕೊಟ್ಟರೆ ಆ ದಿನ ಸೂರ್ಯ ಬಹುಶಃ ಪೂರ್ವದಲ್ಲಿ ಹುಟ್ಟಲಿಕ್ಕಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದವನು ಮಾದೇವ. ಧಾರವಾಡದ ರೀಗಲ್‌ ಟಾಕೀಜ್‌ ಎದುರಿನ ಸುಮಾರು ಅರವತ್ತು ವರ್ಷ ಹಳೆಯದಾದ, ಉದ್ದ ಕರಿಹಂಚಿನ ಮೇಲ್ಛಾವಣಿ ಹೊಂದಿರುವ ಭಾರತ ಟೇಲರ್ಸ್ ಎನ್ನುವ ಅಂಗಡಿಯಲ್ಲಿ ತಲೆ ತಗ್ಗಿಸಿ ರಾಟಿ ತುಳಿಯುತ್ತಿರುವ ಮಾದೇವನನ್ನು ಮುಂಜಾನೆ ಹತ್ತು ಗಂಟೆಯಿಂದ ರಾತ್ರಿ ಹನ್ನೆರಡರ ತನಕವೂ ನೋಡಬಹುದಿತ್ತು. ತಡರಾತ್ರಿಯ ಸಿನಿಮಾ ನೋಡಿ ಹೊರಬರುವ ಮಂದಿ ಈ ಮಾದೇವಗ ನಿದ್ದಿ ಅನ್ನೋದ ಇಲ್ಲ. ಬರೀ ದುಡದುಡದು ಏನ ಮಾಡ್ತಾನೋ ಯಾರಿಗ್ಗೊತ್ತು? ಅಷ್ಟೂ ದುಡ್ಡು ಮಗ ತಗೊಂಡು ಹ್ವಾದ. ಇಂವ ಹೀಂಗ ಸುಮ್ಮನ ಕುಂತ... ಎದುರೇ ಸಿನೆಮಾ ಟಾಕೀಜಿದ್ದರೂ ಒಂದು ದಿನವೂ ಆತ ಸಿನಿಮಾ ನೋಡಲಿಲ್ಲವಂತೆ. ಟಾಕೀಜಿನ ಬಳಿಯಿರುವ ಹೊಟೇಲಂತೂ ರಾತ್ರಿ ಒಂದು ಗಂಟೆಯವರೆಗೂ ಸುರು ಇರುತ್ತಿತ್ತು. ಪೇಪರ್ ಗಾಡಿಗಳವರು, ಟ್ರಕ್‌ನವರು, ಹತ್ತಿರವಿದ್ದ ಹಳ್ಳಿಗಳಿಗೆ ನಡೆದು ಹೋಗುವವರು ಆ ಹೊಟೇಲಿನ ಚಹಾ ಕುಡಿದು ಹೋಗುತ್ತಿದ್ದರು. ಅಲ್ಲಿಯ ಒಂದು ಕಪ್ ಚಹಾ ಕುಡಿದರೆ ಸಾಕು, ಜನ್ಮಜನ್ಮಾಂತರದ ನಿದ್ದೆ ಮಾಯವಾಗುವುದೆಂಬ ಪ್ರತೀತಿಯಿತ್ತು.

ಅಂತಹುದರಲ್ಲಿ ತನ್ನ ಖಾಸಾ ಗಿರಾಕಿಗಳ ಜೊತೆ ದಿನಕ್ಕೆ ಮೂರ‍್ನಾಲ್ಕು ಕಪ್‌ ಚಾ ಕುಡಿಯುವ ಮಾದೇವನಿಗೆ ನಿದ್ದೆ ಬಾ ಅಂದರೆ ಬಂದೀತೆ? ಜಡ್ಡಿಗೆ ಬೀಳದೆ, ಸೂಟಿ ಹಾಕದೆ ಯಾವಾಗಲೂ ಕೆಲಸದಲ್ಲಿಯೇ ನಿರತನಾಗಿರುತ್ತಿದ್ದ ಮಾದೇವ ಯಾರ ಕಡೆಯಿಂದಲೂ ಬೊಟ್ಟು ಮಾಡಿ ತೋರಿಸಿಕೊಂಡವನಲ್ಲ. ಆದರೆ ಇತ್ತೀಚೆಗೆ ಮಾತ್ರ ಯಾಕೋ ಕೈಕೊಡುತ್ತಿದ್ದಾನೆಂದು ಜನ ಹೇಳುತ್ತಿದ್ದರು. ಪಾಪ, ಅವನಿಗೂ ವಯಸ್ಸಾಯಿತಲ್ಲ, ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ ಎಂದು ಅವರನ್ನು ನಾನು ಸಮಾಧಾನಪಡಿಸಲು ಯತ್ನಿಸುತ್ತಿದ್ದೆ. ಕೊಂಚ ತಡವಾಗಬಹುದೇ ಹೊರತು ನೀವು ಅವನಲ್ಲಿ ಇಟ್ಟ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಲಾರದು ಎಂದು ಪದೇಪದೇ ಹೇಳುತ್ತಿದ್ದೆ. ಎರಡು ತಿಂಗಳ ಹಿಂದೆಯಷ್ಟೆ ನಮ್ಮ ಬಾಜೂಕಿನ ಮನೆಯವರ ಮದುವೆ ಸಂದರ್ಭದಲ್ಲಿ ಹದಿನಾರು ಮಂದಿಯ ಪ್ಯಾಂಟ್, ಶರ್ಟ್‌ಗಳನ್ನು ಕೇವಲ ಒಂದು ವಾರದಲ್ಲಿ ಹೊಲಿದು ಕೊಟ್ಟು ಆ ಸಂದರ್ಭಕ್ಕೆ ಮುದುಕ ನೆರವಾಗಿದ್ದ.

ಅವನದು ಮಾತೆಂದರೆ ಮಾತು. ಕೊಟ್ಟ ಮಾತಿಗೆ ತಪ್ಪಿದರೆ ಈ ಉದ್ಯೋಗವನ್ನೇ ತ್ಯಜಿಸುತ್ತೇನೆಂದು ಅವನು ಐವತ್ತು ವರ್ಷಗಳ ಹಿಂದೆ ಟಾಕೀಜಿನ ಎದುರು ಆಣೆ ಮಾಡಿದ್ದನಂತೆ. ಆಗಷ್ಟೇ ಮೀಸೆ ಮೂಡುತ್ತಿದ್ದ ತುಂಬು ಹರೆಯದ ಮಾದೇವ ಪ್ರತಿಜ್ಞೆಗೈದಿದ್ದಕ್ಕೆ ಸಾಕ್ಷಿಯೆಂಬಂತೆ ಅವನು ಕೈ ಮುಂದೆ ಮಾಡಿದ ಹಾಗೂ ಉಳಿದವರು ಜೈಕಾರ ಹಾಕಿದ ಒಂದು ಕಪ್ಪು- ಬಿಳುಪು ಫೋಟೊ ಈಗಲೂ ಅವನ ಅಂಗಡಿಯಲ್ಲಿ ಇದೆ. ಆ ಫೋಟೊದಲ್ಲಿ ಆಗಿನ ಧಾರವಾಡದ ಅನೇಕ ಲೇಖಕರನ್ನು ಕೂಡ ನೋಡಬಹುದು. ಅವರಲ್ಲಿ ಕರಿ ಚಸ್ಮಾ ಹಾಕಿದ ಬಸವರಾಜ ಕಟ್ಟೀಮನಿ ಮತ್ತು ಕರಿಕೋಟು ಹಾಕಿದ ಬೇಂದ್ರೆ ಅವರನ್ನು ಥಟ್ಟನೆ ಯಾರಾದರೂ ಗುರುತಿಸಬಹುದು. ಅವರು ಕೂಡ ಅವನಲ್ಲಿಯೇ ತಮ್ಮ ಬಟ್ಟೆಗಳನ್ನು ಹೊಲಿಸಿರಬಹುದೆಂದು ಕಾಣುತ್ತದೆ.

ಈ ಪರಂಪರಾಗತ ಅಂಗಡಿಯ ಬೆಳ್ಳಿಹಬ್ಬ, ಸ್ವರ್ಣ ಮಹೋತ್ಸವಗಳನ್ನು ಮಾಡಬಹುದಿತ್ತು ಎಂದು ಮೊನ್ನೆ ಒಬ್ಬರು ಪೇಪರ್‌ನಲ್ಲಿ ಲೇಖನ ಬರೆದಿದ್ದರು. ಅನೇಕ ಸ್ವಾತಂತ್ರ್ಯಯೋಧರು, ಲೇಖಕರು ಅದರ ಜೊತೆ ಸಂಬಂಧ ಹೊಂದಿದ್ದರಿಂದ ಅದಕ್ಕೆ ಚಾರಿತ್ರಿಕ ನಂಟು ಇದೆ ಎಂಬುದನ್ನು ಸಹ ಉಲ್ಲೇಖಿಸಲಾಗಿತ್ತು. ಅದಕ್ಕೆ ಫೇಸ್‌ಬುಕ್‌ನಲ್ಲಿ ಸಾವಿರಾರು ಮಂದಿ ಲೈಕ್ಸ್ ಹಾಕಿದ್ದರು. ಮಾದೇವನ ಟೇಲರ್ ಶಾಪ್‌ ಒಂದು ವಾರ ವೈರಲ್‌ ಕೂಡ ಆಗಿತ್ತು. ಎರಡು- ಮೂರು ಟಿ.ವಿ. ಚಾನೆಲ್‌ನವರು ಮಾದೇವನ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸಿಕೊಂಡು ಹೋದರು.

ಆವಾಗಿನಿಂದ ಅವನ ಅಂಗಡಿಗೆ ಗಿರಾಕಿಗಳ ನೂಕು ನುಗ್ಗಲು ಹೆಚ್ಚಾಗಿದೆ. ಆದರೆ ಮಾದೇವ ಬಂದವರನ್ನೆಲ್ಲ ಮರಳಿ ಕಳಿಸುತ್ತಿದ್ದಾನೆ. ಮೊದಲಿನಂತೆ ಆಳುಗಳು ಬೇರೆ ಸಿಗುವುದಿಲ್ಲ. ಸೂಜಿಯಲ್ಲಿ ದಾರ ಪೋಣಿಸುತ್ತ, ಮುಂಜಾನೆಯಿಂದ ಸಂಜೆಯ ತನಕ ಯಾರು ಒಂದೇ ಕಡೆ ಕೂಡುತ್ತಾರೆ. ತಮಗೆ ಬೇರೆ ಕೆಲಸವಿಲ್ಲವೆ ಎಂದು ಹೊಸ ಹುಡುಗರು ಈ ಹಳೆಯ ಉದ್ಯೋಗವನ್ನು ಮೂದಲಿಸುವರು. ಅವನೊಬ್ಬನೆ ಎಷ್ಟಂತ ಮಾಡಬೇಕು? ಅವನ ಕಣ್ಣು ಬೇರೆ ಮಂಜಾಗಿವೆ. ಚಸ್ಮಾವನ್ನು ಅರಿವೆಯಿಂದ ಪದೇ ಪದೇ ಒರೆಸುತ್ತ ಅವನು ರಾತ್ರಿಯವರೆಗೂ ಕುಳಿತು ತನ್ನ ಕೈಲಾದಷ್ಟು ಹೊಲಿದುಕೊಡುತ್ತಿದ್ದಾನೆ. ಈ ಅಂಗಡಿ ಕೇವಲ ಬಟ್ಟೆ ಹೊಲಿಯುವ ಸ್ಥಳವಾಗಿರದೆ ಸ್ವಾತಂತ್ರ್ಯ ಯೋಧರು ವಾರಕ್ಕೊಮ್ಮೆ ಸೇರುವ ಸ್ಥಳವಾಗಿಯೂ ಒಂದಷ್ಟು ದಿನ ಕೆಲಸ ಮಾಡುತ್ತಿತ್ತು. ಅನೇಕರು ಅಲ್ಲಿಂದಲೇ ಮುನಿಸಿಪಾಲಿಟಿಗೆ ಆಯ್ಕೆಯಾಗಿ ಹೋದರು. ಅವರು ಈಗ ರವಿವಾರ ಪೇಟೆ, ಮದಿಹಾಳ, ಮಾಳಮಡ್ಡಿ, ಗಾಂಧಿ ನಗರ, ಕೆಲಗೇರಿ ಗಳಲ್ಲಿ ದೊಡ್ಡದೊಡ್ಡ ಬಂಗಲೆಗಳನ್ನು ಹಾಕಿಕೊಂಡು ಮಾದೇವ ಮಾಡಿದ ಸಹಾಯವನ್ನು ತಮ್ಮ ಮಕ್ಕಳಿಗೆ ಹೇಳುತ್ತಿರುತ್ತಾರೆ. ಗ್ರಾನೈಟ್ ಕಲ್ಲುಗಳನ್ನು ಜೋಡಿಸಿದ ಪಡಸಾಲೆಯಲ್ಲಿ ನಿಂತು ಎದುರಿನ ಶುಭ್ರಗೋಡೆಯಲ್ಲಿ ಲ್ಯಾಮಿನೇಶನ್ ಮಾಡಿ ತೂಗು ಹಾಕಲಾದ ಮಾದೇವನ ಪ್ರತಿಜ್ಞೆಯ ಫೋಟೊ ನೋಡಿದರೆ ಇತಿಹಾಸ ನಮ್ಮಕಣ್ಣ ಮುಂದೆ ಬರುವುದು.

ಸ್ವಾತಂತ್ರ್ಯ ಬಂದು ಆಗಷ್ಟೆ ಕೆಲವು ವರ್ಷಗಳು ಸಂದಿದ್ದವು. ಗಾಂಧಿ ಚೌಕ್, ಸುಭಾಸ ರಸ್ತೆ, ವಿಜಯಾ ರಸ್ತೆ, ಅಕ್ಕಿ ಪೇಟೆ ಮುಂತಾದ ಸ್ಥಳಗಳನ್ನು ನೋಡಲಿಕ್ಕೆ ಹಳ್ಳಿಗಳಿಂದ ಜನ ಬಂದು ಧಾರವಾಡವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದರು. ಕೆ.ಸಿ.ಪಾರ್ಕ್ ಎಂದು ಹೆಸರಾದ ಕಿತ್ತೂರು ಚೆನ್ನಮ್ಮ ಪಾರ್ಕ್‌ಗೆ ತಂಡೋಪತಂಡವಾಗಿ ಬಂದು ದುರುಳ ಥ್ಯಾಕರೆನನ್ನು ರಾಣಿ ಚೆನ್ನಮ್ಮ ಕೊಂದ ನೆನಪನ್ನು ತಮ್ಮ ಎದೆಯಲ್ಲಿ ಇಟ್ಟುಕೊಂಡು ಹಿಂತಿರುಗುತ್ತಿದ್ದರು.
ಮಾದೇವ ಕೆಲಸಗಾರರನ್ನು ಅಷ್ಟಾಗಿ ನೆಚ್ಚಿದವನಲ್ಲ. ಮೊದಲು ಹೆಂಡತಿ, ಮಗ, ಸೊಸೆ ಎಂದು ಎಲ್ಲರೂ ಕೂಡಿ ದುಡಿಯುತ್ತಿದ್ದರು.ಆದರೆ ಈಗ ಮಗ ಅವನ ಜೊತೆ ಇಲ್ಲ. ಹಾಗೆ ನೋಡಿದರೆ ಮಗನಿಗೂ ಅಪ್ಪನಿಗೂ ಮೊದಲಿನಿಂದಲೂ ಆಗಿಬರುತ್ತಿರಲಿಲ್ಲ. ಈಗಿರುವ ಟೇಲರ್‌ ಅಂಗಡಿಯನ್ನು ಮುಚ್ಚಿ ರೆಡಿಮೇಡ್ ಉಡುಪುಗಳ ಅಂಗಡಿ ತೆಗೆಯೋಣವೆಂದು ಮಗ ಹೇಳುತ್ತಿದ್ದರೆ ಗೊತ್ತಿಲ್ಲದ ಉದ್ಯೋಗ ಮಾಡಲು ಹೋಗಿ ಕೈ ಸುಟ್ಟುಕೊಂಡರೆ ಏನು ಗತಿ ಎಂದು ಅಪ್ಪ ಹಿಂಜರಿಯುತ್ತಿದ್ದ. ‘ನೋಡ್ರಿ, ಹಿರ‍್ಯಾರ, ಮಗ ಹೀಂಗಂತಾನ, ಹೆಂಗ ಮಾಡೋದು?

ಬ್ಯಾಂಕಿನವರೇನೋ ಬೇಕಾದಷ್ಟು ಸಾಲ ಕೊಡ್ತೇವಿ ಅಂತ ಹೇಳ್ತಾರು. ಆದರ ಮುಂದ ಏನಾಗ್ತದ ಅಂತ ಹೇಳಲಿಕ್ಕೆ ಬರಂಗಿಲ್ಲ. ನಮ್ಮ ತಲಿ ಮ್ಯಾಲ ತಟ್ಟ ಹೊದ್ದಕೊಂಡು ಕುಂಡ್ರುವಂತ ಪರಿಸ್ಥಿತಿ ಬಂತಂದ್ರ ಏನ ಮಾಡೋದು. ಅಲ್ಲ?’ ಆಜು- ಬಾಜು ಇರುವ ಅಂಗಡಿಕಾರರ ಹತ್ತಿರ ಮಗನ ವಿರುದ್ಧ ಆತ ದೂರು ಒಯ್ಯುವನು. ದೊಡ್ಡ ದೊಡ್ಡ ಕಾಂಪ್ಲೆಕ್ಸ್‌ಗಳನ್ನು ಎಬ್ಬಿಸಿ ಹಲವಾರು ತರಹದ ವ್ಯಾಪಾರ ನಡೆಸುತ್ತಿರುವ ಅವರು ಸಹಾನುಭೂತಿಯಿಂದ ಮಾದೇವನ ಜೊತೆ ಮಾತಾಡುವರು. ‘ಏಯ್, ನಾಗ್ಯಾ, ಹೋಗಿ ಒಳ್ಳೆ ಚಾ ತಗೊಂಬಾ. ಮಾದೇವಪ್ಪ ನಮ್ಮ ಅಂಗಡಿಗೆ ಬರೋದಂದ್ರೇನು? ಸಾಕ್ಷಾತ್ ಆ ಮಾದೇವನ ಬಂದಂಗ’ ಎಂದು ಬಟ್ಟೆ ಸುತ್ತಿಡುತ್ತಿರುವ ತಮ್ಮ ಆಳಿಗೆ ಚಹಾ ತರಲು ಹೇಳಿ ಲಾಭವಿಲ್ಲದೆ ತಾವು ಒದ್ದಾಡುತ್ತಿರುವ ಪರಿಸ್ಥಿತಿಯನ್ನು ವಿವರಿಸುತ್ತಿದ್ದರು: ನಾವು ಯಾಕಾದ್ರೂ ಇಷ್ಟು ದೊಡ್ಡ ಬಿಲ್ಡಿಂಗ್‌ ಮಾಡೇವಿ ಅನ್ನೋವಂಗ ಆಗೇತಿ. ಗಿರಾಕಿ ಯಾವಾಗ ಬರ‍್ತಾವು ಅಂತ ಮಕಾಮಕಾ ನೋಡ್ಕೊಂಡು ಕುಂದರೋದು ಆಗೇತಿ. ಈಗಂತೂ ಮಂದಿ ಆನ್‌ಲೈನ್‌, ಗೀನಲೈನ್‌ ಅಂತ ಅಂಗಡಿ ಕಡೆ ಹಾಯೋದನ್ನ ಮರತಬಿಟ್ಟಾರ. ನಾಕೈದು ವರ್ಷ ಏನೂ ದುಡ್ಡು ಬರಂಗಿಲ್ಲ. ಅಷ್ಟಿದ್ದೂ ಮಾಡೂದಿದ್ರ ಮಾಡ್ರಿ. ಅವರ ಪಡಿಪಾಟಲುಗಳನ್ನು ಕೇಳಿದ ಮಾದೇವ ಮಗನಿಗೆ ಅವನ ನಿರ್ಧಾರದಿಂದ ಹಿಂದೆ ಸರಿಯಲು ಹೇಳುತ್ತಿದ್ದ. ಬೆರಳು ತೋರಿಸಿದರೆ ಅಂಗೈ ನುಂಗುವವರು ತಮ್ಮ ಸುತ್ತಮುತ್ತಲಿದ್ದಾರೆ. ಅಪ್ಪ ಸುಖಾಸುಮ್ಮನೆ ತನ್ನ ಪ್ಲ್ಯಾನ್‌ಅನ್ನು ಬೇರೆಯವರಿಗೆ ಹೇಳಿ ಗುಟ್ಟುರಟ್ಟು ಮಾಡುತ್ತಾನೆ. ಒಳಗಿನದ್ಯಾವುದು, ಹೊರಗಿನದ್ಯಾವುದು, ಏನು ಹೇಳಬೇಕು, ಏನು ಹೇಳಬಾರದು ಎಂಬುದು ಈ ಮುದುಕನಿಗೆ ತಿಳಿಯುವುದೇ ಇಲ್ಲ. ತಾವು ಹಿಂದುಳಿದಿರುವುದೇ ಹೀಗೆ ಎಂದು ಮಗ ಅಪ್ಪನನ್ನು ಧಿಕ್ಕರಿಸಿ ಹೋದ.

ಅವನು ಈಗ ಟೇಲರ್‌ ಉದ್ಯೋಗವನ್ನು ಬಿಟ್ಟು ಧಾರವಾಡದಿಂದ ಸ್ವಲ್ಪ ದೂರವೇ ಎನ್ನಬಹುದಾದ ಹುಬ್ಬಳ್ಳಿಯ ರಸ್ತೆಯಲ್ಲಿನ ಹೊಸ ಬಡಾವಣೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ತೆರೆದಿದ್ದಾನೆ. ಮಗ- ಸೊಸೆ ಅಪ್ಪನಿಗೂ ಬಾ ಎಂದು ಕರೆದರು. ಆದರೆ ಅಪ್ಪ ತನಗೆ ಇದರಲ್ಲಿಯೇ ತೃಪ್ತಿಯಿದೆ ಎಂದು ಹಳೆಯ ರಾಟಿಯನ್ನು ತುಳಿಯುತ್ತಿದ್ದಾನೆ.

ದೇವನದು ಹಳೇ ಮನೆ, ಹಳೇ ಅಂಗಡಿ. ಅವನು ಕೂಡ ಹಳೆಯವನೇ ಅಲ್ಲವೆ! ಸುಕ್ಕುಗಟ್ಟಿದ ದೇಹ, ಒಳಕ್ಕೆ ಹೋಗಿರುವ ಕಣ್ಣು, ಸೊರಗಿದಂತಿರುವ ತೋಳುಗಳು. ಮೊನ್ನೆ ಮೊನ್ನೆ ಎಷ್ಟು ಗಟ್ಟಿಯಾಗಿದ್ದ! ಮುರುಘಾಮಠದ ಹತ್ತಿರ ಇರುವ ತನ್ನ ಮನೆಗೆ ಸೈಕಲ್ ಮೇಲೆ ರಂವ್‌ ಎಂದು ಹೋಗಿ ರಂವ್‌ ಎಂದು ಬರುತ್ತಿದ್ದ. ಮನೆಯಲ್ಲಿ ಗಂಡ ತಂದುಕೊಡುತ್ತಿದ್ದ ಬಟ್ಟೆಗಳಿಗೆ ಕಾಜು ಮಾಡಿ, ಬಟನ್ ಹಚ್ಚಿ ಕೊಡುತ್ತಿದ್ದಳು ಪಾರ್ವತಿ. ಕೆಲಸ ಜಾಸ್ತಿಯಿತ್ತೆಂದರೆ ಅಂಗಡಿಗೆ ಬರುತ್ತಿದ್ದಳು. ಕನಿಷ್ಠ ಹತ್ತು ಸಾವಿರ ಅಂಗಿಗಳಿಗೆ ಆಕೆ ಬಟನ್ ಹಚ್ಚಿಕೊಟ್ಟಳೆಂದು ಮಾದೇವ ಯಾವಾಗಲಾದರೊಮ್ಮೆ ಕಣ್ಣೀರು ತೆಗೆಯುತ್ತಾನೆ. ಪಾಪ! ಅವನ ಹೆಂಡತಿ ಸತ್ತು ಹತ್ತು ವರ್ಷಗಳಾಗುತ್ತ ಬಂದವೇನೋ? ಆವಾಗಿನಿಂದ ರಾಟಿಯೇ ಅವನ ಜೀವನ ಸಂಗಾತಿಯಾಗಿದೆ.ಆರು ತಿಂಗಳಿಗೊಮ್ಮೆ ನನ್ನವು ಪ್ಯಾಂಟೋ ಇಲ್ಲಾ ಶರ್ಟೋ ಏನಾದರೂ ಇದ್ದೇ ಇರುತ್ತಿದ್ದವು. ಇಪ್ಪತ್ತು ವರ್ಷಗಳಿಂದ ಅವನ ಬಳಿ ನಾನು ನನ್ನ ಅರಿವೆಗಳನ್ನು ಹೊಲಿಸುತ್ತಿದ್ದೇನೆ. ಮೈಯಳತೆಗೆ ತಕ್ಕಂತೆ ಬಟ್ಟೆಯನ್ನು ಕೂಡಿಸುವಲ್ಲಿ ಆತ ಸಿದ್ಧಹಸ್ತನಾಗಿದ್ದ. ಕೈಗುಣ ಅನ್ನುತ್ತಾರಲ್ಲ, ಹಾಗೆ. ಅವನ ಕೈ ಮತ್ತು ರಾಟೆಯಿಂದ ಹಾದು ಬರುವ ಅಂಗಿ- ಪ್ಯಾಂಟುಗಳು ನನ್ನ ದೇಹದ ಮೇಲೆ ಹರಡಿಕೊಳ್ಳುವಾಗ ಎಂದೂ ತಮ್ಮ ತೊಂದರೆಯನ್ನು ಹೇಳಿಕೊಂಡಿಲ್ಲ. ನನಗೆ ಕಸಿವಿಸಿ ಉಂಟು ಮಾಡಿಲ್ಲ. ಉದ್ದವಾಯಿತು, ಗಿಡ್ಡವಾಯಿತು, ಅಗಲವಾಯಿತು, ಸೊಂಟದಲ್ಲಿ ಬಿಗಿಯಾಯಿತು, ನಡುವಿನಲ್ಲಿ ನಿಲ್ಲುತ್ತಿಲ್ಲ ಅನ್ನುವಂತಹ ಮಾತುಗಳೇ ಇಲ್ಲ.

ಒಮ್ಮೊಮ್ಮೆ ನನ್ನ ಗೆಳೆಯರು, ಆಫೀಸಿನ ಸಹೋದ್ಯೋಗಿಗಳು ಆ ಟೇಲರ್‌ನ ಗುಣಗಾನ ಮಾಡುತ್ತಿದ್ದರು. ‘ಯಾರ್ರೀಪಾ ಅವನು ನಿಮ್ಮ ಟೇಲರ್, ಏನ್‌ ಚೆಂದ ಕುಂಡ್ರಸ್ತಾನ! ಖರೇ ಮೆಚ್ಚಬೇಕು ಬಿಡ್ರಿ... ಯಾಕೆಂದರೆ ಕೆಲವು ಟೇಲರ್‌ಗಳು ಬೇಕಾಬಿಟ್ಟಿ ಹೊಲಿದು ಡ್ರೆಸ್ಸಿನ ಸಡಗರಕ್ಕೆ ಕಲ್ಲು ಹಾಕುತ್ತಿದ್ದರು. ದೇಹಕ್ಕೆ ಸರಿ ಹೊಂದದ ಅರಿವೆಗಳನ್ನು ತೊಡುವುದಾದರೂ ಹೇಗೆ? ಹೆಗಲ ಮೇಲೆ ಬರಬೇಕಾಗಿದ್ದ ಪಟ್ಟಿ ತೋಳ ಮೇಲೆ ಬಂದೋ, ಹೃದಯದ ಮೇಲೆ ಬರಬೇಕಾಗಿದ್ದ ಗುಲಾಬಿ ಹೂವು ಹೊಟ್ಟೆಯ ಮೇಲೆ ಬಂದೋ ಅಂಗಿಯ ಆಕಾರವೆನ್ನುವುದು ಅಕರಾಳ ವಿಕರಾಳವಾಗಿರುತ್ತಿತ್ತು. ಬಗ್ಗಿದಾಗ ಇಲ್ಲವೆ ಕೈ ಮೇಲೆತ್ತಿದಾಗ ಇನ್‌ಶರ್ಟ್ ಮಾಡಿದ್ದ ಶರ್ಟ್ ಮೇಲೆದ್ದು ಹಾಕಿಕೊಂಡವನ ಮರ್ಯಾದೆ ಔಟ್‌ ಆಗುತ್ತಿತ್ತು. ಈಗಿನ ಕಾಲದಲ್ಲಿ ಪ್ರತಿಯೊಂದು ಶಿಸ್ತುಬದ್ಧವಾಗಿರಬೇಕೆಂದು ಬಯಸುವ ಅನೇಕ ಹುಡುಗಿಯರು ಇಂತಹ ಡ್ರೆಸ್ ಸೆನ್ಸ್‌ ಇಲ್ಲದ ಹುಡುಗರನ್ನು ತಿರಸ್ಕರಿಸುವುದು ಮಾಮೂಲಾದ ಸಂಗತಿಯಾಗಿತ್ತು. ನಮ್ಮ ಸಹೋದ್ಯೋಗಿ ಚನ್ನಪ್ಪನ ಮಗನ ಮದುವೆ ಇಂತಹ ಒಂದು ಕ್ಷುಲ್ಲಕ ವಿಚಾರಕ್ಕೆ ನಿಂತುಹೋಯಿತು. ನಿಶ್ಚಿತಾರ್ಥದ ವೇಳೆ ಹುಡುಗ ಅಂಗಿಯ ಬಣ್ಣಕ್ಕೆ ತಕ್ಕುದಾದ ಪ್ಯಾಂಟ್ ಧರಿಸಿಲ್ಲವೆಂದು ಹುಡುಗಿ ತಕರಾರು ತೆಗೆದಳು. ಹುಡುಗನಿಗೆ ಅಭಿಮಾನ ಅಡ್ಡ ಬಂದು ಆಗುವುದಿಲ್ಲವೆಂದ. ತನ್ನ ಸಣ್ಣ ವಿನಂತಿಯನ್ನೂ ಒಪ್ಪದ ಹುಡುಗನನ್ನು ತಾನು ವರಿಸಲಾರೆನೆಂದು ಆಕೆ ಹಿಂದೆ ಸರಿದಳು. ಅವಳ ಧೈರ್ಯವನ್ನು ಹಲವರು ಕೊಂಡಾಡಿದರು. ಇದರಿಂದ ನಿಶ್ಚಿತವಾಗಿದ್ದ ಹುಡುಗನ ಭವಿಷ್ಯವೊಂದು ಅನಿಶ್ಚಿತವಾಯಿತೆಂದು ನಾವು ಮರುಗಿದೆವು.

ನನ್ನಿಂದ ಪರಿಚಯ ಮಾಡಿಕೊಂಡ ಅನೇಕರು ಮಾದೇವನ ಕಾಯಂ ಗಿರಾಕಿಗಳಾಗಿ ಪರಿವರ್ತನೆಯಾಗಿದ್ದರು. ಆತ ಹೆಚ್ಚಾಗಿ ಅಳತೆಯನ್ನೆ ತೆಗೆದುಕೊಳ್ಳುತ್ತಿರಲಿಲ್ಲ. ಬುಕ್ಕಿನ ಹಿಂದಿನ ಹಾಳೆಯನ್ನು ತಿರುವಿ ಅದೇ ತೋಳು, ಎದೆ, ನಡ, ಕಾಲಿನ ಉದ್ದದ ಅಂಕಿಗಳನ್ನು ರಸೀದಿಯ ಹೊಸ ಹಾಳೆಯಲ್ಲಿ ಸರಸರ ಬರೆಯುತ್ತಿದ್ದ. ಆಮೇಲೆ ಮಾದೇವನಿಗೆ ಏನು ರೂಢಿಯಾಯಿತೆಂದರೆ ಆ ಅಂಕಿಗಳು ಅವನ ನಾಲಿಗೆಯ ಮೇಲೆ ಉಳಿದುಬಿಟ್ಟವು. ನನ್ನ ಅಳತೆಯ ಅಂಕಿಗಳು ಮಾತ್ರವಲ್ಲ, ಹಲವು ಗಿರಾಕಿಗಳ ಅಳತೆಗಳು ಅವನ ಬಾಯಲ್ಲಿರುತ್ತಿದ್ದವು. ಅವನ ನೆನಪಿನ ಶಕ್ತಿಗೆ ನನಗೆ ಆಶ್ಚರ್ಯವಾಗುತ್ತಿತ್ತು. ‘ಹೆಂಗೋ ಮಾರಾಯ, ಇವು ಹೆಂಗ ನಿನ್ನ ತಲಿಯೊಳಗ ಇರ‍್ತಾವು. ಒಬ್ಬೊಬ್ಬರ ಅಳತಿ ಬ್ಯಾರೆ ಇರ‍್ತದ. ಅಂತಹದರಾಗ ನಮ್ಮ ಉದ್ದ, ಎತ್ತರ, ಎದಿ ಸುತ್ತಳತಿ ಚೂರೂ ತಪ್ಪಲಾರದಂಗ ಪಟಾಪಟ್ ಹೇಳ್ತಿ, ಅವನ್ ನಏನಾದ್ರೂ ಬಾಯಿಪಾಠ ಮಾಡ್ತಿಯೇನು?’

‘ಕನಸಿನ್ಯಾಗ ಬೇಕಂದ್ರೂ ಇವನ್ನ ಹೇಳಲೇನ್ರಿ?’ ಎನ್ನುತ್ತ ಅವನು ಆ ಹಾಳೆಯತ್ತ ನೋಡದೆ ಮಕ್ಕಳು ಮಗ್ಗಿ ಒಪ್ಪಿಸುವಂತೆ ಒಪ್ಪಿಸುತ್ತಿದ್ದ. ‘ಪುಣ್ಯಾಕ ನೀನು ಲೇಡಿಸ್‌ ಟೇಲರ್‌ ಆಗಿಲ್ಲ. ಇಲ್ಲಾಂದ್ರ ಕಷ್ಟ ಇತ್ತು. ನಿನ್ನ ಹೇಂತಿ ಇದೇನಿ ರಾತ್ರಿ ಹೊತ್ತು ಇಲ್ಲದ್ದನss ಬಡಬಡಸಿತೀರಿ ಅಂತ ನಿನ್ನ ಬಟ್ಟೆ ಹೊಲಿಯೋದನ್ನ ಬಿಡಿಸಿತಿದ್ಲು...’ ನಾನು ಜೋರಾಗಿ ನಕ್ಕುಬಿಡುತ್ತಿದ್ದೆ. ಮಾದೇವನ ಮತ್ತೊಂದು ಹವ್ಯಾಸವೆಂದರೆ ಸೋಮವಾರಕ್ಕೊಮ್ಮೆ ಈಶ್ವರನ ಗುಡಿಗೆ ಹೋಗಿ ಅಲ್ಲಿ ಭಜನೆ ಮಾಡುವವರೊಂದಿಗೆ ಹಾಡು ಹೇಳುವುದು. ಅವನು ಹೇಳುವ ಕಡಕೋಳ ಮಡಿವಾಳೆಪ್ಪ, ಶಿಶುನಾಳ ಶರೀಫ, ಷಣ್ಮುಖಸ್ವಾಮಿ, ಮುಪ್ಪಿನ ಷಡಕ್ಷರಿ ಮುಂತಾದವರ ಪದಗಳನ್ನು ಕೇಳುತ್ತಿದ್ದರೆ ಮನಸ್ಸು ಅವುಗಳಲ್ಲಿಯೇ ತಲ್ಲೀನವಾಗುತ್ತಿತ್ತು. ಅಂಗಡಿಯಲ್ಲಿಯೂ ಅವುಗಳನ್ನು ಹಾಡುತ್ತ ಆತ ಹೊಲಿಯುತ್ತಿದ್ದ. ದೇಹವು ಆತ್ಮವನ್ನು ಮುಚ್ಚಿರುವ ಒಂದು ಅಂಗಿ ಎಂದು ಆತ ಹೇಳುವಾಗಲೆಲ್ಲ ದೊಡ್ಡ ಪ್ರವಚನಕಾರನಂತೆ ತೋರುತ್ತಿದ್ದ.

ಅವನ ಬಗ್ಗೆ ಇಷ್ಟೆಲ್ಲ ಅಭಿಮಾನ ಹೊಂದಿದ್ದ ನಮಗೆ ಆತ ನಿರಾಸೆ ಮಾಡಿ ವಾರಗಟ್ಟಲೆ ನಾಪತ್ತೆಯಾದದ್ದನ್ನು ಕಂಡು ಮನಸ್ಸಿಗೆ ಕಸಿವಿಸಿಯಾಯಿತು. ನಾಲ್ಕಾರು ಗೆಳೆಯರು ಸೇರಿ ಅವನ ಪಕ್ಕದ ಅಂಗಡಿಯವರನ್ನು ವಿಚಾರಿಸಿದೆವು. ಅವರು ಹೇಳಿದ್ದ ಕೇಳಿ ನಮಗೆ ಆಶ್ಚರ್ಯವಾಯಿತು: ರಸ್ತೆ ದೊಡ್ಡದು ಮಾಡೋ ಸಲುವಾಗಿ ಈ ಅಂಗಡಿಗಳನ್ನೆಲ್ಲ ಕೀಳ್ತಾರಂತ ಸಾಯೇಬ್ರೆ. ಅದಕ್ಕ ಸಾಕಷ್ಟು ಪರಿಹಾರ ನೂಕೊಡ್ತೇವಿ ಅಂತ ನೋಟೀಸ್ ಬಂದೇತಿ. ನಮಗ ಇದು ಒಂದು ರೀತಿ ಚೊಲೋ ಅನಸ್ತದ. ಆದರ ಮಾದೇವ ಮಾತ್ರ ತಲಿ ಕೆಡಿಸಿಕೊಂಡು ಗುಡಿಯೊಳಗ ಭಜನಿ ಮಾಡಲಿಕ್ಕೆ ಹತ್ತ್ಯಾನ... ನಾವು ಈಶ್ವರ ದೇವಸ್ಥಾನಕ್ಕೆ ಹೋಗಿ ಮಾದೇವನ ಹಾಡು ಮುಗಿಯಲೆಂದು ಕಾಯತೊಡಗಿದೆವು.⇒

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT